ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸೃಜನಶೀಲ ವ್ಯಕ್ತಿಯಾಗಿ ಬದುಕಿದವರ ಹೆಸರಿನ ಪ್ರಶಸ್ತಿಯನ್ನು ಅದೇ ಮಾದರಿಯಲ್ಲಿ ನಡೆಯುವವರಿಗೆ ನೀಡುವ ಮೂಲಕ ಈ ನೆಲದ ಬದುಕನ್ನು ಹೇಗೆ ಕ್ರಿಯಾಶೀಲವಾಗಿ ಬದುಕಬೇಕು ಎಂಬುದಕ್ಕೆ ಪ್ರೇರಣೆಯಾಗುತ್ತದೆ ಎಂದು ಹೆಸರಾಂತ ವಿಮರ್ಶಕ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಶನಿವಾರ ನಡೆದ ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನೇರನಿಷ್ಟುರದ ಬರವಣಿಗೆ, ಬದುಕು ನಡೆಸಿದ ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಅವರು ಸೃಜನಶೀಲ ಬರಹಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಬರವಣಿಗೆಯಲ್ಲಿನ ಬದ್ಧತೆ, ಸಾಮಾಜಿಕ ಕಳಕಳಿ ಪ್ರಮುಖವಾಗಿ ಕಾಣುತ್ತದೆ. ಇಂತಹ ಮೌಲ್ಯತ್ಮಕ ವ್ಯಕ್ತಿಗಳು ನಮ್ಮ ನಡುವೆ ಸದಾ ಉಳಿಯುತ್ತಾರೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಕೊಡುಗೆ, ವ್ಯಕ್ತಿತ್ವವನ್ನು ಹೊಸ ತಲೆಮಾರಿನವರಿಗೆ ತಿಳಿಸುವ ಸಾರ್ಥಕ ಪ್ರಯತ್ನ ನಡೆದಿದೆ ಎಂದರು.
ಈ ವೇಳೆ ಪ್ರಬಂಧಕಾರ ಪ್ರೊ. ರಹಮತ್ ತರಿಕೆರೆ ಹಾಗೂ ಕವಿ ಬಾ.ಹ.ರಮಾಕುಮಾರಿ ಅವರಿಗೆ ಪ್ರೊ.ಎಚ್.ಜಿ. ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರೊ. ರಹಮತ್ ತರೀಕೆರೆ ಅವರು ಅಲೆಮಾರಿಯಾಗಿ, ಅವದೂತರಾಗಿ ರಾಜ್ಯ ಸುತ್ತಿ ವಿವಿಧ ಬಗೆಯ ಸಾಮಗ್ರಿಗಳನ್ನು ಹುಡುಕಿ ತಂದು ಬರಹಗಳಲ್ಲಿ ದಾಖಲಿಸಿದ್ದಾರೆ. ಸೂಫಿ ಪರಂಪರೆ, ನಾಥ ಪರಂಪರೆ, ಭಕ್ತಿ ಪರಂಪರೆಯನ್ನು ವರ್ತಮಾನದ ದೃಷ್ಟಿಕೋನದಲ್ಲಿ ಕಂಡಿದ್ದಾರೆ ಎಂದು ಹೇಳಿದ ಪ್ರೊ. ಬಸವರಾಜ ಕಲ್ಗುಡಿ, ಬಾ.ಹ.ರಮಾಕುಮಾರಿಯವರು ಸರ್ಕಾರಿ ಹುದ್ದೆಯಲ್ಲಿದ್ದು ಸಾಮಾಜಿಕ ಹೋರಾಟ, ಸಾಹಿತ್ಯದ ಮೂಲಕ ಗಮನ ಸೆಳೆದರು. ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು ಎಂದು ಶ್ಲಾಘಿಸಿ ಅಭಿನಂದಿಸಿದರು.ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲಾಗದ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಬರೆದು ಕಳಿಸಿದ್ದ ಪತ್ರವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಡಾ. ನಾಗಭೂಷಣ ಬಗ್ಗನಡು ಓದಿದರು. ಪ್ರೊ. ಸಣ್ಣಗುಡ್ಡಯ್ಯ, ವೀಚಿ, ಕೆ.ಆರ್. ನಾಯಕ್ ಅವರು ತುಮಕೂರಿನಲ್ಲಿ ನನ್ನಂತಹ ಅನೇಕರನ್ನು ಪ್ರೆರೇಪಿಸುತ್ತಿದ್ದರು. ಪ್ರೊ.ಸಣ್ಣಗುಡ್ಡಯ್ಯ ಅವರ ಬೆರಗುಗೊಳಿಸುವ ಲಲಿತ ಪ್ರಬಂಧಗಳು, ಅವರ ಪ್ರಜಾಪ್ರಭುತ್ವವಾದ ಹಲವರಿಗೆ ಪ್ರೇರನೆಯಾಗಿತ್ತು. ಯಾರಾದರೂ ಇಷ್ಟಪಡದಿದ್ದರೂ ಹೇಳಬೇಕಾದನ್ನು ಅವರು ಹೇಳಿಯೇಹೇಳುತ್ತಿದ್ದರು.ಮುಖ್ಯವಾಗಿ ಅವರು ಕೇಳಿಸಿಕೊಳ್ಳುವ ಸ್ವಭಾವದವರಾಗಿದ್ದರು ಎಂದು ಬರಗೂರರು ತಮ್ಮ ಪತ್ರದಲ್ಲಿ ಪ್ರೊ.ಸಣ್ಣಗುಡ್ಡಯ್ಯ ಅವರನ್ನು ಕುರಿತು ಹೇಳಿದ್ದರು.
ಪ್ರಶಸ್ತಿ ಸ್ವೀಕರಿಸಿದ ಪ್ರೊ. ರಹಮತ್ ತರೀಕೆರೆ ಮಾತನಾಡಿ, ಒಂದು ಊರು ಸ್ಮಾರ್ಟ್ ಸಿಟಿಯಾಗುವುದೆಂದರೆ ಸುಸಜ್ಜಿತ ರಸ್ತೆ, ನಾಗರಿಕ ಸೌಲಭ್ಯಗಳು ಮಾತ್ರವಲ್ಲ, ಅಲ್ಲಿನ ಜನರೂ ಸಾಂಸ್ಕೃತಿಕವಾಗಿ ಸಾರ್ಟ್ ಆಗಬೇಕು. ಸಂಘಸಂಸ್ಥೆಗಳೂ ಮಾಡಲಾಗದಂತಹ ಕ್ರೀಯಾಶೀಲ ಕಾರ್ಯಗಳನ್ನು ಕ್ರಿಯಾಶೀಲ ವ್ಯಕ್ತಿ ಮಾಡಿ ಇಡೀ ಊರನ್ನು ಕ್ರಿಯಾಶೀಲಗೊಳಿಸಿದ ಉದಾಹರಣೆಗೆಳು ನಮ್ಮಲ್ಲಿ ಬಹಳಷ್ಟಿವೆ ಎಂದರು.ಲಲಿತ ಪ್ರಬಂಧ ಕನ್ನಡದ ವಿಶಿಷ್ಟ ಪ್ರಾಕಾರ. ಲೋಕದ ಕಣ್ಣಿಗೆ ಬೀಳದೆ ಅಲಕ್ಷಿತವಾಗಿದ್ದ ವಸ್ತವನ್ನು ಆರಿಸಿಕೊಂಡು, ಓದುಗರಲ್ಲಿ ಮಂದಹಾಸ ಮೂಡಿಸುವಂತಹ ಶೈಲಿಯ ಪ್ರಬಂಧ ರಚನೆ ಯಾರಿಗಾದರೂ ಆಕರ್ಷಕವಾಗಿರುತ್ತವೆ. ಇಂತಹ ಬರಹಗಳು ಹೆಚ್ಚಲಿ ಎಂದು ಆಶಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ, ಎಸ್. ನಾಗಣ್ಣ ಪ್ರೊ ಸಣ್ಣಗುಡ್ಡಯ್ಯ ಅವರೊಂದಿಗಿನ ತಮ್ಮ ಒಡನಾಟ ಸ್ಮರಿಸಿಕೊಂಡರು. ಸಣ್ಣಗುಡ್ಡಯ್ಯ, ಕವಿ ವೀ. ಚಿಕ್ಕವೀರಯ್ಯ, ಹೋರಾಟಗಾರ ಕೆ.ಆರ್. ನಾಯಕ್ ಅವರ ಗೆಳೆತನ ನೆನಪಿಸಿಕೊಂಡರು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹವರ ನೆನೆಪು ಸದಾ ಇರಬೇಕು ಎಂಬ ಕಾರಣಕ್ಕೆ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರಶಸ್ತಿ ನಿಡುವ ಮೂಲಕ ಮುಂದಿನ ತಲೆಮಾರಿಗೆ ಅವರನ್ನು ತಿಳಿಸುವ ಪ್ರಯತ್ನ ಇದಾಗಿದೆ ಎಂದರು.ಪ್ರತಿಷ್ಠಾನದ ಅಧ್ಯಕ್ಷ ಎಂ. ಬಸವಯ್ಯ ಅದ್ಯಕ್ಷತೆ ವಹಿಸಿದ್ದರು. ಪ್ರೊ. ಸಣ್ಣಗುಡ್ಡಯ್ಯ ಅವರ ಪತ್ನಿ ಶಾಂತಾ ಸಣ್ಣಗುಡ್ಡಯ್ಯ, ನಿವೃತ್ತ ಪ್ರಾಚಾರ್ಯ ಪ್ರೊ.ಕೆ. ಚಂದ್ರಣ್ಣ, ಎಂ.ಎಚ್. ನಾಗರಾಜು, ಶ್ರೀತೀರ್ಥ, ಮಿರ್ಜಾ ಬಷೀರ್ ಮೊದಲಾದವರು ಭಾಗವಹಿಸಿದ್ದರು.