ವಚನ ಸಾಹಿತ್ಯ ಎಲ್ಲಾ ಭಾಷೆಗಳಿಗೂ ಅನುವಾದವಾಗಬೇಕು: ಪ್ರೊ.ಆರ್‌.ವಿ.ಎಸ್‌. ಸುಂದರಂ

| Published : Apr 03 2024, 01:34 AM IST

ವಚನ ಸಾಹಿತ್ಯ ಎಲ್ಲಾ ಭಾಷೆಗಳಿಗೂ ಅನುವಾದವಾಗಬೇಕು: ಪ್ರೊ.ಆರ್‌.ವಿ.ಎಸ್‌. ಸುಂದರಂ
Share this Article
  • FB
  • TW
  • Linkdin
  • Email

ಸಾರಾಂಶ

111 ವರ್ಷ ಬದುಕಿದಂತಹ ನಡೆದಾಡುವ ದೇವರು ಎಂದೆನಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯನ್ನು ಕರ್ಮಭೂಮಿಯನ್ನಾಗಿ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರು. ಶ್ರೀಗಳು ಪರರ ಒಳಿತನ್ನು ಬಯಸಿದವರು 10,000 ಮಕ್ಕಳಿಗೆ ಸಿದ್ದಗಂಗೆಯಲ್ಲಿ ವಿದ್ಯಾಭ್ಯಾಸವನ್ನು ವಸತಿಯ ಜೊತೆಗೆ ಯಾವುದೇ ಶುಲ್ಕವಿಲ್ಲದೆ ನೀಡಿದವರು. ನಾವು ಇಂಥವರ ನಡುವೆ ಬದುಕಿದ್ದೆವು ಎನ್ನುವುದು ನಮ್ಮ ಪುಣ್ಯ. ಬಸವಣ್ಣನವರ ಫೋಟೋ ಜೊತೆಗೆ ಶ್ರೀಗಳ ಭಾವಚಿತ್ರವನ್ನು ಕೂಡ ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತೇವೆ ಎಂದರೆ ಅಂತಹ ಮಹಾನ್ ವ್ಯಕ್ತಿಯ ನಡುವೆ ಬದುಕಿದ್ದ ನಾವು ಅವರ ಅಂಶಗಳನ್ನು ಕೆಲವೊಂದಾದರೂ ರೂಢಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ವಚನ ಸಾಹಿತ್ಯ ಎಲ್ಲಾ ಭಾಷೆಗಳಿಗೂ ಅನುವಾದಬೇಕು. ಆ ಮೂಲಕ ಇಡೀ ಲೋಕಕ್ಕೆ ಪರಿಚಯಿಸಬೇಕು ಎಂದು ಬಹುಭಾಷಾ ವಿದ್ವಾಂಸ ಪ್ರೊ.ಆರ್.ವಿ.ಎಸ್. ಸುಂದರಂ ಅಭಿಪ್ರಾಯಪಟ್ಟರು.

ಶ್ರೀ ನಟರಾಜ ಪ್ರತಿಷ್ಠಾನದ ಶರಣ ಜ್ಯೋತಿ ಪ್ರಸಾರಾಂಗ ಮತ್ತು ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಸಿದ್ದಗಂಗೆ ಡಾ. ಶಿವಕುಮಾರ ಸ್ವಾಮಿಗಳವರ 117ನೆಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಹಾ ಮಾನವತವಾದಿ ಬಸವಣ್ಣ ಕನ್ನಡ ಮತ್ತು ತೆಲುಗು. ವಚನಚಿತ್ರ ದರ್ಶನ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,

ನುಡಿದರೆ ಮುತ್ತಿನ ಹಾರದಂತಿರಬೇಕು. ಅದನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೆ ಭಾಷೆಯು ಮುತ್ತಿನಂತಿದ್ದರೆ ಎಲ್ಲರೂ ಬಸವಣ್ಣನಂತೆ ಅಲ್ಲಮಪ್ರಭುವಿನಂತೆ ಆಗಬಹುದು ಎಂದರು.

ಸಿದ್ಧಗಂಗೆ. ಡಾ. ಶಿವಕುಮಾರ ಸ್ವಾಮಿಗಳ ಜಯಂತ್ಯುತ್ಸವ ಅಂಗವಾಗಿ ನುಡಿ ನಮನಗಳನ್ನು ಸಲ್ಲಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, 111 ವರ್ಷ ಬದುಕಿದಂತಹ ನಡೆದಾಡುವ ದೇವರು ಎಂದೆನಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯನ್ನು ಕರ್ಮಭೂಮಿಯನ್ನಾಗಿ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರು. ಶ್ರೀಗಳು ಪರರ ಒಳಿತನ್ನು ಬಯಸಿದವರು 10,000 ಮಕ್ಕಳಿಗೆ ಸಿದ್ದಗಂಗೆಯಲ್ಲಿ ವಿದ್ಯಾಭ್ಯಾಸವನ್ನು ವಸತಿಯ ಜೊತೆಗೆ ಯಾವುದೇ ಶುಲ್ಕವಿಲ್ಲದೆ ನೀಡಿದವರು. ನಾವು ಇಂಥವರ ನಡುವೆ ಬದುಕಿದ್ದೆವು ಎನ್ನುವುದು ನಮ್ಮ ಪುಣ್ಯ. ಬಸವಣ್ಣನವರ ಫೋಟೋ ಜೊತೆಗೆ ಶ್ರೀಗಳ ಭಾವಚಿತ್ರವನ್ನು ಕೂಡ ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತೇವೆ ಎಂದರೆ ಅಂತಹ ಮಹಾನ್ ವ್ಯಕ್ತಿಯ ನಡುವೆ ಬದುಕಿದ್ದ ನಾವು ಅವರ ಅಂಶಗಳನ್ನು ಕೆಲವೊಂದಾದರೂ ರೂಢಿಸಿಕೊಳ್ಳಬೇಕು ಆಗ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುವುದಕ್ಕೂ ಸಾರ್ಥಕವಾಗುತ್ತದೆ. ಎಂದರು.

ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಮಠಮಾನ್ಯಗಳು ದಾರಿದೀಪವಾಗಿವೆ, ಅನ್ನ ಅಕ್ಷರ ಆರೋಗ್ಯವನ್ನು ನೀಡುವ ಕೆಲಸವನ್ನು ಮಠಗಳು ಮಾಡುತ್ತಿವೆ ಎಂದು ಅವರು ಶ್ಲಾಘಿಸಿದರು.

ಸರಳ ಭಾಷೆ: ಕೃತಿಕಾರರಾದ ಹಿರಿಯ ಶಿಲ್ಪಿ ಎಲ್. ಶಿವಲಿಂಗಪ್ಪ ಮಾತನಾಡಿ, ಈ ಕೃತಿ ಚಿತ್ರಗಳ ಮೂಲಕ ಬಸವಣ್ಣನವರ ಬಗ್ಗೆ ತಿಳಿಸುತ್ತದೆ. ಸಾವಿರ ಶಬ್ದಗಳು ಹೇಳುವಂಥದ್ದನ್ನು ಒಂದು ಚಿತ್ರ ಹೇಳುತ್ತದೆ ಎನ್ನುವುದು ಈ ಕೃತಿಯ ವಿಶೇಷ. ಸ್ತ್ರೀಯರಿಗೆ ಸಮಾನತೆಯನ್ನು ನೀಡುವಂತಹ ವಿಚಾರಗಳಿವೆ ಮತ್ತು ಅನುಭವ ಮಂಟಪದಲ್ಲಿ ನಡೆಯುವಂತಹ ಸಭೆಯ ವಿವರಗಳನ್ನು ಕೂಡ ಈ ಕೃತಿಯಲ್ಲಿ ನೋಡಬಹುದು. ಈ ಕೃತಿಯು ಸರಳ ಭಾಷೆಯಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ಪುಸ್ತಕವನ್ನು ಬರೆಯಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಬಸವಣ್ಣನವರ ಕೃತಿಗಳು ಶರಣ ಜ್ಯೋತಿ ಪ್ರಕಾಶನವು ಪ್ರಕಟಿಸಿದೆ. ಈ ರೀತಿಯಾದ ನೂರಾರು ಕೃತಿಗಳನ್ನು ಪ್ರಕಟಿಸಲು ಸಿದ್ಧವಾಗಿದ್ದು, ಇದರ ಜೊತೆಗೆ ಶರಣ ಜ್ಯೋತಿ ಪ್ರಸಾರಂಗವೂ ವಿದ್ಯಾರ್ಥಿಗಳಿಗೂ ಅವಕಾಶವನ್ನು ನೀಡುತ್ತದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ್ ದಳಪತಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ದಿಲೀಪ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ವೀಣಾ ಕುಂಚೂರ್ ವಂದಿಸಿದರು. ಚೂಡಾಮಣಿ ವಚನ ಗಾಯನ ನಡೆಸಿಕೊಟ್ಟರು. ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿ. ಇಡಿ ಮಹಾವಿದ್ಯಾಲಯ ಕಾಲೇಜಿನ ಬೋಧಕ ವರ್ಗದವರು ಉಪಸ್ಥಿತರಿದ್ದರು.