ಸಾರಾಂಶ
ಕನ್ನಡಪ್ರಭ ವಾರ್ತೆ, ಹುಮನಾಬಾದ್
ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಮತ್ತು ವ್ಯವಸ್ಥಿತವಾಗಿ ಮಾಡುವುದು, ಜಾತ್ರೆಯಲ್ಲಿ ಕಟ್ಟಿಗೆ ಆನೆ ಮೆರವಣಿಗೆ ಬದಲಿಗೆ ಜೀವಧ ಆನೆಯ ಮೇಲೆ ಪಲ್ಲಕ್ಕಿಯ ಮೆರವಣಿಗೆ ಮೆರಗು ಹೆಚ್ಚಿಸಲು ನಿರ್ಧರಿಸಲಾಗಿದ್ದು ಜ.15ರಿಂದ ನಡೆಯುವ ಜಾತ್ರೆಯು ಈ ಬಾರಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಲು ಯೋಜಿಸಲಾಯಿತು.ಪಟ್ಟಣದ ದಿ. ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಸಹಾಯಕ ಆಯುಕ್ತರು, ತಹಸೀಲ್ದಾರ, ಪುರಸಭೆ, ಜೆಸ್ಕಾಂ, ಪೊಲೀಸ್ ಇಲಾಖೆ, ಅಲಂಕಾರ, ಅಗ್ನಿಕುಂಡ, ಮಳಿಗೆ ಸಮಿತಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ 5 ಕಟ್ಟಿಗೆ ಆನೆ ಮೆರವಣಿಗೆ, 5 ದಿನ ಉಚ್ಛಾಯಿ ಸಣ್ಣ ರಥ ಮೆರವಣಿಗೆ ಇರುತ್ತದೆ ಇಲ್ಲಿ ಕಟ್ಟಿಗೆ ಆನೆಯ ಬದಲಿಗೆ ಜೀವಂತ ಆನೆಯನ್ನು ತರಿಸಿದರೆ ಸೂಕ್ತ ಎಂದು ಬಿಎಸ್‌ಎಸ್‌ಕೆ ಅಧ್ಯಕ್ಷ ಸುಭಾಷ್ ಕಲ್ಲೂರ್ ಸಲಹೆಯಿತ್ತರು.ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಈ ಬಾರಿ 15ರಿಂದ 20ರ ವರೆಗೆ ನಡೆಯಲಿರುವ ವೀರಭದ್ರೇಶ್ವರ ಜಾತ್ರಾ ಮಹೋ ತ್ಸವಕ್ಕೆ ಕಟ್ಟಿಗೆ ಆನೆಯ ಸ್ಥಳದಲ್ಲಿ ದಿ.ಬಸವರಾಜ ಪಾಟೀಲ್ ಪರಿವಾರದಿಂದ ಜೀವಂತ ಆನೆಯನ್ನು ಕರೆ ತರಿಸಿ ಅದರ ಖರ್ಚು ವೆಚ್ಚ ನೀಡಿ ಮೆರವಣಿಗೆ ನಡೆಸಿಕೊಡಲಾಗುವುದು ಎಂದು ಘೋಷಿಸಿದರು.ಒಗ್ಗಟ್ಟಿನಿಂದ ಸಹಕರಿಸೋಣ:
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಜೊತೆಗೆ ಪುರಸಭೆಯಿಂದ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಬೇಕೆಂದರು. ದೇವರ ಈ ಜಾತ್ರೆಯಲ್ಲಿ ಎಲ್ಲರೂ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು, ವೀರಭದ್ರೇಶ್ವರ ಬಹಳಷ್ಟು ಜಾಗೃತರಾಗಿದ್ದಾರೆ ಎಲ್ಲರೂ ಒಗ್ಗಟ್ಟಿನಿಂದ ಹೋಗೋಣ ಎಂದರು.ರಾಜ್ಯದಷ್ಟೇ ಅಲ್ಲ ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣಾದಿಂದಲೂ ಭಾರಿ ಪ್ರಮಾಣದಲ್ಲಿ ಭಕ್ತಾದಿಗಳು ಬರಲಿದ್ದಾರೆ. ಜಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನೂ ಆಮಂತ್ರಿಸಲಾಗುವುದು. ದೇವಸ್ಥಾನದ ಅಭಿವೃದ್ಧಿಗೆ 6.5ಕೋಟಿ ರು.ಗಳ ಅನುದಾನದ ಕ್ರೀಯಾ ಯೋಜನೆ ಮಾಡಲಾಗಿದ್ದು, ಟೆಂಡರ್ ಹಂತದಲ್ಲಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ. ಕೋವಿಡ್ ಹೆಮ್ಮಾರಿಯ ರೋಗ ಲಕ್ಷಣವನ್ನು ಹೊಂದಿರುವ ಎಚ್‌ಎಂಪಿವಿ ವೈರಸ್ ಕುರಿತು ಮುನ್ನೆಚ್ಚರಿಕೆ ವಹಿಸಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಪಟ್ಟಣದಾದ್ಯಂತ ಆರೋಗ್ಯ ತಪಾಸಣಾ ಕೇಂದ್ರಗಳು ಜಾತ್ರಾ ಮಹೋತ್ಸವ ಮುಗಿಯುವವರೆಗೆ ಸ್ಥಾಪಿಸು ವಂತೆ ಸೂಚಿಸಿದರು.
ಸಭೆಯಲ್ಲಿ ಆಶೀರ್ವಚನ ನೀಡಿದ ಹಿರೇಮಠ ಸಂಸ್ಥಾನ ರೇಣುಕವೀರ ಗಂಗಾಧರ ಶಿವಚಾರ್ಯರು, ಕಲ್ಯಾಣ ಕರ್ನಾಟಕ ಭಾಗದ ಒಡೆಯನಾದ ವೀರಭದ್ರ ಸ್ವಾಮಿ ದೇವರ ಜಾತ್ರೆ ಒಡೆದು ಹೋಗಿರುವ ಮನಸ್ಸುಗಳ ಒಟ್ಟುಗೂಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.ಜಾತ್ರಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಸದಸ್ಯ ಮಲ್ಲಿಕಾರ್ಜುನ ಮಾಳಶಟ್ಟಿ, ಬಸವರಾಜ ಆರ್ಯ, ನಾಗಭೂಷಣ ಸಂಗಮಕರ್, ಲಕ್ಷ್ಮೀ ಕಾಂತ ಹಿಂದೊಡ್ಡಿ, ಉಮೇಶ ಜಂಬಗಿ, ಸುರೇಶ ಘಾಂಗ್ರೆ ಸೇರಿದಂತೆ ಜಾತ್ರಾ ಕುರಿತು ಮಾಹಿತಿ ನೀಡಿದರು.ತಹಸೀಲ್ದಾರ್ ಅಂಜುಮ್ ತಬಸುಮ್, ಡಿವೈಎಸ್ಪಿ ಜೆಎಸ್ ನ್ಯಾಮಗೌಡರ್, ಸಿಪಿಐ ಗುರುಲಿಂಗಪ್ಪಗೌಡ ಪಾಟೀಲ್, ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಖರಂಜಾ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಉದ್ಯಮಿಗಳು, ಜಾತ್ರಾ ಮಹೋತ್ಸವ ಜವಾಬ್ದಾರಿ ಹೊಂದಿರುವ ಭಕ್ತರು ಸೇರಿದಂತೆ ಅನೇಕರಿದ್ದರು.- ದೇಗುಲ ಅಭಿವೃದ್ಧಿಗೆ ₹6.5ಕೋಟಿ ಅನುದಾನದ ಕ್ರೀಯಾ ಯೋಜನೆ: ಪಾಟೀಲ್
ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ. ಹಿರೇಮಠ ಸಂಸ್ಥಾನ ರೇಣುಕವೀರ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಜರುಗಲಿದ್ದು, ಕೇವಲ ಸರ್ಕಾರಿ ಅಧಿಕಾರಿಗಳಿಂದ ಯಶಸ್ವಿಯಾಗುವದು ಕಷ್ಟ. ಈ ಜಾತ್ರೆಯ ಯಶಸ್ವಿಗೆ ಪ್ರತಿಯೊಬ್ಬ ಮುಖಂಡರ, ನಾಗರಿಕರ ಸಹಕಾರ ಅಗತ್ಯವಿದೆ. ವೀರಭದ್ರೇಶ್ವರ ದೇವರ ಮುಂದೆ ಎಲ್ಲರೂ ಸರಿಸಮಾನರು. ತೇರು ಎಳೆಯುವ ಸಮಯ, ಅಗ್ನಿಕುಂಡದ ವ್ಯವಸ್ಥೆಯನ್ನು ಎಲ್ಲರ ಸಮ್ಮತಿಯಿಂದ ಮುಂದಿನ ದಿನಗಳಲ್ಲಿ ನಿರ್ಧರಿಸಿ ಮಾಡೋಣ ಎಂದರು.