ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಎಂದು ಭಿನ್ನಾಭಿಪ್ರಾಯ ಬರುತ್ತಿರುವುದು ದುರದೃಷ್ಟಕರ. ಲಿಂಗಾಯತರು ವೀರಶೈವರೇ, ವೀರಶೈವರೇ ಲಿಂಗಾಯತರು. ಬಸವಣ್ಣನವರು ಲಿಂಗಾಯತ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಧರ್ಮ ಕಾಯಕ, ದಾಸೋಹ ಮಾಡುತ್ತಿರುವ ಧರ್ಮವಾಗಿದೆ. ಅದನ್ನು ಉಳಿಸಿಕೊಳ್ಳಲು ಪರಸ್ಪರರಲ್ಲಿ ಸಾಮರಸ್ಯವಿರುವುದು ಅವಶ್ಯವಾಗಿದೆ. ಆದರೆ, ಕೆಲವು ಸ್ವಾಮೀಜಿಗಳು ಗುಂಪು ಗುಂಪಾಗಿರುವುದು ಖೇದಕರ. ಹಾಗಾಗಿ ನಾನು ವೀರಶೈವರ ಕಡೆಯೂ ಹೋಗಿಲ್ಲ, ಲಿಂಗಾಯತರ ಕಡೆಯೂ ಹೋಗಿಲ್ಲ ಎಂದರು.ನಾನು ಎರಡೂ ಕಡೆ ಹೋಗಿಲ್ಲ. ಎಲ್ಲರೂ ಸೇರಿಕೊಂಡು ಹೋಗಬೇಕು ಎನ್ನುವುದು ನನ್ನ ವಿನಂತಿ. ವೀರಶೈವರನ್ನು- ಲಿಂಗಾಯತರನ್ನು ಬೇರೆ ಮಾಡಬಾರದು, ಕವಲು ದಾರಿಗೆ ಹೋಗುವುದು ಬೇಡ ಎಂದು ನಿವೇದಿಸಿದ್ದೇನೆ. ಕನ್ಹೇರಿ ಶ್ರೀಗಳ ಹೇಳಿಕೆ ಖಂಡಿಸಿ ಬಸವನಬಾಗೇವಾಡಿ ಕ್ಷೇತ್ರದ ಜನತೆ ಪ್ರತಿಭಟಿಸಿದ್ದಾರೆ. ಕನ್ಹೇರಿ ಸ್ವಾಮೀಜಿಗಳು ಬಾಯಿತಪ್ಪಿ ಒಂದು ಮಾತು ಆಡಿದ್ದರೂ ಅದನ್ನು ಇಷ್ಟು ದೀರ್ಘಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಮನವಿ ಮಾಡಿದರು.
ಇಲ್ಲಿಂದ ಹೋಗಿ ಅವರು ಮಠವನ್ನು ಜೀರ್ಣೋದ್ಧಾರ ಮಾಡಿ, ಕೊಲ್ಹಾಪುರದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ರೈತರಿಗಾಗಿ, ಸಮಾಜಕ್ಕಾಗಿ, ವ್ಯವಸಾಯಕ್ಕಾಗಿ ಅನುಕೂಲಕರ ಶ್ರಮ ಹಾಕಿದ್ದಾರೆ. ಬಸವನಬಾಗೇವಾಡಿಯಲ್ಲಿಯೇ ಉತ್ತಮ ಮಠ ಕಟ್ಟುತ್ತಿದ್ದಾರೆ. ರಾಜಕಾರಣಿಗಳು ತಪ್ಪು ಮಾತನಾಡುತ್ತೇವೆ, ಹಾಗೆ ನೋಡಿದರೆ ನಮ್ಮ ಮೇಲೂ ನಿರ್ಬಂಧ ಹೇರಬಹುದು. ಸ್ವಾಮೀಜಿಗಳು ಯಾವಾಗೋ ಒಂದು ಬಾರಿ ಮಾತನಾಡಿದ್ದಕ್ಕೆ ನಿರ್ಬಂಧ ಹೇರುವುದರಲ್ಲಿ ಅರ್ಥವಿಲ್ಲ. ಈ ವಿಚಾರ ಇಲ್ಲಿಗೆ ಮುಗಿಸುವುದು ಒಳ್ಳೆಯದು. ಅಂತಹ ಪದಗಳು ಸ್ವಾಮೀಜಿಗಳು, ಮಠಾಧೀಶರು ಸೇರಿ ಯಾರ ಬಾಯಿಂದಲೂ ಬರಬಾರದು ಎಂದು ಮನವಿ ಮಾಡಿದರು.ಜಿಲ್ಲೆಗೆ ಪಿಪಿಪಿ ಮಾದರಿ ಕಾಲೇಜು ಬೇಡ, ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ವಿಚಾರದ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಅವರು ₹ 400 ಕೋಟಿ ಬೇಕಾಗುತ್ತೆ ಎಂದರು. ₹150ರಿಂದ 200 ಕೋಟಿಯೊಳಗೆ ಆಗುತ್ತದೆ ಎಂದು ಅವರಲ್ಲಿ ಮನವರಿಕೆ ಮಾಡಿದ್ದೇನೆ. ಹಾಗಾಗಿ ಆದ್ಯತೆ ಮೇರೆಗೆ ಪರಿಗಣಿಸಿ ಎಂದು ಹೇಳಿದ್ದೇನೆ. ಮುಂದೆ ಸಿಎಂ ವಿವೇಚನೆಗೆ ಬಿಟ್ಟಿದ್ದು. ಜೊತೆಗೆ ಸಚಿವ ಸಂಪುಟದಲ್ಲಿ ಜಿಲ್ಲಾ ಮಂತ್ರಿಗಳು ಸರ್ಕಾರಿ ಮೆಡಿಕಲ್ ಕಾಲೇಜು ಕೊಡಿ ಎಂದು ಮಾತನಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.
-----------ಬಾಕ್ಸ್....
ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕರಿಗೆ ಅಭಿನಂದನೆವಿಜಯಪುರ: ಶತಮಾನ ಕಂಡಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಿಂತ ಶ್ರೀಸಿದ್ದೇಶ್ವರ ಬ್ಯಾಂಕ್ ಹಿರಿತನ ಹೊಂದಿದೆ. ಹೀಗಾಗಿ ಬ್ಯಾಂಕ್ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಪ್ರಯತ್ನಿಸಿದರೂ ಚುನಾವಣೆ ಎದುರಾಗಿತ್ತು. ಇದೀಗ ಹಳೆಯ ಪೆನಲ್ ಮರು ಆಯ್ಕೆಯಾಗಿದ್ದು, ಇದಕ್ಕೆ ಸಹಕರಿಸಿದ ಬ್ಯಾಂಕ್‌ನ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬ್ಯಾಂಕ್‌ನಂಥ ಸೂಕ್ಷ್ಮ ಸಂಸ್ಥೆಗಳಲ್ಲಿ ಸಣ್ಣ ಲೋಪವಾದರೂ ಅಪಪ್ರಚಾರವಾಗುತ್ತದೆ. ವಚನ ಪಿತಾಮಹ ಫ.ಗು.ಹಳಕಟ್ಟಿ ಕಟ್ಟಿರುವ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು, ಈ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಆಗಿ ಉನ್ನತ ಸಾಧನೆ ಮಾಡಲಿ ಎಂಬ ಆಶಯ ಹೊಂದಿದ್ದೇನೆ ಎಂದರು. ಈ ಚುನಾವಣೆಯಲ್ಲಿ ನಾನು ನೇರವಾಗಿ ಭಾಗಿಯಾಗದೇ ಹಳೆಯ ಪೆನಲ್ ಬೆಂಬಲಿಸಲು ಮನವಿ ಮಾಡಿದ್ದೆ. ಗೆದ್ದ ನಿರ್ದೇಶಕರನ್ನು ನಮ್ಮ ಬ್ಯಾಂಕಿಗೆ ಕರೆದು ಸನ್ಮಾನಿಸಿದ್ದೇನೆ. ಭಿನ್ನಾಭಿಪ್ರಾಯ ಇಲ್ಲದಂತೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಹಾಗೂ ಹೊಸಬರಿಗೆ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದ್ದೇನೆ ಎಂದರು.