ಸಾರಾಂಶ
- ಪೇಪರ್, ಪುಸ್ತಕ ಖರೀದಿಗೆ ಮಾಸಿಕ ಕೇವಲ ₹400 ನಿಗದಿ, ಬಹುತೇಕ ಲೈಬ್ರರಿಗಳಿಗೆ ಫಲಕದಿಂದಿಡಿದು ಅಗತ್ಯ ಸವಲತ್ತುಗಳಿಲ್ಲ - - - ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿತಾಲೂಕಿನಲ್ಲಿರುವ 61 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಪಂಗೆ 1ರಂತೆ 61 ಗ್ರಾಮ ಗ್ರಂಥಾಲಯಗಳಿವೆ. ಈ ಗ್ರಂಥಾಲಯಗಳ ಮೂಲಕ ಗ್ರಾಮದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಗಳನ್ನು ನೀಡಲು ರಾಜ್ಯ, ದೇಶಗಳ ವಿದ್ಯಮಾನಗಳನ್ನು ತಿಳಿಯಲು ಸಹಕಾರಿ ಆಗುವಂತೆ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಲೈಬ್ರರಿಗಳಲ್ಲಿ ಉತ್ತಮ ಪುಸ್ತಕಗಳು ಸೇರಿದಂತೆ ಬಹುತೇಕ ಸೌಲಭ್ಯಗಳೇ ಇಲ್ಲವಾಗಿವೆ!
ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎಂಬ ಘೋಷವಾಕ್ಯದಂತೆ ಗ್ರಾಮಾಂತರ ಗ್ರಂಥಾಲಯಗಳು ಅರಿವು ಮೂಡಿಸುವ ಕೇಂದ್ರಗಳಾಗಿವೆ. ದಿನಪತ್ರಿಕೆ, ವಾರಪತ್ರಿಕೆ, ಸ್ಪಧಾತ್ಮಕ ಪರೀಕ್ಷೆಗಳಿಗೆ ಬೇಕಾದಂತಹ ಪುಸ್ತಕಗಳನ್ನು ತರಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳಿಂದ ಹಣ ಸಹ ಬಿಡುಗಡೆಯಾಗುತ್ತದೆ. ಆದರೆ, ಈ ಮೊತ್ತ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕೇವಲ ₹400 ನೀಡುತ್ತಿದ್ದು, ಪರಿಣಾಮ 2 ದಿನಪತ್ರಿಕೆಗಳನ್ನು ಮಾತ್ರವೇ ಲೈಬ್ರರಿಗಳಲ್ಲಿ ಓದಲು ಸಿಗುತ್ತಿವೆ.ಈ ಬಗ್ಗೆ ಗಮನಹರಿಸಿದ ರಾಜ್ಯ ಸರ್ಕಾರ 2022ರ ಡಿ.12ರಲ್ಲಿಯೇ ಸುತ್ತೋಲೆ ಹೊರಡಿಸಿ, ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ಖರೀದಿಗೆ ಮಾಸಿಕ ₹1000 ನೀಡಲು ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಮತ್ತು ತಾಪಂ ಇಒಗಳಿಗೆ ಆದೇಶ ನೀಡಿದ್ದಾರೆ. ಈ ಆದೇಶವಾಗಿ 3 ವರ್ಷಗಳೇ ಕಳೆದರೂ, ತಾಲೂಕಿನ ಗ್ರಂಥಾಲಯಗಳಿಗೆ ಇಂದಿಗೂ ಕೇವಲ ₹400 ಮಾತ್ರವೇ ನೀಡಲಾಗುತ್ತಿದೆ.
ಗ್ರಂಥಪಾಲಕರೊಬ್ಬರು ಹೇಳುವಂತೆ, ಇನ್ನು ಗ್ರಂಥಾಲಯಗಳ ನಿರ್ವಹಣೆಯೂ ಹಣದ ಕೊರತೆಯಿಂದಾಗಿ ಹಾದಿತಪ್ಪಿದೆ. 2019ರಿಂದ 1 ವರ್ಷಕ್ಕೆ ಸಾದಿಲ್ವಾರು ಹಣವಾಗಿ ನೀಡಬೇಕಿದ್ದ ₹5644 ಗ್ರಾಮ ಪಂಚಾಯಿತಿ ಆಡಳಿತಗಳು ನೀಡುತ್ತಿಲ್ಲ. ಈ ಸಾದಿಲ್ವಾರು ಹಣದಲ್ಲಿ ಗ್ರಂಥಾಲಯಕ್ಕೆ ಅಗತ್ಯವಾಗಿ ಬೇಕಾದ ಶುಚಿಗಾರರ ಕೂಲಿ, ಪೆನ್ನು, ರಬ್ಬರ್, ಪೊರಕೆ, ವಿದ್ಯುತ್ ಬಿಲ್ ಮುಂತಾದ ಖರ್ಚುಗಳ ಬರಿಸಲು ಹಲವು ಖರ್ಚುಗಳಿಗೆ ಬಳಸಲಾಗುತ್ತದೆ. ಈಗ 6 ವರ್ಷಗಳಿಂದ ಈ ಅನುದಾನವೂ ನೀಡದಿರುವುದರಿಂದ ಗ್ರಾಪಂ ಲೈಬ್ರರಿಗಳು ಬಾಗಿಲು ಮುಚ್ಚುವ ದಿನಗಳೂ ದೂರವಿಲ್ಲ ಎನ್ನುತ್ತಾರೆ.ಗ್ರಾಪಂ ಗ್ರಂಥಪಾಲಕರಿಗೆ ₹12 ಸಾವಿರ ಮಾಸಿಕ ವೇತನವನ್ನು ನಿಗದಿಗೊಳಿಸಲಾಗಿದೆ. ಮತ್ತು ಜಿಲ್ಲಾ ಪಂಚಾಯಿತಿಯಿಂದ ₹6606 ಸೇರಿದಂತೆ ₹18606 ನೀಡಲಾಗುತ್ತದೆ. ಆದರೆ, ಮೂರು, ನಾಲ್ಕು ತಿಂಗಳಿಗೊಮ್ಮೆ ಈ ಸಂಬಳ ಕೈ ಸೇರುವ ಸರ್ಕಾರಿ ನೀತಿ ಗ್ರಂಥಪಾಲಕರ ಜೀವನ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ ಎಂದರೆ ತಪ್ಪಲ್ಲ.
ತಾಲೂಕಿನ 61 ಗ್ರಂಥಾಲಯಗಳಲ್ಲಿ ಕೆಲವು ಗ್ರಂಥಾಲಯಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಮತ್ತೆ ಹಲವು ಸರ್ಕಾರಿ ಶಾಲೆಗಳ ಕೊಠಡಿಗಳಲ್ಲಿ ಗ್ರಾ.ಪಂ.ನ ಕಟ್ಟಡಗಳಲ್ಲಿ ಕಾರ್ಯ ನಡೆಸುತ್ತಿವೆ. ಗ್ರಂಥಾಲಯಗಳಿಗೆ ಬರುವ ಓದುಗರಿಗೆ ಮೂಲಸೌಲಭ್ಯಗಳಾದ ಮೂತ್ರಾಲಯ, ಕುಡಿಯುವ ನೀರು, ಪುಸ್ತಕಗಳ ಜೋಡಣೆಗೆ ಕಪಾಟುಗಳು, ಆಸನಗಳು ವ್ಯವಸ್ಥಿತವಾಗಿ ಇರಬೇಕು. ಆದರೆ, ಬಹುತೇಕ ಲೈಬ್ರರಿಗಳಲ್ಲಿ ಇವುಗಳ ಕೊರತೆ ಹೆಚ್ಚಾಗಿರುವ ವಿಚಾರ ಓದುಗರನ್ನು ಕೆರಳಿಸುತ್ತಿದೆ.ಈ ಗ್ರಾಪಂ ಗ್ರಂಥಾಲಯಗಳಲ್ಲಿ ಹೆಚ್ಚಿನ ಪುಸ್ತಕಗಳು ಓದುಗರ ಅಭಿರುಚಿಗೆ ತಕ್ಕಂತೆ ಇಲ್ಲ ಎಂಬುದು ಮತ್ತೊಂದು ದೊಡ್ಡ ಸಮಸ್ಯೆ. ಉತ್ತಮ ಲೇಖಕರು, ಕವಿಗಳು ಬರೆದ ಪುಸ್ತಕಗಳು ಈ ಗ್ರಾಪಂಗಳಲ್ಲಿ ಇಲ್ಲ. ಗ್ರಾಪಂ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿ ಮಾಡುವಂತಹ ಜಿ.ಪಂ. ಆಗಲಿ, ಗ್ರಾ.ಪಂ. ಆಗಲಿ ಅಥವಾ ತಾಪಂ ಆಗಲಿ, ಮುಖ್ಯ ಗ್ರಂಥಾಲಯ ಇಲಾಖೆ ವೈಚಾರಿಕತೆ ಮತ್ತು ಸಾಮಾಜಿಕ ಚಿಂತನೆಗಳನ್ನು ಒಳಗೊಂಡಿರುವ, ಭಾವೈಕ್ಯತೆ ಮೂಡಿಸುವ, ಸಾಮಾನ್ಯ ಜ್ಞಾನ ವೃದ್ಧಿಸುವ ಪುಸ್ತಕಗಳನ್ನು ಒದಗಿಸಬೇಕಿದೆ. ಇದರಿಂದ ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಬಲ್ಲದು ಎಂಬುದು ಹಲವರ ಆಶಯ.
ಒಟ್ಟಿನಲ್ಲಿ ಚನ್ನಗಿರಿ ತಾಲೂಕಿನಲ್ಲಿರುವ ಎಲ್ಲ ಗ್ರಾಪಂ ಗ್ರಂಥಾಲಯಗಳಿಗೆ ಪರಿಣಾಮಕಾರಿ ಚಿಕಿತ್ಸೆಯಂತೂ ಜರೂರಾಗಿ ಬೇಕಾಗಿದೆ. ಗ್ರಂಥಾಲಯಗಳ ಕಡೆಗೆ ಚಿಣ್ಣರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಸೇರಿದಂತೆ ಎಲ್ಲರ ಚಿತ್ತ ಆಕರ್ಷಿಸುವಂಥ ಪುಸ್ತಕಗಳು, ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸಲು ಗಂಭೀರ ಕ್ರಮ ಕೈಗೊಳ್ಳಬೇಕಿದೆ.- - - ಬಾಕ್ಸ್ * ₹1000 ನೀಡುವಂತೆ ಶೀಘ್ರ ಕ್ರಮ: ಇಒ ಭರವಸೆ
ಗ್ರಾಮ ಪಂಚಾಯಿತಿ ಅಧೀನದಲ್ಲಿರುವ 61 ಗ್ರಂಥಾಲಯಗಳಿಗೆ ದಿನ ಪತ್ರಿಕೆ, ವಾರ ಪತ್ರಿಕೆ, ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪತ್ರಿಕೆಗಳನ್ನು ತರಿಸಲು ಆಯಾ ಗ್ರಾಪಂ ಆಡಳಿತಗಳು ಕೇವಲ ₹400 ನೀಡುತ್ತಿರುವ ವಿಚಾರ ಬಗ್ಗೆ ಯಾವ ಪಿಡಿಒಗಳೂ ನನಗೆ ತಿಳಿಸಿಲ್ಲ ಎಂದು ಚನ್ನಗಿರಿ ತಾಪಂ ಇಒ ಬಿ.ಕೆ.ಉತ್ತಮ ಪ್ರತಿಕ್ರಿಯಿಸಿದರು. ಮುಂದಿನ ತಿಂಗಳು ಗ್ರಾಪಂ ಪಿಡಿಒಗಳ ಮಾಸಿಕ ಸಭೆ ನಡೆಸಲಾಗುವುದು. ಸಭೆಯಲ್ಲಿ ತಾಲೂಕಿನ ಎಲ್ಲ ಪಿಡಿಒಗಳಿಗೂ ಗ್ರಾಪಂ ಲೈಬ್ರರಿಗೆ ದಿನಪತ್ರಿಕೆ ಮತ್ತು ಪುಸ್ತಕಗಳನ್ನು ತರಿಸಲು ಸರ್ಕಾರದ ಆದೇಶದಂತೆ ತಿಂಗಳಿಗೆ ₹1000 ನೀಡಲು ಆದೇಶಿಸುತ್ತೇನೆ. ಗ್ರಂಥಾಲಯಗಳಿಗೆ ಬೇಕಾದ ಮೂಲಸೌಲಭ್ಯಗಳನ್ನು ಸಹ ಅತಿ ಶೀಘ್ರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.- - - -13ಕೆಸಿಎನ್‌ಜಿ2: ಕನಿಷ್ಠ ಫಲಕವೂ ಕಾಣದ ಗ್ರಾಪಂ ಗ್ರಂಥಾಲಯ ಕಟ್ಟಡ.
-13ಕೆಸಿಎನ್‌ಜಿ3: ಗ್ರಾಪಂ ಗ್ರಂಥಾಲಯದಲ್ಲಿ ಪೀಠೋಪಕರಣ ಇಲ್ಲದಿರುವುದು.