ಮಹಿಳಾ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು: ಜಿಲ್ಲಾಧಿಕಾರಿ ಮೀನಾ ಸೂಚನೆ

| Published : Nov 08 2024, 12:43 AM IST

ಮಹಿಳಾ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು: ಜಿಲ್ಲಾಧಿಕಾರಿ ಮೀನಾ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿನ ಬಾಲ ಕಾರ್ಮಿಕರನ್ನು ಗುರುತಿಸಿ ಅವರನ್ನು ರಕ್ಷಿಸುವ ಜೊತೆಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

- ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ । ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿನ ಬಾಲ ಕಾರ್ಮಿಕರನ್ನು ಗುರುತಿಸಿ ಅವರನ್ನು ರಕ್ಷಿಸುವ ಜೊತೆಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 6 ರಿಂದ 14 ವರ್ಷದೊಳಗಿನ ಶಾಲೆಯಿಂದ ಹೊರಗುಳಿದು ಹೋಟೆಲ್, ಕಾರ್ಖಾನೆ, ಎಸ್ಟೇಟ್ ಹಾಗೂ ಇತರೆ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಮಕ್ಕಳನ್ನು ಗುರುತಿಸಿ ಕೆಲಸಕ್ಕೆ ಕಳುಹಿಸುವ ಪೋಷಕರಿಗೆ ಅರಿವು ಮೂಡಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡಬೇಕು. ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಿ ದೌರ್ಜನ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಮಾನವ ಕಳ್ಳ ಸಾಗಾಣಿಕೆ ಚಟುವಟಿಕೆ ನಡೆಯದಂತೆ ಕ್ರಮವಹಿಸಬೇಕು ಎಂದರು.

ಮಹಿಳೆಯರು ಹಾಗೂ ಮಕ್ಕಳಿಗೆ ಇಲಾಖೆಯಿಂದ ನೀಡುವ ಸೌಲಭ್ಯ ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಹಿಂಸಾಚಾರ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ ಒದಗಿಸುವ ಒನ್ ಸ್ಟಾಪ್ ಸೆಂಟರ್‌ ಗಳಿಗೆ ಕರೆತಂದು ಅವರ ಕಷ್ಟಗಳನ್ನು ಆಲಿಸಿ ಸಮಾಲೋಚನೆ ನಡೆಸಿ ತಾತ್ಕಾಲಿಕ ವಸತಿ ಒದಗಿಸುವ ಜೊತೆಗೆ ಧೈರ್ಯ ತುಂಬಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ವಿ. ಹನುಮಂತಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಒಟ್ಟು 63 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿವೆ. ಇವುಗಳಲ್ಲಿ 43 ಪ್ರಕರಣ ವಿಚಾರಣೆ ಹಾಗೂ 20 ಪ್ರಕರಣ ತನಿಖೆಯಲ್ಲಿವೆ. ದೌರ್ಜನ್ಯ ವೆಸಗುವ ವ್ಯಕ್ತಿ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮಹಿಳೆ ಹಾಗೂ ಮಕ್ಕಳಿಗೆ ಕಾನೂನುಗಳ ಕುರಿತು ಅರಿವು ಮೂಡಿಸಿ ಅವರ ಏಳ್ಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ, ಮಕ್ಕಳ ಪಾಲನ ಸಂಸ್ಥೆ ಹಾಗೂ ಬಾಲ ಮಂದಿರದಲ್ಲಿರುವ ಮಕ್ಕಳಿಗೆ ಕುಟುಂಬ ವಾತಾವರಣ ನಿರ್ಮಿಸಿಕೊಡುವ ಉದ್ದೇಶದಿಂದ ಪಾಲನಾ ಸಂಸ್ಥೆಗೆ ದಾಖಲಾಗುವ ಎಲ್ಲಾ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಶಿಕ್ಷಣದ ಅಗತ್ಯತೆ ಪೂರೈಸಲು ಹಾಗೂ ಮಗುವಿನ ಜೀವನ ಉತ್ತಮಗೊಳಿಸಲು ಪ್ರತಿ ಮಗುವಿಗೆ ₹4 ಸಾವಿರ ವನ್ನು ಮಕ್ಕಳ ವೈಯಕ್ತಿಕ ಖಾತೆಗೆ ಜಮೆ ಮಾಡಲಾಗುತ್ತಿದೆ. ಕೋವಿಡ್ ಕಾರಣದಿಂದ ಪೋಷಕರನ್ನು ಕಳೆದುಕೊಂಡ ಜಿಲ್ಲೆಯ 6 ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೆರೆಗೆ ಪಾಲನೆ, ಪೋಷಣೆ, ರಕ್ಷಣೆ ಹಾಗೂ ಶಿಕ್ಷಣ ಒದಗಿಸಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 48 ಬಾಲ್ಯ ವಿವಾಹ ಸಂಬಂಧಿಸಿದ ದೂರುಗಳು ದಾಖಲಾಗಿದ್ದು ಇವುಗಳಲ್ಲಿ 44 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಉಳಿದ 4 ಪ್ರಕರಣಗಳಿಗೆ ಎಫ್‌ಐಆರ್ ಮಾಡಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ದತ್ತು ಕಾರ್ಯಕ್ರಮ ಮತ್ತು ಮಕ್ಕಳ ರಕ್ಷಣಾ ನೀತಿ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

7 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಪಂ ಸಿಇಓ ಕೀರ್ತನಾ, ನ್ಯಾ. ವಿ. ಹನುಮಂತಪ್ಪ ಇದ್ದರು.