ಸಾರಾಂಶ
ಮತದಾನ ಮಾಡುವುದು ಹಾಗೂ ಮತದಾನ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯುತ ಕರ್ತವ್ಯವಾಗಿದೆ.
ಸಂಡೂರು: ಮತದಾನ ಎನ್ನುವುವು ಒಂದು ಪವಿತ್ರ ಕರ್ತವ್ಯವಾಗಿದ್ದು, ಇದರಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಪಾಲ್ಗೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಎಚ್.ಕೆ. ಸತೀಶ್ ಹೇಳಿದರು.
ಪಟ್ಟಣದ ಶ್ರೀಶೈಲೇಶ್ವರ ಬಿ.ಇಡಿ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ, ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಮತದಾನ ಮಾಡುವುದು ಹಾಗೂ ಮತದಾನ ಕುರಿತು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯುತ ಕರ್ತವ್ಯವಾಗಿದೆ. ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ಮತದಾನ ಮಾಡಿ, ಕನಿಷ್ಟ ೧೦೦ ಮತದಾರರನ್ನು ಮತದಾನಕ್ಕೆ ಕರೆತರಲು ಕ್ರಮವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಸ್ವೀಪ್ ನೋಡಲ್ ಅಧಿಕಾರಿ ಎಚ್. ಷಡಾಕ್ಷರಯ್ಯ ಮಾತನಾಡಿ, ಹಲವು ಪ್ರಜ್ಞಾವಂತರೆ ಮತದಾನದಿಂದ ದೂರ ಉಳಿಯುತ್ತಿದ್ದು, ಅಂತಹವರಲ್ಲಿ ತಿಳಿವಳಿಕೆಯನ್ನು ಮೂಡಿಸಿ ಮತದಾನ ಮಾಡಲು ಪ್ರೇರೇಪಿಸಬೇಕು. ತಾಲ್ಲೂಕಿನಲ್ಲಿ ಮತದಾನ ಜಾಗೃತಿಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ವಿಷಯದಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ೩೦ ವರ್ಷದ ಒಳಗಿನವರಿಗೆ ಕಾರ್ಯಕ್ರಮದ ಆಯ್ದ ವಿಷಯದ ಬಗ್ಗೆ ಮಾತನಾಡಿಸಲಾಯಿತು. ಅವರಲ್ಲಿ ಮೂವರನ್ನು ಜಿಲ್ಲಾ ಹಂತಕ್ಕೆ ಆಯ್ಕೆ ಮಾಡಲಾಯಿತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಶಿಕ್ಷಣ ಸಂಯೋಜಕ ಬಸವರಾಜ್, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ದೇವರಾಜ್, ಡಿಎಲ್‌ಟಿಎಂ ಕೊಟ್ರೇಶ್, ಟಿಎಲ್‌ಎಂಟಿ ಸುಭಾನ್, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.