ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಆರ್ಥಿಕ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ೯೩ ಅಡಿಗೆ ಕುಸಿದಿದೆ. ಜಲಾಶಯದ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಪೂರ್ವ ಮುಂಗಾರಿನ ಕೊರತೆಯಿಂದಾಗಿ ಹತ್ತು ದಿನಗಳ ಕಾಲ ಹೆಚ್ಚುವರಿಯಾಗಿ ನೀರು ಹರಿಸಲಾಗುತ್ತಿದೆ.ಅಣೆಕಟ್ಟೆಯ ಗರಿಷ್ಠಮಟ್ಟ ೧೨೪.೮೦ ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ ೯೩ ಅಡಿಗೆ ಕುಸಿದಿದೆ. ಜಲಾಶಯಕ್ಕೆ ೧೯೦ ಕ್ಯುಸೆಕ್ಸ್ ನೀರು ಮಾತ್ರ ಹರಿದುಬರುತ್ತಿದ್ದು, ೨೪೬೧ ಕ್ಯುಸೆಕ್ಸ್ ನೀರನ್ನು ನಾಲೆಗಳು ಮತ್ತು ಕುಡಿಯುವ ನೀರಿನ ಉದ್ದೇಶಕ್ಕಾಗಿ ಹರಿಯಬಿಡಲಾಗುತ್ತಿದೆ. ಹಾಲಿ ಜಲಾಶಯದಲ್ಲಿ ೯.೪೯೧ ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಉತ್ತಮ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ದೀರ್ಘಾವಧಿಯವರೆಗೆ ಭರ್ತಿಯಾಗಿತ್ತು. ಕಳೆದ ೩೦ ವರ್ಷಗಳ ಅಂಕಿ-ಅಂಶಗಳ ಪ್ರಕಾರ ೨೦೨೪ರ ಡಿಸೆಂಬರ್ ೨೫ರ ವರೆಗೂ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು.ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ೬೯೨ ಮಿಲಿ ಮೀಟರ್ ವಾಡಿಕೆ ಮಳೆಗೆ, ೯೬೪ ಮಿಲಿ ಮೀಟರ್‌ನಷ್ಟು ಮಳೆ ಸುರಿದಿತ್ತು. ಶೇಕಡಾವಾರು ಮಳೆಯ ಪ್ರಮಾಣ ೨೪.೮ರಷ್ಟು ಹೆಚ್ಚುವರಿ ಸುರಿದಿರುವುದು ದಾಖಲಾಗಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದಿರುವ ಹಿನ್ನೆಲೆ ಕೆಆರ್‌ಎಸ್ ಜಲಾಶಯಕ್ಕೆ ಉತ್ತಮ ಒಳಹರಿವು ಬಂದಿತ್ತು.
ಕಳೆದ ವರ್ಷ ಅಣೆಕಟ್ಟೆಗೆ ೧೩೬ ಹೊಸ ಗೇಟ್‌ಗಳನ್ನು ಅಳವಡಿಸಿದ್ದರಿಂದ ನಿತ್ಯ ಪೋಲಾಗುತ್ತಿದ್ದ ೧,೦೦೦ ಕ್ಯೂಸೆಕ್ ನೀರನ್ನು ತಡೆಗಟ್ಟಲಾಗಿತ್ತು. ೩೧ ಕಿಲೋ ಮೀಟರ್ ಉದ್ದದ ನಾಲೆಗಳ ಆಧುನೀಕರಣ ಕಾಮಗಾರಿ ಸೇರಿ ಇತರೆ ಕಾರಣಗಳಿಂದ ಅಣೆಕಟ್ಟು ಡಿಸೆಂಬರ್ ಅಂತ್ಯದಲ್ಲೂ ಭರ್ತಿಯಾಗಿದ್ದುದು ಕಂಡುಬಂದಿತು.೨೦೨೫ರ ಜನವರಿ ೧೦ರಿಂದ ನಾಲೆಗಳ ಮುಖಾಂತರ ಬೇಸಿಗೆ ಬೆಳೆಗೆ ನೀರು ಹರಿಸಲಾಯಿತು. ಕಾವೇರಿ ಸಲಹಾ ಸಮಿತಿಯಲ್ಲಿ ಆದ ನಿರ್ಣಯದಂತೆ ಜ.೧೦ ರಿಂದ ಏ.೨೮ರವರೆಗೆ ೧೮ ದಿನಗಳಿಗೊಮ್ಮೆ ನೀರು ಹರಿಸುವ ನಿರ್ಧಾರ ಮಾಡಲಾಗಿತ್ತು. ಅದರಂತೆ ಏ.೨೮ಕ್ಕೆ ನೀರನ್ನು ನಾಲೆಗಳಿಗೆ ನಿಲ್ಲಿಸಬೇಕಿತ್ತು. ಆದರೆ, ಈಗಲೂ ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿದೆ.
ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಕೆರೆ-ಕಟ್ಟೆಗಳು ಭರ್ತಿಯಾಗಲಿಲ್ಲ. ಬೆಳೆಗಳಿಗೂ ನೀರಿನ ಕೊರತೆ ಎದುರಾಯಿತು. ನೀರಾವರಿ ಸಲಹಾ ಸಮಿತಿಯಲ್ಲಾದ ನಿರ್ಣಯದಂತೆ ಏ.೨೮ಕ್ಕೆ ನಾಲೆಗಳಿಗೆ ನೀರು ನಿಲ್ಲಿಸಬೇಕಿದ್ದರೂ ಮಳೆ ಕೊರತೆ ಎದುರಿಸುತ್ತಿರುವುದರಿಂದ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಇನ್ನೂ ೧೦ ದಿನಗಳ ಕಾಲ ನೀರು ಹರಿಸುತ್ತಿರುವುದಾಗಿ ಕೃಷ್ಣರಾಜಸಾಗರ ಜಲಾಶಯದ ಅಧೀಕ್ಷಕ ಅಭಿಯಂತರ ರಘುರಾಮ್ ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.ಮಳೆ ಕೊರತೆಯಿಂದಾಗಿ ಹೆಚ್ಚ ಉವರಿಯಾಗಿ ಹತ್ತು ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಒಮ್ಮೆ ನಾಳೆಯೇ ಉತ್ತಮವಾಗಿ ಮಳೆ ಸುರಿದರೆ ನಾಲೆಗಳಿಗೆ ಹರಿಯಬಿಟ್ಟಿರುವ ನೀರನ್ನು ಆ ತಕ್ಷಣಕ್ಕೇ ನಿಲ್ಲಿಸಲಾಗುವುದು ಎಂದು ನುಡಿದರು.
ಕುಡಿಯುವ ನೀರಿಗೆ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಮುಂದೆ ಸಮಸ್ಯೆ ಸೃಷ್ಟಿಯಾಗದಂತೆ ನೀರನ್ನು ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಕುಡಿಯುವ ನೀರನ್ನೂ ಆದ್ಯತೆಯಾಗಿಟ್ಟುಕೊಂಡು ಸಮಸ್ಯೆ ತೀವ್ರ ಸ್ವರೂಪಕ್ಕೆ ತಿರುಗದಂತೆ ನೀರಾವರಿ ನಿಮಮದ ಅಧಿಕಾರಿಗಳು ಹೇಳಿದ್ದಾರೆ.ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೊರತೆಯಾಗಿದೆ. ಮಳೆ ಎಲ್ಲೆಡೆ ಸಮಾನ ಹಂಚಿಕೆಯಾಗಿಲ್ಲ. ಇದರಿಂದ ಅಲ್ಲಲ್ಲಿ ಬೆಳೆಗಳು ಒಣಗುತ್ತಿವೆ. ಇದನ್ನು ಮನಗಂಡು ನಾಲೆಗಳಿಗೆ ಹತ್ತು ದಿನಗಳ ಕಾಲ ನೀರು ಹರಿಸಲಾಗುತ್ತಿದೆ. ಬೆಳೆಗಳ ರಕ್ಷಣೆ ಮತ್ತು ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.- ರಘುರಾಮ್, ಕೆಆರ್‌ಎಸ್ ಅಧೀಕ್ಷಕ ಅಭಿಯಂತರ
ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿಇಂದಿನ ಮಟ್ಟ – 93.10 ಅಡಿ
ಒಳ ಹರಿವು – 190 ಕ್ಯುಸೆಕ್ಹೊರ ಹರಿವು – 2431 ಕ್ಯುಸೆಕ್
ನೀರಿನ ಸಂಗ್ರಹ – 17.870 ಟಿಎಂಸಿ