ಸಾರಾಂಶ
ಕೊಟ್ಟೂರು: ಯಾವುದೇ ಜಾತಿ ಭೇದ ತೋರದೇ ಪ್ರತಿಯೊಂದು ಗ್ರಾಮ ನಗರ ಪ್ರದೇಶದ ಜನರು ಸಾಮರಸ್ಯದಿಂದ ಬದುಕುವ ಜೀವನ ರೂಢಿಸಿಕೊಳ್ಳಬೇಕು ಎಂದು ಸಿರಿಗೆರೆ ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕನ್ನನಾಯಕನಕಟ್ಟೆ ಗ್ರಾಮದಲ್ಲಿ ಶ್ರಿ ಆಂಜನೇಯ ಸ್ವಾಮಿ ದೇವಸ್ಥಾನ ಗೋಪುರ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಶನಿವಾರ ಮಾತನಾಡಿದರು. ನಾವು ನಡೆಯುವ ದಾರಿ ಸರಿ ಇರಬೇಕೋ ಅಥವಾ ನಡೆಯುವ ನಾವು ಸರಿ ಇರಬೇಕೋ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಜೀವನದಲ್ಲಿ ಪ್ರತಿಯೊಬ್ಬರೂ ಸರಿದಾರಿಯನ್ನು ಅನುಸರಿಸಿದಾಗ ಮಾತ್ರ ಜೀವನ ಸಹಜಮಯ, ಸಂತಸಮಯವಾಗಿರುತ್ತದೆ. ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡದ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಹಾರ ಹಾಕಿ ಸ್ವಾಗತಿಸಬೇಡಿ. ಅವರಿಂದ ಕೆಲಸವಾದಾಗ ಅವರನ್ನು ಸನ್ಮಾನಿಸಿ. ಗ್ರಾಮೀಣ ಭಾಗದ ಜನರು ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದಂತೆ ಇರಬೇಕು. ಆಗ ಮಾತ್ರ ನಿಮ್ಮ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎಂದರು.ಹರಿಹರದ ವೀರಶೈಲ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿ ಮಾತನಾಡಿ, ಸ್ವಾಮೀಜಿಗಳು ಮಠಕ್ಕೆ ಮಾತ್ರ ಸೀಮಿತವಾಗದೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರಬೇಕು. ಈ ನಿಟ್ಟಿನಲ್ಲಿ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸದಾ ರೈತರ ಹಾಗೂ ಸಾಮಾನ್ಯರ ಕುರಿತು ಚಿಂತನೆ ನಡೆಸಿ, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ದೇವಸ್ಥಾನಗಳು ಜನರಲ್ಲಿ ಸಾಮರಸ್ಯ ಮೂಡಿಸುತ್ತಿವೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ದೇವಸ್ಥಾನದಿಂದ ಸಹಬಾಳ್ವೆಯಿಂದ ನಿರಂತರವಾಗಿರಲಿ ಎಂದರು.
ಕ್ಷೇತ್ರದ ಶಾಸಕ ಕೆ. ನೇಮಿರಾಜ ನಾಯ್ಕ ಮಾತನಾಡಿ, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುತ್ತೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನಾ ಯೋಜನೆಗಳಡಿ ಅನುದಾನ ಮಂಜೂರು ಮಾಡಿಸುತ್ತಿದ್ದು, ಹಂತ ಹಂತವಾಗಿ ಎಲ್ಲ ಕಡೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ ಎಂದರು.ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ದೇವರು, ಜಾತಿಗಳಿಂದ ಯಾರೂ ಗುರುತಿಸಿಕೊಳ್ಳದೇ ಒಗ್ಗಟ್ಟಿನಿಂದ ಬಾಳಬೇಕು. ಗ್ರಾಮದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಎಲ್ಲರಲ್ಲೂ ನೆಮ್ಮದಿ ಮೂಡಿಸಲಿ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಮಾಜಿ ಸದಸ್ಯ ನಾಗರಕಟ್ಟೆ ಕೊಟ್ರೇಶಪ್ಪ, ಗುತ್ತಿಗೆದಾರ ಸಾವಜ್ಜಿ ರಾಜೇಂದ್ರಪ್ರಸಾದ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಇತರರು ಇದ್ದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ವಚನ ಗೀತೆಗಳಿಗೆ ನೃತ್ಯ ಕಾರ್ಯಕ್ರಮ ನಡೆಯಿತು. ಶಶಿಕುಮಾರ ಪ್ರಾಸ್ತಾವಿಕ ಮಾತನಾಡಿದರು. ರಾಜಪ್ಪ ಕಾರ್ಯಕ್ರಮ ನಿರ್ವಹಿಸಿದರು.