ಮತಕ್ಕಾಗಿ ಕೆಲಸ ಮಾಡದೆ, ಮಾನವೀಯತೆಯಿಂದ ಕೆಲಸ ಮಾಡಬೇಕು:ಡಾ. ಮಂತರ್ ಗೌಡ

| Published : Aug 24 2025, 02:00 AM IST

ಮತಕ್ಕಾಗಿ ಕೆಲಸ ಮಾಡದೆ, ಮಾನವೀಯತೆಯಿಂದ ಕೆಲಸ ಮಾಡಬೇಕು:ಡಾ. ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜನಪ್ರತಿನಿಧಿಗಳ ವೈಫಲ್ಯದಿಂದ ಇಂದಿಗೂ ಸಾಕಷ್ಟು ಸಂಕಷ್ಟದ ಕುಟುಂಬಗಳನ್ನು ಕಾಣಬಹುದು. ಎಲ್ಲರೂ ಕೇವಲ ಮತಕ್ಕಾಗಿ ಕೆಲಸ ಮಾಡದೆ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಳೆದ 20 ವರ್ಷಗಳಿಂದ ಕಚ್ಚಾ ಮನೆಯಲ್ಲಿ ಗಂಡನನ್ನು ಕಳೆದುಕೊಂಡು, ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತಿದ್ದ ರತಿ ಯೆಂಬ ಮಹಿಳೆಗೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಸುಮಾರು ರು. 2.25 ಲಕ್ಷ ರು. ಖರ್ಚು ಮಾಡಿ ನವೀಕರಿಸಿ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಮನೆಯನ್ನು ಈಚೆಗೆ ಮಹಿಳೆಗೆ ಹಸ್ತಾಂತರಿಸಿದರು. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ತಡ್ಡಿಕೊಪ್ಪ ಗ್ರಾಮದ ದಿವಂಗತ ಗಣಪತಿಯವರ ಪತ್ನಿ ರತಿ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಲ್ಲಿ ವಾಸವಾಗಿದ್ದರು. ಇವರ ಗಂಡ ತೀರಿಕೊಂಡಿದ್ದು, ತನ್ನ ಇಬ್ಬರು ಮಕ್ಕಳೊಂದಿಗೆ ಈ ಮನೆಯಲ್ಲಿ ನೆಲೆಸಿದ್ದರು. ಈ ಗ್ರಾಮದಲ್ಲಿ ವರ್ಷಕ್ಕೆ ಸುಮಾರು 900 ಸೆಂಟೀ ಮೀಟರ್ ಮಳೆಯಾಗುತ್ತಿದ್ದು, ಮೂಲ ಸವಲತ್ತುಗಳಿಲ್ಲದ ಇಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಅಲ್ಲದೆ ಈ ಪ್ರದೇಶವು ಪುಷ್ಪಗಿರಿ ವನ್ಯ ಧಾಮಕ್ಕೆ ಅಂಟಿಕೊಂಡಿದ್ದು ಸೂಕ್ಷ್ಮ ಪ್ರದೇಶ ಆಗಿದೆ. ಬೆಟ್ಟದಳ್ಳಿ ಗ್ರಾಮದ ಪಂಚಾಯಿತಿಯಿಂದ 7 ಕಿಲೋಮೀಟರ್ ಒಳಗಡೆ ಈ ಗ್ರಾಮವಿದ್ದು ಈ ಗ್ರಾಮದಲ್ಲಿ ಐದು ಕುಟುಂಬಗಳು ವಾಸವಾಗಿವೆ. ಇಲ್ಲಿಗೆ ಯಾವುದೇ ಮುಖ್ಯ ರಸ್ತೆ ಹಾಗೂ ವಾಹನಗಳ ಸೌಲಭ್ಯವಿಲ್ಲ. ಈ ಗ್ರಾಮಕ್ಕೆ ಹೋಗುವ ದಾರಿಯಲ್ಲೇ ಕುಮಾರಧಾರ ನದಿ ಹಾದು ಹೋಗಿದ್ದು ಇತ್ತೀಚಿನ ದಿನಗಳಲ್ಲಷ್ಟೇ ನೆಲ ಮಟ್ಟದ ಸೇತುವೆ ನಿರ್ಮಾಣ ಮಾಡಲಾಗಿದೆ. ಹಿಂದೆ ತೊಟ್ಟಿಲು ಪಾಲದಲ್ಲಿ ಈ ನದಿಯನ್ನು ದಾಟ್ಟುವ ಕಷ್ಟ ಎದುರಾಗಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ದಿನನಿತ್ಯದ ಬದುಕಿನ ಎಲ್ಲ ಗೋಳಾಟದ ನಡುವೆಯೂ ಈ ಕುಗ್ರಾಮದ ರತಿ ಛಲ ಬಿಡದೆ ತನ್ನ ಇಬ್ಬರು ಮಕ್ಕಳಿಗೆ ನಗರದಲ್ಲಿ ಎಂಬಿಎ ಶಿಕ್ಷಣ ಕೊಡಿಸುತ್ತಿದ್ದಾರೆ. ಇವರ ಪರಿಶ್ರಮವನ್ನರಿತ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ, ಮನೆಯನ್ನು ನವೀಕರಿಸಿ ನೀಡಿದೆ.ಶಾಸಕರು ಮನೆಯನ್ನು ಹಸ್ತಾಂತರಿಸಿ ಮಾತನಾಡಿ, ನಿಜವಾಗಿಯೂ ಇಲ್ಲಿ ಬಂದು ಹೋಗುವುದೆ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ತನ್ನ ಇಬ್ಬರು ಮಕ್ಕಳಿಗೆ ಎಂ.ಬಿ.ಎ ಶಿಕ್ಷಣ ನೀಡುತ್ತಿರುವುದು ಉತ್ತಮ ಕೆಲಸ. ಜನಪ್ರತಿನಿಧಿಗಳ ವೈಫಲ್ಯದಿಂದ ಇಂದಿಗೂ ಸಾಕಷ್ಟು ಇಂತಹ ಸಂಕಷ್ಟದ ಕುಟುಂಬಗಳನ್ನು ಕಾಣಬಹುದು. ಎಲ್ಲರೂ ಕೇವಲ ಮತಕ್ಕಾಗಿ ಕೆಲಸ ಮಾಡದೆ, ಮಾನವೀಯತೆಯಿಂದ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಮಾಡಲಾಗುವುದು. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ನನ್ನ ಗಮನಕ್ಕೆ ತಂದರೆ, ಸೂಕ್ತ ಪರಿಹಾರಕ್ಕೆ ಎಲ್ಲರೂ ಕೈಜೋಡಿಸಬಹುದು ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಇಂತಹ ಕೆಲಸ ಶ್ಲಾಘನೀಯ ಎಂದರು.ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಈ ಮನೆಯ ವಿಷಯ ಗಮನಕ್ಕೆ ಬಂದನಂತರ, ನಮ್ಮ ಸಮಿತಿ ವತಿಯಿಂದ ಮಹಿಳಾ ಸಬಲೀಕರಣ ಉದ್ದೇಶದಿಂದ ಪರಿಹಾರಕ್ಕೆ ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಎಲ್ಲರೂ ಚಂದಾ ಹಾಕಿ ಮನೆಯನ್ನು ನವೀಕರಿಸಿ ಇಂದು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್, ಪ್ರಮುಖರಾದ ಹೂವಯ್ಯ ಮಾಸ್ಟರ್, ಮಂಜುನಾಥ್, ತ್ರಿಶೂಲ್, ವಸಂತ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.