ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಮಳೆಯ ಅನಾಹುತ ತಡೆಯಲು ರಾಜಕಾಲುವೆ ಮೇಲಿರುವ ಕಮರಿಪೇಟೆ ಪೊಲೀಸ್ ಠಾಣೆ ನೆಲಸಮ ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ. ಜತೆ ಜತೆಗೆ ರಾಜಕಾಲುವೆಗಳ ಮೇಲಿರುವ ಪಾಲಿಕೆಯ ಆಸ್ತಿಗಳನ್ನು (ಮಳಿಗೆಗಳನ್ನು) ಕೆಡವಲು ನಿರ್ಧರಿಸಿ ಇದಕ್ಕಾಗಿ ಸಮೀಕ್ಷೆ ನಡೆಸುತ್ತಿದೆ. ಆದರೆ ಖಾಸಗಿ ಕಟ್ಟಡಗಳ ಕಥೆಯೇನು? ಖಾಸಗಿ ಕಟ್ಟಡಗಳನ್ನು ನೆಲಸಮ ಮಾಡುತ್ತಾರೆಯೇ?
ಇವು ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗಳು.ಈ ನಡುವೆ ಪಾಲಿಕೆಯಿಂದ ರಾಜಕಾಲುವೆ ಗುತ್ತಿಗೆ ಪಡೆದು ಹಾಗೂ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡಿರುವರಲ್ಲಿ ಇದೀಗ ನಡುಕ ಶುರುವಾಗಿದೆ.
ಆಗಿರುವುದೇನು, ಏಕೆ ನೆಲಸಮ?ಧಾರವಾಡ ಜಿಲ್ಲೆಯಲ್ಲಿ ಯಾವುದೇ ನದಿ ಹರಿದಿಲ್ಲ. ಡ್ಯಾಂ ಹಿನ್ನೀರು ನುಗ್ಗಲು ಡ್ಯಾಂ ಇಲ್ಲಿಲ್ಲ. ಆದರೂ ಹುಬ್ಬಳ್ಳಿ-ಧಾರವಾಡದಲ್ಲಿ ಒಂದೇ ಒಂದು ಗಂಟೆ ಮಳೆಯಾದರೆ ಇಡೀ ನಗರವೇ ಪ್ರವಾಹಕ್ಕೊಳಗಾಗುತ್ತದೆ. ಅದರಲ್ಲೂ ಹುಬ್ಬಳ್ಳಿಯಲ್ಲಿನ ಪರಿಸ್ಥಿತಿ ಹೇಳತೀರದು. ಹಲವು ಬಡಾವಣೆಗಳಲ್ಲಿನ ಮನೆ, ವಾಣಿಜ್ಯ ಮಳಿಗೆ ನೀರಿನಿಂದ ತುಂಬುತ್ತವೆ. ರಸ್ತೆ ಮೇಲೆ ರಾಜಕಾಲುವೆಯ ಕೊಳಚೆ ನೀರು ನದಿಯಂತೆ ಹರಿಯುತ್ತದೆ. ಇದರಿಂದ ನದಿ ಉಕ್ಕಿ ಪ್ರವಾಹ ಸೃಷ್ಟಿಯಾಗಿದೆಯೇ ಎಂದು ಗೋಚರವಾಗುತ್ತದೆ.
ಸಮಸ್ಯೆ ಮೂಲ ರಾಜಕಾಲುವೆ:ನಗರದ ಮಧ್ಯ ಭಾಗದಲ್ಲಿರುವ ರಾಜಕಾಲುವೆ ಇದಕ್ಕೆ ಮೂಲಕಾರಣ ಎನ್ನುವುದು ಒಂದೆಡೆಯಾದರೆ, ಅವೈಜ್ಞಾನಿಕ ಕಾಮಗಾರಿಗಳು ಮತ್ತೊಂದು ಕಾರಣವೆನಿಸಿವೆ. ಅದರಲ್ಲೂ ರಾಜಕಾಲುವೆಯಲ್ಲಿನ ಹೂಳು ತೆಗೆದು ಅದೆಷ್ಟೋ ವರ್ಷಗಳಾಗಿವೆ. ಹೂಳು ತೆಗೆಯುವುದಾದರೂ ಹೇಗೆ? ರಾಜಕಾಲುವೆಗಳ ಮೇಲೆ 30ರಿಂದ 40 ವರ್ಷಗಳ ಹಿಂದೇ ದೊಡ್ಡ ದೊಡ್ಡ ಕಟ್ಟಡ ತಲೆ ಎತ್ತಿವೆ. ಕೆಲವೊಂದಿಷ್ಟು ಕಟ್ಟಡ, ಮಳಿಗೆಗಳನ್ನು ಮಹಾನಗರ ಪಾಲಿಕೆ ನಿರ್ಮಿಸಿದೆ.
ಉದಾಹರಣೆಗೆ ಕಮರಿಪೇಟೆ ಪೊಲೀಸ್ ಠಾಣೆ ಸೇರಿದಂತೆ ಹಲವು ಕಟ್ಟಡಗಳನ್ನು ಪಾಲಿಕೆಯೇ ನಿರ್ಮಿಸಿದೆ. ಇದೀಗ ಕಮರಿಪೇಟೆ ಠಾಣೆ ಸೇರಿದಂತೆ ಪಾಲಿಕೆಯ ಕಟ್ಟಡಗಳನ್ನು ನೆಲಸಮ ಮಾಡಲು ಪಾಲಿಕೆ ನಿರ್ಧರಿಸಿದೆ. ಇದಕ್ಕಾಗಿ ಡ್ರೋಣ ಸಮೀಕ್ಷೆ ನಡೆಸಲಾಗುತ್ತಿದೆ. ಜತೆಗೆ ನೆಲಸಮ ಮಾಡಲು ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಪಾಲಿಕೆ ಮಾಡುತ್ತಿದೆ.ಖಾಸಗಿ ಕಟ್ಟಡಗಳ ಕಥೆಯೇನು?:
ಇದೇ ವೇಳೆ ರಾಜಕಾಲುವೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದರೆ, ಕೆಲವೆಡೆ 1970ರಿಂದ 80ರ ವೇಳೆ ಮಹಾನಗರ ಪಾಲಿಕೆಯೇ ರಾಜಕಾಲುವೆ ಗುತ್ತಿಗೆ ನೀಡಿದೆ. ಹೀಗೆ ಗುತ್ತಿಗೆ ಪಡೆದು ಕಾಲುವೆ ಮೇಲೆ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಗುತ್ತಿಗೆ ಅವಧಿ ಮುಗಿದರೂ ಕೆಲವೆಡೆ ಅವುಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಗೋಜಿಗೆ ಪಾಲಿಕೆ ಹೋಗಿಲ್ಲ. ಈ ರೀತಿ ಗುತ್ತಿಗೆ ಪಡೆದು ಬಿಲ್ಡಿಂಗ್ ನಿರ್ಮಿಸಿಕೊಂಡ ಬಿಲ್ಡಿಂಗ್‌ಗಳಲ್ಲಿ ದೊಡ್ಡ ದೊಡ್ಡ ಬಾರ್ ಆ್ಯಂಡ್ ರೆಸ್ಟೋರೆಂಟ್, ಆಸ್ಪತ್ರೆ, ಬ್ಯಾಂಕ್ ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಿವೆ. ಪ್ರಭಾವಿಗಳ ಒಡೆತನಕ್ಕೆ ಇವು ಸೇರಿದ್ದಾಗಿವೆ.ಇದೀಗ ಪಾಲಿಕೆ ತಾನು ನಿರ್ಮಿಸಿರುವ ಕಟ್ಟಡ ನೆಲಸಮ ಮಾಡಲು ನಿರ್ಧರಿಸಿ ಸಮೀಕ್ಷೆ ಕೂಡ ನಡೆಸುತ್ತಿದೆ. ಜತೆಗೆ ಧರಾಶಾಯಿಯನ್ನಾಗಿಸಲು ಡಿಪಿಆರ್ ಸಿದ್ಧಪಡಿಸುತ್ತಿದೆ. ಇನ್ನು ಪಾಲಿಕೆ ತಾನೇ ಗುತ್ತಿಗೆ ನೀಡಿರುವ ರಾಜಕಾಲುವೆ ಮೇಲೆ ತಲೆ ಎತ್ತಿರುವ ಬಿಲ್ಡಿಂಗ್‌ಗಳನ್ನು ಏನು ಮಾಡುತ್ತದೆ. ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ನೆಲಸಮ ಮಾಡುವುದೇ ಎಂಬ ಪ್ರಶ್ನೆ ಇದೀಗ ಎದ್ದಿದೆ. ಹಾಗೆ ನೋಡಿದರೆ ಹಿಂದೆ ಸುರೇಶ ಇಟ್ನಾಳ ಅವರು ಆಯುಕ್ತರಾಗಿದ್ದ ವೇಳೆ ರಾಜಕಾಲುವೆ ಒತ್ತುವರಿ ಮಾಡಿರುವ ಸಮೀಕ್ಷೆ ನಡೆಸಿದ್ದರು. ಆಗ ಬರೋಬ್ಬರಿ 156 ಕಡೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿತ್ತು. ಆದರೆ ಅವರು ಇಲ್ಲಿಂದ ವರ್ಗವಾದ ಬಳಿಕ ಸಮೀಕ್ಷೆ ನಡೆಸಿದ ಫೈಲ್ ಮೂಲೆ ಸೇರಿತು. ಆ ಬಗ್ಗೆ ಕೇಳಿದರೆ ಪಾಲಿಕೆ ಅಧಿಕಾರಿಗಳಿಂದ ಹಾರಿಕೆ ಉತ್ತರ ಬರುತ್ತಿವೆ.
ಒಟ್ಟಿನಲ್ಲಿ ರಾಜಕಾಲುವೆಯ ಮೇಲಿನ ಪಾಲಿಕೆ ಕಟ್ಟಡಗಳ ನೆಲಸಮವಾಗುವ ಸುದ್ದಿ ಮಹಾನಗರದಲ್ಲಿ ಸಂಚಲನ ಮೂಡಿಸಿದೆ.ರಾಜಕಾಲುವೆಗಳ ಮೇಲೆ ಪಾಲಿಕೆ ನಿರ್ಮಿಸಿರುವ ಕಟ್ಟಡ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ರಾಜಕಾಲುವೆಗಳ ಒತ್ತುವರಿ ಸೇರಿದಂತೆ ಗುತ್ತಿಗೆ ನೀಡಿದ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಬಳಿಕ ಅವುಗಳನ್ನು ನೆಲಸಮ ಮಾಡಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))