ಜನಪ್ರತಿನಿಧಿಗಳು ಮೌನವಹಿಸಿರುವುದೇಕೆ?: ಎ.ಗೋವಿಂದರಾಜು

| Published : May 30 2024, 12:52 AM IST

ಸಾರಾಂಶ

ಹೇಮಾವತಿ ಲಿಂಕ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಬೇರೊಂದು ಜಿಲ್ಲೆಗೆ ತೆಗದುಕೊಂಡು ಹೋಗುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ದುರಂತ.

ಕನ್ನಡಪ್ರಭ ವಾರ್ತೆ ತುಮಕೂರುಹೇಮಾವತಿ ಲಿಂಕ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಬೇರೊಂದು ಜಿಲ್ಲೆಗೆ ತೆಗದುಕೊಂಡು ಹೋಗುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ದುರಂತ. ನಿಮ್ಮನ್ನು ಈ ಜಿಲ್ಲೆಯ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಹೇಮಾವತಿ ಚೀಪ್ ಇಂಜಿನಿಯರ್ ಕಚೇರಿಗೆಮುತ್ತಿಗೆ ಕಾರ್ಯಕ್ರಮದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ, ಎಐಕೆಕೆಎಂಎಸ್, ಅಖಿಲಭಾರತ ಕಿಸಾನ್ ಸಭಾ, ಮಾಜಿ ಸೈನಿಕರ ಸಂಘ ನೇತೃತ್ವವಹಿಸಿ ಮಾತನಾಡಿದರು.

ಕಳೆದ ಒಂದು ತಿಂಗಳಿನಿಂದ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದರೂ ಆಡಳಿತ ಪಕ್ಷದ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಶಾಸಕರಾದ ವಾಸು, ಟಿ.ಬಿ.ಜಯಚಂದ್ರ ಲಿಂಕ್ ಕೆನಾಲ್ ರದ್ದು ಪಡಿಸಲು ಕ್ರಮ ಕೈಗೊಳ್ಳದೆ, ಜಾಣ ಕಿವುಡು, ಕುರುಡುತನ ಪ್ರದರ್ಶಸಿರುತ್ತಿರುವುದು ತರವಲ್ಲ. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸುವಂತೆ ಒತ್ತಡ ತರಬೇಕು ಎಂದರು.

ಹೇಮಾವತಿ ಯೋಜನೆ ಆರಂಭವಾದ ಇಲ್ಲಿಯವರೆಗೆ ಹಂಚಿಕೆಯಾಗಿರುವ ಅಷ್ಟು ಪ್ರಮಾಣದ ನೀರು ಜಿಲ್ಲೆಗೆ ಹರಿದಿಲ್ಲ. ಹೀಗಿರುವಾಗ ಹೆಸರಿಗೆ ಮಾತ್ರ ಹೆಚ್ಚುವರಿ ಅಲೋಕೇಷನ್ ಮಾಡಿ, ತುಮಕೂರು ನಾಲೆಗಿಂತ 35 ಮೀಟರ್ ಕೆಳಹಂತದಲ್ಲಿರುವ 169 ನೇ ಕಿ.ಮಿ.ಗೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೊರಟಿರುವುದು ಅವೈಜ್ಞಾನಿಕ. ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ ಹಾಲಿ ಇರುವ ನಾಲೆಯ ಮೂಲಕವೇ ನೀರು ತೆಗೆದುಕೊಂಡು ಹೋಗಲಿ ಎಂದರು.

ಯಾವುದೇ ಕಾರಣಕ್ಕೆ ಏಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ಅವಕಾಶ ನೀಡುವುದಿಲ್ಲ. ಈಗಾಗಲೇ ನೀರಿಲ್ಲದ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಸೇರಿದಂತೆ ಎಲ್ಲಾ ಯೋಜನೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳಿವೆ ಎಂದು ಆಂತಕ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಹೇಮಾವತಿ ಲಿಂಕ್ ಕೆನಾಲ್ ಕುರಿತು ಜನರಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಮುಂದಾಗಬೇಕು.10 ಅಡಿ ಸುತ್ತಳತೆಯ ಪೈಪ್‌ಲೈನ್ ಮೂಲಕ ನಾಲೆಯ ವಿನ್ಯಾಸಕ್ಕಿಂತ 15-20 ಅಡಿ ಅಳದಿಂದ ನೀರು ಡ್ರಾ ಮಾಡಿದರೆ ನಾಲೆಯ ಮುಂದಿನ ಪ್ರದೇಶಗಳಿಗೆ ಸರಾಗವಾಗಿ ನೀರು ಹರಿಯಲು ಸಾಧ್ಯವಿಲ್ಲ. ಇದರಿಂದ ಹೇಮಾವತಿ ನಾಲಾ ಯೋಜನೆಯೇ ನಿಷ್ಪಪ್ರಯೋಜಕವಾಗಲಿದೆ ಎಂದರು.

ರಾಜಕಾರಣಿಗಳ ಸ್ವಹಿತಾಸಕ್ತಿಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರು ಶಾಸ್ವತವಾಗಿ ವೈರಿಗಳಂತೆ ಬದುಕಬೇಕಾಗುತ್ತದೆ. ಹಾಗಾಗಿ ಸರ್ಕಾರ ಮದ್ಯಪ್ರವೇಶಿಸಿ, ರೈತರು, ಜನಪ್ರತಿನಿಧಿ, ಅಧಿಕಾರಿಗಳ ಸಭೆ ನಡೆಸಿ ಗೊಂದಲ ಬಗೆಹರಿಸಬೇಕು ಎಂದು ಹೇಳಿದರು.

ಎಐಕೆಕೆಎಂಎಸ್‌ ಮುಂಖಡ ಎಸ್.ಎನ್.ಸ್ವಾಮಿ ಮಾತನಾಡಿ, ನೀರು ರಾಷ್ಟ್ರೀಯ ಸಂಪತ್ತು. ಅದನ್ನು ಎಲ್ಲರಿಗೂ ಸಮನಾಗಿ ಹಂಚಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಪ್ರಭಾವಿಗಳು ಎಂಬ ಕಾರಣಕ್ಕೆ ಒಂದು ಜಿಲ್ಲೆಗೆ ಹಂಚಿಕೆಯಾದ ನೀರನ್ನು ಅವೈಜ್ಞಾನಿಕವಾಗಿ ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗುವುದು ತರವಲ್ಲ. ರಾಮನಗರ ಜಿಲ್ಲೆಯಲ್ಲಿರುವ ರೈತರು ನಮ್ಮವರೇ ಆಗಿದ್ದಾರೆ ಎಂದರು.

ಹಾಲಿ ಇರುವ ನಾಲೆಯ ಮೂಲಕ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲಿ. ಇಷ್ಟೊಂದು ತರಾತುರಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿರುವುದರ ಹಿಂದೆ ರೈತರ ಹಿತಕ್ಕಿಂತ ಗುತ್ತಿಗೆದಾರರು ಮತ್ತು ನೀರು ಮಾರಾಟಗಾರರ ಲಾಬಿ ಇರುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದರೆ ತುಮಕೂರು ಜಿಲ್ಲೆಯ ಜನರಿಗೆ ಹೇಮಾವತಿ ಲಿಂಕ್ ಕೆನಾಲ್ ಮರಣ ಶಾಸನವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸೈನಿಕ ನಂಜುಂಡಯ್ಯ ಮಾತನಾಡಿ, ಹೇಮಾವತಿ ನೀರನ್ನು ಅತಿ ಹೆಚ್ಚು ಬಳಕೆ ಮಾಡುತ್ತಿರುವ ಪ್ರದೇಶಗಳಲ್ಲಿ ತುಮಕೂರು ನಗರವೂ ಸೇರಿದೆ. ಆದರೆ ಹೋರಾಟಕ್ಕೆ ನಗರದ ಜನರು ಬೆಂಬಲ ನೀಡಿಲ್ಲ ಎಂದರೆ ಕುಡಿಯಲು ನೀರನ್ನು ಎಲ್ಲಿಂದ ತರುತ್ತಾರೆ ಎಂಬ ಪ್ರಜ್ಞೆ ಜನರಿಗೆ ಬೇಡವೇ ಎಂದು ಪ್ರಶ್ನಿಸಿದರು. ಈಗ ಮೈಮರೆತರೆ ಮುಂದೊಂದು ದಿನ ನೀರಿಗಾಗಿ ಹೊಡೆದಾಡಬೇಕಾದಿತ್ತು. ಎಲ್ಲರೂ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ನೀರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳೊಣ ಎಂದು ಕರೆ ನೀಡಿದರು.ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಫಣಿರಾಜುಗೆ ಮನವಿ ಸಲ್ಲಿಸಲಾಯಿತು. ಪ್ರಾಂತ ರೈತ ಸಂಘದ ಅಜ್ಜಪ್ಪ, ಬಿ.ಉಮೇಶ್, ಸಿಐಟಿಯುನ ಸೈಯದ್ ಮುಜೀಬ್, ರೈತ ಸಂಘದ ಹನುಮಂತೇಗೌಡ, ಎಐಕೆಎಸ್‌ನ ಕಂಬೇಗೌಡ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಶಂಕರಪ್ಪ, ವೆಂಕಟೇಗೌಡ, ಚಿಕ್ಕಬೋರೆಗೌಡ, ಕೆಂಪಣ್ಣ, ಸಿಪಿಐ(ಎಂ)ನ ಎನ್.ಕೆ.ಸುಬ್ರಮಣ್ಯ, ರೈತ ಸಂಘದ ಶಬ್ಬೀರ್,ಸಿ.ಜಿ.ಲೋಕೇಶ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಲಿಂಗಣ್ಣ, ತಾಲೂಕು ಅಧ್ಯಕ್ಷ ಲೋಕೇಶ್, ಪಟ್ಟಬಾಲಯ್ಯ, ನಂಜುಂಡಯ್ಯ, ನವೀನ್, ಶ್ರೀರಂಗಯ್ಯ ಪಾಲ್ಗೊಂಡಿದ್ದರು.

2019ರಲ್ಲಿ 66 ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿತ್ತು: ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 24.05 ಟಿ.ಎಂ. ನೀರು ಹಂಚಿಕೆಯಾಗಿದ್ದು, ಇದರ ಜೊತೆಗೆ 2019ರ ನವೆಂಬರ್‌ನಲ್ಲಿ ಅಂದಿನ ಸರ್ಕಾರ ನೀರಿನ ಹಂಚಿಕೆಯನ್ನು 25.03 ಟಿ.ಎಂ.ಸಿಗೆ ಹೆಚ್ಚಿಗೆ ಮಾಡಿ, ಶ್ರೀರಂಗ ಏತನೀರಾವರಿಯ ಮೂಲಕ ಮಾಗಡಿ ತಾಲೂಕಿನ 66 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎ.ಗೋವಿಂದರಾಜು ಹೇಳಿದರು.