ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆಯಲ್ಲಿ ಅನುಪಯುಕ್ತ ವಸ್ತುಗಳ ಹರಾಜಿಗೆ ಅಧಿಕಾರಿ ವರ್ಗದವರು ವಿಳಂಬ ಮಾಡುತ್ತಿರುವುದೇಕೆ. ನಗರಸಭೆಗೆ ಆದಾಯ ಸೃಷ್ಟಿಸಿಕೊಳ್ಳುವಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಆರೋಪಿಸಿದರು.ಬುಧವಾರ ಬಜೆಟ್ ವಿಚಾರವಾಗಿ ನಡೆದ ಚರ್ಚೆಯಲ್ಲಿ ಮಾತನಾಡಿ, ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣ ವೇಳೆ ಹಳೆಯ ಪೈಪ್‌ಲೈನ್‌ಗಳನ್ನು ಹೊರತೆಗೆದಿದ್ದು, ಸುಮಾರು ೨ ಸಾವಿರ ಟನ್ ಕಬ್ಬಿಣದ ಪೈಪ್‌ಲೈನ್ ಹರಾಜು ಮಾಡಿದ್ದರೆ ಕನಿಷ್ಠ ೮೦ ಲಕ್ಷ ರು. ಆದಾಯ ನಿರೀಕ್ಷಿಸಬಹುದಿತ್ತು. ಅಧಿಕಾರಿಗಳಿಗೆ ಆ ಬಗ್ಗೆ ಆಸಕ್ತಿಯೂ ಇಲ್ಲ, ಆದಾಯ ಸೃಷ್ಟಿಸಿಕೊಳ್ಳುವ ಮನಸ್ಸೂ ಇಲ್ಲ ಎಂದು ದೂರಿದರು.
ಇದಕ್ಕೆ ಸದಸ್ಯರಾದ ಶ್ರೀಧರ್, ರಾಮಲಿಂಗು ಅವರು ದನಿಗೂಡಿಸಿ, ನಾವು ಈ ವಿಷಯವನ್ನು ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಲೇ ಇಲ್ಲ. ಹೆದ್ದಾರಿಯಲ್ಲಿ ಪೈಪ್‌ಲೈನ್ ತೆಗೆಯಲು ಎಷ್ಟು ದೂರ ಅಗೆದಿದ್ದಾರೋ ಅಷ್ಟೇ ಅಳತೆಯ ಪೈಪ್‌ಲೈನ್‌ಗಳನ್ನು ಲೆಕ್ಕ ಕೊಡಬೇಕು. ೧೫-೨೦ ದಿನಗಳೊಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಒತ್ತಾಯಿಸಿದರು.ಸದಸ್ಯ ಶ್ರೀಧರ್ ಅವರು ಬೆಂಗಳೂರು-ಮೈಸೂರು ಹೆದ್ದಾರಿಗೆ ನಗರಸಭೆಯ ಆಸ್ತಿ ಎಷ್ಟು ಹೋಗಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದಾಗ, ಕಂದಾಯ ಅಧಿಕಾರಿ ರಾಜಶೇಖರ್ ಅವರು ಇನ್ನೊಂದು ವಾರದೊಳಗೆ ಸರ್ವೆ ನಡೆಸಿ ರಿಪೋರ್ಟ್ ಕೊಡಲಿದ್ದಾರೆ ಎಂದರು. ಇದರಿಂದ ಕೋಪಗೊಂಡ ಶ್ರೀಧರ್, ನಾವು ಅಧಿಕಾರದಿಂದ ಇಳಿದುಹೋದ ನಂತರ ಕೊಡಿ. ಇಷ್ಟು ದಿನ ಏನು ಮಾಡುತ್ತಿದ್ದೀರಿ. ಒಂದು ಸರ್ವೇ ಮಾಡೋಕೆ ಇಷ್ಟೊಂದು ಟೈಮ್ ಬೇಕಾ ಎಂದು ಪ್ರಶ್ನಿಸಿದರು.ನಗರದ ಹೃದಯಭಾಗದಲ್ಲಿರುವ ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತದವರೆಗಿನ ರಸ್ತೆಯನ್ನು ೪ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಡೆಲ್ಟಾ ಮತ್ತು ಸರ್ಕಾರದ ಅನುದಾನದಡಿ ಈ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು.
- ಪಿ.ರವಿಕುಮಾರ್, ಶಾಸಕಶಾಸಕರೆದುರಿನಲ್ಲೇ ಜಟಾಪಟಿಮಂಡ್ಯ ನಗರದ ಒಂದನೇ ವಾರ್ಡ್‌ನಲ್ಲಿ ರಾಜಾಕಾಲುವೆ ಮೇಲೆ ಕಟ್ಟಡ ನಿರ್ಮಾಣ ಮಾಡಿರುವ ವಿಚಾರವಾಗಿ ನಾಮನಿರ್ದೇಶಿತ ಸದಸ್ಯ ಹರ್ಷ ಅವರು ನಗರಸಭೆ ಅಧ್ಯಕ್ಷರೊಂದಿಗೆ ಶಾಸಕರೆದುರಿನಲ್ಲೇ ಜಟಾಪಟಿ ನಡೆಸಿದರು.
ರಾಜಾ ಕಾಲುವೆ ಮೇಲೆ ಕಟ್ಟಡ ನಿರ್ಮಿಸಲಾಗಿದೆ. ಸ್ಲ್ಯಾಬ್‌ಗಳನ್ನು ಹಾಕಿಕೊಂಡು ಕಬ್ಬಿಣವನ್ನೂ ಮಾರಾಟ ಮಾಡಲಾಗುತ್ತಿದೆ. ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷರಿಗೆ ತಿಳಿಸಿದರೂ ಏನೂ ಪ್ರಯೋಜವಾಗಿಲ್ಲ. ಅಧ್ಯಕ್ಷರ ವಾರ್ಡ್‌ನಲ್ಲೇ ಈ ಕಥೆಯಾದರೆ ಉಳಿದ ವಾರ್ಡ್‌ಗಳಲ್ಲಿನ ಕತೆ ಏನು. ನಮ್ಮ ಮಾತನ್ನು ಅಧ್ಯಕ್ಷರು ಪರಿಗಣಿಸುತ್ತಲೇ ಇಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.ಅಧ್ಯಕ್ಷ ನಾಗೇಶ್ ಸದಸ್ಯ ಹರ್ಷ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಏನ್ರೀ, ಸುಮ್ಮನಿರೋದು. ನಮ್ಮ ಮಾತಿಗೆ ಬೆಲೆನೇ ಇಲ್ವಾ. ಈ ಸಮಸ್ಯೆಗೆ ಏನು ಪರಿಹಾರ ಕೊಟ್ಟಿದ್ದೀರಿ. ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವುದು ಹೇಗ್ರೀ ಎಂದೆಲ್ಲಾ ಶಾಸಕರೆದುರೇ ಕಿರುಚಾಡಿದರು.
ಉಳಿದ ಸದಸ್ಯರು ಹರ್ಷ ಅವರನ್ನು ಸಮಾಧಾನಪಡಿಸಲು ಮುಂದಾದರೂ ಸಮಾಧಾನಗೊಳ್ಳದೆ ಶಾಸಕರಿಗೆ ತಮ್ಮ ಫೋನ್‌ನಲ್ಲಿ ತೆಗೆದಿದ್ದ ಫೋಟೋಗಳನ್ನು ತೋರಿಸಿ ಇದಕ್ಕೆ ನೀವೇ ಏನಾದರೂ ಕ್ರಮ ವಹಿಸುವಂತೆ ಒತ್ತಾಯಿಸಿದರು.ನಂತರ ಶಾಸಕ ಪಿ.ರವಿಕುಮಾರ್ ಇದರ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಸಮಾಧಾನಗೊಂಡರು.