ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನಲ್ಲಿ ಒಟ್ಟು 43 ನ್ಯಾಯಾಲಯಗಳಿವೆ. ಚಾಮರಾಪುರಂ ನ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿ ನ್ಯಾಯಾಲಯಗಳ ಪಾರಂಪರಿಕ ಕಟ್ಟಡ ವಿದೆ.ಈ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 23 ನ್ಯಾಯಾಲಯಗಳಿವೆ.ಅವುಗಳೆಂದರೆ...
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು (8), ಪೋಕ್ಸೋ ವಿಶೇಷ ನ್ಯಾಯಾಲಯ (1), ಲಘು ವ್ಯವಹಾರಗಳ ನ್ಯಾಯಾಲಯಗಳು (2),ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯ (11), (ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್.ಸಿ ನ್ಯಾಯಾಲಯವೂ ಸೇರಿದಂತೆ ಒಂದನೇ ಹೆಚ್ಚುವರಿಯಿಂದ 10ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಗಳು)
ಕಾರ್ಮಿಕ ನ್ಯಾಯಾಲಯ (1), ಜಯನಗರದ ಮಳಲವಾಡಿಯಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಒಟ್ಟು 20 ನ್ಯಾಯಾಲಯಗಳಿವೆ.ಅವುಗಳೆಂದರೆ... ಕೌಟುಂಬಿಕ ನ್ಯಾಯಾಲಯ (4), ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ(4), ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ (4), ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ(3), (11ರಿಂದ 13ನೇ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಲಯ)
ಜೆಎಂಎಫ್.ಸಿ 2ನೇ ನ್ಯಾಯಲಯ(1), ಜೆಎಂಎಫ್.ಸಿ 3ನೇ ನ್ಯಾಯಾಲಯ(1),ಜೆಎಂಎಫ್.ಸಿ 4ನೇ ನ್ಯಾಯಾಲಯ(1), ಜೆಎಂಎಫ್.ಸಿ 5ನೇ ನ್ಯಾಯಾಲಯ (1), ಔದ್ಯಮಿಕ ನ್ಯಾಯಾಧೀಕರಣ(1), ವಿಪರ್ಯಾಸವೆಂದರೆ ನ್ಯಾಯಾಲಯದಿಂದ ಪಕ್ಷಗಾರರಿಗೆ, ಆಪಾದಿತರಿಗೆ, ಸಾಕ್ಷಿದಾರರಿಗೆ ನೀಡುವ ಸಮನ್ಸ್ ಹಾಗೂ ನೋಟೀಸುಗಳಲ್ಲಿ ತಾವು ಹಾಜರಾಗಬೇಕಾಗಿರುವ ನ್ಯಾಯಾಲಯದ ಹೆಸರಿರುತ್ತದೆಯೇ ಹೊರತು ಈ ನ್ಯಾಯಾಲಯ ಎಲ್ಲಿದೆ ಎಂಬ ಮಾಹಿತಿ ಇರುವುದಿಲ್ಲ.
ತಾವು ಹಾಜರಾಗಬೇಕಾದ ನ್ಯಾಯಾಲಯ ಚಾಮರಾಜಪುರಂನಲ್ಲಿರುವ ಪಾರಂಪರಿಕ ಕಟ್ಟಡದಲ್ಲಿದೆಯೇ ಅಥವಾ ಜಯನಗರದ ಮಳಲವಾಡಿಯಲ್ಲಿರುವ ನೂತನ ಕಟ್ಟಡದಲ್ಲಿದೆಯೇ ಎಂದು ತಿಳಿಯದೆ ಪಕ್ಷಗಾರರು,ಸಾಕ್ಷಿಗಳು ಹಾಗೂ ಆಪಾದಿತರು ಸಮನ್ಸನ್ನು ಕೈಯಲ್ಲಿ ಹಿಡಿದು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಪ್ರತಿದಿನ ಅಲೆದಾಡುವ ದೃಶ್ಯ ಸರ್ವೇಸಾಮಾನ್ಯವಾಗಿದೆ.ಪರ ಊರಿನಿಂದ ಬರುವ ವಕೀಲರು ಮತ್ತು ಸ್ಥಳೀಯ ಪೊಲೀಸರೂ ಸಹ ತಾವು ಹಾಜರಾಗಬೇಕಾಗಿರುವ ನ್ಯಾಯಾಲಯವು ಎಲ್ಲಿದೆ ಎಂದು ತಿಳಿಯದೆ ಗಲಿಬಿಲಿಯಾಗುತ್ತಿರುತ್ತಾರೆ.
ಅಷ್ಟೇ ಅಲ್ಲದೆ ಮೈಸೂರಿನ ಒಟ್ಟು 14 ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಗಳ ಪೈಕಿ ಪ್ರಧಾನ ಸಿವಿಲ್ ಜಡ್ಜ್ ಮತ್ತು 10 ಹೆಚ್ಚುವರಿ ನ್ಯಾಯಾಲಯಗಳು ಹಳೆಯ ಪಾರಂಪರಿಕ ಕಟ್ಟಡದಲ್ಲಿದ್ದು ಉಳಿದ 11, 12 ಹಾಗೂ 13ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಗಳು ಜಯನಗರದ ನೂತನ ಕಟ್ಟಡದಲ್ಲಿವೆ.ವಿಪರ್ಯಾಸವೆಂದರೆ ಈ 14 ನ್ಯಾಯಾಲಯಗಳ ಮುಖ್ಯ ಲಿಪಿಕಾಧಿಕಾರಿ (ಶಿರಸ್ತೇದಾರ್) ಹಳೆಯ ಕಟ್ಟಡದಲ್ಲಿರುತ್ತಾರೆ.ಈ 14 ನ್ಯಾಯಾಲಯಗಳ ಪ್ರಕರಣದ ಪ್ರೋಸೆಸ್ ಶುಲ್ಕ ಪಾವತಿಸುವ ಕೌಂಟರ್ ಕೂಡ ಹಳೆಯ ಕಟ್ಟಡದಲ್ಲಿದೆ.ಹೊಸ ಕಟ್ಟಡದಲ್ಲಿರುವ 11,12 ಹಾಗೂ 13ನೇ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಪ್ರಕರಣದಲ್ಲಿ ಪ್ರೋಸೆಸ್ ಶುಲ್ಕ ಪಾವತಿಸಲು ಜಯನಗರದಿಂದ ಚಾಮರಾಜಪುರಂ ಗೆ ವಕೀಲರು ಓಡಾಡಬೇಕಾಗಿದೆ.
ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ಯ ಒಟ್ಟು 14 ನ್ಯಾಯಾಲಯಗಳನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ.ಅಂತೆಯೇ ನ್ಯಾಯಾಲಯಗಳು ಹೊರಡಿಸುವ ಸಮನ್ಸ್ ಮತ್ತು ನೋಟೀಸುಗಳಲ್ಲಿ ಸಾಕ್ಷೀದಾರ,ಆಪಾದಿತ ಅಥವಾ ಪಕ್ಷಕಾರರು ಹಾಜರಾಗಬೇಕಾದ ನ್ಯಾಯಾಲಯವು ಎಲ್ಲಿದೆ ಎಂಬ ಮಾಹಿತಿ ನಮೂದಾದರೆ ಅಂತಹವರು ಪರದಾಡಬೇಕಾದ ಪರಿಸ್ಥಿತಿ ಉದ್ಭವವಾಗುವುದಿಲ್ಲ.
ಸಮನ್ಸ್ ಮತ್ತು ನೋಟೀಸುಗಳ ಮಾದರಿಯು ಕಂಪ್ಯೂಟರೀಕೃತವಾಗಿರುವುದರಿಂದ ಅದನ್ನು ಮಾರ್ಪಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕರ್ನಾಟಕ ಹೈಕೋರ್ಟ್‌ಈ ಕೂಡಲೇ ಸಮನ್ಸ್ ಮತ್ತು ನೋಟೀಸುಗಳ ಮಾದರಿಯಲ್ಲಿ ನ್ಯಾಯಾಲಯದ ವಿಳಾಸನ್ನು ನಮೂದಿಸಿ ತಿದ್ದುಪಡಿ ಮಾಡಿ ನ್ಯಾಯಾಲಯಕ್ಲೆ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.---
ಕೋಟ್ಫೋಟೋ- 4ಎಂವೈಎಸ್38
ನ್ಯಾಯಾಲಯವು ನೋಂದಾಯಿತ ಅಂಚೆಯ ಮೂಲಕ ಕಳಿಸುವ ಸಮನ್ಸ್ ಮತ್ತು ನೋಟೀಸ್ ಹಾಗೂ ಅಂಚೆ ಸ್ವೀಕೃತಿ ಪತ್ರವನ್ನು ತಲುಪಿಸಲು ಅಂಚೆಯಣ್ಣನೂ ಕೂಡಾ ಪರದಾಡುತ್ತಿರುತ್ತಾರೆ. ಹೊಸ ನ್ಯಾಯಾಲಯವು ಜಯನಗರ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿದ್ದರೆ,ಹಳೆಯ ನ್ಯಾಯಾಲಯವು ನ್ಯಾಯಾಲಯದ ಆವರಣದಲ್ಲಿರುವ ಚಾಮರಾಜಪುರಂ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿರುತ್ತದೆ.ಹೀಗಾಗಿ ನ್ಯಾಯಾಲಯವು ಹೊರಡಿಸಿರುವ ನೋಂದಾಯಿತ ಅಂಚೆಯ ಸ್ವೀಕೃತಿ ಪತ್ರವು ಆಯಾಯ ಪ್ರಕರಣಗಳ ಕಡತಕ್ಕೆ ಸೇರದೆ ಪ್ರಕರಣದ ಇತ್ಯರ್ಥವೂ ತಡವಾಗುತ್ತಿದೆ.- ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು