ಕೌಶಲ್ಯವಿಲ್ಲದಿದ್ದರೆ ಅಭಿವೃದ್ಧಿಗೆ ಅಡಚಣೆ ಆಗಬಹುದು

| Published : Jul 16 2025, 12:45 AM IST

ಸಾರಾಂಶ

ಇಂದಿನ ಯುವಕರು ಕೇವಲ ಪದವಿಗಳಲ್ಲ, ಕೌಶಲ್ಯಗಳಲ್ಲಿ ಪರಿಣತಿ ಗಳಿಸಿಕೊಂಡರೆ ಮಾತ್ರ ಭವಿಷ್ಯ ಸುರಕ್ಷಿತವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಇಂದಿನ ಯುವಕರು ಕೇವಲ ಪದವಿಗಳಲ್ಲ, ಕೌಶಲ್ಯಗಳಲ್ಲಿ ಪರಿಣತಿ ಗಳಿಸಿಕೊಂಡರೆ ಮಾತ್ರ ಭವಿಷ್ಯ ಸುರಕ್ಷಿತವಾಗುತ್ತದೆ. ಜ್ಞಾನವಿದ್ದರೂ ಕೌಶಲ್ಯವಿಲ್ಲದಿದ್ದರೆ ಅದು ಜೀವನದಲ್ಲಿ ಅಭಿವೃದ್ಧಿಗೆ ಅಡಚಣೆಯಾಗಬಹುದು ಎಂದು ಹಿರಿಯ ನಟ ಶಂಕರ್ ಅಶ್ವತ್ಥ್ ತಿಳಿಸಿದರು.ನಗರದ ಹಿನಕಲ್ ನಲ್ಲಿರುವ ರುಡ್‌ ಸೆಟ್ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಯುವ ಕೌಶಲ್ಯ ದಿನಾಚರಣೆ ಹಾಗೂ ಫೋಟೋಗ್ರಫಿ ಮತ್ತು ವೀಡೀಯೋಗ್ರಫಿ ತರಬೇತಿಯ ಛಾಯಾಚಿತ್ರ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದಿನ ಯುವಕರಿಗೆ ಕಲಿಕೆಯ ಜೊತೆಗೆ ಸುಧಾರಿತ ತರಬೇತಿಯನ್ನು ಹಾಗೂ ಉದ್ಯೋಗ ಸೃಷ್ಠಿಕರ್ತರಾಗಿ ರೂಪುಗೊಳ್ಳುವ ಅನಿವಾರ್ಯತೆ ಇದೆ. ಪ್ರತಿ ಯುವಕನು ನಾನು ಉದ್ಯೋಗ ಹುಡುಕುವವನು ಅಲ್ಲ, ಉದ್ಯೋಗ ಸೃಷ್ಟಿಸುವವನು ಎಂಬ ದೃಷ್ಟಿಕೋನ ಹೊಂದಬೇಕು. ಪ್ರಸ್ತುತತೆಗೆ ತಕ್ಕಂತೆ ನಮ್ಮ ಕೆಲಸ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.ಹೊಸ ಕೌಶಲ್ಯಗಳನ್ನು ಕಲಿಯುತ್ತಿರಬೇಕು, ಆ ಮೂಲಕ ನಮ್ಮ ಅಗತ್ಯತೆಯ ಮೌಲ್ಯಗಳನ್ನು ಬೆಳೆಸುತ್ತಾ ಹೋಗಬೇಕು. ನಮ್ಮ ದೈನಂದಿನ ಜೀವನದಲ್ಲಿ ಕೆಲಸ, ಕೌಶಲ್ಯಗಳ ಜೊತೆ ಸೃಜನಾತ್ಮಕವಾಗಿ ಹೊಸದನ್ನು ಕಲಿಯುತ್ತಾ ಇರಿ. ಕೌಶಲ್ಯ ಎಂಬುದಕ್ಕೆ ಯಾವುದೇ ಕಾಲದ ಮಿತಿಯಿಲ್ಲ, ಕಾಲ ಕಾಲಕ್ಕೆ ತಕ್ಕಂತೆ ನಾವು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆ ಆ ಕೌಶಲ್ಯ ವೃದ್ಧಿಯಾಗುತ್ತ ಹೋಗುತ್ತದೆ. ಅದು ನಮಗೆ ನಾವೇ ಕಂಡುಕೊಳ್ಳಬಹುದಾದ ಕೊಡುಗೆ. ಇದರಿಂದ ಜೀವನದಲ್ಲಿ ಉತ್ಸಾಹ, ಜೀವನ ಪ್ರೀತಿ ಮತ್ತು ಶಕ್ತಿ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.ಫೋಟೋಗ್ರಫಿ ಕೇವಲ ಒಂದು ಕಲೆ ಅಲ್ಲ, ಅದು ದೃಷ್ಟಿಕೋನದ ಪ್ರದರ್ಶನ. ಒಂದು ಕ್ಷಣವನ್ನು ಶಾಶ್ವತಗೊಳಿಸುವ ಶಕ್ತಿ ಇದೆ. ಇನ್ನು ಮುಂದೆ ನಿಮ್ಮ ಕ್ಯಾಮೆರಾ ಕಣ್ಣುಗಳು ಅನೇಕ ಕಥೆಗಳನ್ನು ಹೇಳಬಹುದು, ಅನೇಕ ಕ್ಷಣಗಳನ್ನು ಜೀವಂತವಾಗಿಡಬಹುದು. ಇಲ್ಲಿ ನೀಡಿರುವ ತರಬೇತಿ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದಲ್ಲದೆ, ಉದ್ಯೋಗದ ದಿಕ್ಕಿನಲ್ಲಿ ನಿಮಗೆ ಒಂದು ಹೊಸ ದಾರಿಯನ್ನು ತೋರಿದೆ. ನೀವು ಕಲಿತದ್ದು ನಿಮಗೆ ಹೊಸ ದಿಕ್ಕು ನೀಡಲಿ, ಹೊಸ ಅವಕಾಶಗಳನ್ನು ತೆರೆದುಕೊಡಲಿ. ಈ ತರಬೇತಿ ಮೂಲಕ ನಿಮ್ಮ ಜೀವನದ ಹೊಸ ಅಧ್ಯಾಯ ಆರಂಭವಾಗಲಿ ಎಂದು ಅವರು ಶುಭ ಹಾರೈಸಿದರು.ರುಡ್‌ ಸೆಟ್ ಸಂಸ್ಥೆಯ ನಿರ್ದೇಶಕಿ ಕೆ.ಎನ್. ಸರಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಏಳಿಗೆ ಸಾಧಿಸಲು ವೃತ್ತಿ ಕೌಶಲ್ಯಗಳ ಅಭಿವೃದ್ಧಿ ಮಾಡಿಕೊಳ್ಳುವುದು ಮುಖ್ಯ. ಇಂದಿನ ಸಂದರ್ಭದಲ್ಲಿ ಯಾವಾಗಲೂ ನಾವು ಪ್ರಸ್ತುತವಾಗಿರಲು ನಮ್ಮಲ್ಲಿರುವ ಕೌಶಲ್ಯಗಳನ್ನು ಹರಿತಗೊಳಿಸಿ, ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳಿ ಉದ್ಯಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಸಲಹೆ ನೀಡಿದರು.ಇದೇ ವೇಳೆ ಮೈಸೂರಿನ ಸಕ್ಕರೆ ಫಿಲ್ಮ್ಸ್ ರಘು ಮತ್ತು ಟಿ. ನರಸೀಪುರ ತಾಲೂಕು ದೊಡ್ಡ ಮುಲಗೂಡು ಗ್ರಾಮದ ಟೆರ್ರಾಕೋಟಾ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರಾದ ಶ್ರುತಿ ಅವರನ್ನು ಸನ್ಮಾನಿಸಲಾಯಿತು.ಛಾಯಾಗ್ರಾಹಕರಾದ ಸೂರ್ಯಪ್ರಕಾಶ್, ಗಿರಿಮಂಜು ಇದ್ದರು. ಉಪನ್ಯಾಸಕರಾದ ಆರ್. ಪಾಲ್‌ ರಾಜ್ ಸ್ವಾಗತಿಸಿದರು. ಲತಾಮಣಿ ನಿರೂಪಿಸಿದರು. -----------------eom/mys/shekar/