‘ಗುರು ಸುವರ್ಣ’ಗೆ ಯಕ್ಷಗಾನ ಅಕಾಡೆಮಿಯ ‘ಪಾರ್ತಿಸುಬ್ಬ’ ಪ್ರಶಸ್ತಿ

| Published : Sep 15 2024, 01:46 AM IST

ಸಾರಾಂಶ

ಗುರು ಸುವರ್ಣ, ಸಾಲಿಗ್ರಾಮ, ಹಿರಿಯಡ್ಕ, ಗೋಳಿರಗಡಿ ಮೇಳಗಳಲ್ಲಿ ಸೇವೆ ಸಲ್ಲಿಸಿ, ಉಡುಪಿಯ ಪ್ರಸಿದ್ಧ ಯಕ್ಷಗಾನ ಕೇಂದ್ರದ ಗುರುಗಳಾಗಿ, ಪ್ರಾಂಶುಪಾಲರಾಗಿ ದೇಶ ವಿದೇಶದ ಸಾವಿರರಾರು ಮಂದಿಗೆ ಶಾಸ್ತ್ರೀಯ ಯಕ್ಷಕಲೆಯನ್ನು ಧಾರೆಯೆರೆದವರು. ಕನ್ನಡ, ತುಳುವಲ್ಲದೇ, ಸಂಸ್ಕೃತ, ಮರಾಠಿ, ಹಿಂದಿಯಲ್ಲಿಯೂ ಯಕ್ಷಗಾನದ ತರಬೇತಿ - ಪ್ರಯೋಗಳನ್ನು ಮಾಡಿದವರು.

ಕನ್ನಡಪ್ರಭ ವಾರ್ತೆ ಉಡುಪಿಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅಕಾಡೆಮಿ ಯಕ್ಷಗಾನ ರಂಗಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಕಲಾವಿದರಿಗೆ ನೀಡುವ ಪಾರ್ತಿಸುಬ್ಬ ಪ್ರಶಸ್ತಿಗೆ ಬಡಗುತಿಟ್ಟು ಯಕ್ಷಗಾನ ಕಲಾವಿದ, ದೇಶವಿದೇಶದ ಸಾವಿರಾರು ಮಂದಿಗೆ ಯಕ್ಷ ಶಿಕ್ಷಣ ನೀಡಿರುವ ಗುರು ಸುವರ್ಣರೆಂದೇ ಖ್ಯಾತರಾಗಿರುವ ಬನ್ನಂಜೆ ಸಂಜೀವ ಸುವರ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರು. ನಗದು ಪುರಸ್ಕಾರವನ್ನು ಒಳಗೊಂಡಿದೆ.

ಪ್ರಶಸ್ತಿಗಳನ್ನು ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಶನಿವಾರ ಉಡುಪಿಯಲ್ಲಿ ಪ್ರಕಟಿಸಿದರು.

ಅಕಾಡೆಮಿಯ ಗೌರವ ಪ್ರಶಸ್ತಿಗೆ ತೆಂಕುತಿಟ್ಟಿನ ನಾಲ್ಕೂವರೆ ದಶಕಗಳಿಂದ ತಮ್ಮ ಸುಮಧುರ ಕಂಠದಿಂದ ಜನಾಭಿಮಾನಿಗಳನ್ನು ಹೊಂದಿರುವ ಭಾಗವತ ದಿನೇಶ್ ಅಮ್ಮಣ್ಣಾಯ, ಮೂಡಲಪಾಯ ಯಕ್ಷಗಾನದಲ್ಲಿ 3000ಕ್ಕೂ ಹೆಚ್ಚು ಪ್ರದರ್ಶನಗಳನ್ನ ನೀಡಿರುವ ಹಿರಿಯ ಭಾಗವತ ಎ.ಆರ್.ನಾರಾಯಣಪ್ಪ, ಪುರಾಣ, ಮಹಾಭಾರತ, ರಾಮಾಯಣಗಳನ್ನು ಅಧ್ಯಯನ ಮಾಡಿ ಮೂರು ದಶಕಗಳಿಂದ ಬೇಡಿಕೆಯ ಅರ್ಥಧಾರಿಯಾಗಿರುವ ಎಂ. ಜಬ್ಬಾರ್ ಸಮೋ, ಮುಂಬೈಯಲ್ಲಿ ಯಕ್ಷಗಾನವನ್ನು ಸಂಘಟಿಸಿ, ತೆಂಕು ಬಡಗು ತಿಟ್ಟುಗಳೆರಡರಲ್ಲೂ ಭಾಗವತರೂ ಆಗಿರುವ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಮೂಲ್ಕಿ, ಕೂಡ್ಲು, ಕೊಲ್ಲೂರು, ನಂದಾವರ, ಸೌಕೂರು, ಬಪ್ಪನಾಡು, ಅರುವ, ಉಪ್ಪಳ, ಧರ್ಮಸ್ಥಳ, ಇಡಗುಂಜಿ, ಕಟೀಲು ಇತ್ಯಾದಿ ಮೇಳಗಳಲ್ಲಿ 6 ದಶಕಗಳಿಂದ ಯಕ್ಷಗಾನ ಸೇವೆ ಸಲ್ಲಿಸಿದ ಚೆನ್ನಪ್ಪಗೌಡ ಸಜಿಪ ಅವರನ್ನು ಆರಿಸಲಾಗಿದೆ. ಈ ಸಾಧಕರಿಗೆ ಪ್ರಶಸ್ತಿಯೊಂದಿಗೆ ತಲಾ 50 ರು. ನಗದು ನೀಡಲಾಗುತ್ತದೆ.

ಅಲ್ಲದೇ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಯಕ್ಷಗಾನ ರಂಗದ ವೈವಿಧ್ಯ ಸಾಧಕರಾದ, ತೆಂಕುತಿಟ್ಟು ವೇಷಧಾರಿ ರಘುನಾಥ ಶೆಟ್ಟಿ ಬಾಯಾರು, ತೆಂಕುತಿಟ್ಟು ಪ್ರಸಾದನ ಕಲಾವಿದ ದಿವಾಕರ ದಾಸ ಕಾವಳಕಟ್ಟೆ, ತೆಂಕುತಿಟ್ಟು ಬಣ್ಣದ ವೇಷ ಸುಬ್ರಾಯ ಪಾಟಾಳಿ ಸಂಪಾಜೆ, ಬಡಗುತಿಟ್ಟು ವೇಷಧಾರಿ ನರಾಡಿ ಭೋಜರಾಜ ಶೆಟ್ಟಿ, ಚೆಂಡೆವಾದಕ ಸದಾನಂದ ಪ್ರಭು ಬೈಂದೂರು, ಹಾಸ್ಯಗಾರ ಹೊಳೆಮಗೆ ನಾಗಪ್ಪ ಮರಕಾಲ, ಬಡಗುತಿಟ್ಟು ವೇಷಧಾರಿ ಶಿರಳಗಿ ತಿಮ್ಮಪ್ಪ ಹೆಗಡೆ, ಬಡಗುತಿಟ್ಟು ಸ್ತ್ರೀವೇಷಧಾರಿ ಬಾಬು ಕುಲಾಲ್ ಹಳ್ಳಾಡಿ, ಮೂಡಲಪಾಯ ಭಾಗವತ ಶಿವಯ್ಯ ತುಮಕೂರು, ಮೂಲಪಾಯ ಭಾಗವತ ಜೀಯಪ್ಪ ಕೋಲಾರ ಅವರು ಭಾಜನರಾಗಿದ್ದಾರೆ. ಪ್ರಶಸ್ತಿ ತಲಾ 25 ಸಾವಿರ ರು. ನಗದು ಬಹುಮಾನವನ್ನೊಳಗೊಂಡಿದೆ.

ಜೊತೆಗೆ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಯನ್ನು ಬಡಗುತಿಟ್ಟಿನಲ್ಲಿ ಮಾತ್ರ ಕಾಣುವ ಸಭಾಹಿತ ಮಟ್ಟು ಪಾರಂಗತರಾಗಿರುವ, ಹಿರಿಯ ವೇಷಧಾರಿ, ಅರ್ಥಧಾರಿ, ಭಾಗವತ ಗೋಪಾಲಕೃಷ್ಣ ಭಟ್ ಜೋಗಿಮನೆ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯು 25 ಸಾವಿರ ರು. ನಗದನ್ನು ಹೊಂದಿದೆ.

ಇವುಗಳ ಜೊತೆಗೆ 2022ನೇ ಸಾಲಿನ ಯಕ್ಷಗಾನ ಪುಸ್ತಕ ಬಹುಮಾನಕ್ಕೆ ವಿದ್ವಾನ್ ಗಣಪತಿ ಭಟ್, ಡಾ.ಮನೋರಮಾ ಬಿ.ಎನ್., 2023ನೇ ಸಾಲಿಗೆ ಡಾ.ಸತೀಶ್ ಜಿ. ನಾಯ್ಕ ಮತ್ತು ಎಚ್.ಸುಜಯೀಂದ್ರ ಹಂದೆ ಅವರನ್ನು ಆರಿಸಲಾಗಿದೆ. ಪ್ರಶಸ್ತಿಯು ತಲಾ 25 ಸಾವಿರ ರು. ನಗದನ್ನು ಹೊಂದಿದೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಜಿ.ವಿ.ಎಸ್.ಉಳ್ಳಾಲ, ವಿದ್ಯಾಧರ ಜಲವಳ್ಳಿ, ರಿಜಿಸ್ಟ್ರಾರ್ ನಮ್ರತಾ ಎನ್. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

----ಪ್ರಯೋಗಶೀಲ ಗುರು ಸುವರ್ಣ

ಡಾ.ಶಿವರಾಮ ಕಾರಂತರ ಪ್ರಯೋಗಾತ್ಮಕ ಯಕ್ಷರಂಗದಿಂದ ಬೆಳಕಿಗೆ ಬಂದ ಬನ್ನಂಜೆ ಸಂಜೀವ ಸುವರ್ಣರು ಪ್ರಯೋಗಶೀಲ ಕಲಾವಿದರೂ ಹೌದು, ಗುರುವೂ ಹೌದು.

ಸಾಲಿಗ್ರಾಮ, ಹಿರಿಯಡ್ಕ, ಗೋಳಿರಗಡಿ ಮೇಳಗಳಲ್ಲಿ ಸೇವೆ ಸಲ್ಲಿಸಿ, ಉಡುಪಿಯ ಪ್ರಸಿದ್ಧ ಯಕ್ಷಗಾನ ಕೇಂದ್ರದ ಗುರುಗಳಾಗಿ, ಪ್ರಾಂಶುಪಾಲರಾಗಿ ದೇಶ ವಿದೇಶದ ಸಾವಿರರಾರು ಮಂದಿಗೆ ಶಾಸ್ತ್ರೀಯ ಯಕ್ಷಕಲೆಯನ್ನು ಧಾರೆಯೆರೆದವರು. ಕನ್ನಡ, ತುಳುವಲ್ಲದೇ, ಸಂಸ್ಕೃತ, ಮರಾಠಿ, ಹಿಂದಿಯಲ್ಲಿಯೂ ಯಕ್ಷಗಾನದ ತರಬೇತಿ - ಪ್ರಯೋಗಳನ್ನು ಮಾಡಿದವರು.

ದೆಹಲಿಯ ಎನ್‌ಎಸ್‌ಡಿ, ಚೀನಾದ ಕಲಾವಿದರಿಗೆ, ಕಿವುಡ, ಮೂಗ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಸಿದ್ದಾರೆ, ಯಶಸ್ವಿಯಾಗಿ ಆಡಿಸಿದ್ದಾರೆ. ನ್ಯೂಯಾರ್ಕ್, ಸಿಂಗಾಪುರ, ಆಸ್ಟ್ರೇಲಿಯಾ, ಲಂಡನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಯಕ್ಷಗಾನದ ಜೊತೆಗೆ ಕೊಡಿಯಾಟ್ಟಂ, ಭರತನಾಟ್ಯ, ಯೋಗಗಳಲ್ಲಿಯೂ ಪರಿಣಿತಿ ಸಾಧಿಸಿದ್ದಾರೆ.