ಸಾರಾಂಶ
ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ೧೭ ವರ್ಷ ಬಣ್ಣ ಹಚ್ಚಿದ್ದ ವೆಂಕಟರಮಣ ಭಟ್
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ವೇಷಧಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ನಾಟ್ಯ ಶಾಂತಲೆ ಎಂದೇ ಪ್ರಸಿದ್ಧರಾದ ಪಾತಾಳ ವೆಂಕಟರಮಣ ಭಟ್ (೯೨) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಪಾತಾಳದ ತನ್ನ ಸ್ವಗೃಹದಲ್ಲಿ ನಿಧನರಾದರು.ಕಾಂಚನಾ ಮೇಳ, ಸೌಕೂರು ಮೇಳ, ಮೂಲ್ಕಿ ಮೇಳ, ಸುರತ್ಕಲ್ ಮೇಳ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಪುರುಷ ಹಾಗೂ ಸ್ತ್ರೀ ವೇಷಧಾರಿಯಾಗಿ ಕಲಾ ಸೇವೆಗೈದ ಇವರು, ಧರ್ಮಸ್ಥಳ ಮೇಳದಲ್ಲಿ ಸುದೀರ್ಘ ೧೭ ವರ್ಷ ಬಣ್ಣ ಹಚ್ಚಿದ್ದರು. ತನ್ನ ೫೦ನೇ ವಯಸ್ಸಿನಲ್ಲಿ ಸ್ತ್ರೀ ಪಾತ್ರಕ್ಕೆ ತನ್ನ ದೇಹ ಸ್ಥಿತಿ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆದಿದ್ದರು.ಅವರು, ಪುತ್ರರಾದ ಯಕ್ಷಗಾನ ಸ್ತ್ರೀ ವೇಷಧಾರಿಯಾಗಿ ಖ್ಯಾತರಾಗಿರುವ ಅಂಬಾ ಪ್ರಸಾದ್ ಪಾತಾಳ, ಸಹಕಾರಿ ಧುರೀಣ ಶ್ರೀರಾಮ ಭಟ್ ಪಾತಾಳ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.ಉಳಿಯದಿಂದ ಪಾತಾಳಕ್ಕೆ...೧೯೩೩ ನವೆಂಬರ್ ೧೬ರಂದು ಶ್ರೀರಾಮ ಭಟ್ಟ ಮತ್ತು ಹೇಮಾವತಿ ದಂಪತಿ ಮಗನಾಗಿ ಕಬಕದ ಬಳಿಯ ಬೈಪದವು ಎಂಬಲ್ಲಿ ಜನಿಸಿದ ವೆಂಕಟರಮಣ ಭಟ್, ಬಳಿಕ ಬೆಳ್ತಂಗಡಿ ಸಮೀಪದ ಉಳಿಯ ಎಂಬಲ್ಲಿ ವಾಸಿಸತೊಡಗಿದರು. ಶಿಕ್ಷಣದ ಕಾರಣಕ್ಕೆ ಉಪ್ಪಿನಂಗಡಿಯ ಬೊಳ್ಳಾವು ಎಂಬಲ್ಲಿನ ದೊಡ್ಡಮ್ಮನ ಮನೆಯಲ್ಲಿ ವಾಸ್ತವ್ಯವಿದ್ದು, ಉಪ್ಪಿನಂಗಡಿಯಲ್ಲೇ ೮ನೇ ತರಗತಿ ವರೆಗೆ ಶಿಕ್ಷಣ ಪಡೆದರು. ಬಳಿಕ ತಂದೆಯ ಮರಣ, ಅನಾರೋಗ್ಯಕ್ಕೀಡಾಗುತ್ತಿರುವ ತಾಯಿಯ ಆರೈಕೆಯ ಅನಿವಾರ್ಯತೆಯಿಂದಾಗಿ ಶಿಕ್ಷಣವನ್ನು ಮುಂದುವರಿಸಲಾಗಲಿಲ್ಲ. ಬಳಿಕ ಉಳಿಯದ ಭೂಮಿಯನ್ನು ಮಾರಾಟ ಮಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ಮಂಜಯ್ಯ ಹೆಗ್ಗಡೆಯವರ ಔದಾರ್ಯದ ಫಲವಾಗಿ ಉಪ್ಪಿನಂಗಂಡಿಯ ಪಾತಾಳ ಎಂಬಲ್ಲಿದ್ದ ಭೂಮಿಯಲ್ಲಿ ಗೇಣಿ ಆಧಾರದಲ್ಲಿ ಪಡೆದು ಜೀವನ ನಡೆಸಿದರು. ಅಲ್ಲಿಂದ ಮುಂದಕ್ಕೆ ಅವರ ಹೆಸರಿನಲ್ಲಿ ಪಾತಾಳ ಎಂಬ ಹೆಸರು ಶಾಶ್ವತವಾಗಿ ನೆಲೆನಿಂತಿತ್ತು.ಕಾಡಿದ ಹಸಿವು ಕೈ ಬೀಸಿ ಕರೆದ ಯಕ್ಷಗಾನ:ತಾಯಿಯ ಹಂಬಲದಂತೆ ಶಿಕ್ಷಣ ಮುಂದುವರಿಸಲಾಗದ ಸ್ಥಿತಿಯಲ್ಲಿ ಮಗನ ಬದುಕು ರೂಪಿಸಲು ತನ್ನ ಅಳಿಯ ಸಮಾನರಾದ ಯಕ್ಷಗಾನದಲ್ಲಿ ಹೆಸರುಗಳಿಸಿದ್ದ ಮಾಣಾಂಗಾಯಿ ಕೃಷ್ಣ ಭಟ್ಟರಿಗೆ ತನ್ನ ಮಗನನ್ನು ಒಪ್ಪಿಸಿ ಆತನಿಗೆ ಬದುಕುವ ದಾರಿ ತೋರಬೇಕೆಂದು ವಿನಂತಿಸಿದ್ದರು. ಅಂತೆಯೇ ಕೃಷ್ಣ ಭಟ್ಟರು, ವೆಂಕಟರಮಣ ಭಟ್ಟರನ್ನು ಕಾಂಚನದ ಸುಬ್ರಹ್ಮಣ್ಯ ಅಯ್ಯರ್ ಅವರ ಸಂಗೀತ ಶಾಲೆಗೆ ಸೇರಿಸಲಾಯಿತು. ಅಭಿನಯ, ಅರ್ಥಗಾರಿಕೆಯಲ್ಲಿದ್ದ ಒಲವು ಸಂಗೀತದಲ್ಲಿ ಕಾಣಿಸದಿದ್ದಾಗ ಅವರನ್ನು ೧೯೫೨ರಲ್ಲಿ ಅಸ್ತಿತ್ವ ಕಂಡ ಕಾಂಚನದ ಲಕ್ಷ್ಮೀ ನಾರಾಯಣ ಯಕ್ಷಗಾನ ನಾಟಕ ಸಭಾದಲ್ಲಿ ಮುಂದುವರಿಯಲು ಸೂಚಿಸಲಾಯಿತು. ಈ ಮೂಲಕ ಮೇಳದ ಅಡುಗೆ ಭಟ್ಟನ ಸ್ಥಾನ ಒಲಿದು ಬಂತು. ಹಸಿವು ನೀಗಿದ ತೃಪ್ತಿಯೊಂದಿಗೆ ಆಸಕ್ತಿಯ ಯಕ್ಷಗಾನದ ವೀಕ್ಷಣೆಯ ಅವಕಾಶವೂ ಲಭಿಸಿತ್ತು. ಅಂದು ಪುಣಚದಲ್ಲಿ ಆಯೋಜಿಸಲ್ಪಟ್ಟ ಯಕ್ಷಗಾನ ಪ್ರದರ್ಶನದಲ್ಲಿ ಸ್ತ್ರೀ ಪಾತ್ರಧಾರಿಗಳಾಗಬೇಕಾಗಿದ್ದ ಇಬ್ಬರು ಪ್ರಧಾನ ಕಲಾವಿದರು ನಾಪತ್ತೆಯಾಗಿದ್ದಾಗ, ಸ್ತ್ರೀ ಪಾತ್ರಕ್ಕೆ ತಕ್ಷಣದ ಆಯ್ಕೆಯಾಗಿ ವೆಂಕಟರಮಣ ಭಟ್ಟರನ್ನು ಮರವಂತೆ ವಿಶ್ವೇಶ್ವರಯ್ಯ ಅವರು ಘೋಷಿಸಿದರು. ವೇಷಧಾರಿಯಾಗಿ ರಂಗ ಪ್ರವೇಶ ಮಾಡಬೇಕೆಂಬ ಕನಸು ನನಸಾದ ಕ್ಷಣ ಅದಾಗಿತ್ತು. ಅಲ್ಲಿ ಕಂಡ ಯಶಸ್ಸು ಬದುಕಿನುದ್ದಕ್ಕೂ ಸ್ತ್ರೀ ವೇಷಧಾರಿಯಾಗಿ ಜನಮನ್ನಣೆ ಗಳಿಸಲು ಕಾರಣವಾಯಿತು.ತೆಂಕುತಿಟ್ಟು- ಬಡಗುತಿಟ್ಟು ಮೇಳದಲ್ಲಿ ಸೈ:ಕಾಂಚನ ಮೇಳದ ಬಳಿಕ ಬಡಗುತಿಟ್ಟಿನ ಸೌಕೂರು ಮೇಳದಲ್ಲಿ ಅವಕಾಶ ಪಡೆದ ಪಾತಾಳ ವೆಂಕಟರಮಣ ಭಟ್ಟರು, ಉಳ್ತೂರು ಸೀತಾರಾಮರಲ್ಲಿ ಬಡಗುತಿಟ್ಟಿನ ನಾಟ್ಯಾಭ್ಯಾಸ ಕಲಿತು ಗೌರಿ, ಮೇನಕೆ, ಶಾರದೆ, ಮೋಹಿನಿ, ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಯಕ್ಷಗಾನ ಪ್ರೇಕ್ಷಕರ ಮನಗೆದ್ದರು. ಮತ್ತೆ ತೆಂಕುತಿಟ್ಟಿನ ಮೂಲ್ಕಿ ಮೇಳದಲ್ಲಿ ಮಾಸ್ಟರ್ ವಿಠಲ್ ಅವರ ಗರಡಿಯಲ್ಲಿ ಶಿವತಾಂಡವ, ಭಸ್ಮಾಸುರ ಮೋಹಿನಿ ಮುಂತಾದ ನೃತ್ಯಗಳ ಪದಗತಿಯ ಅಭ್ಯಾಸವನ್ನು ಮಾಡಿ ಅವರಿಂದಲೇ ಭರತನಾಟ್ಯವನ್ನೂ ಕಲಿತರು. ತನ್ಮೂಲಕ ಎರಡೂ ತಿಟ್ಟುಗಳಲ್ಲಿ ಮನೋಜ್ಞ ಪಾತ್ರ ನಿರ್ವಹಣೆಯನ್ನು ತೋರಿದರು.೧೯೬೩ರಲ್ಲಿ ಧರ್ಮಸ್ಥಳ ಮೇಳಕ್ಕೆ ರತ್ನವರ್ಮ ಹೆಗ್ಗಡೆಯವರ ಕರೆಗೆ ಓಗೊಟ್ಟು ಸೇರ್ಪಡೆಗೊಂಡ ಪಾತಾಳರು, ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರು, ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು, ಸೂರಿಕುಮೇರಿ ಗೋವಿಂದ ಭಟ್, ಕುಂಬಳೆ ಸುಂದರರಾಯರು, ಪುತ್ತೂರು ನಾರಾಯಣ ಹೆಗ್ಡೆ ಮುಂತಾದ ಅಗ್ರಗಣ್ಯ ಕಲಾವಿದರೊಂದಿಗೆ ಒಡನಾಟ ಲಭಿಸಿ ಪ್ರಭಾವತಿ, ಅಂಬೆ, ಅಮ್ಮುದೇವಿ, ಊರ್ವಶಿ, ಅಶೋಕ ಸುಂದರಿ, ರಂಭೆ, ಮೋಹಿನಿ, ಕೈಕೆಯೀಯಂತಹ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಗೆ ಪಾತ್ರರಾದರು.ತನಗೆ ೫೦ ವರ್ಷ ಸಮೀಪಿಸಿದಂತೆಯೇ ತನ್ನ ದೇಹ ಪ್ರಕೃತಿ ಸ್ತ್ರೀ ವೇಷಕ್ಕೆ ನ್ಯಾಯ ಒದಗಿಸಲಾರದು ಎಂಬ ಸತ್ಯವನ್ನು ಮನಗಂಡು ಯಕ್ಷಗಾನದಿಂದ ಸ್ವಯಂ ನಿವೃತ್ತಿ ಪಡೆದ ಅವರು, ಬೇರಾವ ಮೇಳಕ್ಕೂ ಹೋಗದೆ ಕೃಷಿ ಕಾರ್ಯದಲ್ಲಿ ತೊಡಗಿದ್ದರು.ಅರಸಿ ಬಂದ ಪ್ರಶಸ್ತಿಗಳು:ಚೆನ್ನೈಯಲ್ಲಿ ಕಾಂಚಿಕಾಮಕೋಟಿ ಮಠಾಧೀಶರು ನೀಡಿದ ಮಣಿವಿಳಾ ಪ್ರಶಸ್ತಿ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ನೀಡಿದ ಜ್ಞಾನ -ವಿಜ್ಞಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ, ಕರಾವಳಿ ಯಕ್ಷಗಾನ ಸಮ್ಮೇಳನದಲ್ಲಿ ಗೌರವ, ರಾಘವೇಶ್ವರ ಶ್ರೀಗಳ ಅನುಗ್ರಹ ಸನ್ಮಾನ, ಪಟ್ಟಾಜೆ ಪ್ರಶಸ್ತಿಗಳು ಸೇರಿದಂತೆ ಅಗಣಿತ ಪ್ರಶಸ್ತಿಗಳು, ಸನ್ಮಾನಾದಿ ಗೌರವಗಳು ಪಾತಾಳರನ್ನು ಅರಸಿ ಬಂದಿದ್ದವು.ಕಲಾವಿದರನ್ನು ಗೌರವಿಸಲು ಪಾತಾಳ ಪ್ರಶಸ್ತಿ:ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ತೋರಿದ ಹಲವಾರು ಕಲಾವಿದರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ ಪಾತಾಳ ಪ್ರಶಸ್ತಿಯನ್ನು ನೀಡುತ್ತಿದ್ದ ಇವರು, ಈಗಾಗಲೇ ೫೦ಕ್ಕೂ ಮಿಕ್ಕಿದ ಕಲಾವಿದರನ್ನು ಗುರುತಿಸಿ ಗೌರವಿಸಿದ್ದಾರೆ.ಜೀವನದ ಕೊನೆಯ ದಿನದಲ್ಲಿ ದೇವಾಲಯಕ್ಕೆ ಮರವನ್ನು ದಾನವಾಗಿ ನೀಡಿದರು. ಕೊಯಿಲದ ಸದಾಶಿವ ದೇವಾಲಯಕ್ಕೆ ಧ್ವಜ ಸ್ತಂಭಕ್ಕಾಗಿ ಮರದ ಅವಶ್ಯಕತೆ ಮೂಡಿದಾಗ ತನ್ನ ಭೂಮಿಯಲ್ಲಿದ್ದ ಬೆಲೆಬಾಳುವ ಮರವನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದ ಇವರು, ತನ್ಮೂಲಕ ಬಾಳ ಸಂಧ್ಯಾ ಸಮಯದಲ್ಲಿ ಶಿವನ ಸೇವೆ ಸಲ್ಲಿಸಿದ ಆತ್ಮ ಸಂತಸವನ್ನು ಹೊಂದಿದ್ದರು.