ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಎರಡು ವರ್ಷಗಳಲ್ಲಿ ವ್ಯಯಿಸಿರುವ ಮೊತ್ತ 90 ಸಾವಿರ ಕೋಟಿ ರು.
ಹಲವು ಮೂದಲಿಕೆ, ಸವಾಲುಗಳ ನಡುವೆಯೇ ಸಾಮಾಜಿಕ ನ್ಯಾಯ, ದುರ್ಬಲ ವರ್ಗದವರಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಎರಡು ವರ್ಷಗಳಲ್ಲಿ ವ್ಯಯಿಸಿರುವ ಮೊತ್ತ 90 ಸಾವಿರ ಕೋಟಿ ರು. ಆಗಿದ್ದರೆ, ಅದರಿಂದ ಲಾಭ ಪಡೆದಿರುವ ಜನ ಸಮೂಹದ ಸಂಖ್ಯೆ ಸುಮಾರು 4 ಕೋಟಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡು ಎರಡು ವರ್ಷ ಪೂರೈಸಿದೆ. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಕೆಗಾಗಿ ಗ್ಯಾರಂಟಿ ಯೋಜನೆಗಳ ಜಾರಿಗೊಳಿಸುವ ಪ್ರಕ್ರಿಯೆ ಆರಂಭಗೊಂಡಾಗ ಇದು ಕಾರ್ಯ ಸಾಧುವೇ ಎಂಬ ಪ್ರಶ್ನೆಗಳು ಮೂಡಿದ್ದು ಸಹಜ. ಗ್ಯಾರಂಟಿ ಜಾರಿಯಾದರೆ ರಾಜ್ಯದ ಅಭಿವೃದ್ಧಿ ಬಲಿಯಾಗಲಿದೆ ಎಂಬ ಟೀಕೆಗಳು ಕೂಡ ವ್ಯಕ್ತವಾಗಿದ್ದವು.
ಆದರೆ ಈ ಅನುಮಾನ, ಟೀಕೆಗಳು ಮಸುಕಾಗುವಂತೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶಕ್ಕೆ ಮಾದರಿಯಾಗುವಂತೆ ಜಾರಿಗೊಳಿಸಿದ್ದೇ ಈ ಎರಡು ವರ್ಷದ ಅವಧಿಯ ಸಿದ್ದರಾಮಯ್ಯ ಅವರ ಸರ್ಕಾರದ ಮೇರು ಸಾಧನೆ.
ವಿರೋಧ ಪಕ್ಷಗಳ ಮೂದಲಿಕೆ, ಆರ್ಥಿಕ ಕ್ರೋಢೀಕರಣದ ಸವಾಲುಗಳ ನಡುವೆಯೇ 2023ರ ಜೂನ್ 11ರಂದು ಮೊದಲ ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತು. ರಾಜ್ಯದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜತೆಗೆ ಸತತ ಎರಡು ವರ್ಷಗಳವರೆಗೆ ಯಾವುದೇ ಸಮಸ್ಯೆಯಿಲ್ಲದಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಯಲ್ಲಿಡಲಾಗಿದೆ. ಮುಂದಿನ 3 ವರ್ಷಗಳವರೆಗೂ ಯಾವುದೇ ಬದಲಾವಣೆಯಿಲ್ಲದಂತೆ ಗ್ಯಾರಂಟಿಗಳನ್ನು ಮುಂದುವರಿಸುವ ಗ್ಯಾರಂಟಿಯನ್ನು ರಾಜ್ಯ ಸರ್ಕಾರ ನೀಡಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು
ವಿಧಾನಸಭೆ ಚುನಾವಣೆಗೂ ಮುನ್ನವೇ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಗುರಿ ಕಾಂಗ್ರೆಸ್ ಹೊಂದಿತ್ತು. ಅದರಂತೆ ತನ್ನ ಪ್ರಣಾಳಿಕೆಯಲ್ಲೇ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮನೆಯೊಡತಿಗೆ ಮಾಸಿಕ 2 ಸಾವಿರ ರು. ಸಹಾಯಧನ ನೀಡುವ ಗೃಹಲಕ್ಷ್ಮೀ ಹಾಗೂ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ‘ಶಕ್ತಿ’ಯಂತಹ ಯೋಜನೆಗಳನ್ನು ಘೋಷಿಸಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಗ್ಯಾರಂಟಿ ಯೋಜನೆಗಳ ಜಾರಿಗೆ ಕೆಲಸ ಆರಂಭವಾಯಿತು. ಅದರ ಫಲವಾಗಿ ಸರ್ಕಾರ ರಚನೆಯಾದ 23 ದಿನಗಳಲ್ಲಿ ಅಂದರೆ 2023ರ ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ನಂತರ 2023ರ ಆಗಸ್ಟ್‌ನಲ್ಲಿ ಗೃಹ ಲಕ್ಷ್ಮೀ ಯೋಜನೆ ಆರಂಭಿಸಲಾಯಿತು.
457 ಕೋಟಿ ಮಹಿಳಾ ಪ್ರಯಾಣಿಕರು
ಗ್ಯಾರಂಟಿ ಯೋಜನೆಗಳಲ್ಲಿಯೇ ಮೊದಲು ಆರಂಭಿಸಲಾದ ‘ಶಕ್ತಿ’ ಯೋಜನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಶಕ್ತಿಗೆ ವೇಗ ನೀಡಿದೆ. ಅದಕ್ಕಿಂತ ಮುಖ್ಯವಾಗಿ ಬಸ್ ಪ್ರಯಾಣಕ್ಕಾಗಿಯೇ ಸಾವಿರಾರು ರು. ವ್ಯಯಿಸುತ್ತಿದ್ದ ಮಹಿಳೆಯರ ಆರ್ಥಿಕ ಉಳಿತಾಯಕ್ಕೆ ನೆರವಾಗುತ್ತಿದೆ. ಶಕ್ತಿ ಯೋಜನೆ ಆರಂಭದಿಂದ ಈವರೆಗೂ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದ ತಿಂಗಳಲ್ಲಿ ಪ್ರತಿದಿನ ಸರಾಸರಿ 45ರಿಂದ 50 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆಯುತ್ತಿದ್ದರು. ಅದೇ ಈಗ ಆ ಸಂಖ್ಯೆ ಪ್ರತಿದಿನ 65ರಿಂದ 73 ಲಕ್ಷಕ್ಕೆ ಹೆಚ್ಚಳವಾಗಿದೆ. ಆ ಮೂಲಕ 2023ರ ಜೂ.11ರಿಂದ 2025ರ ಮೇ 16ರವರೆಗೆ ಒಟ್ಟು 457 ಕೋಟಿ ರು. ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ. ಅವರ ಪ್ರಯಾಣದ ಟಿಕೆಟ್ ಮೌಲ್ಯ 11,467 ಕೋಟಿ ರು. ಆಗಿದ್ದು, ಸರ್ಕಾರದಿಂದ ಈಗಾಗಲೇ 8,815 ಕೋಟಿ ರು. ಸಾರಿಗೆ ನಿಗಮಗಳಿಗೆ ನೀಡಲಾಗಿದೆ. ಉಳಿದ ಮೊತ್ತವನ್ನು ಜೂನ್ ತಿಂಗಳ ಆರಂಭದಲ್ಲಿಯೇ ಸರ್ಕಾರ ನಿಗಮಗಳಿಗೆ ಪಾವತಿಸಲಿದೆ.
ಮನೆಯೊಡತಿಗೆ ಆರ್ಥಿಕ ಬಲ ''ಗೃಹ ಲಕ್ಷ್ಮೀ''
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿ ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಪ್ರತಿ ಕುಟುಂಬದ ಮನೆಯೊಡತಿಗೆ ಮಾಸಿಕ 2 ಸಾವಿರ ರು. ಸಹಾಯಧನ ನೀಡುವ ಗೃಹ ಲಕ್ಷ್ಮೀ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮನೆಯೊಡತಿ ಗುರುತಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಕುಟುಂಬಗಳಲ್ಲಿ ಕಲಹ ತರುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದರೂ ಮಹಿಳಾ ಸಬಲೀಕರಣ ದೃಷ್ಟಿಯನ್ನಿಟ್ಟುಕೊಂಡು ರಾಜ್ಯ ಸರ್ಕಾರ 2023ರಿಂದ ಜುಲೈ 19ರಿಂದ ಗೃಹ ಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭಿಸಿತು. ನಂತರ ಆ.30ರಿಂದ ಫಲಾನುಭವಿಗಳಿಗೆ ಸಹಾಯಧನ ಪಾವತಿಗೆ ಚಾಲನೆ ನೀಡಲಾಯಿತು. ಅಂದಿನಿಂದ 2024ರ ಮಾರ್ಚ್‌ವರೆಗೆ 1.23 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು. ಪಾವತಿಸಲಾಗಿದೆ. ಅದರಂತೆ ಒಟ್ಟಾರೆ ಯೋಜನೆಗಾಗಿ 47,773 ಕೋಟಿ ರು. ವ್ಯಯಿಸಲಾಗಿದ್ದು, ಅದು ಮುಂದುವರಿದೆ. ಆಮೂಲಕ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಮಾಡಲಾಗಿರುವ ವೆಚ್ಚದಲ್ಲಿ ಶೇ.50ಕ್ಕಿಂತ ಹೆಚ್ಚು ಹಣವನ್ನು ಗೃಹ ಲಕ್ಷ್ಮಿಯರಿಗೆ ನೀಡಿದೆ.
ಉಳಿತಾಯದ ಜ್ಯೋತಿ ಬೆಳಗಿದ ಗೃಹ ಜ್ಯೋತಿ
ಮಹಿಳೆಯರ ಆರ್ಥಿಕ ಶಕ್ತಿವೃದ್ಧಿ ಜತೆಗೆ ಕುಟುಂಬದ ಆರ್ಥಿಕ ಉಳಿತಾಯ ಹೆಚ್ಚಿಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿದೆ. ಹಲವು ಲೆಕ್ಕಾಚಾರಗಳೊಂದಿಗೆ 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್ ಪೂರೈಸುವ ಯೋಜನೆಯನ್ನು 2023ರ ಆಗಸ್ಟ್ ತಿಂಗಳಿನಿಂದ ಜಾರಿಗೊಳಿಸಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೂ ಅನ್ವಯವಾಗುವಂತೆ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಆರ್ಥಿಕ ದುರ್ಬಲರಿಗೂ ಯೋಜನೆ ಲಾಭ ಸಿಗುವಂತೆ ಮಾಡಲಾಯಿತು. ಆರಂಭದಲ್ಲಿ ಗೃಹ ಜ್ಯೋತಿ ಬಗ್ಗೆ ಜನರಿಗೆ ಗೊಂದಲಗಳಿದ್ದರೂ, ಅದು ಬಹಳ ಸಮಯ ಇರದಂತೆ ಮಾಡಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ಯೋಜನೆ ಯಾವ ವಿಧಾನದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂಬುದನ್ನು ವಿವರಿಸಿದ್ದರು. ಅಲ್ಲದೆ, 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆದಾರರು ಯೋಜನೆ ಲಾಭ ಹೇಗೆ ಪಡೆಯಬಹುದು ಎಂಬುದನ್ನು ತಿಳಿಸಿದ್ದರು. ಅದರಂತೆಯೇ 2023ರ ಆಗಸ್ಟ್ ತಿಂಗಳಿನಿಂದ ಕಡಿಮೆ ವಿದ್ಯುತ್ ಬಳಕೆದಾರರಿಗೆ ಶೂನ್ಯ ಮೌಲ್ಯದ ವಿದ್ಯುತ್ ಬಿಲ್ ನೀಡಲಾಗುತ್ತಿದೆ. 1.63 ಕೋಟಿ ಕುಟುಂಬಗಳು ಇದರ ಲಾಭ ಪಡೆಯುತ್ತಿದ್ದು, 2024-25ರ ಅಂತ್ಯಕ್ಕೆ ಒಟ್ಟು 18,900 ಕೋಟಿ ರು.ಗಳನ್ನು ಯೋಜನೆಗಾಗಿ ಖರ್ಚು ಮಾಡಲಾಗಿದೆ.
ಹಸಿವು ನೀಗಿಸಿದ ಅನ್ನಭಾಗ್ಯ
2014-19ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಅನ್ನಭಾಗ್ಯಕ್ಕೆ 2023ರಲ್ಲಿ ಹೊಸ ರೂಪ ನೀಡಿ ಅನುಷ್ಠಾನಗೊಳಿಸಲಾಯಿತು. ರಾಜ್ಯದ ಪಡಿತರ ಚೀಟಿದಾರರಿಗೆ ಹಾಲಿ ನೀಡುತ್ತಿದ್ದ ಅಕ್ಕಿಯ ಪ್ರಮಾಣಕ್ಕೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆಜಿ ಮಾಸಿಕವಾಗಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಆರಂಭದಲ್ಲಿ ನಿಗದಿತ ಪ್ರಮಾಣದಲ್ಲಿ ಅಕ್ಕಿ ಸಿಗದ ಕಾರಣ ಅನ್ನಭಾಗ್ಯಕ್ಕೆ ಹಿನ್ನಡೆಯಾಯಿತು. ಆದರೂ, ಯೋಜನೆ ಜಾರಿ ಮಾಡಲೇಬೇಕೆಂಬ ಉದ್ದೇಶದೊಂದಿಗೆ ಅಕ್ಕಿ ಬದಲಿಗೆ ಅದರ ಖರೀದಿಗೆ ಮೀಸಲಿಟ್ಟಿದ್ದ ಹಣವನ್ನು 1.28 ಕೋಟಿ ಕುಟುಂಬಗಳ 4.42 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸುವ ಯೋಜನೆಗೆ ಚಾಲನೆ ನೀಡಲಾಯಿತು. 2023ರ ಜುಲೈ 10ರಂದು ಯೋಜನೆಗೆ ಚಾಲನೆ ನೀಡಿ ಸತತ 19 ತಿಂಗಳವರೆಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಯಿತು. ಅದರಂತೆ 2023ರ ಜುಲೈನಿಂದ 2025ರ ಜನವರಿವರೆಗೆ ಮಾಸಿಕ ಸುಮಾರು 660 ಕೋಟಿ ರು.ಗಳಂತೆ ಒಟ್ಟಾರೆ 11,821.19 ಕೋಟಿ ರು. ಹಣ ಪಾವತಿಸಲಾಗಿದೆ.
2025ರ ಫೆಬ್ರವರಿಯಿಂದ ಅನ್ನಭಾಗ್ಯ ಯೋಜನೆ ಅಡಿ ಹಣ ಪಾವತಿಸುವುದನ್ನು ಸ್ಥಗಿತಗೊಳಿಸಿರುವ ಸರ್ಕಾರ, ಪೂರ್ವ ನಿಗದಿಯಂತೆ ಹೆಚ್ಚುವರಿ ಅಕ್ಕಿ ವಿತರಣೆಗೆ ಚಾಲನೆ ನೀಡಲಾಗಿದೆ. ಅದರಂತೆ ಮಾಸಿಕ 4.34 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಅದಕ್ಕೆ 2,202.77 ಕೋಟಿ ರು. ಖರ್ಚು ಮಾಡಲಾಗಿದೆ. ಒಟ್ಟಾರೆ ಅನ್ನಭಾಗ್ಯ ಯೋಜನೆ ಅನುಷ್ಠಾನದಿಂದ ಮೇ ತಿಂಗಳವರೆಗೆ ಒಟ್ಟಾರೆ 14,023 ಕೋಟಿ ರು. ಖರ್ಚು ಮಾಡಲಾಗಿದೆ.
ನಿರುದ್ಯೋಗಿಗಳಿಗೆ ಆದಾಯ ಕಲ್ಪಿಸಿದ ಯುವನಿಧಿ
ರಾಜ್ಯದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಲ್ಪಿಸುವ ಜತೆಗೆ ಪದವಿ ಮತ್ತು ಡಿಪ್ಲೋಮಾ ವ್ಯಾಸಂಗ ಮಾಡಿ ಉದ್ಯೋಗ ದೊರೆಯದ ನಿರುದ್ಯೋಗಿ ಯುವಕರಿಗೆ ಮಾಸಿಕ ನಿಶ್ಚಿತ ಆದಾಯ ಕಲ್ಪಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಯುವನಿಧಿ ಯೋಜನೆ ಅನುಷ್ಠಾನಗೊಳಿಸಿದೆ. ಯೋಜನೆಯಂತೆ 2 ವರ್ಷಗಳವರೆಗೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ರು. ಮತ್ತು ಡಿಪ್ಲೋಮಾ ಪದವೀಧರರಿಗೆ ಮಾಸಿಕ 1,500 ರು. ನೀಡಲಾಗುತ್ತಿದೆ. 2024ರ ಜನವರಿಯಿಂದ ಯೋಜನೆ ಅನುಷ್ಠಾನದಲ್ಲಿದ್ದು, ಈವರೆಗೆ ಮಾಸಿಕ 3.70 ಲಕ್ಷ ಯುವಕರಿಗೆ 376 ಕೋಟಿ ರು. ಯುವನಿಧಿ ಸಹಾಯಧನ ಪಾವತಿಸಲಾಗಿದೆ. ಅಲ್ಲದೆ, 2025-26ನೇ ಸಾಲಿಗೆ ಫಲಾನುಭವಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಸರ್ಕಾರ ಅವರಿಗೂ ಹಣ ಪಾವತಿಸಲಿದೆ.
3 ವರ್ಷ 1.40 ಲಕ್ಷ ಕೋಟಿ ರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳಿಗೆ 2023-24ರಲ್ಲಿ 36 ಸಾವಿರ ಕೋಟಿ ರು., 2024-25ನೇ ಸಾಲಿನಲ್ಲಿ 52 ಸಾವಿರ ಕೋಟಿ ರು. ಖರ್ಚು ಮಾಡಲಾಗಿದೆ. ಎರಡು ವರ್ಷಗಳಲ್ಲಿ ಒಟ್ಟಾರೆ 90 ಸಾವಿರ ಕೋಟಿ ರು.ಗಳಷ್ಟು ಹಣ ವ್ಯಯಿಸಲಾಗಿದೆ. ಹಾಗೆಯೇ, 2025-26ನೇ ಸಾಲಿಗೆ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ತೊಡಕುಂಟಾಗದಂತೆ ತಡೆಯಲು 51 ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ಮೊದಲ ಮೂರು ವರ್ಷದಲ್ಲಿ 1.40 ಲಕ್ಷ ಕೋಟಿ ರು. ಅನ್ನು ಗ್ಯಾರಂಟಿಗಳಿಗಾಗಿಯೇ ಖರ್ಚು ಮಾಡುತ್ತಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡಿದಂತೆ ರಾಜ್ಯದ ಜಿಎಸ್‌ಡಿಪಿಯಲ್ಲೂ ಭಾರೀ ಏರಿಕೆಯಾಗಿದೆ. ಅಲ್ಲದೆ, ಜಿಎಸ್‌ಟಿ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ದೇಶದಲ್ಲಿಯೇ ಜಿಎಸ್‌ಟಿ ಸಂಗ್ರಹ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ತಲುಪುವಂತಾಗಿದ್ದು, ಮುಂಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೇರುವ ಗುರಿ ಹೊಂದಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳು ಪೂರಕವಾಗುವ ಸಾಧ್ಯತೆಗಳಿವೆ.
ಗ್ಯಾರಂಟಿ ಯೋಜನೆಗಳ ವಿವರ:
ಯೋಜನೆ ಫಲಾನುಭವಿಗಳು ಈವರೆಗಿನ ವೆಚ್ಚ
ಶಕ್ತಿ 459 ಕೋಟಿ ಮಹಿಳಾ ಪ್ರಯಾಣಿಕರು 8,815 ಕೋಟಿ ರು.
ಗೃಹ ಲಕ್ಷ್ಮೀ 1.25 ಕೋಟಿ 47,773 ಕೋಟಿ ರು.
ಗೃಹ ಜ್ಯೋತಿ 1.63 ಕೋಟಿ 18,900 ಕೋಟಿ ರು.
ಅನ್ನಭಾಗ್ಯ 4.08 ಕೋಟಿ 14,023 ಕೋಟಿ ರು.
ಯುವನಿಧಿ 3.70 ಲಕ್ಷ 376 ಕೋಟಿ ರು.
ಒಟ್ಟು --- 89,887 ಕೋಟಿ ರು.