ಡಿಕೆಶಿಗೆ ಸುಪ್ರೀಂನಲ್ಲಿ ಹಿನ್ನಡೆ: ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾ

| Published : Jul 16 2024, 01:42 AM IST / Updated: Jul 16 2024, 04:42 AM IST

ಡಿಕೆಶಿಗೆ ಸುಪ್ರೀಂನಲ್ಲಿ ಹಿನ್ನಡೆ: ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಸಿಬಿಐ ದಾಖಲಿಸಿರುವ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ.

 ನವದೆಹಲಿ : ಸಿಬಿಐ ದಾಖಲಿಸಿರುವ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿದ್ದ ಡಿಕೆಶಿ ಅರ್ಜಿಯನ್ನು ಸೋಮವಾರ ನ್ಯಾ.ಬೇಲಾ ಎಂ.ತ್ರಿವೇದಿ ಹಾಗೂ ನ್ಯಾ.ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ವಜಾಗೊಳಿಸಿದೆ.

ಡಿ.ಕೆ.ಶಿವಕುಮಾರ್ ಅವರ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17ಎ ಅಡಿ ಪೂರ್ವಾನುಮತಿ ಪಡೆಯದೆ ನನ್ನ ಕಕ್ಷಿದಾರನ ವಿರುದ್ಧ ತನಿಖೆ ಆರಂಭಿಸಲಾಗಿದೆ (ಸೆಕ್ಷನ್ 17ಎ ಅಂದರೆ ಸೂಕ್ತ ಅಧಿಕಾರಿಯಿಂದ ಪೂರ್ವಾನುಮತಿಯಿಲ್ಲದೆ ಸಾರ್ವಜನಿಕ ಸೇವಕನೊಬ್ಬನನ್ನು ಪೊಲೀಸ್ ಅಧಿಕಾರಿ ವಿಚಾರಣೆ ನಡೆಸುವಂತಿಲ್ಲ, ತನಿಖೆಗೆ ಒಳಪಡಿಸುವಂತಿಲ್ಲ). ಪ್ರಸ್ತುತ ಈ ವಿಚಾರ ಹೈಕೋರ್ಟ್‌ನ ಉನ್ನತ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ. ಹಾಗಾಗಿ ನಮ್ಮ ಕಕ್ಷಿದಾರನನ್ನು ತನಿಖೆಗೆ ಒಳಪಡಿಸುವುದು ಸರಿ ಅಲ್ಲ ಎಂದರು.

ಆಗ ಮಧ್ಯಪ್ರವೇಶಿಸಿದ ನ್ಯಾ.ತ್ರಿವೇದಿ ಅವರು, ವಿಭಜಿತ ತೀರ್ಪು ಇದ್ದಾಗ ಸಿಬಿಐ ಪ್ರಕ್ರಿಯೆಯನ್ನು ವಜಾಗೊಳಿಸುವಂತೆ ಕೋರಿರುವ ಅರ್ಜಿ ಮಾನ್ಯ ಮಾಡಲು ಸಾಧ್ಯ ಇಲ್ಲ ಎಂದರು. ಅಲ್ಲದೆ ಆರೋಪಿ ಶಿವಕುಮಾರ್ ಅವರಿಂದ 41 ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿರುವ ಅಂಶವನ್ನೂ ಪ್ರಸ್ತಾಪಿಸಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಕೀಲ ರೋಹಟಗಿ, ಅದು ಆದಾಯ ತೆರಿಗೆ ಕಾಯ್ದೆ ಅಡಿ ಮಾಡಿರುವ ಆರೋಪ. ಈ ಹಣಕಾಸು ವ್ಯವಹಾರ ಕುರಿತು ಆದಾಯ ತೆರಿಗೆ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಸಿಬಿಐ ಕೂಡ ಎಫ್‌ಐಆರ್‌ ದಾಖಲಿಸಿರುವುದು ಸರಿಯಲ್ಲ ಎಂದರು.

ಇದಕ್ಕೆ ಒಪ್ಪದ ನ್ಯಾಯಪೀಠ, ಇದು ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ ಅಡಿ ದಾಖಲಾಗಿರುವ ಆರೋಪ. ಆದಾಯ ತೆರಿಗೆ ಅಧಿಕಾರಿಗಳು ಪಿಸಿ ಕಾಯ್ದೆ ಅಡಿ ಶಿಕ್ಷಿಸಲು ಸಾಧ್ಯ ಇಲ್ಲ ಎಂದು ಸ್ಪಷ್ಟಪಡಿಸಿತು.

ಏನಿದು ಪ್ರಕರಣ?:  ಡಿ.ಕೆ.ಶಿವಕುಮಾರ್‌ ಅವರ ಫ್ಲ್ಯಾಟ್‌ ಮೇಲೆ 2017ರಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 41 ಲಕ್ಷ ರು. ದೊರೆತಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆ, ನಂತರ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದವು. ಆ ಬಳಿಕ 2019ರಲ್ಲಿ ಡಿ.ಕೆ.ಶಿವಕುಮಾರ್‌ ಅವರ ಬಂಧನವಾಗಿತ್ತು.

2019ರಲ್ಲಿ ಜಾರಿ ನಿರ್ದೇಶನಾಲಯದ ಪತ್ರದ ಆಧಾರದ ಮೇರೆಗೆ ಭ್ರಷ್ಚಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದರು.

ಅಕ್ಟೋಬರ್‌ 2023ರಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಡಿ.ಕೆ.ಶಿವಕುಮಾರ್‌ ಅವರ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್‌ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷದ ನೇತೃತ್ವದ ಹೊಸ ಸರ್ಕಾರ ಡಿ.ಕೆ.ಶಿವಕುಮಾರ್‌ ಅವರ ವಿಚಾರಣೆಗೆ ನೀಡಿದ್ದ ಅನುಮತಿ ಹಿಂಪಡೆಯಿತು. ಆ ಬಳಿಕ ಡಿ.ಕೆ.ಶಿವಕುಮಾರ್‌ ಕೂಡ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದರು.ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಡಿಸೆಂಬರ್‌ನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದು, ಇದೇ ರೀತಿಯ ಅರ್ಜಿ ಸಿಬಿಐನಿಂದಲೂ ಸಲ್ಲಿಕೆಯಾಗಿದೆ. ಈ ಎರಡೂ ಅರ್ಜಿಗಳ ವಿಚಾರಣೆ ನಡೆದಿದ್ದು, ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.