ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕುಗ್ಗದೆ ಪಕ್ಷ ಕಟ್ಟಿದ ಕಟ್ಟಾಳು ಯಡಿಯೂರಪ್ಪ ಜೈಲಿಗೆ ಹೋಗಿ ಒಂದು ವಾರ ಕಳೆಯಿತು. ಅಷ್ಟೊತ್ತಿಗಾಗಲೆ ಅಲ್ಲಿನ ಅವ್ಯವಸ್ಥೆಯ ಅರಿವಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಇದರಿಂದಾಗಿ ಜೈಲಿನ ಅವ್ಯವಸ್ಥೆ ಸರಿದಾರಿಗೆ ಬಂತು.
ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕುಗ್ಗದೆ ಪಕ್ಷ ಕಟ್ಟಿದ ಕಟ್ಟಾಳು ಯಡಿಯೂರಪ್ಪ ಜೈಲಿಗೆ ಹೋಗಿ ಒಂದು ವಾರ ಕಳೆಯಿತು. ಅಷ್ಟೊತ್ತಿಗಾಗಲೆ ಅಲ್ಲಿನ ಅವ್ಯವಸ್ಥೆಯ ಅರಿವಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಇದರಿಂದಾಗಿ ಜೈಲಿನ ಅವ್ಯವಸ್ಥೆ ಸರಿದಾರಿಗೆ ಬಂತು. ಈ ಘಟನೆ ಬಳಿಕ ಕೇವಲ ಶಿಕಾರಿಪುರಕ್ಕೆ ಸೀಮಿತವಾಗಿದ್ದ ಯಡಿಯೂರಪ್ಪ ರಾಜ್ಯವ್ಯಾಪಿ ಗುರುತಿಸಿಕೊಂಡರು. ಸಂಘಟನೆ, ಹೋರಾಟ, ಸಾಧನೆಗಳಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡಿರುವ ಯಡಿಯೂರಪ್ಪ ಅವರಲ್ಲಿ ಸಾಧಿಸಬೇಕೆಂಬ ಛಲ ಇನ್ನೂ ಇದೆ. -ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು.
‘ಈ ಅರ್ಥಪೂರ್ಣ ಮಾತು ಹುಟ್ಟು ಹೋರಾಟಗಾರ ಹಾಗೂ ಕರ್ನಾಟಕ ಕಂಡ ಧೀಮಂತ ನಾಯಕ ಶ್ರೀ ಯಡಿಯೂರಪ್ಪ ಅವರಿಗೆ ಪೂರ್ತಿಯಾಗಿ ಅನ್ವಯಿಸುತ್ತದೆ.
ರಾಜಕೀಯವೆಂದರೆ ಕೇವಲ ಅಧಿಕಾರವಲ್ಲ, ಅದು ನಿರಂತರ ಹೋರಾಟ ಮತ್ತು ಜನರೊಂದಿಗಿನ ಅವಿನಾಭಾವ ಸಂಬಂಧ ಎಂಬುದನ್ನು ಸಾಬೀತುಪಡಿಸಿದವರು ಬಿ.ಎಸ್. ಯಡಿಯೂರಪ್ಪನವರು. ಅವರು ಸಾರ್ವಜನಿಕ ಜೀವನದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವುದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಅದು ಒಂದು ಸುದೀರ್ಘ ಕ್ರಾಂತಿಯ ಪಯಣ. ಇವರನ್ನು ರಾಜಕಾರಣಿ ಎನ್ನುವುದಕ್ಕಿಂತ ಜನಪರ ಚಿಂತನೆಗಳಿರೋ ಅಪ್ಪಟ ಹೋರಾಟಗಾರ ಎನ್ನುವುದು ಸೂಕ್ತ. ಧರಣಿ, ಸತ್ಯಾಗ್ರಹದಿಂದ ಹಿಡಿದು ಭಾರಿ ಬಹಿರಂಗ ಸಭೆಯವರೆಗೆ, ಜಿಲ್ಲಾಧಿಕಾರಿ ಕಚೇರಿಯಿಂದ ವಿಧಾನಸೌಧದವರೆಗೆ, ಮುತ್ತಿಗೆಯಿಂದ ಹಿಡಿದು ರಸ್ತೆತಡೆ, ರೈಲು ತಡೆ, ಮೆಕ್ಕೆಜೋಳದಿಂದ ಹಿಡಿದು ನಕಲಿ ಛಾಪಾ ಕಾಗದದವರೆಗೆ, ಕೆಪಿಟಿಸಿಎಲ್ ಮುತ್ತಿಗೆಯಿಂದ ಹಿಡಿದು ಬಗರ್ ಹುಕುಂ ಸಾಗುವಳಿದಾರರಿಗೆ, ಬಡರೈತನಿಗೆ ವಿಮೆ ಕೊಡಿಸುವವರೆಗೆ. ಹೀಗೆ ಸಾಲು, ಸಾಲು ಹೋರಾಟಗಳು ಇವರ ದಾಖಲೆಯಲ್ಲಿವೆ. ಇದು ಕೇವಲ ದಾಖಲೆಗಾಗಿ ನಡೆಸಿದ ಹೋರಾಟವಲ್ಲ. ಬದಲಾಗಿ ನಮ್ಮನ್ನಾಳುವ ಮಂದಿ ಎಚ್ಚರ ತಪ್ಪಿದಾಗ, ಹಾದಿ ತೊರೆದಾಗ, ಅವರನ್ನು ಸದಾ ಎಚ್ಚರಿಸುತ್ತಾ ಸರಿದಾರಿಗೆ ತಂದ ಸಾಧನೆ ಇದಾಗಿದೆ.
ಹಗಲು ರಾತ್ರಿ ಧರಣಿ ಪ್ರವರ್ತಕ ಯಡಿಯೂರಪ್ಪ: ಹೀಗಾಗಿ ಯಡಿಯೂರಪ್ಪ ಯಾವುದೇ ಚಳುವಳಿಗೆ ಧುಮುಕಿದರೂ ಆಡಳಿತ ಪಕ್ಷ ಥರಗುಟ್ಟುತ್ತದೆ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಅವರ ಚಳುವಳಿಗೊಂದು ಮೌಲ್ಯ ಇರುವುದು. ಎಂಥಹ ಪ್ರತಿಕೂಲ ಪರಿಸ್ಥಿತಿಯನ್ನೂ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವ ಚಾಣಕ್ಷ್ಯ ವ್ಯಕ್ತಿಯ ಮನೋಭಾವ. ಅದೇ ರೀತಿಯಲ್ಲಿ ತಮ್ಮ ಜೀವನದಲ್ಲಿ ತಲೆದೋರಿದ ಪ್ರತಿಯೊಂದು ಕಷ್ಟಕಾರ್ಪಣ್ಯಗಳನ್ನೂ ಜೀರ್ಣಿಸಿಕೊಂಡು ಅವುಗಳನ್ನು ಜೀವನದ ಏಳ್ಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿನ ಶಿಖರಕ್ಕೆ ಏರಿದರು.
1975ರ ಹೊತ್ತಿಗೆ ಅದೇ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಅಧ್ಯಕ್ಷರೂ ಆಗುತ್ತಾರೆ. ಶಿಕಾರಿಪುರದಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ. ಯಾವುದಕ್ಕೂ ಜಗ್ಗದ-ಬಗ್ಗದ ಛಾತಿಯ ಯಡಿಯೂರಪ್ಪ ಮತ್ತಷ್ಟು ಪ್ರಖರ ಹೋರಾಟಗಾರರಾಗಿ ಹೊರಹೊಮ್ಮುತ್ತಾರೆ. 1977ರ ಎಮರ್ಜೆನ್ಸಿಯಲ್ಲಿ ಸೆರೆಮನೆ ವಾಸ. ಜನತಾರಂಗದೊಳಗೆ ವಿಲೀನವಾಗಿದ್ದ ಜನಸಂಘ 1980ರಲ್ಲಿ ಬಿಜೆಪಿಯಾಗಿ ರೂಪುಗೊಂಡ ನಂತರ 1983ರಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಹಾಗೂ ಆ ನಂತರದ ಮೂರೇ ವರ್ಷಗಳಲ್ಲಿ ರಾಜ್ಯಾಧ್ಯಕ್ಷರೂ ಆಗಿ ಬಿಡುತ್ತಾರೆ.
ಹೀಗೆ ಹಿಂದಿರುಗಿ ನೋಡದ ರಾಜಕೀಯ ಪಯಣದಲ್ಲಿ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆಗಳಲ್ಲಿ ಸದಸ್ಯರಾಗಿ, ಮೂರು ಸಲ ವಿರೋಧ ಪಕ್ಷದ ನಾಯಕರಾಗುತ್ತಾರೆ. ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗುತ್ತಾರೆ. ತುರ್ತು ಪರಿಸ್ಥಿತಿ ಸಂದರ್ಭ ಜೈಲಿನಲ್ಲಿದ್ದಾಗಲೂ ಅವರು ತಮ್ಮ ಚಳುವಳಿ ಬಿಡಲಿಲ್ಲ. ಜೈಲಿನಲ್ಲಿ ಕೊಡುತ್ತಿದ್ದ ಚಪಾತಿ ಮತ್ತು ಅನ್ನದಲ್ಲಿ ಹುಳು ಕಲ್ಲುಗಳು, ಸರಿಯಾಗಿ ಬೇಯಿಸದಿರುವುದರಿಂದ ಅವರು ರೋಸಿ ಹೋಗಿದ್ದರು. ಕೈದಿಗಳು ಕಣ್ಣು ಮುಚ್ಚಿಕೊಂಡು ಅದನ್ನೇ ತಿನ್ನುತ್ತಿದ್ದರು. ಯಡಿಯೂರಪ್ಪ ಜೈಲಿಗೆ ಹೋಗಿ ಒಂದು ವಾರ ಕಳೆಯಿತು. ಅಷ್ಟೊತ್ತಿಗಾಗಲೆ ಅಲ್ಲಿನ ಅವ್ಯವಸ್ಥೆಯ ಅರಿವಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಇದರಿಂದಾಗಿ ಜೈಲಿನ ಅವ್ಯವಸ್ಥೆ ಸರಿದಾರಿಗೆ ಬಂತು.
ಈ ಘಟನೆ ಬಳಿಕ ಕೇವಲ ಶಿಕಾರಿಪುರಕ್ಕೆ ಸೀಮಿತವಾಗಿದ್ದ ಯಡಿಯೂರಪ್ಪ ರಾಜ್ಯವ್ಯಾಪಿ ಗುರುತಿಸಿಕೊಂಡರು. ಸಂಘಟನೆ, ಹೋರಾಟ, ಸಾಧನೆಗಳಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡಿರುವ ಯಡಿಯೂರಪ್ಪ ಅವರಲ್ಲಿ ಸಾಧಿಸಬೇಕೆಂಬ ಛಲ ಇನ್ನೂ ಇದೆ. 83ರ ಇಳಿವಯಸ್ಸಿನಲ್ಲೂ 20ರ ಯುವಕನಂತೆ ಕೆಲಸ ಮಾಡುವ, ಮುಂಜಾನೆ ಬೇಗನೆ ಎದ್ದು ವಾಕಿಂಗ್ ಮಾಡಿ ಬೆಳಗ್ಗೆ 8ಕ್ಕೆ ಮುನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರ ಗುಣ ಇತರರಿಗೆ ಅನುಕರಣೀಯ. ತಾನೂ ಬೆಳೆದು, ತನ್ನವರನ್ನೂ ಬೆಳೆಸುವ ತನ್ಮೂಲಕ ಸಮಾಜವನ್ನು ಬಲಪಡಿಸುವ ಅವರ ಆಶಯ ಇತರರಿಗೆ ಮಾದರಿ. ಹಲವಾರು ಹೋರಾಟಗಳನ್ನು ಕಂಡಿರುವ ಧೀಮಂತ ನಾಯಕ ಯಡಿಯೂರಪ್ಪ ಶಿಸ್ತಿನ ಸಿಪಾಯಿಯಂತೆ, ದಣಿವರಿಯದ ನಾಯಕನಂತೆ ಪಕ್ಷಕ್ಕೆ ದುಡಿದಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ದಾಸಶ್ರೇಷ್ಠ ಕನಕದಾಸರ ಜನ್ಮದಿನವನ್ನು ಸರ್ಕಾರಿ ಹಬ್ಬವನ್ನಾಗಿ ಆಚರಿಸಲು ಆದೇಶಿಸಿ, ಅಂದು ಸಾರ್ವಜನಿಕ ರಜೆಯನ್ನು ಘೋಷಿಸಿದರಲ್ಲದೇ, ರಾಮಾಯಣ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸಹ ಸರ್ಕಾರಿ ಮಟ್ಟದಲ್ಲಿ ಆಚರಿಸಲು ಮತ್ತು ಸಾರ್ವಜನಿಕ ರಜೆ ನೀಡಲು ಯಡಿಯೂರಪ್ಪ ಅವರ ಸರ್ಕಾರವೇ ಆದೇಶ ಹೊರಡಿಸಿತ್ತು. ಹಿಂದೂ ಧರ್ಮ ಮತ್ತು ಸ್ವರಾಜ್ಯದ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಯನ್ನು ಸ್ಮರಿಸಲು ಕರ್ನಾಟಕದಲ್ಲಿ ಸರ್ಕಾರಿ ಮಟ್ಟದ ಜಯಂತಿ ಆಚರಣೆಗೆ ಯಡಿಯೂರಪ್ಪ ಅವರು ಚಾಲನೆ ನೀಡಿದ್ದರು. ಶೂನ್ಯದಿಂದ ಸೃಷ್ಟಿಸಿದ ಸಾಮ್ರಾಜ್ಯ:ಯಡಿಯೂರಪ್ಪನವರು ಪಕ್ಷ ಕಟ್ಟಲು ಜಾಥಾ, ಕಾಲ್ನಡಿಗೆ, ಪಾದಯಾತ್ರೆ, ಸೈಕಲ್ ಮೇಲೆ ಊರೂರು ಸುತ್ತಿದ ದಿನಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಅಂದು ಅವರು ಬಿತ್ತಿದ ಸಣ್ಣ ಸಸಿ ಇಂದು ನಾಡಿನಲ್ಲಿ ಬಿಜೆಪಿಯೆಂಬ ಹೆಮ್ಮರವಾಗಿ ಬೆಳೆದು ನಿಂತಿದೆ. ಬಿಜೆಪಿಯನ್ನು ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವ ಮೂಲಕ ಅವರು ಇತಿಹಾಸ ನಿರ್ಮಿಸಿದರು.
ಧೀಮಂತ ಹೋರಾಟಗಾರ: ಅವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಿಂದ ಹಿಡಿದು ಅಯೋಧ್ಯೆ ರಾಮ ಮಂದಿರ ಚಳವಳಿಯವರೆಗೆ ಅವರ ಪಾತ್ರ ದೊಡ್ಡದು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಕರ್ತರಿಗೆ ಧೈರ್ಯ ತುಂಬುವ ಹೋರಾಟಕ್ಕಿಳಿಯುವ ಅವರ ಗುಣ ಅನನ್ಯ.
ಮಾರ್ಗದರ್ಶಕ ಶಕ್ತಿ: ‘ಶೀಘ್ರ ಕೋಪಿ ಆದರೆ ದೀರ್ಘ ದ್ವೇಷಿಯಂತೂ ಅಲ್ಲ’ ಎಂಬ ಮಾತು ಯಡಿಯೂರಪ್ಪನವರಿಗೆ ಅನ್ವಯಿಸುತ್ತದೆ. ಒಮ್ಮೊಮ್ಮೆ ಭಿನ್ನಾಭಿಪ್ರಾಯಗಳು ಮೂಡಿದರೂ, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಮರೆತು ಒಗ್ಗೂಡಿ ಕೆಲಸ ಮಾಡುವ ಅವರ ದೊಡ್ಡಗುಣ ನಮಗೆಲ್ಲರಿಗೂ ಆದರ್ಶ. ಕರ್ನಾಟಕದ ರಾಜಕೀಯ ಭೂಪಟದಲ್ಲಿ ಬಿ.ಎಸ್.ಯಡಿಯೂರಪ್ಪ ಎಂಬ ಹೆಸರು ಒಂದು ಶಕ್ತಿ. ಶೂನ್ಯದಿಂದ ಅಧಿಕಾರದ ಶಿಖರದವರೆಗೆ ಅವರು ನಡೆದು ಬಂದ ಹಾದಿ ಅಸಾಧಾರಣವಾದುದು. ಶಿಕಾರಿಪುರದ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಯಾನ ಆರಂಭಿಸಿ, ಇಂದು ದೇಶದ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.
ಉದ್ಯಮಃ ಸಾಹಸಂ ಧೈಯರ್ಂ ಬುದ್ಧಿಃ ಶಕ್ತಿಃ ಪರಾಕ್ರಮಃ
ಷಡೇತೇ ಯತ್ರ ವತರ್ಂತೇ ತತ್ರ ದೇವಃ ಸಹಾಯಕೃತ್ ॥ (ಉದ್ಯೋಗ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ, ಈ ಆರು ಗುಣಗಳು ಯಾರಲ್ಲಿ ಇರುತ್ತವೆಯೋ ಅವರಿಗೆ ದೈವವು ಸಹಾಯ ಮಾಡುತ್ತದೆ.)
ಯಡಿಯೂರಪ್ಪನವರು ಹಳ್ಳಿ ಹಳ್ಳಿಗಳನ್ನು ಸುತ್ತಿ ಪಕ್ಷ ಸಂಘಟಿಸಿದ ರೀತಿ ಅವರ ‘ಉದ್ಯಮ’ ಮತ್ತು ‘ಸಾಹಸ’ಕ್ಕೆ ಸಾಕ್ಷಿ. 2021ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ, ಅವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಸಂಸದೀಯ ಮಂಡಳಿಗೆ (Parliamentary Board) ನೇಮಕ ಮಾಡಲಾಯಿತು. ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಆಧಾರವಾಗಿರುವ ‘ಧ್ರುವತಾರೆ’ ಎಂದೇ ಪರಿಗಣಿಸುತ್ತಾರೆ. ಒಟ್ಟಾರೆಯಾಗಿ, ಯಡಿಯೂರಪ್ಪ ಅವರು ಕೇವಲ ಒಬ್ಬ ಪ್ರಾದೇಶಿಕ ನಾಯಕರಾಗಿ ಉಳಿಯದೆ, ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಅಡಿಪಾಯ ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಅಸ್ಥಿತ್ವ ಬೇರೂರುವುದೇ ಎಂಬ ಪ್ರಶ್ನೆ ಇದ್ದ ಸಂದರ್ಭದಲ್ಲಿ ಹೋರಾಟ ಹಾಗೂ ರಾಜಕೀಯ ಚಾಣಕ್ಷರೇ ಆಗಿದ್ದ ಯಡಿಯೂರಪ್ಪ ಅವರ ಸಂಘಟಿತ ದುಡಿಮೆ ಇಲ್ಲದಿದ್ದರೆ ಇಂದು ಪಕ್ಷ ರಾಜ್ಯದಲ್ಲಿ ಉನ್ನತಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂಬುದು ಸರ್ವವಿದಿತ. ಮುಖಂಡರನ್ನು ಬೆಳೆಸಿದ ಬಿಎಸ್‌ವೈ: ಕರ್ನಾಟಕದಲ್ಲಿ ಮೊದಲು ಕಾಂಗ್ರೆಸ್ ಪಾರಮ್ಯವಿದ್ದರೆ ಎಂಬತ್ತರ ದಶಕದಿಂದ ಜನತಾ ಪರಿವಾರದ ಇನ್ನಿಂಗ್ಸ್ ಪ್ರಾರಂಭವಾಗಿತ್ತು. ಇದರ ಮಧ್ಯೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ನೆಲೆ ಕಲ್ಪಿಸಲು ಶ್ರಮ ವಹಿಸಿದವರು ಬಿ.ಎಸ್.ಯಡಿಯೂರಪ್ಪ. ಕರ್ನಾಟಕ ಬಿಜೆಪಿಗೆ ಅಂದಿನಿಂದ ಇಂದಿನ ವರೆಗೂ ಯಡಿಯೂರಪ್ಪ ಮಹಾರಥಿ. ಅವರ ಪರಿಶ್ರಮದ ಫಲವಾಗಿ ಹಲವು ಮುಖಂಡರು ಬೆಳೆದಿದ್ದಾರೆ. ಅವರನ್ನೆಲ್ಲ ಮುಂಬೆಳಕಿಗೆ ತಂದು ತಯಾರು ಮಾಡಿದವರು ಯಡಿಯೂರಪ್ಪ. ಹಾಗಾಗಿ ಕರ್ನಾಟಕ ಬಿಜೆಪಿ ಮತ್ತು ಬಿ.ಎಸ್.ವೈ ಎಂಬ ಹೆಸರುಗಳು ಆವಿನಾಭಾವದ ನಿದರ್ಶನ.
ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿ ದಿಲ್ಲಿಗೆ ಕಳುಹಿಸಿ ಕೊಡುವುದರಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. 2019ರ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ರಾಜ್ಯ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿರುವುದು ಅಭೂತಪೂರ್ವ ಸಾಧನೆ. ಬಿಜೆಪಿ ಈ ಯಶೋಗಾಥೆಯಲ್ಲಿ ಯಡಿಯೂರಪ್ಪ ಅವರ ಯೋಗದಾನ ಬಹಳ ದೊಡ್ಡದು. ಸುದೀರ್ಘ ರಾಜಕೀಯ ಹೋರಾಟದಲ್ಲಿ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲೇ ಹೆಚ್ಚು ಸಮಯವಿದ್ದರು ಎಂದರೆ ತಪ್ಪಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಲೋಕಸಭೆಗೆ ಹೆಚ್ಚಿನ ಸಂಸದರನ್ನು ಕಳುಹಿಸುವ ದಿಸೆಯಲ್ಲಿ ಸಂಘಟನೆ ಕೈಗೊಂಡಿದ್ದು ಸಣ್ಣ ಸಾಧನೆಯಲ್ಲ. ಈಗಲೂ ಪಕ್ಷಕ್ಕಾಗಿ ಅವರು ಅವಿರತವಾಗಿ ದುಡಿಯುತ್ತಿದ್ದಾರೆ. ಯಡಿಯೂರಪ್ಪ ಅವರ ಈ ಕಾರ್ಯ ನಿಷ್ಠೆ ಕೆಳ ಹಂತದ ಕಾರ್ಯಕರ್ತನಿಂದ ಉನ್ನತ ಮಟ್ಟದ ನಾಯಕರವರೆಗೂ ಮಾದರಿಯಾಗಿದೆ ಎಂದು ಧಾರಾಳವಾಗಿ ಹೇಳಬಹುದು.
ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಮತ್ತು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಅವರು ಈ ಶ್ಲೋಕದ ಆಶಯವನ್ನು ಜಾರಿಗೆ ತಂದರು. ಭಗವದ್ಗೀತೆಯಲ್ಲಿ ಹೇಳಿದಂತೆ...
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥
(ಶ್ರೇಷ್ಠ ವ್ಯಕ್ತಿಯು ಏನನ್ನು ಆಚರಿಸುತ್ತಾನೋ, ಇತರರು ಅದನ್ನೇ ಅನುಸರಿಸುತ್ತಾರೆ. ಅವನು ಏನನ್ನು ಪ್ರಮಾಣವೆಂದು ಒಪ್ಪುತ್ತಾನೋ, ಲೋಕವು ಅದನ್ನೇ ಪಾಲಿಸುತ್ತದೆ.) ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವವರು ತಮ್ಮ ನಡವಳಿಕೆಯ ಮೂಲಕ ಸಾಮಾನ್ಯ ಜನರಿಗೆ ಮಾದರಿಯಾಗುತ್ತಾರೆ. ಇಂದು ಕರ್ನಾಟಕ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಯಡಿಯೂರಪ್ಪನವರೇ ಅತಿ ದೊಡ್ಡ ಪ್ರೇರಣೆ. ಯಡಿಯೂರಪ್ಪನವರ ಜೀವನವು ‘ಸೇವೆಯೇ ಪರಮೋಚ್ಚ’ ಎಂಬ ತತ್ವಕ್ಕೆ ಸಾಕ್ಷಿಯಾಗಿದೆ. ಅವರ ಅನುಭವ ಮತ್ತು ಮಾರ್ಗದರ್ಶನ ಮುಂದಿನ ಪೀಳಿಗೆಗೂ ಪಕ್ಷಕ್ಕೆ ದಾರಿದೀಪವಾಗಿದೆ. ಈ ಐತಿಹಾಸಿಕ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಮತ್ತು ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ಈ ಕ್ಷಣ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸೋಣ.
ಚಿತ್ರದುರ್ಗದ ಈ ‘ಅಭಿಮಾನೋತ್ಸವ’ ಕೇವಲ ಒಂದು ಸಮಾವೇಶವಲ್ಲ, ಇದು ಐದು ದಶಕಗಳ ಕಾಲ ನಾಡಿಗಾಗಿ ಮಿಡಿದ ಹೃದಯಕ್ಕೆ ಜನತೆ ಸಲ್ಲಿಸುತ್ತಿರುವ ಗೌರವ ಸಮರ್ಪಣೆ. ಯಡಿಯೂರಪ್ಪನವರು ಹಾಕಿಕೊಟ್ಟ ಜನಸೇವೆಯ ಹಾದಿ ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ದಾರಿದೀಪ.
