ಸಾರಾಂಶ
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರಿನ ಕುಂಬಾರಕೊಪ್ಪಲಿನ ದೊಡ್ಡತಮ್ಮಯ್ಯ ಮಾದೇಗೌಡರು ‘ಮನೆ’ ಮಾದೇಗೌಡ ಎಂದೇ ಖ್ಯಾತರಾದವರು.
ಮೈಸೂರನ್ನು ಆಳಿದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಸ್ಥಾಪಿಸಿದ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ) ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ (ಎಂಡಿಎ) ಪರಿವರ್ತನೆಯಾಗಿದೆ.
ಎಂಭತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಇದ್ದಾಗ ಡಿ. ಮಾದೇಗೌಡರನ್ನು ಸಿಐಟಿಬಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತು ಅಧ್ಯಕ್ಷರಾಗಿದ್ದಾಗ ಪ್ರತಿಯೊಬ್ಬರಿಗೂ ‘ತಲೆಯ ಮೇಲೊಂದು ಸೂರು’ ಕೊಡಬೇಕು ಎಂಬ ಉದ್ದೇಶದಿಂದ ‘ಆಶಾಮಂದಿರ’ ಯೋಜನೆ ರೂಪಿಸಿ, ಎಲ್ಲಾ ವರ್ಗದ ಜನರ ಮನೆ ಮನೆ ಬಾಗಿಲಿಗೆ ತೆರಳಿ, ಮನೆ ಹಾಗೂ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದರು. ಇದು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಅಧ್ಯಕ್ಷರಾಗಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ, ‘ಹುಡ್ಕೋ’ ಪ್ರಕಟಿಸಿದ ಪುಸ್ತಕದ ರಕ್ಷಾಪುಟದಲ್ಲಿ ‘ಮನೆ’ ಎಂಬ ಕನ್ನಡ ಪದ ಬಳಸಿ, ಗೌರವಿಸಲಾಗಿತ್ತು.
ದಟ್ಟಗಳ್ಳಿ- ರಾಮಕೃಷ್ಣನಗರ, ಬೋಗಾದಿ- ಶಾರದಾದೇವಿನಗರ, ಶ್ರೀರಾಂಪುರ- ವಿವೇಕಾನಂದ ನಗರ, ಚಿಕ್ಕಹರದನಹಳ್ಳಿ- ಅರವಿಂದನಗರ, ಹೆಬ್ಬಾಳು- ಲಕ್ಷ್ಮೀಕಾಂತ ನಗರ, ಸುಬ್ರಮಣ್ಯ ನಗರ, ಹೆಬ್ಬಾಳು 1,2ನೇ ಹಂತಗಳು, ದೇವನೂರು- ರಾಜೀವ ನಗರ ನಿರ್ಮಾಣಕ್ಕೆ ಕಾರಣಕರ್ತರಾದ ಮಾದೇಗೌಡರು ಸಾತಗಳ್ಳಿ, ಕ್ಯಾತಮಾರನಹಳ್ಳಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದರು. ಹುಡ್ಕೋ ಯೋಜನೆ, ಸ್ವಂತ ಮನೆ ಹೊಂದಿ ಯೋಜನೆ, ನಿಮ್ಮ ಮನೆ ನೀವೆ ಕಟ್ಟಿ ಯೋಜನೆಯ ರೂವಾರಿಗಳು. ಅದೇ ರೀತಿ ಕುವೆಂಪುನಗರ, ಸಿದ್ದಾರ್ಥನಗರದ ರಸ್ತೆ. ವೃತ್ತ, ಉದ್ಯಾನಗಳಿಗೆ ಅರ್ಥಪೂರ್ಣ ಹೆಸರುಗಳ ನಾಮಕರಣಕ್ಕೆ ಕಾರಣಕರ್ತರು.
ಈ ವಸತಿ ಕ್ರಾಂತಿಯ ಅನುಷ್ಠಾನದಲ್ಲಿ ಎದುರಾದ ಎಡರುತೊಡರುಗಳು, ಯೋಜನೆಯ ಕಾರ್ಯಚಟುವಟಿಕೆಗಳು, ವಸತಿರಹಿತರಿಗೆ ಸಿಕ್ಕ ಪ್ರಯೋಜನ, ಭೂಮಾಲೀಕರಿಗೆ ದೊರೆತ ಸವಲತ್ತು, ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಮೊದಲಾದ ಕ್ಷೇತ್ರಗಳ ಮೇಲೆ ಆದ ಬದಲಾವಣೆಗಳನ್ನು ಮಾದೇಗೌಡರು ಸೂರಿಲ್ಲದವರಿಗೆ ಸೂರು- ಆಶಾಮಂದಿರ ಕೃತಿಯಲ್ಲಿಯೂ ದಾಖಲಿಸಿದ್ದಾರೆ.
ಆಗಿಬಾರದ ಚುನಾವಣಾ ರಾಜಕಾರಣ:
1942ರಲ್ಲಿ ಜನಿಸಿದ ಮಾದೇಗೌಡರು ಬಿ.ಎ. ಬಿ.ಎಲ್ ಪದವೀಧರರು. ಇಂತಹ ಮಾದೇಗೌಡರಿಗೆ ಏಕೋ ಏನೋ ನೇರ ಚುನಾವಣೆ ಆಗಿಬರಲೇ ಇಲ್ಲ. ರಾಜಕೀಯವಾಗಿ ಸಾಕಷ್ಟು ಏಳುಬೀಳು ಕಂಡವರು.1983 ರಲ್ಲಿ ನಡೆದ ನಗರಪಾಲಿಕೆಯ ಪ್ರಥಮ ಚುನಾವಣೆಯಲ್ಲಿ ಕುಂಬಾರ ಕೊಪ್ಪಲು ವಾರ್ಡಿನಿಂದ ಸ್ಪರ್ಧಿಸಿದ್ದರು. ಗೆದ್ದರೇ ಅವರೇ ನಗರದ ಪ್ರಪ್ರಥಮ ಮೇಯರ್ ಎಂಬ ವಾತಾವರಣ ಇತ್ತು. ಆದರೆ, ಸ್ವಪಕ್ಷೀಯರೇ ಕಾಲೆಳೆದಿದ್ದರಿಂದ ಮಾದೇಗೌಡರು ಸೋತರು. ಆದರೆ ಜನತಾಪಕ್ಷ ಸರ್ಕಾರ ಅವರನ್ನು 1986 ರಲ್ಲಿ ಅವರನ್ನು ಸಿಐಟಿಬಿ ಅಧ್ಯಕ್ಷರನ್ನಾಗಿ ನೇಮಿಸಿ, ಸಾರ್ವಜನಿಕರ ಸೇವೆಗೆ ಅವಕಾಶ ಕಲ್ಪಿಸಿತು. ಇದನ್ನು ಮಾದೇಗೌಡರು ಸದುಪಯೋಗಪಡಿಸಿಕೊಂಡು ಹೆಸರು ಮಾಡಿದರು. 1989 ರ ವೇಳೆಗೆ ಜನತಾಪಕ್ಷವು ಜನತಾದಳ ಹಾಗೂ ಜನತಾದಳ ಇಬ್ಭಾಗವಾಯಿತು. ಮಾದೇಗೌಡರು ಎಚ್.ಡಿ.ದೇವೇಗೌಡರ ಜೊತೆ ಗುರುತಿಸಿಕೊಂಡರು.
1989 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ನೇತೃತ್ವದ ಸಮಾಜವಾದಿ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪಧಿಸಿ, ಕಾಂಗ್ರೆಸ್ಸಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಎದುರು ಸೋತರು. 1991 ರಲ್ಲಿ ಎಚ್.ಡಿ. ದೇವೇಗೌಡರು ಕರ್ನಾಟಕ ವಿಕಾಸ ವೇದಿಕೆಯಡಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ನಿಜಲಿಂಗಪ್ಪ, ಸಿದ್ದಯ್ಯ ಪುರಾಣಿಕ್ ಮೊದಲಾದವರ ಸಮ್ಮುಖದಲ್ಲಿ ಕಾವೇರಿ ಮಧ್ಯಂತರ ತೀರ್ಪಿನ ವಿರುದ್ಧ ನಡೆಸಿದ ಬೃಹತ್ ಹೋರಾಟದ ಹಿಂದಿನ ರೂವಾರಿ ಡಿ. ಮಾದೇಗೌಡರಾಗಿದ್ದರು.
ಬಿಜೆಪಿ ಬೆಂಬಲ ಹಿಂತೆಗೆತದಿಂದ ವಿ.ಪಿ. ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಉರುಳಿ, 1991 ರಲ್ಲಿ ಮಧ್ಯಂತರ ಚುನಾವಣೆ ಎದುದಾದಾಗ ಮೈಸೂರು ಲೋಕಸಭಾ ಕ್ಷೇತ್ರದಿಂದ ಸಜಪ- ಜನತಾದಳ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ಸಿನ ಚಂದ್ರಪ್ರಭ ಅರಸು ಹಾಗೂ ಬಿಜೆಪಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎದರು ಸೋತರು. 1994 ರಲ್ಲಿ ಚಾಮರಾಜ ಕ್ಷೇತ್ರದಿಂದ ಜನತಾದಳದ ಟಿಕೆಟ್ ಕೇಳಿದರು. ಸಿಗದಿದ್ದಾಗ ಅಧಿಕೃತ ಅಭ.ರ್ಥಿ ಸಿ. ಬಸವೇಗೌಡರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪಽಸಿ, ಸೋತರು. ಬಸವೇಗೌಡ- ಮಾದೇಗೌಡ ಈ ಇಬ್ಬರ ಜಗಳದಲ್ಲಿ ಆಗ ಲಾಭ ಮಾಡಿಕೊಂಡ ಮೂರನೇ ವ್ಯಕ್ತಿ ಬಿಜೆಪಿಯ ಎಚ್.ಎಸ್. ಶಂಕರಲಿಂಗೇಗೌಡರು.
ಎರಡು ವರ್ಷ ಮೌನವಾಗಿದ್ದ ಮಾದೇಗೌಡರು ನಂತರ ಕಾಂಗ್ರೆಸ್ ಸೇರಿದರು. 1999 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಹೀಗಾಗಿ ಮಾದೇಗೌಡರು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾದರು. 2002 ರಲ್ಲಿ ನರಸಿಂಹರಾಜ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ತನ್ವೀರ್ ಸೇಠ್ ಜಯಗಳಿಸಿದರು. ಆಗ ಡಿ. ಮಾದೇಗೌಡರಿಗೆ ಎಸ್.ಎಂ. ಕೃಷ್ಣ ಅವರು ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದರು.
ಮಾದೇಗೌಡರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಎಸ್.ಎ. ಕೃಷ್ಣ ಅವರನ್ನು ಹಿಂಬಾಲಿಸಿ, ಬಿಜೆಪಿ ಸೇರಿದರು.
ಈಗಲೂ ವಾರ್ಡ್ ಕಾರ್ಪೋರೇಷನ್ ಸಂಘಟನೆ ಮೂಲಕ ಕುಂಬಾರಕೊಪ್ಪಲಿನಲ್ಲಿ ತ್ಯಾಜ್ಯ ಶುದ್ಧೀಕರಣ ಘಟಕ ನಡೆಸುತ್ತಾ, ಯೂತ್ ಹಾಸ್ಟೆಲ್ ಮತ್ತಿತರ ಕಡೆ ಸಕ್ರಿಯರಾಗಿದ್ದಾರೆ. ಅವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರದ ರಾಜ್ಯೋತ್ಸವ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಸಾಧಕರಿಗೆ ಮೈಸೂರು ಜಿಲ್ಲಾಡಳಿತ ನೀಡುವ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಚುಂಚಶ್ರೀ ಮತ್ತಿತರ ಪ್ರಶಸ್ತಿಗಳು ಸಂದಿವೆ.