ಭಾದ್ರಪದ ಶುದ್ಧ ಚೌತಿ ಅಂಗವಾಗಿ ರಾಜ್ಯದೆಲ್ಲೆಡೆ ಗಣೇಶ ಚೌತಿಯ ಸಂಭ್ರಮ :ವಿವಿಧ ಅವತಾರಗಳಲ್ಲಿ ಬಂದ ‘ವಿಘ್ನನಿವಾರಕ’

| Published : Sep 07 2024, 01:37 AM IST / Updated: Sep 07 2024, 04:48 AM IST

ಸಾರಾಂಶ

ಭಾದ್ರಪದ ಶುದ್ಧ ಚೌತಿ ಅಂಗವಾಗಿ ರಾಜ್ಯದೆಲ್ಲೆಡೆ ಗಣೇಶ ಚೌತಿಯ ಸಂಭ್ರಮ ಮನೆ ಮಾಡಿದೆ. ವಿಘ್ನನಿವಾರಕ ವಿನಾಯಕನನ್ನು ಭಕ್ತರು ಸಡಗರ, ಸಂಭ್ರಮಗಳಿಂದ ಪೂಜಿಸುವ ಹಬ್ಬವಿದಾಗಿದ್ದು, ಹಬ್ಬಕ್ಕೆ ಮೆರುಗು ನೀಡುವ ವಿವಿಧ ರೂಪದ, ವಿವಿಧ ಮಾದರಿಯ ಗಣೇಶ ಮೂರ್ತಿಗಳು ಪೂಜೆಗೆ ಸಿದ್ಧ 

ಭಾದ್ರಪದ ಶುದ್ಧ ಚೌತಿ ಅಂಗವಾಗಿ ರಾಜ್ಯದೆಲ್ಲೆಡೆ ಗಣೇಶ ಚೌತಿಯ ಸಂಭ್ರಮ ಮನೆ ಮಾಡಿದೆ. ವಿಘ್ನನಿವಾರಕ ವಿನಾಯಕನನ್ನು ಭಕ್ತರು ಸಡಗರ, ಸಂಭ್ರಮಗಳಿಂದ ಪೂಜಿಸುವ ಹಬ್ಬವಿದಾಗಿದ್ದು, ಹಬ್ಬಕ್ಕೆ ಮೆರುಗು ನೀಡುವ ವಿವಿಧ ರೂಪದ, ವಿವಿಧ ಮಾದರಿಯ ಗಣೇಶ ಮೂರ್ತಿಗಳು ಪೂಜೆಗೆ ಸಿದ್ಧಗೊಂಡಿದ್ದು ಭಕ್ತರ ಮನಸೂರೆಗೊಳ್ಳುತ್ತಿವೆ. ರಾಜ್ಯದ ವಿವಿಧೆಡೆ ರೂಪುಗೊಂಡಿರುವ ವಿವಿಧ ಮಾದರಿಯ ಗಣೇಶ ಮೂರ್ತಿಗಳ ಸಣ್ಣ ಝಲಕ್‌ ಇಲ್ಲಿದೆ.

1.ಛೋಟಾ ಮುಂಬೈನಲ್ಲೀಗ ‘ಹುಬ್ಬಳ್ಳಿ ಕಾ ರಾಜಾ’ ಗಣಪತಿಯ ವೈಭವ

‘ಛೋಟಾ ಮುಂಬೈ’ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲೂ ಈಗ ಗಣೇಶೋತ್ಸವದ ಸಂಭ್ರಮ. ಎಲ್ಲರ ಬಾಯಲ್ಲೂ ಗಜಕಾಯದ ‘ಹುಬ್ಬಳ್ಳಿ ಕಾ ರಾಜಾ’, ಹಾಗೂ ‘ಹುಬ್ಬಳ್ಳಿ ಕಾ ಮಹಾರಾಜಾ’ ಗಣಪತಿಯ ಮಾತು. ಈ ಎರಡೂ ಗಣಪತಿಗಳು ಸಿದ್ಧವಾಗುವುದು ಕೋಲ್ಕತ್ತಾ ಮೂರ್ತಿ ತಯಾರಕರ ಕೈಚಳಕದಲ್ಲಿ ಎಂಬುದು ವಿಶೇಷ. ‘ಹುಬ್ಬಳ್ಳಿ ಕಾ ಮಹಾರಾಜಾ’ ಗಣಪತಿ 23ರಿಂದ 25 ಅಡಿವರೆಗೆ, ‘ಹುಬ್ಬಳ್ಳಿ ಕಾ ರಾಜಾ’ ಗಣಪತಿ 21ರಿಂದ 23 ಅಡಿ ಎತ್ತರ ಇರುತ್ತದೆ.

ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗುವ ‘ಹುಬ್ಬಳ್ಳಿ ಕಾ ಮಹಾರಾಜ’ ಗಣಪತಿಯನ್ನು ಕಳೆದ 1995ರಿಂದ ಕೋಲ್ಕತ್ತಾದ ಅಪ್ಪು ಪಾಲ್‌ ಎಂಬ ಮೂರ್ತಿ ತಯಾರಕರ ತಂಡ ತಯಾರಿಸುತ್ತಿದೆ. ಇನ್ನು, ದಾಜಿಬಾನ್‌ ಪೇಟೆಯಲ್ಲಿ ಪ್ರತಿಷ್ಠಾಪಿಸಲಾಗುವ ಹುಬ್ಬಳ್ಳಿ ಕಾ ಮಹಾರಾಜಾ ಗಣೇಶ ಮೂರ್ತಿಯನ್ನು 2017ರಿಂದ ಕೋಲ್ಕತ್ತಾದ ಮೂರ್ತಿ ತಯಾರಕ ಸಂಜಯ್ ಪಾಲ್‌ ತಂಡ ತಯಾರಿಸುತ್ತದೆ. ಇದಕ್ಕಾಗಿ 4-5 ತಿಂಗಳ ಮೊದಲೇ ಇವರು ಹುಬ್ಬಳ್ಳಿಗೆ ಬರುತ್ತಾರೆ.

2. ಒಂದೇ ದೇಗುಲದಲ್ಲಿ ಅಷ್ಟ ವಿನಾಯಕರ ದರ್ಶನ

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿರುವ ಅಷ್ಟವಿನಾಯಕ ದೇವಾಲಯಗಳಲ್ಲಿರುವ ದೇವರ ಮೂರ್ತಿಗಳ ದರ್ಶನ ಪಡೆದರೆ ಜೀವನ ಸಾರ್ಥಕ ಎಂಬ ಮಾತಿದೆ. ಈ ಎಲ್ಲ ಗಣಪತಿ ಮೂರ್ತಿಗಳ ಪ್ರತಿರೂಪವನ್ನು ದೇವಸ್ಥಾನದ ಒಂದೇ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಈ ರೀತಿಯ ದೇವಸ್ಥಾನ ದೇಶದಲ್ಲಿ ಬೇರಲ್ಲೂ ಕಂಡು ಬರುವುದಿಲ್ಲ. ಅದುವೇ ಹುಬ್ಬಳ್ಳಿಯ ರೈಲು ನಿಲ್ದಾಣದ ಪಕ್ಕದಲ್ಲಿ ಕೂಗಳತೆಯ ದೂರದ ಗೂಡ್‌ಶೆಡ್‌ ರಸ್ತೆಯಲ್ಲಿರುವ ಅಷ್ಟವಿನಾಯಕ ದೇವಸ್ಥಾನ.

ಮಹಾರಾಷ್ಟ್ರದಲ್ಲಿರುವ ಮೋರೆಗಾಂವ್‌ನ ಮಯೂರೇಶ್ವರ, ತೇವೂರ್‌ನ ಶ್ರೀ ಚಿಂತಾಮಣಿ, ಸಿದ್ಧಟೇಕ್‌ನ ಶ್ರೀ ಸಿದ್ಧಿ ವಿನಾಯಕ, ರಂಜನ್‌ಗಾಂವ್‌ನ ಶ್ರೀ ಮಹಾಗಣಪತಿ, ಓಝಾರ್‌ನ ಶ್ರೀ ವಿಘ್ನೇಶ್ವರ, ಲೇನ್ಯಾದ್ರಿಯ ಶ್ರೀ ಗಿರಿಜಾತ್ಮಾಜ್, ಮಹಾಡ್‌ನ ಶ್ರೀ ವರದ ವಿನಾಯಕ, ಪಾಲಿಯ ಶ್ರೀ ಬಲ್ಲಾಳೇಶ್ವರ ಗಣಪತಿ ಈ ಎಂಟು ದೇವರ ಮೂರ್ತಿಗಳ ದರ್ಶನವನ್ನು ಇಲ್ಲಿ ಒಂದೇ ಸ್ಥಳದಲ್ಲಿ ಪಡೆಯಬಹುದು.

ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಮದನ್‌ ಗೋಖಲೆ ಅವರು ಹುಬ್ಬಳ್ಳಿಯವರಾಗಿದ್ದು, ಈಗ ಪುಣೆದಲ್ಲಿ ನೆಲೆಸಿದ್ದಾರೆ. ಇವರ ಆಸಕ್ತಿಯ ಮೇರೆಗೆ ಈ ದೇವಸ್ಥಾನ ಪ್ರತಿಷ್ಠಾಪನೆಯಾಗಿದೆ. ಇಲ್ಲಿ 1980ರಿಂದ ಸಾರ್ವಜನಿಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. 2000ರಲ್ಲಿ ಟ್ರಸ್ಟ್‌ನ ಅಧ್ಯಕ್ಷ ಮದನ್‌ ಗೋಖಲೆಯವರು ಮಹಾರಾಷ್ಟ್ರದ ಅಷ್ಟ ವಿನಾಯಕ ದೇವಸ್ಥಾನಗಳಿಗೆ ತೆರಳಿ, ಅಲ್ಲಿನ ಮೂರ್ತಿಗಳ ಮಾಹಿತಿ ಸಂಗ್ರಹಿಸಿ, ಅವುಗಳ ಪ್ರತಿರೂಪಗಳನ್ನು ಇಲ್ಲಿ ಪ್ರತಿಷ್ಠಾಪಿಸಿದರು. ಈ ದೇವಸ್ಥಾನ ಇಷ್ಟಾರ್ಥ ಸಿದ್ಧಿಯ ಮಂದಿರವೆಂದೇ ಪ್ರಖ್ಯಾತವಾಗಿದೆ.

3.ರಾಮನಗರದಲ್ಲಿ ಪುರಿ ಜಗನ್ನಾಥ ಪ್ರತಿರೂಪದ ಗಣಪತಿ ಸ್ಥಾಪನೆರಾಮನಗರ: ನಗರದ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಹಾಗೂ ಅರಳೀಕಟ್ಟೆ ಗೆಳೆಯರ ಬಳಗದವರು 40ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಪುರಿ ಜಗನ್ನಾಥನ ಪ್ರತಿರೂಪದಂತಿರುವ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಮನಗರದ ಛತ್ರದ ಬೀದಿಯಲ್ಲಿ ಈ ಮೂರ್ತಿ ಸ್ಥಾಪನೆಯಾಗುತ್ತಿದೆ. ಒಡಿಶ್ಶಾದಲ್ಲಿರುವ ಹಿಂದೂಗಳ ಆರಾಧ್ಯ ದೈವ ಪುರಿ ಜಗನ್ನಾಥನ ಪ್ರತಿರೂಪದಂತೆ ಇರುವ ಸುಮಾರು 7 ಅಡಿ ಎತ್ತರದ ಬೃಹತ್ ಮಣ್ಣಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ತಲೆ ಮೇಲೆ ಕಿರೀಟ ಧರಿಸಿದ್ದು, ವೃತ್ತಾಕಾರದ ಕಣ್ಣುಗಳನ್ನು ಹೊಂದಿರುವ ‘ಪುರಿ ಜಗನ್ನಾಥ ಗಣಪತಿ’ ಮೂರ್ತಿ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ. ಮಾಗಡಿಯ ಕಲಾವಿದ ಉಮಾಶಂಕರ್ ರವರ ಕೈಚಳಕದಲ್ಲಿ ಪುರಿ ಜಗನ್ನಾಥ ಗಣಪತಿ ಮೂರ್ತಿ ತಯಾರಾಗಿದೆ.

4. ಎಲೆಗಳಲ್ಲಿ ಅರಳಿದ ಗಣೇಶ

ವಿಜಯಪುರ: ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಬಸವರಾಜ ಹಣಮಪ್ಪ ಹಡಪದ ಅವರು ಎಲೆಗಳಲ್ಲಿ ಗಣೇಶ ಚಿತ್ರಗಳನ್ನು ಚಿತ್ರಿಸಿ ಭಕ್ತಿಯ ಜತೆಗೆ ತಮ್ಮ ಕಲಾ ಸಾಮರ್ಥ್ಯ ವ್ಯಕ್ತಪಡಿಸಿದ್ದಾರೆ. ಗಣೇಶೋತ್ಸವ ಪ್ರಯುಕ್ತ ಬಸವರಾಜ ಅವರು ಪ್ರತಿವರ್ಷ ಭಿನ್ನ ವಿಭಿನ್ನವಾಗಿ ಗಣೇಶನ ಕಲಾಕೃತಿಗಳನ್ನು ಚಿತ್ರಿಸುತ್ತಾ ಬಂದಿದ್ದು, ಈ ವರ್ಷ ಪ್ರಕೃತಿದತ್ತವಾಗಿ ದೊರೆಯುವ ಎಲೆಗಳ ಮೇಲೆ ವಿನಾಯಕನ ರೂಪಕಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.

5. ಇಷ್ಟಾರ್ಥ ಸಿದ್ಧಿಸುವ ಛಬ್ಬಿಯ ಕೆಂಪು ಗಣಪ

ಹುಬ್ಬಳ್ಳಿ: ನಗರದಿಂದ 17 ಕಿಲೋ ಮೀಟರ್‌ ದೂರದಲ್ಲಿರುವ ಇಷ್ಟಾರ್ಥ ಸಿದ್ಧಿ ಗಣಪನೆಂದೇ ಪ್ರಖ್ಯಾತಿ ಹೊಂದಿರುವ ‘ಛಬ್ಬಿಯ ವಿಘ್ನೇಶ್ವರ‘ನಿಗೆ ಬರೋಬ್ಬರಿ 198 ವರ್ಷಗಳ ಇತಿಹಾಸವಿದೆ. ಕ್ರಿ.ಶ.1827 ರಿಂದ ಛಬ್ಬಿ ಗ್ರಾಮದ ಕುಲಕರ್ಣಿ ಮನೆತನದವರು (7 ಮನೆಗಳಲ್ಲಿ) ಕೆಂಪು(ಸಿಂಧೂರ) ಗಣೇಶ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದು, ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಬರುತ್ತಾರೆ.

ಸಿಂಧೂರ ಗಣೇಶನನ್ನು ಛಬ್ಬಿ ಗ್ರಾಮದ ಕಲಾವಿದರೇ ತಯಾರಿಸುತ್ತಾರೆ. ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಯಾಗುವ ಮೂರ್ತಿಯ ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧ ಹೊಂದಿರುತ್ತದೆ. ಇಂತಹ ಗಣಪತಿಯನ್ನು ಮೈಸೂರು ಹಾಗೂ ಇಂದೂರಿನ ಅರಮನೆಗಳಲ್ಲಿ ಮಾತ್ರ ಕಾಣಬಹುದು. ಈ ಗಣಪನ ದರ್ಶನ ಮಾಡುವುದರಿಂದ ಇಷ್ಟಾರ್ಥಗಳೆಲ್ಲ ಈಡೇರಲಿದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಬರುವ ಭಕ್ತರು ಅಡಕೆ ಅಥವಾ ರುದ್ರಾಕ್ಷಿ ಒಯ್ದು ಪೂಜೆ ಮಾಡಿಸಿಕೊಂಡು ಬರುತ್ತಾರೆ. ಮೂರು ದಿನಗಳ ಕಾಲ ಇಲ್ಲಿ ಗಣಪ ಪೂಜಿಸಲ್ಪಡುತ್ತಾನೆ.