ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ದಲ್ಲಿ ‘ಕೊಕೊ ಸಾಪ್‌’ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ‘ನೀರಾ’ಕ್ಕೆ ಹೆಚ್ಚು ಬೇಡಿಕೆ

| Published : Nov 16 2024, 01:48 AM IST / Updated: Nov 16 2024, 07:29 AM IST

ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ದಲ್ಲಿ ‘ಕೊಕೊ ಸಾಪ್‌’ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ‘ನೀರಾ’ಕ್ಕೆ ಹೆಚ್ಚು ಬೇಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ದಲ್ಲಿ ‘ಕೊಕೊ ಸಾಪ್‌’ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ‘ನೀರಾ’ಕ್ಕೆ ಹೆಚ್ಚು ಬೇಡಿಕೆ ಇದ್ದುದು ಕಂಡುಬಂತು.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುತ್ತಿರುವ ‘ಕೃಷಿ ಮೇಳ’ದಲ್ಲಿ ‘ಕೊಕೊ ಸಾಪ್‌’ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ‘ನೀರಾ’ಕ್ಕೆ ಹೆಚ್ಚು ಬೇಡಿಕೆ ಇದ್ದುದು ಕಂಡುಬಂತು.

ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿಯ ಮಂಡಳಿಯ ಹುಳಿಮಾವಿನ ಪ್ರಾದೇಶಿಕ ಕಚೇರಿ ಕೃಷಿ ಮೇಳದಲ್ಲಿ ತೆರೆದಿದ್ದ ಮಳಿಗೆಗೆ ಭೇಟಿ ನೀಡಿದ ಸಾರ್ವಜನಿಕರು ನೀರಾ ಸೇವಿಸಿ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತೆಂಗಿನ ಮರದ ಹೊಂಬಾಳೆಯಿಂದ ನೀರಾ ಇಳಿಸುವ ಬಗ್ಗೆ ಮಂಡಳಿಯು ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಗಳಿಗೆ ತಾಂತ್ರಿಕ ಸಹಾಯ, ತರಬೇತಿ ನೀಡುತ್ತಿದ್ದು ಕುಣಿಗಲ್‌ನ ರೈತ ಉತ್ಪಾದಕ ಸಂಸ್ಥೆಯೊಂದು ತಂದಿದ್ದ ‘ನೀರಾ’ದ ಸ್ವಾಧಿಷ್ಟತೆಗೆ ‘ನೀರೆ’ಯರೂ ಮನಸೋತಿದ್ದು ವಿಶೇಷವಾಗಿತ್ತು.

ಮಾರಾಟವಾಗುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದಲೇ ಕುಣಿಗಲ್‌ನಿಂದ 55 ಲೀ.ನೀರಾ ತರಿಸಿ ಶೀಥಲೀಕರಣಗೊ ಳಿಸಲಾಗಿತ್ತು. 200 ಎಂಎಲ್‌ನ ಒಂದು ಗ್ಲಾಸ್‌ಗೆ 50 ರು. ನಿಗದಿ ಮಾಡಿದ್ದು ಮಧ್ಯಾಹ್ನದ ಹೊತ್ತಿಗೆಲ್ಲಾ ತಂದಿದ್ದ ನೀರಾ ಪೂರ್ತಿ ಮಾರಾಟವಾಗಿತ್ತು.

ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ: ಈ ಬಗ್ಗೆ ಮಾಹಿತಿ ನೀಡಿದ ತಾಂತ್ರಿಕ ಅಧಿಕಾರಿ ಚಂದನ, ‘ತೆಂಗು ಅಭಿವೃದ್ಧಿ ಮಂಡಳಿಯು ತೆಂಗಿನ ಮರದಿಂದ ನೀರಾ ಇಳಿಸುವ ಬಗ್ಗೆ ರೈತ ಉತ್ಪಾದಕ ಸಂಸ್ಥೆಗಳಿಗೆ ಅಗತ್ಯ ಮಾಹಿತಿ ನೀಡುತ್ತದೆ. ತೆಂಗಿನಿಂದ ಮೌಲ್ಯವರ್ಧನೆಗೊಳಿಸಿದ ಚಟ್ನಿ ಪುಡಿ, ಎಳನೀರು, ಅಡುಗೆ ಎಣ್ಣೆ, ಚಾಕೊಲೇಟ್‌, ಬಿಸ್ಕೆಟ್‌, ಚಿಪ್ಸ್‌ ಮತ್ತಿತರ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ತೆಂಗಿನ ನರ್ಸರಿ ಪ್ರಾರಂಭಿಸಲೂ ನಾವು ಸಬ್ಸಿಡಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮನೆಗೇ ಬಂತು ಹಿಟ್ಟಿನ ಮಿಲ್‌: ಮನೆಯಲ್ಲೇ ತಮಗೆ ಅಗತ್ಯವಾದ ಧಾನ್ಯವನ್ನು ಅವಶ್ಯಕತೆಗೆ ತಕ್ಕಂತೆ ಹಿಟ್ಟು ಮಾಡುವ ಯಂತ್ರ ಕೃಷಿ ಮೇಳದಲ್ಲಿ ಗಮನ ಸೆಳೆಯಿತು. ಗೃಹ ಬಳಕೆಯ ದೃಷ್ಟಿಯಿಂದ ಸ್ಮಾರ್ಟ್‌ ಜೈ ಕಿಸಾನ್‌ ಕಂಪನಿಯು ಚಿಕ್ಕ ಗಾತ್ರದ ಗಿರಣಿಗಳನ್ನು ಮಾರಾಟ ಮಾಡುತ್ತಿದ್ದು ಒಂದು ಎಚ್‌ಪಿ ಸಾಮರ್ಥ್ಯದ ಯಂತ್ರದಿಂದ ಗಂಟೆಗೆ 8 ರಿಂದ 10 ಕೆಜಿ ಹಿಟ್ಟು ಬೀಸಬಹುದು. ಎರಡು ಎಚ್‌ಪಿ ಸಾಮರ್ಥ್ಯದ ಯಂತ್ರವೂ ಇದ್ದು 16 ರಿಂದ 20 ಕೆಜಿ ಹಿಟ್ಟು ಬೀಸುತ್ತದೆ. ಬೀಸುವ ಕಲ್ಲುಗಳಿಗೆ ಬದಲಾಗಿ ಸ್ಟೇನ್‌ಲೆಸ್‌ ಸ್ಟೀಲ್‌ ಚೇಂಬರ್‌ಗಳಿದ್ದು ಧಾನ್ಯಕ್ಕೆ ತಕ್ಕಂತೆ ಚೇಂಬರ್‌ ಬದಲಾಯಿಸಿಕೊಳ್ಳಬಹುದು.

ಮೇಳದಲ್ಲಿ 1.25 ಕೋಟಿ ರು. ವಹಿವಾಟು: ಕೃಷಿ ಮೇಳದ ಎರಡನೇ ದಿನವಾದ ಶುಕ್ರವಾರ ಸುಮಾರು 7.60 ಲಕ್ಷ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಕೃಷಿ ವಿವಿಯು ವ್ಯವಸ್ಥೆ ಮಾಡಿರುವ ಮಧ್ಯಾಹ್ನದ ರಿಯಾಯಿತಿ ದರದ ಊಟವನ್ನು 13,611 ಮಂದಿ ಸೇವಿಸಿದ್ದಾರೆ. ಮಳಿಗೆಗಳಲ್ಲಿ ₹1.25 ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಮಳೆಯ ನಡುವೆಯೂ ಬತ್ತದ ಉತ್ಸಾಹ ಶುಕ್ರವಾರ ಸುರಿದ ಮಳೆಯ ನಡುವೆಯೂ ಸಾರ್ವಜನಿಕರು ಮೇಳ ವೀಕ್ಷಣೆಯಲ್ಲಿ ತೊಡಗಿದ್ದರು.

ಕೋತಿ ಓಡಿಸುವ ರೈಫಲ್‌ ಮಾರಾಟ

ತೋಟಗಳಿಗೆ ನುಗ್ಗಿ ಬೆಳೆ ಹಾಳು ಮಾಡುವ ಕೋತಿಗಳನ್ನು ಓಡಿಸಲೆಂದು ‘ಈಸೀ ಲೈಫ್‌’ ಕಂಪೆನಿಯವರು ₹2500ಗೆ ರೈಫಲ್‌ಗಳನ್ನು ಮಾರಾಟ ಮಾಡುತ್ತಿದ್ದು ಸಾರ್ವಜನಿಕರು ರೈಫಲ್‌ ಬಗ್ಗೆ ಮಾಹಿತಿ ಪಡೆಯುತ್ತಿದ್ದುದೂ ಕಂಡುಬಂತು.