ಸಾರಾಂಶ
ನಮ್ಮ ಜಿಲ್ಲೆ ಕೃಷಿ ಕ್ಷೇತ್ರಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಆದರೆ, ಈವರೆಗೂ ಜಿಲ್ಲೆಯಿಂದ ಯಾರೂ ಕೃಷಿ ಸಚಿವರಾಗಿರಲಿಲ್ಲ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಜಿಲ್ಲೆಯ ರೈತ ಸಮುದಾಯವನ್ನು ಸಬಲೀಕರಣಗೊಳಿಸಬೇಕು - ಚಲುವರಾಯಸ್ವಾಮಿ,
-ಎನ್. ಚಲುವರಾಯಸ್ವಾಮಿ,
ಕೃಷಿ ಹಾಗೂ ಮಂಡ್ಯ ಜಿಲ್ಲಾ ಸಚಿವರು, ಕರ್ನಾಟಕ ಸರ್ಕಾರ.
ನಮ್ಮ ಜಿಲ್ಲೆ ಕೃಷಿ ಕ್ಷೇತ್ರಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಆದರೆ, ಈವರೆಗೂ ಜಿಲ್ಲೆಯಿಂದ ಯಾರೂ ಕೃಷಿ ಸಚಿವರಾಗಿರಲಿಲ್ಲ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಜಿಲ್ಲೆಯ ರೈತ ಸಮುದಾಯವನ್ನು ಸಬಲೀಕರಣಗೊಳಿಸಬೇಕು ಹಾಗೂ ಈ ಭಾಗದ ಕೃಷಿ ವಿದ್ಯಾರ್ಥಿಗಳು ಹಾಗೂ ಅನ್ನದಾತರಿಗೆ ನೆರವಾಗಬಲ್ಲ ಕೆಲಸವನ್ನು ಮಾಡಬೇಕೆನ್ನುವ ತುಡಿತ ಜಿಲ್ಲೆಯಲ್ಲಿ ನೂತನ ಕೃಷಿ ವಿಶ್ವ ವಿದ್ಯಾಲಯವನ್ನು ನಿರ್ಮಾಣ ಮಾಡಬೇಕೆನ್ನುವ ಕನಸನ್ನು ನನಸಾಗಿಸಲು ಸಾಧ್ಯವಾಗಿಸಿತು.
ಮಂಡ್ಯ ಎಂದರೆ ಇಂಡಿಯಾವೇ ತಿರುಗಿ ನೋಡುತ್ತದೆ ಎನ್ನುವ ನಾಣ್ಣುಡಿಯನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ನಮ್ಮ ಜಿಲ್ಲೆ ರಾಜಕೀಯದಲ್ಲಿ ಸುದ್ದಿಯಾದಷ್ಟು ಬೇರೆ ಸಂಗತಿಗಳಿಗೆ ಸುದ್ದಿಯಾಗುತ್ತಿಲ್ಲ ಎನ್ನುವ ಕೊರಗು ನನ್ನಲ್ಲಿ ಎಂದಿಗೂ ಕಾಡುತ್ತಿರುತ್ತದೆ.
ಅಪ್ಪಟ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ನಮ್ಮ ಜಿಲ್ಲೆಯ ಕೃಷಿಯ ಬಗ್ಗೆ ಅಂದಿನಿಂದಲೂ ಒಂದು ರೀತಿಯ ಸೆಳೆತವಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಷಿ ಮಾಡಿ, ಜಯಿಸುವುದು ಎಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಮಳೆ ಚೆನ್ನಾಗಿ ಬಂದು, ಕನ್ನಂಬಾಡಿ ಕಟ್ಟೆ ತುಂಬಿದರೆ ಮಾತ್ರ ಅನ್ನದಾತರ ಹೊಟ್ಟೆ ತಣ್ಣಗಿರಲು ಸಾಧ್ಯ ಎನ್ನುವ ಪರಿಸ್ಥಿತಿ ಇಂದಿಗೂ ಇದೆ.
ನನ್ನ ರಾಜಕೀಯ ಜೀವನದುದ್ದಕ್ಕೂ ಜಿಲ್ಲೆಯ ಅಭಿವೃದ್ಧಿಗಾಗಿ ಏನನ್ನಾದರೂ ಮಾಡಲೇಬೇಕು ಎನ್ನುವ ಹಂಬಲ ನನ್ನದು. ನನ್ನ ಹುಟ್ಟೂರು ಎನ್ನುವ ಕಾಳಜಿ ಒಂದು ಕಡೆಯಾದರೆ, ಈ ಜಿಲ್ಲೆಯ ಜನತೆಯ ಬವಣೆಯನ್ನು ಅತ್ಯಂತ ಹತ್ತಿರದಿಂದ ನೋಡಿದ ಅನುಭವ ಇನ್ನೊಂದು ಕಡೆ, ನನ್ನನ್ನು ಸದಾ ಅವರ ಶ್ರೇಯಕ್ಕಾಗಿ ಶ್ರಮಿಸುವಂತೆ ಮಾಡುತ್ತದೆ.
ನಮ್ಮ ಮಂಡ್ಯ ಕೇವಲ ರಾಜಕೀಯ ಸಂಗತಿಗಳಿಗಾಗಿ ಅಲ್ಲ, ಅಭಿವೃದ್ಧಿಯ ವಿಷಯಗಳಿಗಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಬೇಕು ಎನ್ನುವ ಕನಸನ್ನು ಬೆನ್ನಟ್ಟಿ ಓಡಲಾರಂಭಿಸಿದ ನನಗೆ ಒಮ್ಮೆ ಆರೋಗ್ಯ ಸಚಿವನಾಗುವ ಅವಕಾಶ ಲಭಿಸಿದಾಗ ಜಿಲ್ಲೆಗೆ ವೈದ್ಯಕೀಯ ಕಾಲೇಜನ್ನು ತಂದಿರುವ ಸಾರ್ಥಕತೆ ಹಾಗೂ ಸಾರಿಗೆ ಸಚಿವನಾಗುವ ಅವಕಾಶ ಲಬಿಸಿದಾಗ ಕೆಎಸ್‌ಆರ್‌ಟಿಸಿ ವಿಭಾಗವನ್ನು ಆರಂಭಿಸುವ ಮೂಲಕ ಜಿಲ್ಲೆಯ ಜನತೆಗೆ ಸಾರಿಗೆ ಸಂಪರ್ಕ ಸೌಲಭ್ಯವನ್ನು ಕಲ್ಪಿಸಿರುವ ಧನ್ಯತೆಯ ಜೊತೆ ಇದೀಗ ಕೃಷಿ ಸಚಿವನಾಗಿ ಜಿಲ್ಲೆಯಲ್ಲಿ ನೂತನ ಕೃಷಿ ವಿಶ್ವ ವಿದ್ಯಾಲಯವನ್ನು ಆರಂಭಿಸುವ ಸದವಕಾಶ ಲಭಿಸಿರುವುದು ನನ್ನ ಸೌಭಾಗ್ಯ. ನಾನು ಹುಟ್ಟಿ ಬೆಳೆದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ, ಜನತೆಯ ಕಲ್ಯಾಣಕ್ಕೆ ಶ್ರಮಿಸುವ, ಈ ಮಣ್ಣಿನ ಋಣ ತೀರಿಸುವ ಸುವರ್ಣಾವಕಾಶವೆಂದು ಭಾವಿಸಿ, ಕೆಲಸ ಮಾಡುತ್ತಿದ್ದೇನೆ.
ನಮ್ಮ ಜಿಲ್ಲೆ ಕೃಷಿ ಕ್ಷೇತ್ರಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಆದರೆ, ಈವರೆಗೂ ಜಿಲ್ಲೆಯಿಂದ ಯಾರೂ ಕೃಷಿ ಸಚಿವರಾಗಿರಲಿಲ್ಲ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಜಿಲ್ಲೆಯ ರೈತ ಸಮುದಾಯವನ್ನು ಸಬಲೀಕರಣಗೊಳಿಸಬೇಕು ಹಾಗೂ ಈ ಭಾಗದ ಕೃಷಿ ವಿದ್ಯಾರ್ಥಿಗಳು ಹಾಗೂ ಅನ್ನದಾತರಿಗೆ ನೆರವಾಗಬಲ್ಲ ಕೆಲಸವನ್ನು ಮಾಡಬೇಕೆನ್ನುವ ತುಡಿತ ಜಿಲ್ಲೆಯಲ್ಲಿ ನೂತನ ಕೃಷಿ ವಿಶ್ವ ವಿದ್ಯಾಲಯವನ್ನು ನಿರ್ಮಾಣ ಮಾಡಬೇಕೆನ್ನುವ ಕನಸನ್ನು ನನಸಾಗಿಸಲು ಸಾಧ್ಯವಾಗಿಸಿತು.
ಮೈಸೂರು ವಿಭಾಗಕ್ಕೆ ಮೊದಲ ಕೃಷಿ ವಿವಿ
ಕರ್ನಾಟಕವು ಬೆಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಮೈಸೂರು ಎಂಬ 4 ಪ್ರಮುಖ ಕಂದಾಯ ವಿಭಾಗಗಳನ್ನು ಹೊಂದಿದ್ದು, ನಮ್ಮ ಮೈಸೂರು ಕಂದಾಯ ವಿಭಾಗದಲ್ಲಿ ಭಾರತದಲ್ಲಿ ಬೆಳೆಯುವ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ‘ಬೆಳೆಗಳಾದ ಭತ್ತ, ರಾಗಿ, ಕಬ್ಬು, ಜೋಳ, ಮುಸುಕಿನ ಜೋಳ, ಸಿರಿಧಾನ್ಯಗಳು, ಎಣ್ಣೆಕಾಳುಗಳು, ಬೇಳೆಕಾಳುಗಳು, ಹತ್ತಿ, ಕಾಫಿ, ಟೀ ಮೆಣಸು, ಏಲಕ್ಕಿ, ಅಡಿಕೆ, ತೆಂಗು, ತರಕಾರಿ ಮತ್ತು ಪುಷ್ಪದ್ಯಮ ಮುಂಚೂಣಿಯಲ್ಲಿದೆ’.
ಪ್ರಸ್ತುತ ರಾಜ್ಯದಲ್ಲಿ ಮೂರು ಕೃಷಿ ವಿಶ್ವವಿದ್ಯಾನಿಲಯಗಳು (ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿ ವಿಶ್ವವಿದ್ಯಾಲಯ ರಾಯಚೂರು ಮತ್ತು ಕೃಷಿ ವಿಶ್ವವಿದ್ಯಾಲಯ ಧಾರಾವಾಡ), ಒಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ (ಶಿವಮೊಗ್ಗ), ಒಂದು ತೋಟಗಾರಿಕಾ ವಿಶ್ವವಿದ್ಯಾಲಯ (ಬಾಗಲಕೋಟೆ) ಮತ್ತು ಒಂದು ಪಶುವೈದ್ಯಕೀಯ, ಪ್ರಾಣಿ ವಿಜ್ಞಾನ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು ಆರು ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಮೈಸೂರು ಕಂದಾಯ ವಿಭಾಗವನ್ನು ಹೊರತುಪಡಿಸಿ, ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿಯೂ ಕೃಷಿ ವಿಶ್ವ ವಿದ್ಯಾಲಯಗಳ ಲಭ್ಯತೆಯಿದೆ. ಈ ಸಂಗತಿಯನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಾಗ ಸಂತೋಷದಿಂದ ಒಪ್ಪಿಕೊಂಡರು. ಮಂಡ್ಯದಲ್ಲಿ ನೂತನವಾಗಿ ಸಮಗ್ರ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಈ ಬಾರಿಯ ಬಜೆಟ್‌ನಲ್ಲಿ ₹25 ಕೋಟಿ ಅನುದಾನವನ್ನೂ ಸಹ ಮೀಸಲಿಡಲಾಗಿದೆ.
ಕೃಷಿ ಸಂಶೋಧನೆಯ ಇತಿಹಾಸ
ಕೃಷಿ ಸಂಶೋಧನೆಯಲ್ಲಿ ನಮ್ಮ ಮಂಡ್ಯ ಜಿಲ್ಲೆಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಜಮೀನನ್ನು ನೀಡಿದ್ದರು. ಈ ಕೇಂದ್ರವು 1931ರಲ್ಲಿ ಮಂಡ್ಯದ ವಿ.ಸಿ.ಫಾರಂನಲ್ಲಿ ಕಬ್ಬು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ದಕ್ಷಿಣ ಕರ್ನಾಟಕದ ರೈತಾಪಿ ವರ್ಗದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಬಳಿಕ ಈ ಕೇಂದ್ರದಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಕೇಂದ್ರದ ವ್ಯಾಪ್ತಿಗೆ ಮಂಡ್ಯ ಜಿಲ್ಲೆಯ ಏಳು ತಾಲೂಕುಗಳು, ಮೈಸೂರು ಜಿಲ್ಲೆಯ ನಾಲ್ಕು ತಾಲೂಕುಗಳು, ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳು, ತುಮಕೂರು ಜಿಲ್ಲೆಯ ಮೂರು ತಾಲೂಕುಗಳು, ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳು, ಹಾಗೂ ಹಾಸನ ಜಿಲ್ಲೆಯ ಮೂರು ತಾಲೂಕುಗಳು ಸೇರಿವೆ.
2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ (ತಿದ್ದುಪಡಿ) ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಿ, ಅಧಿಕೃತವಾಗಿ ಅಂಗೀಕರಿಸುವ ಮೂಲಕ ಮಂಡ್ಯ ಕೃಷಿ ವಿಶ್ವ ವಿದ್ಯಾಲಯಕ್ಕೆ ಚಾಲನೆ ಸಿಕ್ಕಂತಾಗಿದೆ.
ಈ ದಿನ ನನ್ನ ಜೀವನದ ಅತ್ಯಂತ ಸಂಭ್ರಮದ ಕ್ಷಣವಾಗಿದೆ. ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳು 2025ನೇ ಸಾಲಿನ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ನೀಡಿದ್ದು ನನಗೆ ಅಪಾರ ಹರ್ಷ ಮತ್ತು ಆನಂದವನ್ನು ಉಂಟುಮಾಡಿದೆ.
ನನ್ನ ಜನ್ಮಭೂಮಿ, ನನ್ನ ಊರು ಮಂಡ್ಯ - ಕಾವೇರಿ ಜಲಾನಯನ ಪ್ರದೇಶದಲ್ಲಿ ಇರುವ ಈ ಪುಣ್ಯಭೂಮಿಯು ಕೃಷಿ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿಯಾಗಬೇಕು ಎಂಬುದು ನನ್ನ ಜೀವನದ ಮಹತ್ವದ ಕನಸಾಗಿತ್ತು. ಆ ಕನಸು ಇಂದು ನನಸಾಗುವ ಹಾದಿಯಲ್ಲಿ ಸಾಗುತ್ತಿದೆ ಎನ್ನುವ ಸಮಾಧಾನಕ್ಕಿಂತ ಸಾಗಬೇಕಾದ ದೂರ ಬಹಳಷ್ಟಿದೆ ಎನ್ನುವ ಆಲೋಚನೆ ನನ್ನನ್ನು ಇನ್ನಷ್ಟು ಕಾರ್ಯಪ್ರವೃತ್ತನಾಗಿಸುತ್ತಿದೆ.
ಸಾವಯವ ಕೃಷಿಗೆ ಆದ್ಯತೆ
ಜಿಲ್ಲೆಯಲ್ಲಿ ಒಂದು ಕೃಷಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕು ಎನ್ನುವ ನನ್ನ ಕನಸು ಹಾಗೂ ನನ್ನ ಜನತೆಯ ಬಹು ಕಾಲದ ಬೇಡಿಕೆ ಈಡೇರುತ್ತಿದೆ. ನನ್ನ ಮಂಡ್ಯ ಜಿಲ್ಲೆಯ ಜನತೆ ಹಾಗೂ ರಾಜ್ಯದ ಎಲ್ಲಾ ಕೃಷಿಕರ ಅಭ್ಯುದಯದ ಗುರಿಯೊಂದಿಗೆ ಈ ಕೃಷಿ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಲಿದ್ದು, ಕೃಷಿಯಲ್ಲಿ ನಾವೀನ್ಯತೆಯನ್ನು ಕಂಡುಕೊಳ್ಳಲು, ವಿಜ್ಞಾನವನ್ನು ಅಳವಡಿಸಲು, ಮುಂದಿನ ಪೀಳಿಗೆಗೆ ಕೃಷಿ ಕ್ಷೇತ್ರದ ಬಗ್ಗೆ ಇನ್ನೂ ಹೆಚ್ಚಿನ ಒಲವನ್ನು ಬೆಳೆಸಲು ನೆರವಾಗಲಿದೆ.
ನಾನು ಕೃಷಿ ಸಚಿವನಾದ ಬಳಿಕ ನಾಡಿನಾದ್ಯಂತ ಸಂಚರಿಸಿ, ಪ್ರಗತಿ ಪರ ರೈತರ ಜೊತೆ ಸಂವಾದ ನಡೆಸಿದ್ದೇನೆ. ಸಮಗ್ರ ಕೃಷಿ, ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ಕೃಷಿ ವಿಶ್ವ ವಿದ್ಯಾಲಯಗಳೊಂದಿಗೆ ರೈತರೊಂದಿಗೆ ಸಂಪರ್ಕ ಕಲ್ಪಿಸುವ ಜೊತೆ ಸಂಶೋಧನೆಗೆ ಹೆಚ್ಚಿನ ಅವಕಾಶ ಸೃಷ್ಟಿಸಲಾಗುತ್ತಿದೆ.
ಹಾಗೆಯೇ, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ರಾಮನಗರ ಜಿಲ್ಲೆ ಕನಕಪುರದ ಎಸ್.ಕರಿಯಪ್ಪ ಕೃಷಿ ಕಾಲೇಜು ಹಾಗೂ ಮಂಡ್ಯದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ 2024 - 25ನೇ ಶೈಕ್ಷಣಿಕ ವರ್ಷದಿಂದ ಕೃಷಿ ವಿಜ್ಞಾನ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.
ಕೃಷಿ ಪರಂಪರೆಗೆ ಹೆಸರಾಗಿರುವ ನಮ್ಮ ಮಂಡ್ಯ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ಕೃಷಿ ಸಚಿವನಾಗಿ ಆಯ್ಕೆಯಾಗಿ ಇಂತಹ ಒಂದು ಸತ್ಕಾರ್ಯ ಮಾಡುವ ಸದವಕಾಶ ದೊರಕಿರುವುದು ನನ್ನ ಸೌಭಾಗ್ಯ. ನನ್ನ ಮಂಡ್ಯ ಜನತೆಯ ಸೇವೆಗೆ ನನ್ನ ಬದ್ಧತೆ ನಿರಂತರವಾಗಿರಲಿದೆ. ಈ ಮಣ್ಣಿನ ಋಣಸಂದಾಯದ ಭಾಗ್ಯ ನನ್ನದಾಗಿದೆ. ನಮ್ಮ ಮಂಡ್ಯದ ಹಾಗೂ ನಾಡಿನ ಅನ್ನದಾತರ ಶ್ರೇಯೋಭಿವೃದ್ಧಿಗೆ ನನ್ನ ಶ್ರಮ ನಿರಂತರವಾಗಿರಲಿದೆ. ಕೃಷಿ ಕುಟುಂಬದ ಜೀವನ ಹಸನಾಗಿಸಲು ನಮ್ಮ ಸರ್ಕಾರ ಹಾಗೂ ಕೃಷಿ ಇಲಾಖೆ ಸದಾ ನಿಮ್ಮೊಂದಿಗಿದೆ.