ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರ ವಿವಿಧ ಭಾಷಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ರಚನೆ ಮೂಲಕ ಸಾಂಸ್ಕೃತಿಕ ವಿಕೇಂದ್ರಿಕರಣಕ್ಕೆ ಮುಂದಾಗಿದೆ. ಇದು ವಿವಿಧತೆಯಲ್ಲಿ ಬಹುತ್ವ ಸಂಸ್ಕೃತಿಯನ್ನು ಪ್ರತಿಪಾದಿಸಲಿದ್ದು ದೇಶಕ್ಕೆ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿ ಏರ್ಪಡಿಸಿದ್ದ ಬಂಜಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ‘ಸಂತ ಸೇವಾಲಾಲ್’ ಪ್ರಶಸ್ತಿ ಸೇರಿದಂತೆ ವಿವಿಧ ಸಾಲಿನ ವಾರ್ಷಿಕ ಹಾಗೂ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡ ರಾಜ್ಯಭಾಷೆಯಾಗಿದ್ದು ಅದಕ್ಕೆ ಆದ್ಯತೆ ಮೇರೆಗೆ ಮನ್ನಣೆ ಸಿಗಬೇಕು. ಅದರೊಂದಿಗೆ ವಿವಿಧ ಸಂಸ್ಕೃತಿ, ಭಾಷೆಗಳ ಪೋಷಣೆಯು ಆಗಬೇಕಿದೆ ಎಂದರು.
ಜಗತ್ತಿನಲ್ಲಿ ಸರಿಸುಮಾರು 6,703 ಭಾಷೆಗಳಿದ್ದು, ಈ ಪೈಕಿ 30 ಸಾವಿರ ಭಾಷೆಗಳು ಬಳಕೆಯಾಗದೆ ವಿನಾಶ ಹೊಂದಿದೆ. 10 ಭಾಷೆಗಳಷ್ಟೇ ಹೆಚ್ಚಾಗಿ ಬಳಕೆಯಾಗುತ್ತಿವೆ. ಅಳಿವಿನಂಚಿನಲ್ಲಿರುವ, ಆ ಭಾಷೆಯಾಡುವ ಜನರಿಗೆ ಹಾಗೂ ಸಂಸ್ಕೃತಿಗೆ ಗೌರವ ಸಿಗಬೇಕಾದಲ್ಲಿ ಅದನ್ನು ದಾಖಲೀಕರಣಗೊಳಿಸುವ ಕೆಲಸವಾಗಬೇಕಿದೆ. ಅಲಕ್ಷಿತ ಹಾಗೂ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಸಾಂಸ್ಕೃತಿಕ ವೈವಿಧ್ಯತೆ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಬಂಜಾರ ಭಾಷಾ ಅಕಾಡೆಮಿ ಸಾಂಸ್ಕೃತಿಕ ವಿಶ್ವಕೋಶ ತೆರೆಯಲು ಮುಂದಾಗಿದ್ದು ಸರ್ಕಾರ ಇದಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಹೇಳಿದರು.
ವಿಧಾನಪರಿಷತ್ತು ಸದಸ್ಯ ಪುಟ್ಟಣ್ಣ ಮಾತನಾಡಿ, ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು. ಬಂಜಾರ ಸಮುದಾಯ ಪೂರ್ವದಲ್ಲಿ ಅಲೆಮಾರಿ ಜನಾಂಗವಾದರೂ ಸಾಹಿತ್ಯ, ಸಂಸ್ಕೃತಿ ಪೋಷಣೆ ಮೂಲಕ ಆಧುನಿಕತೆಯತ್ತ ಹೊರಳುತ್ತಿದೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಗೋವಿಂದಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಚನ್ನಪ್ಪಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದೇಶಕಿ ಕೆ.ಎಂ.ಗಾಯತ್ರಿ, ಕೌಶಲ್ಯಾವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾನಾಯಕ್ ಇದ್ದರು.