34 ಗುರು ವರ್ಯರನ್ನು ಸ್ಮರಿಸುತ್ತಾ ಪ್ರಾಧ್ಯಾಪಕ ಡಾ.ಪಿ.ವಿ.ನಾಗರಾಜ ಅವರಿಂದ ‘ಗುರುವೇ, ನಿಮಗೆ ಶರಣು’ ಎಂಬ ಕೃತಿ ರಚನೆ

| Published : Aug 29 2024, 12:58 AM IST / Updated: Aug 29 2024, 05:16 AM IST

34 ಗುರು ವರ್ಯರನ್ನು ಸ್ಮರಿಸುತ್ತಾ ಪ್ರಾಧ್ಯಾಪಕ ಡಾ.ಪಿ.ವಿ.ನಾಗರಾಜ ಅವರಿಂದ ‘ಗುರುವೇ, ನಿಮಗೆ ಶರಣು’ ಎಂಬ ಕೃತಿ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಪುಟ, ಪುಟದಲ್ಲೂ ಕೃತಜ್ಞತಾ ಭಾವ ಎದ್ದು ಕಾಣುತ್ತದೆ. ಈ 34 ಮಂದಿಯಲ್ಲಿ ಭಾಷೆ, ಸಾಹಿತ್ಯ ವಿಮರ್ಶೆ, ತಂತ್ರಜ್ಞಾನ ಕಲಿಸಿದವರು, ಬೌದ್ಧಿಕ ಪ್ರಜ್ಞೆ ವಿಸ್ತರಿಸಿದವರು, ತನ್ನ ಅಂತರಂಗ ತೆರೆಸಿದವರು, ತಾಯ್ತನದ ಪ್ರೀತಿ ತೋರಿಸಿದವರು.. ಹೀಗೆ ನಾನಾ ವರ್ಗದವರು ಇದ್ದಾರೆ.

 ಮೈಸೂರು :  ನಗರದ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ವಿ.ನಾಗರಾಜ ಅವರು ಅಂಧರಾಗಿದ್ದರೂ ಅಪಾರ ಸಾಧನೆ ಮಾಡಿದವರು. ಇದೀಗ ತಮ್ಮ ಶೈಕ್ಷಣಿಕ ಬದುಕಿಗೆ ಪ್ರತ್ಯಕ್ಷ, ಪರೋಕ್ಷವಾಗಿ ದಾರಿ ತೋರಿದ 34 ಗುರುವರ್ಯರನ್ನು ಸ್ಮರಿಸುತ್ತಾ ‘ಗುರುವೇ, ನಿಮಗೆ ಶರಣು’ ಎಂಬ ಕೃತಿಯನ್ನು ರಚಿಸಿದ್ದಾರೆ.

ಇದು ನಾಗರಾಜ ಅವರ ಮೂರನೇ ಕೃತಿ. ಈಗಾಗಲೇ ವಿಶೇಷಚೇತನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕೈಪಿಡಿ ಎನಿಸಿರುವ ‘ಅಕ್ಷರದೀಪ’ ಪ್ರಕಟಿಸಿದ್ದಾರೆ. ಇದಲ್ಲದೇ, ತಮ್ಮ ಪಿಎಚ್.ಡಿ ಮಹಾಪ್ರಬಂಧವನ್ನು ‘ಹಚ್ಚೇವು ಕನ್ನಡದ ದೀಪ’ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ನಾಗರಾಜ ಅವರ ಈ ಕೃತಿಯನ್ನು ವಿವಿಧ ವಿಭಾಗಗಳಾಗಿ ಮಾಡಿಕೊಂಡಿದ್ದಾರೆ. ಬೇರು- ಎಚ್.ಎಸ್. ಅಡವಿಶಯ್ಯ, ಎಚ್.ಎನ್.ಗಂಗಾಧರಪ್ಪ, ಚಿಗುರು- ಅಶೋಕ್ ಮುನಿಯಪ್ಪನವರ್, ದಿಗಂಬರ ತುಕಾರಾಂ ಹೊನ್ನಾಳೆ, ಹೂವು- ರಮೇಶ್ ಹೇಮರೆಡ್ಡಿ ಸಂಕರೆಡ್ಡಿ, ರಾಜೀವ ತಡಹಾಳ್, ಕಾಯಿ- ವಿ.ಬಿ. ಅನಿತಾ, ಬಿ.ಪಿ. ಆಶಾಕುಮಾರಿ, ಕೆ. ತಿಮ್ಮಯ್ಯ, ಎಂ.ಬಿ. ಸುರೇಶ್, ಎಸ್. ಶಾಂತಾನಾಯಕ್, ಹಣ್ಣು- ಅರವಿಂದ ಮಾಲಗತ್ತಿ, ಕೃಷ್ಣಮೂರ್ತಿ ಹನೂರು, ಆರ್. ಕೃಷ್ಣ ಹೊಂಬಾಳ್, ಕೆ.ಎನ್. ಗಂಗಾನಾಯಕ್, ಎನ್.ಎಂ. ತಳವಾರ್, ಎನ್.ಎಸ್. ತಾರಾನಾಥ್, ಜಿ.ಆರ್. ತಿಪ್ಪೇಸ್ವಾಮಿ, ನಂಜಯ್ಯ ಹೊಂಗನೂರು, ನೂರು- ಸಿ. ನಾಗಣ್ಣ, ಪಂಡಿತಾರಾಧ್ಯ, ಪ್ರೀತಿ ಶುಭಚಂದ್ರ, ಎಂ.ಜಿ. ಮಂಜುನಾಥ, ಪಿ. ಮಣಿ, ಎನ್.ಕೆ. ಲೋಲಾಕ್ಷಿ, ಸಿ.ಪಿ. ಸಿದ್ಧಾಶ್ರಮ, ಎಸ್.ಡಿ. ಶಶಿಕಲಾ, ವಿಜಯಕುಮಾರಿ ಎಸ್. ಕರಿಕಲ್, ಮುಗಿಲು- ಮೈಸೂರು ಕೃಷ್ಣಮೂರ್ತಿ, ಗುರುರಾಜ ಕರ್ಜಗಿ, ರವೀಂದ್ರ ಜಿ. ಭಟ್, ರಹಮತ್ ತರೀಕೆರೆ, ರಾಜಪ್ಪ ದಳವಾಯಿ, ಪಿ.ವಿ. ವಸುಮತಿ ಅವರ ತಮ್ಮ ಶೈಕ್ಷಣಿಕ ಬದುಕಿನಲ್ಲಿ ಯಾವ್ಯಾವ ರೀತಿ ಕೈಹಿಡಿದು ಮುನ್ನಡೆಸಿ, ಈ ಹಂತಕ್ಕೆ ತಂದರು ಎಂಬುದನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ಪ್ರತಿ ಪುಟ, ಪುಟದಲ್ಲೂ ಕೃತಜ್ಞತಾ ಭಾವ ಎದ್ದು ಕಾಣುತ್ತದೆ. ಈ 34 ಮಂದಿಯಲ್ಲಿ ಭಾಷೆ, ಸಾಹಿತ್ಯ ವಿಮರ್ಶೆ, ತಂತ್ರಜ್ಞಾನ ಕಲಿಸಿದವರು, ಬೌದ್ಧಿಕ ಪ್ರಜ್ಞೆ ವಿಸ್ತರಿಸಿದವರು, ತನ್ನ ಅಂತರಂಗ ತೆರೆಸಿದವರು, ತಾಯ್ತನದ ಪ್ರೀತಿ ತೋರಿಸಿದವರು..ಹೀಗೆ ನಾನಾ ವರ್ಗದವರು ಇದ್ದಾರೆ. ಹೊರಗಿನ ಕಣ್ಣನ್ನು ಆಕಸ್ಮಿಕವಾಗಿ ಕಳೆದುಕೊಂಡರೂ ವಿಶೇಷ ಕಣ್ಣಿನ ಮೂಲಕ ಎಲ್ಲರ ಬಗ್ಗೆಯೂ ನೆನಪಿಸಿಕೊಂಡು ಯಥಾವತ್ತಾಗಿ, ಕಣ್ಣಿಗೆ ಕಟ್ಟುವಂತೆ ಬರೆಯುವುದು ಇದೆಯಲ್ಲಾ ಇದು ಸವಾಲು. ಇಂತಹ ಅಸಾಧ್ಯವಾದುದನ್ನು ಸಾಧ್ಯವಾಗಿಸಿರುವ ಡಾ.ಪಿ.ವಿ. ನಾಗರಾಜ ಅವರ ಅಗಾಧ ನೆನಪಿನ ಶಕ್ತಿಗೆ ಶರಣು. ‘ಗುರುವೇ ನಮಃ’ ಎಂಬುದು ಹೋಗಿ ‘ಗುರು ಏನ್ ಮಹಾ’ ಎಂಬ ಕಾಲಘಟ್ಟದಲ್ಲೂ ಗುರುವಿನ ಮಹತ್ವವನ್ನು ಲೇಖಕರು ಎತ್ತಿ ಹಿಡಿದಿದ್ದಾರೆ.

ಅಂಧರಾದ ತಮ್ಮ ಸ್ನೇಹಿತ ಕೆಂಪಹೊನ್ನಯ್ಯ ಅವರಂತೆ ನಾಗರಾಜ ಕೂಡ ಐಎಎಸ್ ಪರೀಕ್ಷೆ ತೆಗೆದುಕೊಳ್ಳಬಹುದಿತ್ತು. ಆದರೆ ಗುರುವೇ ಆಗಬೇಕು ಎಂಬ ಗುರಿ ಇದ್ದಿದ್ದರಿಂದಲೇ ನಾಗರಾಜ ಅವರು ಕೂಡ ಇವತ್ತು ಸಹಸ್ರಾರು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕೃತಿ ಎಲ್ಲರಿಗೂ ‘ದಾರಿದೀಪ’ದಂತಿದೆ.

ಈ ಕೃತಿಯನ್ನು ರೇಖಾ ಪ್ರಕಾಶನ ಪ್ರಕಟಿಸಿದ್ದು, ಓ.ಎಲ್. ನಾಗಭೂಷಣಸ್ವಾಮಿ ಅವರ ಮುನ್ನುಡಿ, ಸರ್ಜಾಶಂಕರ್ ಹರಳಿಮಠ ಅವರ ಬೆನ್ನುಡಿ ಇದೆ. ಆಸಕ್ತರು ಡಾ.ಪಿ.ವಿ. ನಾಗರಾಜ, ಮೊ. 96201 69867 ಸಂಪರ್ಕಿಸಬಹುದು.

ನಾಗರಾಜ ಅವರ ಸಂಕ್ಷಿಪ್ತ ಪರಿಚಯ

ಬಳ್ಳಾರಿ ಜಿಲ್ಲೆ ಸಿರಗುಪ್ಪದ ಪಂಪನಗೌಡ, ವಿ. ಸುಲೋಚನಮ್ಮ ಅವರ ಪುತ್ರ. ಬಾಲ್ಯದಲ್ಲಿ ಭಾಗಶಃ ಅಂಧತ್ವ, ನಂತರ ಪೂರ್ಣ ಅಂಧತ್ವ. ಹುಬ್ಬಳ್ಳಿಯ ವಸತಿಯುತ ಸರ್ಕಾರಿ ಅಂಧ ಬಾಲಕರ ಪಾಠಶಾಲೆಯಲ್ಲಿ ಆರಂಭಿಕ ಶಿಕ್ಷಣ. ಸರ್ಕಾರಿ ಗೊಕನಕೊಪ್ಪ ಕಾಲೇಜಿನಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಪದವಿಪೂರ್ವ ಶಿಕ್ಷಣ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಐಚ್ಚಿಕ ವಿಷಯದೊಂದಿಗೆ ಪದವಿ. ಮೈಸೂರು ವಿವಿ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ. ಹಾಗೂ ಪಿಎಚ್.ಡಿ.

ಬ್ರೈಲ್ ಲಿಪಿಯ ಸಮರ್ಥ ಬಳಕೆ. ಎಂ.ಎ. ಹಂತದ ಎಲ್ಲಾ ಕಿರು ಹಾಗೂ ಮುಖ್ಯ ಪರೀಕ್ಷೆಯನ್ನು ಸಹಾಯಕ ಬರಹಗಾರರ ನೆರವಿಲ್ಲದೆ ಕಂಪ್ಯೂಟರ್ನಲ್ಲಿ ಬರವಣಿಗೆ. ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ.

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಪ್ರಥಮ ದರ್ಜೆ ಸಹಾಯಕನಾಗಿ ಆಯ್ಕೆ. ಸಿರಗುಪ್ಪ ಸರ್ಕಾರಿ ಆಸ್ಪತ್ಪೆಯಲ್ಲಿ ಐದು ವರ್ಷಗಳ ಕಾಲ ಸೇವೆ. ನಂತರ ಎನ್ಇಟಿ ಪರೀಕ್ಷೆ ಜೆಆರ್ಎಫ್ನೊಂದಿಗೆ ತೇರ್ಗಡೆ. ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆ.

ಅರುಹು ಕುರುಹು, ಅಕ್ಷರ ಸೂರ್ಯ ತ್ರೈಮಾಸಿಕ, ಶೋಧ ಭಾರತಿ, ಶೋಧ ಸಂಚಯ, ಸಂಶೋಧನಾ ಮಾರ್ಗ ಪತ್ರಿಕೆಗಳಲ್ಲಿ ಲೇಖನಗಳ ಪ್ರಕಟ.

ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳಗಾವಿ ವಿಭಾಗ ಮಟ್ಟದಲ್ಲಿ ಪ್ರಶಸ್ತಿ, ದ್ವಿತೀಯ ಪಿಯುಸಿ ಬಾಹ್ಯ ವಿದ್ಯಾರ್ಥಿಯಾಗಿ ಅತ್ಯುನ್ನತ ಸಾಧನೆಗಾಗಿ ರಾಜ್ಯಪಾಲರ ಪ್ರಶಸ್ತಿ, ಪದವಿಯಲ್ಲಿ ಭಾಷಾ ವಿಜ್ಞಾನದಲ್ಲಿನ ಸಾಧನೆಗಾಗಿ ದೇ. ಜವರೇಗೌಡ ಚಿನ್ನದ ಪದಕ, ಎಂ.ಎ. ಕನ್ನಡದಲ್ಲಿ ಮೂರನೇ ರ್ಯಾಂಕ್. ಕಂಪ್ಯೂಟರ್ನಲ್ಲಿ ಪರೀಕ್ಷೆ ಬರೆದು ಗೆದ್ದ ರಾಜ್ಯದ ಮೊದಲ ಅಂಧ ವಿದ್ಯಾರ್ಥಿ ಎಂಬ ಹೆಗ್ಗಳಿಕೆ. ರಾಷ್ಟ್ರೀಯ ಅಂಧರ ಒಕ್ಕೂಟದಿಂದ ಅತ್ಯುನ್ನತ ಸಾಧನೆಯ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ.

ಹಚ್ಚೇವು ಕನ್ನಡದ ದೀಪ...ಡಾ.ಪಿ.ವಿ. ನಾಗರಾಜ ಅವರು ಕನ್ನಡ ಚಲನಚಿತ್ರಗೀತೆಗಳಲ್ಲಿ ಕನ್ನಡ- ಕನ್ನಡಿಗ- ಕರ್ನಾಟಕ ಎಂಬ ವಿಷಯದ ಮೇಲೆ ಪ್ರೊ.ಪಂಡಿತಾರಾಧ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಮಹಾಪ್ರಬಂಧವನ್ನು ರಚಿಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ಈ ಸಂಶೋಧನಾ ಮಹಾಪ್ರಬಂಧವನ್ನು ಕೂಡ ಪರಿಷ್ಕರಿಸಿ, ಸಂಕ್ಷಿಪ್ತಗೊಳಿಸಿ, ಇದೀಗ ‘ಹಚ್ಚೇವು ಕನ್ನಡದ ದೀಪ’ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ಕನ್ನಡ- ಕನ್ನಡಿಗ- ಕರ್ನಾಟಕ ಇವುಗಳ ಪರಿಕಲ್ಪನಾತ್ಮಕ ಚರ್ಚೆ, ಕನ್ನಡ ಚಲನಚಿತ್ರಗಳು ರೂಪುಗೊಂಡ ಚಾರಿತ್ರಿಕ ಹಿನ್ನೆಲೆ, ಚಲನಚಿತ್ರಗೀತೆಗಳಲ್ಲಿ ಕನ್ನಡ ಮತ್ತು ಭಾಷಿಕ ಆಯಾಮ, ಕನ್ನಡಿಗ ಮತ್ತು ಸಾಮಾಜಿಕ ಆಯಾಮ, ಕರ್ನಾಟಕ- ಸಾಂಸ್ಕೃತಿಕ ಮತ್ತು ಆರ್ಥಿಕ ಆಯಾಮ ಕುರಿತು ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿ, ದಾಖಲಿಸಲಾಗಿದೆ.

ಕುಂಬಾರಕೊಪ್ಪಲಿನ ಗೌರವ್ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಡಾ.ರಹಮತ್ ತರೀಕೆರೆ ಅವರ ಮುನ್ನುಡಿ, ಮಹಾಪ್ರಬಂಧದ ಮೌಲ್ಯಮಾಪಕರಾದ ಮಂಗಳೂರು ವಿವಿ ಪ್ರಾಧ್ಯಾಪಕ ಸೋಮಣ್ಣ, ಮಧುರೈ ಕಾಮರಾಜ್ ವಿವಿ ಪ್ರಾಧ್ಯಾಪಕ ಎಂ.ಎನ್. ಮಹೇಶ್, ಮಹಾರಾಜ ಕಾಲೇಜು ಪ್ರಾಧ್ಯಾಪಕಿ ಬಿ.ಪಿ, ಆಶಾಕುಮಾರಿ ಅವರ ಮಾತುಗಳಿವೆ.