ಜಯ್‌ ಶಾ ಐಸಿಸಿ ಹೊಸ ಅಧ್ಯಕ್ಷ

| Published : Aug 28 2024, 12:55 AM IST

ಸಾರಾಂಶ

ಅಧ್ಯಕ್ಷರಾಗಿ ಅವಿರೋಧ ಆಯ್ಕೆ. ಡಿ.1ರಂದು ಅಧಿಕಾರ ಸ್ವೀಕಾರ. ಈ ಹುದ್ದೆಗೇರಲಿರುವ ಅತಿಕಿರಿಯ ವ್ಯಕ್ತಿ ಜಯ್‌ ಶಾ. ಐಸಿಸಿ ಗದ್ದುಗೆ ಏರಲಿರುವ ಭಾರತದ 5ನೇ ವ್ಯಕ್ತಿ.

ದುಬೈ: ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ಹುದ್ದೆಗೇರಲಿರುವ ಅತಿಕಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.

35 ವರ್ಷದ ಶಾ, ಡಿ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದು ಆ ವೇಳೆಗೆ ಅವರಿಗೆ 36 ವರ್ಷ ವಯಸ್ಸಾಗಿರಲಿದೆ. 2019ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿರುವ ಶಾ, 62 ವರ್ಷದ ನ್ಯೂಜಿಲೆಂಡ್‌ನ ಗ್ರೆಗ್‌ ಬಾರ್ಕ್ಲೆ ಅವರಿಂದ ತೆರವಾಗಲಿರುವ ಸ್ಥಾನವನ್ನು ತುಂಬಲಿದ್ದಾರೆ.

ಐಸಿಸಿ ಅಧ್ಯಕ್ಷ ಹುದ್ದೆಯ ಕಾರ್ಯಾವಧಿ 2 ವರ್ಷ ಕಾಲ ಇರಲಿದ್ದು, ಒಬ್ಬ ವ್ಯಕ್ತಿ ಸತತ 3 ಅವಧಿಗಳಿಗೆ ಅಂದರೆ 6 ವರ್ಷ ಅಧಿಕಾರದಲ್ಲಿ ಇರಬಹುದು. ಆದರೆ ಬಾರ್ಕ್ಲೆ ಸತತ 3ನೇ ಬಾರಿಗೆ ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ ಕಾರಣ, ಹೊಸ ಅಧ್ಯಕ್ಷರ ಆಯ್ಕೆ ನಡೆಸಬೇಕಾಯಿತು. ಸ್ಪರ್ಧೆಯಲ್ಲಿ ಶಾ ಒಬ್ಬರೇ ಇದ್ದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಜಯ್‌ ಶಾರನ್ನು ಬೆಂಬಲಿಸಿದವು ಎಂದು ತಿಳಿದುಬಂದಿದೆ. ಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಒಟ್ಟು 17 ಮತಗಳು ಇರಲಿದ್ದು, ಇದರಲ್ಲಿ ಬಹುತೇಕ ಎಲ್ಲರೂ ಶಾ ಪರವಾಗೇ ಇದ್ದರು ಎನ್ನಲಾಗಿದೆ.ದಾಲ್ಮೀಯ, ಪವಾರ್‌

ಸಾಲಿಗೆ ಜಯ್‌ ಶಾ!

ಐಸಿಸಿ ಅಧ್ಯಕ್ಷ ಸ್ಥಾನಕ್ಕೇರಲಿರುವ ಭಾರತದ 5ನೇ ವ್ಯಕ್ತಿ ಜಯ್‌ ಶಾ. ಈ ಮೊದಲು ಜಗ್‌ಮೋಹನ್‌ ದಾಲ್ಮೀಯ, ಶರದ್‌ ಪವಾರ್‌, ಎನ್‌.ಶ್ರೀನಿವಾಸನ್‌ ಹಾಗೂ ಶಶಾಂಕ್‌ ಮನೋಹರ್‌ ಐಸಿಸಿ ಅಧ್ಯಕ್ಷರಾಗಿದ್ದರು. ಅಕ್ಟೋಬರ್‌ನಲ್ಲಿ ಬಿಸಿಸಿಐ

ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ

ಜಯ್‌ ಶಾ, ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ), ಐಸಿಸಿಯ ಹಣಕಾಸು ಸಮಿತಿಯ ಹಾಲಿ ಅಧ್ಯಕ್ಷರಾಗಿದ್ದು, ಈ ಸ್ಥಾನಗಳಿಂದಲೂ ಕೆಳಕ್ಕಿಳಿಯಬಹುದು. ಐಸಿಸಿ ಗದ್ದುಗೆ ಏರಿದ್ದೇಕೆ?

2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್‌ ಶಾ, 2025ರಲ್ಲಿ 6 ವರ್ಷ ಪೂರೈಸಲಿದ್ದರು. ಬಿಸಿಸಿಐನ ನಿಯಮದ ಪ್ರಕಾರ, ಒಬ್ಬ ವ್ಯಕ್ತಿ ಬಿಸಿಸಿಐನಲ್ಲಿ 9, ರಾಜ್ಯ ಕ್ರಿಕೆಟ್‌ ಮಂಡಳಿಗಳಲ್ಲಿ 9 ವರ್ಷ ಸೇರಿ ಒಟ್ಟು 18 ವರ್ಷ ಕಾಲ ಕ್ರಿಕೆಟ್‌ ಆಡಳಿತದಲ್ಲಿ ಸಕ್ರಿಯರಾಗಿರಬಹುದು. ಆದರೆ 6 ವರ್ಷ ಅವಧಿ ಪೂರೈಸಿದ ಬಳಿಕ ಕಡ್ಡಾಯವಾಗಿ 3 ವರ್ಷ ಕೂಲಿಂಗ್‌ ಆಫ್‌ (ಅಧಿಕಾರದಿಂದ ದೂರ)ನಲ್ಲಿರಬೇಕು. ಈ ಕಾರಣಕ್ಕೆ ಶಾ ಈಗ ಐಸಿಸಿ ಗದ್ದುಗೆ ಏರಿದ್ದು, ಸತತ 2 ಅವಧಿಗೆ ಅಂದರೆ 4 ವರ್ಷ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ 2028ರಲ್ಲಿ ಬಿಸಿಸಿಐಗೆ ವಾಪಸಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಬಹುದು. ಆಗ ಒಟ್ಟು 4 ವರ್ಷ (ಸದ್ಯ ಬಾಕಿ ಇರುವ 1 ವರ್ಷ ಸೇರಿ) ಬಿಸಿಸಿಐ ಅಧ್ಯಕ್ಷರಾಗಿ ಶಾ ಅಧಿಕಾರ ನಡೆಸಬಹುದು ಎಂದು ವಿಶ್ಲೇಷಿಸಲಾಗಿದೆ.ಕ್ರಿಕೆಟ್‌ ಆಡಳಿತಗಾರನಾಗಿ ಶಾ ಹೆಜ್ಜೆ ಗುರುತು

---

* 2009ರಲ್ಲಿ ಕ್ರಿಕೆಟ್‌ ಆಡಳಿತಕ್ಕೆ ಪಾದಾರ್ಪಣೆ. ಗುಜರಾತ್‌ ಕ್ರಿಕೆಟ್‌ ಸಂಸ್ಥೆ (ಜಿಸಿಎ) ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಯ್ಕೆ. 2013ರ ವರೆಗೂ ಸೇವೆ ಸಲ್ಲಿಕೆ.

* 2013ರಿಂದ 2015ರ ವರೆಗೂ ಜಿಸಿಎ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

* 2015ರಿಂದ 2019ರ ವರೆಗೂ ಬಿಸಿಸಿಐ ಹಣಕಾಸು ಹಾಗೂ ಮಾರ್ಕೆಟಿಂಗ್‌ ಸಮಿತಿಯಲ್ಲಿ ಕಾರ್ಯನಿರ್ವಹಣೆ.

* 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ.

* 2021ರಲ್ಲಿ ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ) ಅಧ್ಯಕ್ಷರಾಗಿ ಆಯ್ಕೆ.

* 2024ರಲ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ಐಸಿಸಿ ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ಬಹಳ ಸಂತೋಷವಾಗಿದೆ. ಐಸಿಸಿ ತಂಡ ಹಾಗೂ ಸದಸ್ಯ ರಾಷ್ಟ್ರಗಳ ಜೊತೆ ಒಟ್ಟಾಗಿ ಕ್ರಿಕೆಟ್‌ನ ಅಭಿವೃದ್ಧಿಗೆ ದುಡಿಯಲು ನಾನು ಬದ್ಧನಾಗಿದ್ದೇನೆ.

- ಜಯ್‌ ಶಾ, ಐಸಿಸಿ ನೂತನ ಅಧ್ಯಕ್ಷ----ಶಾ ಮುಂದಿರುವ ಸವಾಲುಗಳೇನು?

* 2025ರ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯ ಪಾಕಿಸ್ತಾನದ ಬಳಿ ಇದೆ. 2023ರಲ್ಲಿ ಏಷ್ಯಾಕಪ್‌ ಟೂರ್ನಿಯನ್ನು ಏಷ್ಯಾ ಕ್ರಿಕೆಟ್‌ ಸಮಿತಿ ಅಧ್ಯಕ್ಷರಾಗಿ ಶಾ, ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಿದ್ದರು. ಚಾಂಪಿಯನ್ಸ್‌ ಟ್ರೋಫಿಯನ್ನೂ ಹೈಬ್ರಿಡ್‌ ಮಾದರಿಯಲ್ಲೇ ನಡೆಸುವ ಬಗ್ಗೆ ಶಾ ಈ ಮೊದಲೇ ಸುಳಿವು ನೀಡಿದ್ದರು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮನವೊಲಿಸಬೇಕಿದೆ.* ಟೆಸ್ಟ್‌ ಕ್ರಿಕೆಟ್‌ ಉಳಿಸಲು ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಐಸಿಸಿ 125 ಕೋಟಿ ರು. ಅನುದಾನ ಹಂಚಿಕೆ ಮಾಡಲಿದೆ ಎಂದು ವರದಿಯಾಗಿದೆ. ಟಿ20 ಲೀಗ್‌ಗಳ ಹೊಡೆತದಿಂದ ಟೆಸ್ಟ್‌ ಕ್ರಿಕೆಟನ್ನು ಕಾಪಾಡಬೇಕಿದೆ.

* ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಗಮನ ಹರಿಸುವಂತೆ ಆಟಗಾರರಿಂದ ಒತ್ತಡವಿದೆ. ಈ ವಿಚಾರವಾಗಿ ಶಾ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.* 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸಬೇಕಿದೆ.