ತೆರಿಗೆ ರಿಟರ್ನ್ಸ್‌ ಪರಿಗಣಿಸಿ ಪರಿಹಾರ ನೀಡಿದ ಹೈಕೋರ್ಟ್‌

| Published : Apr 01 2024, 02:15 AM IST / Updated: Apr 01 2024, 05:29 AM IST

ಸಾರಾಂಶ

  ಅಪಘಾತ ಪ್ರಕರಣದಲ್ಲಿ ಗಾಯಾಳು ಅಥವಾ ಮೃತ ವ್ಯಕ್ತಿ ವಿವಿಧ ವರ್ಷಗಳಲ್ಲಿ ಘೋಷಿಸಿದ ಆದಾಯವು ಅಸ್ಥಿರವಾಗಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಘೋಷಿಸಲಾದ ಒಟ್ಟು ಆದಾಯ ಪರಿಗಣಿಸಿ ಪರಿಹಾರ ನಿಗದಿಪಡಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

 ಬೆಂಗಳೂರು :  ಮೋಟಾರು ಅಪಘಾತ ಪ್ರಕರಣದಲ್ಲಿ ಗಾಯಾಳು ಅಥವಾ ಮೃತ ವ್ಯಕ್ತಿ ವಿವಿಧ ವರ್ಷಗಳಲ್ಲಿ ಘೋಷಿಸಿದ ಆದಾಯವು ಅಸ್ಥಿರವಾಗಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಘೋಷಿಸಲಾದ ಒಟ್ಟು ಆದಾಯ ಪರಿಗಣಿಸಿ ಪರಿಹಾರ ನಿಗದಿಪಡಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಾದ ಕಲಬುರಗಿ ವಕೀಲೆ ಜಯಶ್ರೀ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಟಿ. ನರೇಂದ್ರ ಪ್ರಸಾದ್‌ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರ ಪೀಠ ಈ ಆದೇಶ ಮಾಡಿದೆ.

ಅಪಘಾತ ಪ್ರಕರಣದಲ್ಲಿ ಸಂತ್ರಸ್ತ ವ್ಯಕ್ತಿ ವೃತ್ತಿನಿರತ ಅಥವಾ ವ್ಯಾಪಾರಿಯಾಗಿದ್ದು, ಆತ ಘೋಷಿಸಿದ ಆದಾಯ ಸ್ಥಿರವಾಗಿರದ ಸಂದರ್ಭದಲ್ಲಿ ಪರಿಹಾರ ಮೊತ್ತ ನಿಗದಿಪಡಿಸಲು ಆದಾಯ ಘೋಷಿತ ವರ್ಷಗಳಲ್ಲಿನ ಸರಾಸರಿಯನ್ನು ಪರಿಗಣಿಸಬೇಕಾಗುತ್ತದೆ. ಇದು ಕ್ಲೇಮುದಾರರ ಹಾಗೂ ವಿಮಾದಾರರ ದೃಷ್ಟಿಯಿಂದ ಸೂಕ್ತ. ಒಂದೊಮ್ಮೆ ಸರಾಸರಿ ಆದಾಯ ಪರಿಗಣಿಸದಿದ್ದರೆ ಅಪಘಾತ ನಡೆದ ಅವಧಿಯಲ್ಲಿನ ಸಂತ್ರಸ್ತರ ಆದಾಯ ಕುಸಿಯುತ್ತದೆ. ಆಗ ಸರಿಯಾದ ಆದಾಯ ಪರಿಗಣಿಸುವ ಪ್ರಕ್ರಿಯೆ ವಿಫಲವಾಗುತ್ತದೆ. ಆದ್ದರಿಂದ, ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಆದಾಯ ಅಸ್ಥಿರವಾಗಿದ್ದರೆ, ಘೋಷಿಸಲಾದ ಒಟ್ಟು ಆದಾಯವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ವಿವರ:

ಜಯಶ್ರೀ ಅವರು 2019ರ ಏ.9ರಂದು ತನ್ನ ಮನೆಯಿಂದ ವಿಜಯಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಬಂದು ಡಿಕ್ಕಿ ಹೊಡೆದಿತ್ತು. ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು. ಆಗ ಅವರಿಗೆ 43 ವರ್ಷವಾಗಿದ್ದು, ಮಾಸಿಕ ಒಂದೂವರೆ ಲಕ್ಷ ರು. ಆದಾಯ ಗಳಿಸುತ್ತಿದ್ದರು. ಘಟನೆಯಿಂದ ಶೇ.35ರಷ್ಟು ಅಂಗವೈಕಲ್ಯ ಅನುಭವಿಸಲಾಗಿದೆ ಎಂದು ಪರಿಹಾರ ಕೋರಿ ಕಲಬುರಗಿ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣಕ್ಕೆ (ಎಂಎಸಿಟಿ) ಅರ್ಜಿ ಸಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಬೈಕ್‌ ಸವಾರನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಲೇ ಅಪಘಾತ ನಡೆದಿದೆ ಎಂದು ತೀರ್ಮಾನಿಸಿತು. ಜತೆಗೆ, ಜಯಶ್ರೀ ಅವರಿಗೆ ಶೇ.5ರಷ್ಟು ಅಂಗವೈಕಲ್ಯವಾಗಿದೆ. 44 ವರ್ಷದ ಅವರು ಮಾಸಿಕ 40,126 ಆದಾಯ ಹೊಂದಿದ್ದರು ಎಂದು ಪರಿಗಣಿಸಿ ಒಟ್ಟು 6,96,704 ರು. ಪರಿಹಾರ ನಿಗದಿಪಡಿಸಿತ್ತು. ಜತೆಗೆ, ಅದನ್ನು ವಾರ್ಷಿಕ ಶೇ.6ರಷ್ಟು ಬಡ್ಡಿದರದಲ್ಲಿ ಪಾವತಿಸುವಂತೆ ಬೈಕ್‌ಗೆ ವಿಮಾ ಪಾಲಿಸಿ ನೀಡಿದ್ದ ಕಂಪನಿಗೆ ನಿರ್ದೇಶಿಸಿ 2022ರ ನ.17ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಜಯಶ್ರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಪರ ವಕೀಲರು ವಾದ ಮಂಡಿಸಿ, ಕ್ಲೇಮುದಾರರು ಅನುಭವಿಸಿರುವ ಶೇ.35ರಷ್ಟು ಅಂಗವೈಕಲ್ಯ ಪರಿಗಣಿಸಿ ಪರಿಹಾರ ನಿಗದಿಪಡಿಸಬೇಕು. ತಮ್ಮ ಆದಾಯ ಪ್ರಮಾಣ ಸಾಬೀತಿಗೆ 2016-17ನೇ, 2017-18 ಮತ್ತು 2018-19ನೇ ಸಾಲಿನಲ್ಲಿ ಕ್ರಮವಾಗಿ 4,95,318, 5,35,411 ಮತ್ತು 5,84,747 ರು. ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲಾಗಿದೆ. 2018-19ನೇ ಸಾಲಿನಲ್ಲಿ ಅವರ ಆದಾಯ ಹೆಚ್ಚಿದ್ದು, ಆ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಆಧರಿಸಿ ಪರಿಹಾರ ನಿಗದಿಪಡಿಸಬೇಕು ಎಂದು ವಾದ ಮಂಡಿಸಿದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ವೈದರು ಕ್ಲೇಮುದಾರರ ಅಂಗವೈಕಲ್ಯ ಪ್ರಮಾಣ ಪತ್ರ ನೀಡುವಾಗ ಅವರು ಇಡೀ ದೇಹದ ಅಂಗವೈಕಲ್ಯವನ್ನು ಮೌಲ್ಯಮಾಪನ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ಗಾಯಗಳು ಮತ್ತು ಅಂಗವೈಕಲ್ಯದ ಸ್ವರೂಪ ಪರಿಗಣಿಸಿದರೆ, ಪ್ರಕರಣದಲ್ಲಿ ಇಡೀ ದೇಹದ ಅಂಗವೈಕಲ್ಯವನ್ನು ಶೇ.12ರಷ್ಟು ನಿರ್ಣಯಿಸುವುದು ಸೂಕ್ತ. ಇನ್ನು ಆದಾಯ ರಿಟರ್ನ್ಸ್‌ ಪರಿಗಣಿಸುವಾಗ ಹೆಚ್ಚು ಆದಾಯ ಹೊಂದಿರುವ ವರ್ಷವನ್ನು ಪರಿಗಣಿಸಬೇಕೆಂಬ ವಾದ ಒಪ್ಪಲಾಗದು. ಆದಾಯ ತೆರಿಗೆ ರಿಟರ್ನ್ಸ್ ಲಭ್ಯವಿದ್ದರೆ, ಅದನ್ನೇ ಅತ್ಯುತ್ತಮ ಪುರಾವೆಯಾಗಿ ಪರಿಗಣಿಸಬೇಕು. ಅದರಂತೆ ಕ್ಲೇಮುದಾರರ ಸ್ಥಿರ/ಸ್ಥಾಪಿತ ಆದಾಯ ಪರಿಗಣಿಸಬೇಕು. ಆದರೆ, ಆದಾಯ ತೆರಿಗೆ ರಿಟರ್ನ್‌ಗಳಲ್ಲಿ ವ್ಯತ್ಯಾಸಗಳು ಕಂಡುಬಂದಾಗ, ಸರಾಸರಿ ಆದಾಯ ಪರಿಗಣಿಸಬೇಕು ಎಂದು ಆದೇಶಿಸಿತು.

ಅಂತಿಮವಾಗಿ ಜಯಶ್ರೀ ಅವರ ಅಂಗವೈಕಲ್ಯ ಪ್ರಮಾಣವನ್ನು ಶೇ.12ರಷ್ಟು, ಮೂರು ವರ್ಷಗಳ ಸರಾಸರಿ ಆದಾಯದ ಮೇರೆಗೆ ಮಾಸಿಕ ಆದಾಯವನ್ನು 42,317 ರು. ರಂದು ಪರಿಗಣಿಸಿ ಪರಿಹಾರ ಮೊತ್ತವನ್ನು 12.92 ಲಕ್ಷ ರು.ಗೆ ಹೆಚ್ಚಿಸಿ ಆದೇಶಿಸಿತು.