ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿನ ಸಾರ್ವಜನಿಕ ಉದ್ಯಾನಗಳ ಸ್ವಚ್ಛತೆ ಕಾಯ್ದುಕೊಳ್ಳಲು ಹಲವು ಮಾರ್ಗಸೂಚಿ ರಚಿಸಿರುವ ಹೈಕೋರ್ಟ್, ಉದ್ಯಾನಗಳಲ್ಲಿ ನಾಯಿಗಳ ಮಲ ವಿಸರ್ಜನೆಗೆ ಕಾರಣವಾಗುವವರಿಗೆ ಹೆಚ್ಚಿನ ದಂಡ ವಿಧಿಸಲು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿಗೆ ಕಟ್ಟುನಿಟ್ಟಿನ ಆದೇಶ ಮಾಡಿದೆ.ನಗರದ ಸಾರ್ವಜನಿಕ ಉದ್ಯಾನಗಳಲ್ಲಿ ಸಾಕು ನಾಯಿಗಳಿಂದ ಉಂಟಾಗುತ್ತಿರುವ ಉಪದ್ರವ ಹಾಗೂ ನಾಯಿಗಳ ಮಲ ವಿಸರ್ಜನೆಗೆ ಕಡಿವಾಣ ಹಾಕಲು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸರ್ಕಾರೇತರ ಸಂಘ ‘ಮೆಸೆರ್ಸ್ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಅಕ್ಷನ್’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಾರ್ಗಸೂಚಿ ರಚಿಸಿದೆ.
ಬೇಜವಾಬ್ದಾರಿಯುತವಾಗಿ ಸಾಕು ಪ್ರಾಣಿಗಳ ಪ್ರವೇಶಕ್ಕೆ ಅವಕಾಶ ನೀಡುತ್ತಿರುವುದರಿಂದ ಸಾರ್ವಜನಿಕ ಉದ್ಯಾನಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ವಿಫಲರಾಗಿದ್ದಾರೆ. ಸಾಕು ಪ್ರಾಣಿಗಳು ವಿಸರ್ಜಿಸಿದ ಮಲ ಸ್ವಚ್ಛಗೊಳಿಸುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರಿಂದ 1288 ದೂರು ದಾಖಲಾಗಿವೆ.ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿ ಉಪದ್ರವ ಉಂಟಾಗದಂತೆ ನಿಷೇಧಿಸುವ ಅವಕಾಶವಿದ್ದರೂ ಅವುಗಳನ್ನು ಜಾರಿ ಮಾಡುವ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ಅರ್ಜಿದಾರರವಾದ ಪರಿಗಣಿಸಿದ ಹೈಕೋರ್ಟ್, ನಾಯಿಗಳ ವಿಕೃತ ನಡೆಯಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಿದೆ. ಸಾರ್ವಜನಿಕ ಉದ್ಯಾನಗಳಲ್ಲಿ ಎಲ್ಲ ರೀತಿಯ ಸಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಆದೇಶಿಸಿದೆ.
ನ್ಯಾಯಾಲಯದ ಮಾರ್ಗಸೂಚಿಗಳು*ಸಾರ್ವಜನಿಕ ಉದ್ಯಾನಗಳಲ್ಲಿ ಸ್ವಚ್ಛತೆ ಕಾಯ್ದಕೊಳ್ಳುವುದು ಸೇರಿ ಇತರೆ ಎಲ್ಲ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡಕ್ಕಿಂತಲೂ, ನಾಯಿಯ ಮಲ ವಿಸರ್ಜಜನೆಗೆ ಕಾರಣರಾಗುವವರಿಗೆ ಹೆಚ್ಚಿನ ದಂಡ ವಿಧಿಸಬೇಕು.
*ತೋಟಗಾರಿಕೆ ಇಲಾಖೆಯ ಒಬ್ಬ ಅಧಿಕಾರಿ, ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ತಂಡ ರಚಿಸಬೇಕು. ಈ ತಂಡ ಕಾಲಕಾಲಕ್ಕೆ ನಗರದ ಎಲ್ಲ ಪ್ರಮುಖ ಉದ್ಯಾನಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ವಚ್ಛತೆಗೆ ಅಗತ್ಯ, ಪರಿಣಾಮಕಾರಿ ಕ್ರಮ ರೂಪಿಸಿ ಜಾರಿಗೊಳಿಸಬೇಕು.*ಉದ್ಯಾನ ಪ್ರದೇಶ ಮತ್ತು ಆವರಣದಲ್ಲಿ ಉಗುಳುವುದು, ಕಸ ಎಸೆಯವುದು, ಸಾಕು ಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ಮಾಡುವುದನ್ನು ನಿಯಂತ್ರಿಸುವ, ಸ್ವಚ್ಛತೆ ಕಾಯ್ದುಕೊಳ್ಳುವ ಮತ್ತು ಅದನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಜವಾಬ್ದಾರಿಯನ್ನು ತಪ್ಪದೇ ನಿರ್ವಹಿಸಬೇಕು.
*ಉದ್ಯಾನಗಳ ಕುರಿತ ಸಮರ್ಪಕ ನಿರ್ವಹಣೆ, ಜಾಗರೂಕತೆ ಕಾಯ್ದುಕೊಳ್ಳಲು ರಾಜ್ಯ ಸರ್ಕಾರ, ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಶಾಶ್ವತ ಕಾರ್ಯವಿಧಾನ ರೂಪಿಸಿ ಅಭಿವೃದ್ಧಿಪಡಿಸಬೇಕು.*ಬಿಬಿಎಂಪಿ ಅಧಿಕಾರಿಗಳು ನಗರದ ಉದ್ಯಾನಗಳಲ್ಲಿ ಕರ್ನಾಟಕ ಉದ್ಯಾನಗಳು, ಆಟದ ಮೈದಾನ ಮತ್ತು ಮುಕ್ತ ಸ್ಥಳಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ-1985 ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
*ಉದ್ಯಾನಗಳಿಗೆ ಸಾಕು ನಾಯಿಗಳನ್ನು ಕರೆತರುವ ಮಾಲೀಕರು, ನಾಯಿ ವಿಸರ್ಜನೆ ಮಾಡುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕೈ ಚೀಲ ತರುವ ಬಗ್ಗೆ ಜಾಗೃತಿ ಮೂಡಿಸಬೇಕು.*ಉದ್ಯಾನಗಳಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಸಮರ್ಪಕ ನಿರ್ವಹಣೆಗೆ ಸರ್ಕಾರ ಸೇರಿದಂತೆ ಎಲ್ಲ ಸಂಬಂಧಪಟ್ಟ ಪ್ರಾಧಿಕಾರಗಳು ಅಗತ್ಯ ಬಜೆಟ್ ಮೀಸಲಿಡಬೇಕು.
*ಉದ್ಯಾನಗಳ ಸಂರಕ್ಷಣೆಯ ಮೇಲ್ವಿಚಾರಣೆಗೆ ತಂಡ ನಿಯೋಜಿಸಲು, ತಪ್ಪಿತಸ್ಥರಿಗೆ ದಂಡ ವಿಧಿಸುವ ಸಲುವಾಗಿ ಬಿಬಿಎಂಪಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಿಕೊಳ್ಳಬಹುದು.