ಬಜೆಟ್‌ ಲೆಕ್ಕ ಭಾರೀ ಪಕ್ಕಾ : ಇಂದು 7ನೇ ಬಜೆಟ್‌ ಮಂಡನೆ -ದೇಶದ ಬಜೆಟ್‌ ಇತಿಹಾಸದ ಒಂದು ಹಿನ್ನೋಟ

| Published : Jul 23 2024, 12:31 AM IST / Updated: Jul 23 2024, 06:01 AM IST

ಸಾರಾಂಶ

ಕೇಂದ್ರ ಸಚಿವೆ ನಿರ್ಮಲಾ ದಾಖಲೆಯ ಸತತ 7ನೇ ಬಜೆಟ್‌ ಮಂಡನೆ ಹೊತ್ತಲ್ಲಿ ದೇಶದ ಬಜೆಟ್‌ ಇತಿಹಾಸದ ಒಂದು ಹಿನ್ನೋಟ ಇಲ್ಲಿದೆ.

ಮನೆಯ ಯಜಮಾನ ಮಾಸಿಕ ವೇತನ ತಂದು ಕೊಟ್ಟರೆ ಮನೆಯೊಡತಿ ಇಡೀ ತಿಂಗಳ ಖರ್ಚು ವೆಚ್ಚದ ಪಟ್ಟಿ ಮಾಡಿ ಅದರಂತೆ ಹಣ ವಿನಿಯೋಗದ ಯೋಜನೆ ರೂಪಿಸುತ್ತಾಳೆ. ದೇಶದ ವಿಷಯದಲ್ಲೂ ಇದೇ ಸಂಪ್ರದಾಯ ಪಾಲನೆಯಾಗುತ್ತದೆ. 

ಆದರೆ ಇಲ್ಲಿ ತಿಂಗಳ ಬದಲು ವರ್ಷದ ಲೆಕ್ಕ. ಇಲ್ಲಿ ಪ್ರಧಾನಿ ಹುದ್ದೆ ಮನೆಯೊಡೆಯನ ಪಾತ್ರ ನಿರ್ವಹಿಸಿದರೆ ಹಣಕಾಸು ಇಲಾಖೆ ಮನೆಯೊಡತಿಯಂತೆ ಕಾರ್ಯನಿರ್ವಹಿಸುತ್ತದೆ. ಇಂಥದ್ದೊಂದು ಲೆಕ್ಕಾಚಾರ ಶತ ಶತಮಾನಗಳಿಂದಲೂ ವಿಶ್ವದೆಲ್ಲೆಡೆ ಪಾಲನೆಯಾಗುತ್ತಿದೆ. ಬಜೆಟ್‌ ಎಂದರೆ ಫ್ರೆಂಚ್ ಭಾಷೆಯಲ್ಲಿ ಚರ್ಮದ ಬ್ಯಾಗ್‌ ಎಂದರ್ಥ. ಈ ಪದದ ಮೂಲ ಲ್ಯಾಟಿನ್‌ನ ಭಾಷೆಯ ಬಲ್ಗಾ. ಭಾರತದಲ್ಲೂ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್‌ಗೆ ಸುದೀರ್ಘ ಇತಿಹಾಸವಿದೆ. ಕೇಂದ್ರ ಸಚಿವೆ ನಿರ್ಮಲಾ ದಾಖಲೆಯ ಸತತ 7ನೇ ಬಜೆಟ್‌ ಮಂಡನೆ ಹೊತ್ತಲ್ಲಿ ದೇಶದ ಬಜೆಟ್‌ ಇತಿಹಾಸದ ಒಂದು ಹಿನ್ನೋಟ ಇಲ್ಲಿದೆ.

ಬಜೆಟ್ ಎಂದರೇನು?ಬಜೆಟ್, ವ್ಯವಸ್ಥೆಯೊಂದರ ಒಂದಿಡೀ ವರ್ಷದ ಹಣಕಾಸು ವರದಿ. ಸಂವಿಧಾನ ಪರಿಚ್ಚೇಧ 112ರ ಪ್ರಕಾರ ಕೇಂದ್ರ ಬಜೆಟ್ ಎಂದರೆ ಪ್ರಸ್ತಕ ಹಣಕಾಸು ವರ್ಷಕ್ಕೆ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚಗಳ ಲೆಕ್ಕ ಎಂದರ್ಥ. ಹಣಕಾಸು ವರ್ಷ ಎಂದರೆ ಏ.1 ರಿಂದ ಮುಂದಿನ ಮಾರ್ಚ್‌ 31ರವರೆಗೆ ಅಂತ್ಯಗೊಳ್ಳುವುದು. ಕೇಂದ್ರ ಬಜೆಟ್‌ ಎರಡು ಭಾಗ ಹೊಂದಿರುತ್ತದೆ. ಒಂದು ರೆವಿನ್ಯೂ ಬಜೆಟ್ ಮತ್ತೊಂದು ಕ್ಯಾಪಿಟಲ್ ಬಜೆಟ್. ರೆವಿನ್ಯೂ ಬಜೆಟ್‌ ಸರ್ಕಾರಕ್ಕೆ ಬರುವ ಆದಾಯ ಸೂಚಿಸಿದರೆ, ಕ್ಯಾಪಿಟಲ್ ಬಜೆಟ್ ಸರ್ಕಾರ ಋಣಭಾರ, ಸಾಲ ಸೂಚಿಸುತ್ತದೆ.

ಬ್ಲ್ಯೂ ಪ್ರಿಂಟ್ ತಯಾರಿ ಹೇಗೆ?

ಕೇಂದ್ರ ಬಜೆಟ್‌ ತಯಾರಿಯ ಬ್ಲ್ಯೂ ಪ್ರಿಂಟ್ ವಿವಿಧ ಹಂತದಲ್ಲಿ ನಡೆಯುತ್ತದೆ. ತಯಾರಿಗೆ ಪೂರ್ವ ಸಮಾಲೋಚನೆಗಳು ನಡೆಯುತ್ತದೆ. ಹಣಕಾಸು ಸಚಿವರು, ಉದ್ಯಮ ಸಂಘಟನೆಗಳು, ಉದ್ಯಮಿಗಳು, ರೈತ ಸಂಘಟನೆ, ಕಾರ್ಮಿಕ ಸಂಘಟನೆ, ಆರ್ಥಿಕ ತಜ್ಞರು, ವಿವಿಧ ಕ್ಷೇತ್ರದ ತಜ್ಞರ ಜೊತೆ ಸಮಾಲೋಚನೆ ನಡೆಯುತ್ತದೆ.

ಬಜೆಟ್‌ ಸಿದ್ಧತೆ ಸಭೆಯಲ್ಲಿ ಯಾರೆಲ್ಲ ಭಾಗಿ?

ಸಮಾಲೋಚನೆ ಬಳಿಕದ ಬಜೆಟ್‌ ಸಿದ್ಧತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗುತ್ತಾರೆ. ಹಣಕಾಸು ಸಚಿವರು, ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ವೆಚ್ಚ ಇಲಾಖೆ ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರ, ಜಂಟಿ ಕಾರ್ಯದರ್ಶಿಗಳು ಮತ್ತು ನಿರ್ದೇಶಕರು, ಹಣಕಾಸು, ವಿವಿಧ ಇಲಾಖೆಯ ಸಚಿವಾಲಯಗಳು ಮತ್ತು ಇಲಾಖೆಗಳು, ನೀತಿ ಆಯೋಗ, ಆರ್‌ಬಿಐ ಗವರ್ನರ್, ಭಾರತದ ಕಂಟ್ರೋಲರ್ ಮತ್ತು ಆಡಿಟರ್‌ ಜನರಲ್‌ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗುತ್ತಾರೆ.

ಕೇಂದ್ರ ಬಜೆಟ್ ಪ್ರಕ್ರಿಯೆ ಹೇಗೆ?

ಬಜೆಟ್‌ ರಚನೆಯಲ್ಲಿದೆ ಹಲವು ಹಂತಆರಂಭಿಕ ಹಂತ:1. ಮಂಡನೆಗೆ ಆರು ತಿಂಗಳ ಮುಂಚೆಯೇ ಬಜೆಟ್ ರಚನೆ ಪ್ರಕ್ರಿಯೆ ಆರಂಭವಾಗುತ್ತದೆ. ಹಣಕಾಸು ಸಚಿವಾಲಯ ಮತ್ತು ಅದಕ್ಕೆ ಸಂಬಂಧಿತ ಸಚಿವಾಲಯ ಮತ್ತು ಇಲಾಖೆಗಳಿಗೆ ಅಗತ್ಯ ಸೂಚನೆ ಮತ್ತು ಮಾರ್ಗಸೂಚಿಗಳೊಂದಿಗೆ ಸುತ್ತೋಲೆಗಳನ್ನು ನೀಡುತ್ತದೆ.2. ವಿವಿಧ ಇಲಾಖೆಗಳು ವಿಭಾಗದ ಅಧಿಕಾರಿಗಳಿಗೆ ತಮ್ಮ ಇಲಾಖೆಗಳ ಹಣಕಾಸಿನ ವೆಚ್ಚ, ಪ್ರಸ್ತುತ ಮತ್ತು ಹಿಂದಿನ ಆರ್ಥಿಕ ವಹಿವಾಟಿನ ಲೆಕ್ಕಾಚಾರ, ಮುಂಬರುವ ಆರ್ಥಿಕ ವರ್ಷಕ್ಕೆ ಬೇಕಾಗುವ ಹಣಕಾಸಿನ ಅವಶ್ಯಕತೆಗಳ ಬಗ್ಗೆ ವಿವರಗಳನ್ನು ಸಲ್ಲಿಕೆ ಮಾಡುತ್ತದೆ.3. 

ಕೆಳ ಹಂತದ ಅಧಿಕಾರಿಗಳು ಸಲ್ಲಿಸಿದ ಹಣಕಾಸಿನ ಆಯವ್ಯಯ ಲೆಕ್ಕಾಚಾರಗಳನ್ನು ಉನ್ನತ ಅಧಿಕಾರಿಗಳು ಕೂಲಂಕಷವಾಗಿ ಪರೀಶಿಲನೆ ನಡೆಸುತ್ತಾರೆ. ಬಳಿಕ ಅನುಮೋದನೆ ಅಥವಾ ಪರಿಷ್ಕರಣೆಗೆ ನಡೆದು ಅಂಕಿ ಅಂಶ ಸಚಿವಾಲಯಕ್ಕೆ ಸಲ್ಲಿಕೆಯಾಗುತ್ತದೆ. ಸಚಿವಾಲಯ ಆ ಪಟ್ಟಿಯನ್ನು ಹಣಕಾಸು ಇಲಾಖೆಗೆ ಕಳುಹಿಸುತ್ತದೆ. ನಂತರ ಹಣಕಾಸು ಇಲಾಖೆ , ಎಲ್ಲ ಇಲಾಖೆಗಳು ಸಲ್ಲಿಸಿರುವ ಪಟ್ಟಿಯನ್ನು ನೋಡಿ ಸಾಧ್ಯ ಸಾಧ್ಯತೆಯನ್ನು ಗಮನಿಸಿ ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ಆಯವ್ಯಯ ಪಟ್ಟಿ ಸಿದ್ಧತೆಗೆ ಮುಂದಾಗುತ್ತದೆ.4. ದತ್ತಾಂಶ ಕ್ರೋಢಿಕರಣದ ಬಳಿಕ ಹಣಕಾಸು ಇಲಾಖೆ ಬಜೆಟ್ ರಚನೆಗೆ ಮುಂದಾಗುತ್ತದೆ. 

ವಿವಿಧ ಇಲಾಖೆಗಳಿಗೆ ಆದಾಯದ ಹಂಚಿಕೆ ಮಾಡಿ, ಹೊಸ ಯೋಜನೆಗಳನ್ನು ಸಿದ್ಧಪಡಿಸುತ್ತದೆ. ಪ್ರಧಾನಿ ಮತ್ತು ವಿತ್ತ ಸಚಿವರ ಜೊತೆ ಚರ್ಚೆ ನಡೆಸಲಾಗುತ್ತದೆ. ಅವರ ತೀರ್ಮಾನವೇ ಅಂತಿಮ.5. ಸಂಪನ್ಮೂಲಗಳ ಹಂಚಿಕೆ ಬಳಿಕ ಹಣಕಾಸು ಸಚಿವಾಲಯವು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮತ್ತು ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ ಸಹಯೋಗದೊಂದಿಗೆ ಮುಂದಿನ ವರ್ಷದ ಆದಾಯದ ವರದಿ ಸಿದ್ಧ ಪಡಿಸುತ್ತದೆ.6. ಅಂತಿಮವಾಗಿ ವಿತ್ತ ಸಚಿವರು ಬಜೆಟ್‌ ಮಂಡನೆ ಮಾಡುವುದು ಬಜೆಟ್‌ ಪ್ರಕ್ರಿಯೆಯ ಕೊನೆಯ ಹಂತ. ಬಜೆಟ್‌ ಅನ್ನು ಸಾಮಾನ್ಯವಾಗಿ ಫೆ.1 ರಂದು ಮಂಡಿಸಲಾಗುತ್ತದೆ. ಆದರೆ ಚುನಾವಣೆ ವರ್ಷದಲ್ಲಿ ಬಾರಿ ಬಜೆಟ್ ಮಂಡಿಸಲಾಗುತ್ತದೆ. ಒಂದು ಮಧ್ಯಂತರ ಬಜೆಟ್ ಮತ್ತೊಂದು ಪೂರ್ಣಾವಧಿ ಬಜೆಟ್‌.

ಸೂಟ್‌ಕೇಸ್‌ನಿಂದ ಡಿಜಿಟಲ್ ಬಜೆಟ್‌ರವರೆಗೆ

ಮೊದಲಿಗೆ ಬಜೆಟ್‌ ಪ್ರತಿಯನ್ನು ಸೂಟ್‌ಕೇಸ್‌ನಲ್ಲಿ ತಂದು ಮಂಡಿಸುವ ಪರಿಪಾಠವಿತ್ತು. ಆದರೆ 2019ರಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವೆಯಾದ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಬ್ರೀಫ್‌ಕೇಸ್‌ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ, ಸಾಂಪ್ರದಾಯಿಕ ಲೆಡ್ಜರ್‌ನಲ್ಲಿ ಬಜೆಟ್‌ ಪತ್ರ ತಂದಿದ್ದರು. 2021ರಲ್ಲಿ ನಿರ್ಮಲಾ ಟ್ಯಾಬ್‌ನಲ್ಲಿ ಬಜೆಟ್‌ ಮಂಡಿಸಿ ಡಿಜಿಟಲ್‌ ಬಜೆಟ್‌ ಮಂಡನೆಗೆ ನಾಂದಿ ಹಾಡಿದರು.

ಭಾರತದಲ್ಲಿ ಬಜೆಟ್‌ ನಡೆದು ಬಂದ ಹಾದಿ

1860ರಲ್ಲಿ ದೇಶ ಮೊದಲ ಬಾರಿಗೆ ಬ್ರಿಟಿಷ್ ಆಡಳಿತದಲ್ಲಿ ಬಜೆಟ್‌ಗೆ ಸಾಕ್ಷಿಯಾಗಿತ್ತು. ಆದರೆ ದೇಶ ದಾಸ್ಯದಿಂದ ಮುಕ್ತವಾದ ಬಳಿಕ ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊದಲ ಬಾರಿಗೆ 1947ರ ನ.26ರಂದು ಕೇಂದ್ರದ ಮೊದಲ ಬಜೆಟ್‌ಗೆ ಸಾಕ್ಷಿಯಾಗಿತ್ತು. ಮೊದಲ ಹಣಕಾಸು ಸಚಿವ ಆರ್‌.ಕೆ. ಷಣ್ಮುಖಂ ಚೆಟ್ಟಿ ಅಂದು ದೇಶದ ಪ್ರಪ್ರಥಮ ಆಯವ್ಯಯ ಮಂಡಿಸಿದ್ದರು.

ಸಂಜೆ ಬದಲು ಬೆಳಗ್ಗೆ ಹೊತ್ತು ಮಂಡನೆ

ಮೊದಲಿಗೆ ಬಜೆಟ್‌ ಅನ್ನು ಫೆಬ್ರವರಿ ತಿಂಗಳ ಕೊನೆ ದಿನ ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಬ್ರಿಟನ್‌ನಲ್ಲಿ ಅದು ಬೆಳಗ್ಗೆ ಸಮಯವಾಗಿರುವ ಕಾರಣ, ಅಲ್ಲಿನ ಸಮಯಕ್ಕೆ ಹೊಂದಿಕೆಯಾಗುವಂತೆ ಬ್ರಿಟಿಷರು ಬಜೆಟ್‌ ಸಮಯ ನಿಗದಿ ಮಾಡಿದ್ದರು. ಆದರೆ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ, ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಬೆಳಿಗ್ಗೆ 11 ಗಂಟೆಗೆ ಬಜೆಟ್ ಸಮಯ ಬದಲಾವಣೆ ಮಾಡಲಾಯಿತು.

ಸ್ವತಂತ್ರ ದೇಶದ ಮೊದಲ ಬಜೆಟ್‌ ಹೇಗಿತ್ತು?

ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದ ಬಜೆಟ್ ಕೇಬಲ ಏಳು ತಿಂಗಳ ಅವಧಿಗೆ ಮಂಡಿಸಿದ್ದ ಮಧ್ಯಂತರ ಬಜೆಟ್ ಆಗಿತ್ತು. ಸ್ವತಂತ್ರ ದೇಶದ ಮೊದಲ ಬಜೆಟ್‌ ಸಂಜೆ 5 ಗಂಟೆಗೆ ನಡೆದಿತ್ತು. ಅಂದಿನ ಬಜೆಟ್‌ ಗಾತ್ರ 197.39 ಕೋಟಿ ರೂಪಾಯಿ. ಸ್ವತಂತ್ರ ಭಾರತದ ಬಳಿಕ ಭಾರತ 73 ಪೂರ್ಣ ಪ್ರಮಾಣದ ಬಜೆಟ್ ಮತ್ತು 14 ಮಧ್ಯತರ ಬಜೆಟ್ ಕಂಡಿದೆ.

ನೆಹರೂ ಕೂಡ ಬಜೆಟ್ ಮಂಡಿಸಿದ್ದರು

ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂ ಕೂಡ ಬಜೆಟ್ ಮಂಡನೆ ಮಾಡಿದ್ದರು. 1958ರಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಟಿ.ಟಿ. ಕೃಷ್ಣಮಾಚಾರಿ ರಾಜೀನಾಮೆ ನೀಡಿದ ಬಳಿಕ ನೆಹರೂ ಅವರು ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡಿಸಿದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು.

ಅತಿ ಹೆಚ್ಚು ಬಜೆಟ್ ಮಂಡನೆ ಮೊರಾರ್ಜಿಯದ್ದು

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಈ ತನಕ ಹೆಚ್ಚು ಬಜೆಟ್‌ ಮಂಡಿಸಿದವರಲ್ಲಿ ಅಗ್ರ ಗಣ್ಯರು. ಜವಾಹರ್‌ಲಾಲ್ ನೆಹರೂ ಮತ್ತು ಲಾಲ್‌ ಬಹಾದ್ದೂರ್ ಶಾಸ್ತ್ರಿ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ದೇಸಾಯಿ ಒಟ್ಟು 10 ಬಜೆಟ್ ಮಂಡಿಸಿದ್ದಾರೆ. ಮೊರಾರ್ಜಿ 1959ರ ಫೆ. 28ರಂದು ಮೊದಲ ಸಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು.

ಬಜೆಟ್ ಮಂಡಿಸಿದ ಮೊದಲ ಮಹಿಳೆ

ಸಂಸತ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಬಜೆಟ್ ಮಂಡಿಸಿದ ಮಹಿಳೆ ಇಂದಿರಾಗಾಂಧಿ. ಇಂದಿರಾ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಬಜೆಟ್ ಮಂಡಿಸಿದ್ದರು. ಈ ಮೂಲಕ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎನ್ನುವ ದಾಖಲೆ ಬರೆದರು.

ಮೊದಲ ಹಣಕಾಸು ಸಚಿವೆ ನಿರ್ಮಲಾ

ಏಳನೇ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆಯುವುದಕ್ಕೆ ಹೊರಟಿರುವ ನಿರ್ಮಲಾ ಸೀತಾರಾಮನ್ ದೇಶದ ಮೊದಲ ಹಣಕಾಸು ಸಚಿವೆ. ಬಜೆಟ್ ಮಂಡಿಸಿದ ಮೊದಲ ಸಚಿವೆ ಕೂಡಾ ಹೌದು.

ಬಜೆಟ್‌ ವಿಶೇಷತೆಗಳು

ಕಪ್ಪು ಬಜೆಟ್‌:

550 ಕೋ.ರು.ಗಳ ಹೆಚ್ಚಿನ ಬಜೆಟ್ ಕೊರತೆಯಿಂದಾಗಿ 1973-74ರ ಆರ್ಥಿಕ ವರ್ಷದಲ್ಲಿ ಯಶವಂತ್‌ ರಾವ್ ಬಿ ಚೌಹ್ಹಾಣ್‌ ಮಂಡಿಸಿದ ಬಜೆಟ್‌ನ್ನು ‘ಕಪ್ಪು ಬಜೆಟ್’ ಎಂದು ಕರೆಯಲಾಗುತ್ತದೆ.

ನವಯುಗ ಬಜೆಟ್‌:

1991ರಲ್ಲಿ ಮನಮೋಹನ್ ಸಿಂಗ್ ಆರ್ಥಿಕ ಬಿಕ್ಕಟ್ಟಿನ ನಡುವೆ ಬಜೆಟ್ ಮಂಡಿಸಿದರು. ಇದನ್ನು ‘ನವಯುಗ’ ಬಜೆಟ್ ಎಂದು ಕರೆಯಲಾಗುತ್ತದೆ.

ರೈಲ್ವೆ ಬಜೆಟ್‌ ವಿಲೀನ:

92 ವರ್ಷಗಳ ಕಾಲ ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್ 2017ರಲ್ಲಿ ಕೇಂದ್ರ ಬಜೆಟ್‌ನಲ್ಲಿ ವಿಲೀನಗೊಂಡಿತು.

ಕುಟುಂಬದ ಮೂವರ ಬಜೆಟ್‌:

ಒಂದೇ ಕುಟುಂಬದ ಮೂವರು ಬಜೆಟ್ ಮಂಡಿಸಿದ್ದಾರೆ. ಜವಾಹರ್‌ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಜೆಟ್ ಮಂಡಿಸಿದ್ದಾರೆ. ಮೂವರು ಕೂಡ ಪ್ರಧಾನಿಯಾಗಿದ್ದಾಗಲೇ ಬಜೆಟ್ ಮಂಡಿಸಿದ್ದು ವಿಶೇಷ.

ಆರ್ಥಿಕತೆ ಬದಲಿಸಿದ ನೀತಿಗಳು

1950: ಜಾನ್ ಮಥಾಯಿ: ಪಂಚವಾರ್ಷಿಕ ನೀತಿ,ಯೋಜನಾ ಆಯೋಗ

1957: ಟಿ.ಟಿ. ಕೃಷ್ಣಮಾಚಾರಿ: ಸಂಪತ್ತು ತೆರಿಗೆ, ಸ್ವಯಂಪ್ರೇರಿತ ಬಹಿರಂಗ ಪಡಿಸುವಿಕೆ

1986 ವಿ.ಪಿ.ಸಿಂಗ್‌: ರಾಜ್ ಮತ್ತು ಪರೋಕ್ಷ ತೆರಿಗೆ ಸುಧಾರಣೆ

1987 ರಾಜೀವ್ ಗಾಂಧಿ: ಕನಿಷ್ಠ ಪರ್ಯಾಯ ತೆರಿಗೆ

1991 ಮನಮೋಹನ್ ಸಿಂಗ್: ಭಾರತದ ಆರ್ಥಿಕತೆಯ ಉದಾರೀಕರಣ

1997- ಪಿ.ಚಿದಂಬರಂ: ಕಸ್ಟಮ್ಸ್ ಸುಂಕ ಕಡಿತ, ಅಬಕಾರಿ ಸುಂಕದ ಸರಳೀಕೃತ ಯೋಜನೆ

2000-ಯಶವಂತ್ ಸಿನ್ಹಾ: ಐಟಿ ಕ್ಷೇತ್ರದಲ್ಲಿ ಸುಧಾರಣೆ

2015-ಅರುಣ್ ಜೇಟ್ಲಿ: ಜಿಎಸ್‌ಟಿ ಪರಿಚಯ

2022- ನಿರ್ಮಲಾ ಸೀತಾರಾಮನ್: ಮೂಲಭೂತ ಸೌಕರ್ಯಕ್ಕೆ ವಿಶೇಷ ಆದ್ಯತೆ

ಬಜೆಟ್‌ ಗಾತ್ರ

ಬಜೆಟ್ ವರ್ಷ ಗಾತ್ರ1 1947 197 ಕೋಟಿ ರು.

10 1955 353 ಕೋಟಿ ರು.20 1963 1092 ಕೋಟಿ ರು.

30 1972 1787 ಕೋಟಿ ರು.40 1982 21,137 ಕೋಟಿ ರು.

50 1991 72,317 ಕೋಟಿ ರು.60 2001 3.75 ಲಕ್ಷ ಕೋಟಿ ರು.

70 2009 10 ಲಕ್ಷ ಕೋಟಿ ರು.80 2018 24 ಲಕ್ಷ ಕೋಟಿ ರು.

ಯಾರಿಂದ ಎಷ್ಟು ಭಾರಿ ಬಜೆಟ್‌ ಮಂಡನೆ

ಆರ್.ಕೆ.ಷಣ್ಮುಖಂ ಚೆಟ್ಟಿ (2), ಜಾನ್‌ ಮಥಾಯ್‌ (2), ಸಿ.ಡಿ. ದೇಶಮುಖ್‌ (7), ಟಿ.ಟಿ. ಕೃಷ್ಣಾಮಾಚಾರಿ (4), ಜವಾಹರ ಲಾಲ್ ನೆಹರು (ಪ್ರಧಾನಿ) 1, ಮುರಾರ್ಜಿ ದೇಸಾಯಿ 10, ಸಚೀಂದ್ರ ಚೌಧರಿ (1), ಇಂದಿರಾ ಗಾಂಧಿ (ಪ್ರಧಾನಿ) 1, ಯಶವಂತ್‌ರಾವ್‌ ಚೌಹಾಣ್‌ (4), ಚಿದಂಬರಂ ಸುಬ್ರಮಣ್ಯಂ (2), ಹಿರೂಭಾಯಿ ಎಂ ಪಟೇಲ್‌ (2), ಚರಣ್‌ ಸಿಂಗ್‌ (ಪ್ರಧಾನಿ) 1, ಆರ್‌.ವೆಂಕಟರಾಮನ್‌ (2), ಪ್ರಣಬ್‌ ಮುಖರ್ಜಿ (8), ವಿ.ಪಿ. ಸಿಂಗ್‌ (2), ರಾಜೀವ್‌ ಗಾಂಧಿ (ಪ್ರಧಾನಿ) 1, ಎನ್‌.ಡಿ. ತಿವಾರಿ (1), ಶಂಕರರಾವ್‌ ಚೌಹಾಣ್‌ (1), ಮಧು ದಂಡವತೆ (1), ಮನಮೋಹನ್‌ ಸಿಂಗ್‌ (5), ಪಿ.ಚಿದಂಬರಂ (9), ಯಶ್ವಂತ್‌ ಸಿನ್ಹಾ (5), ಜಸ್ವಂತ್‌ ಸಿಂಗ್‌ (2), ಅರುಣ್‌ ಜೇಟ್ಲಿ (5), ಪಿಯೂ ಗೋಯಲ್‌ (1), ನಿರ್ಮಲಾ ಸೀತಾರಾಮನ್‌ (6).