ಗಡಿ ಮೇಲೆ ನಿಗಾ ಇಡುವ ‘ಬಲೂನ್‌’ ಪ್ರಯೋಗ ಯಶ । ಭಾರತಕ್ಕೆ ಏರ್‌ಶಿಪ್‌ ಬಲ

| N/A | Published : May 05 2025, 12:53 AM IST / Updated: May 05 2025, 06:38 AM IST

ಗಡಿ ಮೇಲೆ ನಿಗಾ ಇಡುವ ‘ಬಲೂನ್‌’ ಪ್ರಯೋಗ ಯಶ । ಭಾರತಕ್ಕೆ ಏರ್‌ಶಿಪ್‌ ಬಲ
Share this Article
  • FB
  • TW
  • Linkdin
  • Email

ಸಾರಾಂಶ

  ಗಡಿಯ ಮೇಲೆ ಬಿಗಿ ಕಣ್ಗಾವಲು ಇಡುವ ಬಲೂನ್‌ ಮಾದರಿಯ ‘ಏರ್‌ಶಿಪ್‌’ನ ಚೊಚ್ಚಲ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ನಡೆಸಿದೆ.

ನವದೆಹಲಿ: ಪಹಲ್ಗಾಂ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿಯಲ್ಲಿ ತ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ, ಭೂಮಿಯಿಂದ ಸುಮಾರು 20 ಕಿ.ಮೀ. ಎತ್ತರದಲ್ಲಿ ನಿಂತು ಗಡಿಯ ಮೇಲೆ ಬಿಗಿ ಕಣ್ಗಾವಲು ಇಡುವ ಬಲೂನ್‌ ಮಾದರಿಯ ‘ಏರ್‌ಶಿಪ್‌’ನ ಚೊಚ್ಚಲ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ನಡೆಸಿದೆ. ವಾಯುಮಂಡಲದಲ್ಲಿ 2ನೇ ಪದರವಾಗಿರುವ ಸಮೋಷ್ಣ ವಲಯ (ಸ್ಟ್ರಾಟೋಸ್ಫಿಯರ್‌)ಕ್ಕೆ ಏರ್‌ಶಿಪ್‌ ನಿಯೋಜಿಸುವ ತಂತ್ರಜ್ಞಾನ ವಿಶ್ವದ ಕೆಲವೇ ದೇಶಗಳ ಬಳಿ ಇದ್ದು, ಅದು ಈಗ ಭಾರತಕ್ಕೂ ದಕ್ಕಿದಂತಾಗಿದೆ.

‘ಸ್ಟ್ರ್ಯಾಟ್ರೋಸ್ಫಿಯರಿಕ್‌ ಏರ್‌ಶಿಪ್‌ ಪ್ಲ್ಯಾಟ್‌ಫಾರಂ’ ಹೆಸರಿನ ಈ ಪ್ರಯೋಗವನ್ನು ಮಧ್ಯಪ್ರದೇಶದ ಶ್ಯೋಪುರ್ ಪರೀಕ್ಷಾರ್ಥ ಕೇಂದ್ರದಲ್ಲಿ ಡಿಆರ್‌ಡಿಒ ಶನಿವಾರ ನೆರವೇರಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ತನ್ಮೂಲಕ ಬಾಹ್ಯಾಕಾಶ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದಂತಾಗಿದೆ.

ಹೇಗೆ ನಡೆಯಿತು?:

ಆಗ್ರಾ ಮೂಲದ ವೈಮಾನಿಕ ಸಾಗಣೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಎಡಿಆರ್‌ಡಿಇ) ಈ ಏರ್‌ಶಿಪ್‌ ಅನ್ನು ಅಭಿವೃದ್ಧಿಪಡಿಸಿದೆ. ಮಾನವರಹಿತ ನೌಕೆ ಇದಾಗಿದ್ದು, ವಿವಿಧ ಉಪಕರಣ ಹೊತ್ತು ಭೂಮಿಯಿಂದ ಸುಮಾರು 17 ಕಿ.ಮೀ. ಎತ್ತರದವರೆಗೆ ಹಾರಿತು. ಬಳಿಕ ಭೂಮಿಗೆ ಇಳಿಯಿತು. 62 ನಿಮಿಷಗಳ ಹಾರಾಟದ ಸಂದರ್ಭದಲ್ಲಿ ಏರ್‌ಶಿಪ್‌ನಲ್ಲಿದ್ದ ಸೆನ್ಸರ್‌ ಅತ್ಯಮೂಲ್ಯ ಅಂಶಗಳನ್ನು ಸಂಗ್ರಹಿಸಿತು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಸಮೋಷ್ಣ ಏರ್‌ಶಿಪ್‌ಗಳು ಎತ್ತರದ ಸ್ಥಳದಲ್ಲಿನ ಛಾಯಾ ಉಪಗ್ರಹಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಭೂಮಿಯಿಂದ 17ರಿಂದ 22 ಕಿ.ಮೀ. ಎತ್ತರದವರೆಗೆ ಇವನ್ನು ನಿಯೋಜನೆ ಮಾಡಬಹುದು. ಹೀಲಿಯಂ ಅನಿಲವನ್ನು ಬಳಸಿ ಇವು ಆಗಸಕ್ಕೆ ಹೋಗುತ್ತವೆ. ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುತ್ತವೆ. ಅದರಲ್ಲಿರುವ ಬ್ಯಾಟರಿಗಳು ರಾತ್ರಿ ವೇಳೆಯೂ ಏರ್‌ಶಿಪ್‌ ಕಾರ್ಯಾಚರಣೆಗೆ ನೆರವಾಗುತ್ತವೆ.

ಏರ್‌ಶಿಪ್‌ಗಳು ಉಪಗ್ರಹ ಅಥವಾ ವಿಮಾನಗಳಂತೆ ಅಲ್ಲ. ನಿರ್ದಿಷ್ಟ ಸ್ಥಳದಲ್ಲಿ ಹಲವು ದಿನ ಅಥವಾ ಹಲವು ವಾರಗಳ ಕಾಲ ಇದ್ದು, ನಿರಂತರ ಸರ್ವೇಕ್ಷಣೆ ಹಾಗೂ ಸಂವಹನ ಸಂಪರ್ಕವನ್ನು ಒದಗಿಸಬಲ್ಲವು. ಇಮೇಜಿಂಗ್‌ ಸೆನ್ಸರ್‌, ರಾಡಾರ್‌ ವ್ಯವಸ್ಥೆ ಅಥವಾ ಟೆಲಿಕಮ್ಯುನಿಕೇಷನ್‌ ಸರಕನ್ನು ಒಯ್ಯುವುದರಿಂದ ಗಡಿಗಳ ಮೇಲೆ ನಿಗಾ ಇಡಲು, ವಿಪತ್ತು ಪ್ರತಿಕ್ರಿಯೆ ಹಾಗೂ ಬೇಹುಗಾರಿಕಾ ಉದ್ದೇಶಕ್ಕೆ ಭಾರಿ ಅನುಕೂಲ ಕಲ್ಪಿಸುತ್ತವೆ.

ಡ್ರೋನ್‌ ಹಾಗೂ ಉಪಗ್ರಹಗಳ ನಡುವಣ ಸ್ಥಾನವನ್ನು ಇವು ತುಂಬುತ್ತವೆ. ಅತ್ಯಂತ ತ್ವರಿತವಾಗಿ ಇವನ್ನು ನಿಯೋಜನೆ ಮಾಡಬಹುದು. ವೆಚ್ಚ ಕೂಡ ಕಡಿಮೆ. ಮರು ಬಳಕೆ ಕೂಡ ಮಾಡಬಹುದು.

ಏರ್‌ಶಿಪ್‌ ನಿರ್ವಹಣೆಯಲ್ಲಿ ತಾಂತ್ರಿಕ ಹಾಗೂ ಕಾರ್ಯನಿರ್ವಹಣೆ ಸವಾಲುಗಳು ಎದುರಾಗುವ ಕಾರಣ ವಿಶ್ವದ ಕೆಲವೇ ಕೆಲವು ದೇಶಗಳಿಗೆ ಮಾತ್ರ ಇಂತಹ ತಂತ್ರಜ್ಞಾನ ಸಿದ್ಧಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

- ಭಾರತ- ಪಾಕ್‌ ಗಡಿ ಸಂಘರ್ಷದ ವೇಳೆಯೇ ಹೊಸ ಮೈಲುಗಲ್ಲು- ಭೂಮಿಯಿಂದ 20 ಕಿ.ಮೀ. ಎತ್ತರದಲ್ಲಿ ಭಾರತಕ್ಕೊಬ್ಬ ಬೇಹುಗಾರ- ವಿಶ್ವದ ಕೆಲವೇ ದೇಶಗಳ ಬಳಿ ಇರುವ ತಂತ್ರಜ್ಞಾನ ಈಗ ಭಾರತಕ್ಕೆ

ಏನಿದು ಏರ್‌ಶಿಪ್‌?

ಭೂಮಿ ಮೇಲಿನ ವಾಯುಮಂಡಲದಲ್ಲಿ ಐದು ಪದರಗಳಿವೆ. ಅದರಲ್ಲಿ ಎರಡನೆಯದ್ದೇ ಸಮೋಷ್ಣ ವಲಯ ಅರ್ಥಾತ್‌ ಸ್ಟ್ರಾಟೋಸ್ಫಿಯರ್‌. ಅಲ್ಲಿ ನಿಂತು ಗಡಿಯಲ್ಲಿನ ಚಟುವಟಿಕೆ, ವಿಪತ್ತು ಕುರಿತು ಮಾಹಿತಿ ನೀಡುವ ಬಲೂನ್‌ ರೀತಿಯ ಸಾಧನವೇ ಏರ್‌ಶಿಪ್‌. ಹೀಲಿಯಂ ಅನಿಲ ತುಂಬಿ ಅದನ್ನು ಉಡಾವಣೆ ಮಾಡಲಾಗುತ್ತದೆ. ಬಳಿಕ ಬೇಕೆಂದಾಗ ಇಳಿಸಿಕೊಳ್ಳಬಹುದು.

ಸ್ಯಾಟಲೈಟ್‌ಗಿಂತ ಹೇಗೆ ಭಿನ್ನ?

ಗಡಿ ಮೇಲೆ ಕಣ್ಣಿಡಲು ಉಪಗ್ರಹ, ವಿಮಾನ ಇವೆ. ಆದರೆ ಈ ಏರ್‌ಶಿಪ್‌ಗಳು ನಿರ್ದಿಷ್ಟ ಸ್ಥಳದಲ್ಲಿ ಹಲವು ದಿನ ಅಥವಾ ವಾರಗಳ ಕಾಲ ನೆಲೆ ನಿಲ್ಲಬಲ್ಲವು. ನಿರಂತರ ಮಾಹಿತಿ ಒದಗಿಸಬಲ್ಲವು. ಡ್ರೋನ್‌ ಹಾಗೂ ಉಪಗ್ರಹಗಳ ನಡುವಣ ಕೊರತೆಯನ್ನು ಇವು ನೀಗಿಸುತ್ತವೆ.

ಪ್ರಯೋಗ ಹೇಗೆ?ಏರ್‌ಶಿಪ್‌ ಎಂಬುದು ಮಾನವರಹಿತ ನೌಕೆ. ವಿವಿಧ ಉಪಕರಣ ಹೊತ್ತು ಭೂಮಿಯಿಂದ ಮೇಲೆ ಹೋಯಿತು. 17 ಕಿ.ಮೀ. ಎತ್ತರದವರೆಗೆ ಹಾರಿತು. 62 ನಿಮಿಷದ ಬಳಿಕ ಇಳಿಯಿತು. ಅದರಲ್ಲಿದ್ದ ಸೆನ್ಸರ್‌ ಹಲವು ಮಾಹಿತಿಗಳನ್ನು ಸಂಗ್ರಹಿಸಿತ್ತು. ಅದನ್ನು ಪಡೆಯಲಾಯಿತು.

ನಿಗಾ ಸಾಮರ್ಥ್ಯ ಹೆಚ್ಚಳಹೊಸ ವ್ಯವಸ್ಥೆ ದೇಶದ ಭೂ ಸರ್ವೇಕ್ಷಣೆ, ಗುಪ್ತಚರ ಹಾಗೂ ನಿಗಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇಂತಹ ಸ್ವದೇಶಿ ಸಾಮರ್ಥ್ಯ ಹೊಂದಿದ ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತವನ್ನೂ ನಿಲ್ಲಿಸುತ್ತದೆ.-ರಾಜನಾಥ ಸಿಂಗ್‌, ರಕ್ಷಣಾ ಸಚಿವ