ಪಿ.ಸಿ ಗದ್ದಿಗೌಡರ ಗೆಲುವಿಗೆ ಶ್ರಮಿಸಿ

| Published : Mar 18 2024, 01:52 AM IST

ಸಾರಾಂಶ

ಮುಧೋಳ ವಿಧಾಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ನಾವು ಹೆಚ್ಚಿನ ಮತ ಹಾಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಅವರ ಗೆಲುವಿಗೆ ಇಂದಿನಿಂದಲೆ ಹಗಲಿರುಳು ಶ್ರಮಿಸಬೇಕಿದೆ. ತಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಶನಿವಾರ ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಧೋಳ ವಿಧಾಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ನಾವು ಹೆಚ್ಚಿನ ಮತ ಹಾಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲವೆಂದು ವಿಶ್ವಾಸ ವ್ಯಕ್ತ ಪಡಿಸಿದರು.

ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ನನ್ನ ಗೆಲುವು ಖಚಿತ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಹೆಚ್ಚಿನ ಮತಗಳನ್ನು ಪಡೆಯುವುದು ನನ್ನ ಆಸೆ. ಈ ನಿಟ್ಟಿನಲ್ಲಿ ತಾವುಗಳು ಪ್ರಯತ್ನಿಸಬೇಕೆಂದು ವಿನಂತಿಸುತ್ತೇನೆಂದರು.

ಮುಧೋಳ ಬಿಜೆಪಿ ಗ್ರಾಮೀಣ ಮಂಡಳ ನೂತನ ಅಧ್ಯಕ್ಷ ಸಂಗಣ್ಣ ಕಾತರಕಿ ಹಾಗೂ ನಗರ ಮಂಡಲ ಅಧ್ಯಕ್ಷ ಕರಬಸಯ್ಯ ಹಿರೇಮಠ ಅವರಿಗೆ ಹನಮಂತ ತುಳಸಿಗೇರಿ, ಡಾ.ರವಿ ನಂದಗಾಂವ ಅವರು ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿ.ಪ ಸದಸ್ಯ ಹನಮಂತ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ ಅವರ ಸಮ್ಮುಖದಲ್ಲಿ ಬಿಜೆಪಿ ಧ್ವಜ ನೀಡಿ, ಅಧಿಕಾರ ಹಸ್ತಾಂತರಿಸಿದರು. ಬಿಜೆಪಿ ಹಿರಿಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.