ಸಾರಾಂಶ
ಡಾ.ಪುನೀತ್ ರಾಜ್ ಕುಮಾರ್ ಜನ್ಮದಿನ ಸ್ಮರಣಾರ್ಥ ಭಾನುವಾರ ಪಟ್ಟಣದ ಡಾ.ಪುನೀತ್ ರಾಜ್‌ಕುಮಾರ್ ಸೇವಾ ಟ್ರಸ್ಟ್‌ನಿಂದ ₹೨.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಮನೆಯೊಂದನ್ನು ತಾಲೂಕಿನ ನಂದಿಹಳ್ಳಿಯಲ್ಲಿರುವ ಗುಡಿಸಲುವಾಸಿ ಬಡ ಮಹಿಳೆಯೊಬ್ಬರಿಗೆ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಸಂಡೂರು
ಡಾ.ಪುನೀತ್ ರಾಜ್ ಕುಮಾರ್ ಜನ್ಮದಿನ ಸ್ಮರಣಾರ್ಥ ಭಾನುವಾರ ಪಟ್ಟಣದ ಡಾ.ಪುನೀತ್ ರಾಜ್‌ಕುಮಾರ್ ಸೇವಾ ಟ್ರಸ್ಟ್‌ನಿಂದ ₹೨.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಮನೆಯೊಂದನ್ನು ತಾಲೂಕಿನ ನಂದಿಹಳ್ಳಿಯಲ್ಲಿರುವ ಗುಡಿಸಲುವಾಸಿ ಬಡ ಮಹಿಳೆಯೊಬ್ಬರಿಗೆ ಹಸ್ತಾಂತರಿಸಲಾಯಿತು.ಜಿ.ಎಂ.ಲಾಜಿಸ್ಟಿಕ್ಸ್ ಜನರಲ್ ಮ್ಯಾನೇಜರ್ ಎಸ್.ಎ.ಶ್ರೀನಿವಾಸ್ ಮನೆ ಉದ್ಘಾಟಿಸಿದರು. ಟ್ರಸ್ಟ್‌ನಿಂದ ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಹಿಂದಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ, ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಪಟ್ಟಣದ ವಿರಕ್ತಮಠದ ಪ್ರಭುಸ್ವಾಮೀಜಿ ಉದ್ಘಾಟಿಸಿದರು.
೪೦ಕ್ಕೂ ಹೆಚ್ಚು ಮಂದಿ ಈ ವೇಳೆ ರಕ್ತದಾನ ಮಾಡಿದರು. ೩೫ ಮಂದಿ ನೇತ್ರದಾನಕ್ಕೆ ತಮ್ಮ ಹೆಸರು ನೋಂದಣಿ ಮಾಡಿಸಿದರು.ಕಾರ್ಯಕ್ರಮದಲ್ಲಿ ಡಾ.ಪುನೀತ್ ರಾಜ್ ಕುಮಾರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಶಶಿಕಿರಣ್, ಗೌರವಾಧ್ಯಕ್ಷ ಆರ್.ಟಿ.ರಘುನಾಥ್, ಉಪಾಧ್ಯಕ್ಷರಾದ ವೀರೇಶ್ ಹಾಗೂ ಉಗ್ರ ನರಸಿಂಹ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಸಹ ಕಾರ್ಯದರ್ಶಿಗಳಾದ ಷರೀಫ್, ವಿನಯ್, ಸದಸ್ಯರಾದ ಗುರು, ಪರಶುರಾಮ್, ವಿಜಯ್, ದರ್ಶನ್ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಪುನೀತ್ ಜನ್ಮದಿನದ ಸಂಭ್ರಮ:ಪವರ್ ಸ್ಟಾರ್ ದಿವಂಗತ ಪುನೀತ ರಾಜಕುಮಾರ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಹಲವೆಡೆ ಭಾನುವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಹೊಸಪೇಟೆಯಲ್ಲಿ ಅಭಿಮಾನಿಗಳು ಅಪ್ಪು ಪ್ರತಿಮೆಗಳಿಗೆ ಹೂಮಾಲೆಗಳನ್ನು ಅರ್ಪಿಸಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜನ್ಮದಿನ ಆಚರಿಸಿದರು. ಹಲವೆಡೆ ಅಪ್ಪು ಅಭಿಮಾನಿಗಳು ಅನ್ನಸಂತರ್ಪಣೆ ಕೂಡ ಏರ್ಪಡಿಸಿದ್ದರು. ಜನ್ಮದಿನದ ಅಂಗವಾಗಿ ಅವರ ಅಭಿನಯದ ಜಾಕಿ ಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು. ಧಾರವಾಡದ ಯುವ ಕಲಾವಿದ ವಿಠ್ಠಲ ಅಂಗಡಿಯವರು ತಮ್ಮ ಮನೆಯ ಗೋಡೆಯ ಮೇಲೆ ಪುನೀತ ಅವರ ಚಿತ್ರ ಬಿಡಿಸುವ ಮೂಲಕ ಅಭಿಮಾನ ಮೆರೆದರು. ಭದ್ರಾವತಿಯಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪುನೀತ ಭಾವಚಿತ್ರದ ಮುಂದೆ ದೊಡ್ಡ ಕೇಕ್ ಕತ್ತರಿಸಿ, ಜೈಕಾರ ಕೂಗಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಅನ್ನಸಂತರ್ಪಣೆ ಕೂಡ ಏರ್ಪಡಿಸಲಾಗಿತ್ತು. ಮೈಸೂರಿನ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. 9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಟ ಚಿಕ್ಕಣ್ಣ, ಶಾಸಕ ಟಿ.ಎಸ್. ಚಿಕ್ಕಣ್ಣ, ಶ್ರೀ ರೇಣುಕಾನಂದ ಸ್ವಾಮೀಜಿ ಹಾಜರಿದ್ದರು. ಇದೇ ವೇಳೆ, ಮಂಡ್ಯ, ಕೋಲಾರ, ತುಮಕೂರು, ಹಾಸನ ಸೇರಿ ರಾಜ್ಯದ ಇತರೆಡೆಯೂ ಪುನೀತರ ಜನ್ಮದಿನವನ್ನು ಆಚರಿಸಲಾಯಿತು.