ಸಾರಾಂಶ
ಶುದ್ಧ ಕುಡಿಯುವ ನೀರು ಬಳಸಲು ಗ್ರಾಮಸ್ಥರ ಹಿಂದೇಟು, ಜಾಗೃತಿಯ ಕೊರತೆ
ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿ
ಈ ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದೆ, ಮತ್ತೊಂದು ಘಟಕವನ್ನೂ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿದ್ದು, ಅರ್ಧ ಕಾಮಗಾರಿ ಸಹ ನಡೆದಿದೆ. ಆದರೆ ಈ ಗ್ರಾಮದ ಯಾರೊಬ್ಬರೂ ಈ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಒಯ್ಯುತ್ತಿಲ್ಲ, ಬೇಡಿಕೆ ಇರುವ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ಘಟಕ ಇರುವುದಿಲ್ಲ. ಆದರೆ ಇಲ್ಲಿನ ಪರಿಸ್ಥಿತಿ ಉಲ್ಟಾ. ಇರುವ ಸೌಲಭ್ಯದ ಪ್ರಯೋಜನವನ್ನು ಇಲ್ಲಿನ ಜನರು ಪಡೆಯುತ್ತಿಲ್ಲ.ಇದು ತಾಲೂಕಿನ ದೋಟಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆಸರೂರು ಗ್ರಾಮದ ಕಥೆ. ಜನತಾ ಕಾಲನಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಬಳಕೆಯಾಗುತ್ತಿಲ್ಲ.
ಗ್ರಾಮದಿಂದ 1 ಕಿಮೀ ಅಂತರದಲ್ಲಿ ಈ ಘಟಕವಿದೆ. ಘಟಕದಲ್ಲಿ ತಿಂಗಳಿಗೆ ₹1000 ಕರೆಂಟ್ ಬಿಲ್ ಬರುತ್ತದೆ. ಆದರೆ ತಿಂಗಳಿಗೆ ಆದಾಯ ಮಾತ್ರ ₹ 50 ಇದೆ. ಇದರಿಂದ ಘಟಕದ ಆದಾಯಕ್ಕಿಂತ ವೆಚ್ಚವೇ (ವಿದ್ಯುತ್ ವೆಚ್ಚ) ಜಾಸ್ತಿಯಾಗಿದ್ದು, ಗ್ರಾಪಂ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.ಗ್ರಾಮದಲ್ಲಿ 200, ಜನತಾ ಕಾಲನಿಯಲ್ಲಿ ಸುಮಾರು 70ಕ್ಕೂ ಅಧಿಕ ಮನೆಗಳಿವೆ. ಇಲ್ಲಿ ವಾಸಿಸುವ ಜನರು ಸಾರ್ವಜನಿಕ ನಳದ ನೀರನ್ನೇ ಕುಡಿಯಲು ಬಳಸುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸಹಿತ ನೀರು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇದು ವಿಪರ್ಯಾಸದ ಸಂಗತಿಯಾಗಿದೆ. ಇನ್ನು ಜನತಾ ಕಾಲನಿಯ ಶುದ್ಧ ಕುಡಿಯುವ ನೀರಿನ ಘಟಕ ದೂರವಾಗುತ್ತದೆ ಎನ್ನುವ ಕಾರಣಕ್ಕೆ ಅನೇಕರು ಹಿಂದೇಟು ಹಾಕುತ್ತಿದ್ದಾರೆ.
ಇನ್ನೊಂದು ಘಟಕ ನಿರ್ಮಾಣ:ಗ್ರಾಮದಲ್ಲಿ ಇರುವ ಒಂದು ಘಟಕದ ನೀರನ್ನೆ ಕುಡಿಯಲು ಹಿಂದೇಟು ಹಾಕುತ್ತಿರುವ ಸಮಯದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ಮತ್ತೊಂದು ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದು ಹಾಸ್ಯಾಸ್ಪದವಾಗಿದೆ. ಘಟಕ ಸ್ಥಾಪನೆಯ ಕಾಮಗಾರಿಯು ಅರ್ಧಕ್ಕೆ ನಿಂತಿದೆ. ಇದು ಮುಖ್ಯ ರಸ್ತೆಯಲ್ಲಿ ಸ್ಥಾಪಿಸಲಾಗಿದ್ದರೂ ಸಹಿತ ಉಪಯೋಗವಿಲ್ಲದಂತಾಗಿದೆ.
ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಜಾಗೃತಿ ಕೊರತೆಯು ಕಾಡುತ್ತಿದ್ದು, ಸಂಬಂದಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಕುರಿತು ಜಾಗೃತಿಯ ಮೂಡಿಸುವ ಅಗತ್ಯ ಇದೆ.ಸ್ಥಳಾಂತರಕ್ಕೆ ಒತ್ತಾಯ:
ಹೆಸರೂರು ಗ್ರಾಮದಿಂದ ಜನತಾ ಕಾಲನಿಗೆ ಹೋಗಿ ನೀರು ತರಲು ದೂರವಾಗುತ್ತಿದ್ದು, ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮದೊಳಗಡೆ ಅಥವಾ ಮುಖ್ಯ ರಸ್ತೆ ಶಾಲೆಯ ಪಕ್ಕದಲ್ಲಿ ಸ್ಥಳಾಂತರ ಮಾಡಬೇಕು ಎಂದು ಗ್ರಾಮದ ನಿವಾಸಿಗಳು ಒತ್ತಾಯ ಮಾಡಿದ್ದಾರೆ.