ಸಾರಾಂಶ
ರಾಹುಲ್ ಜೀ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಸರ್ಕಾರ ವಸತಿ ನಿಲಯಗಳ ನಿರ್ವಹಣೆಗಾಗಿ ಪ್ರತಿ ವರ್ಷ ಕೋಟಿ ಕೋಟಿ ಅನುದಾನ ವ್ಯಯಿಸುತ್ತಿದೆ. ಅದರಲ್ಲೂ ಮೆಟ್ರಿಕ್ ನಂತರದ ಹಾಸ್ಟೆಲ್‌ನ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 1600 ರುಪಾಯಿ ಆಹಾರಕ್ಕಾಗಿ ಖರ್ಚು ಮಾಡುತ್ತಿದೆ. ಆದರೆ, ಅಫಜಲ್ಪುರ ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟ ತೀರಾ ಕಳಪೆ ಮಟ್ಟದ್ದಾಗಿದ್ದು, ವಿದ್ಯಾರ್ಥಿಗಳ ಗೋಳು ಯಾರಿಗೆ ಹೇಳಿದರೂ ತೀರದ ಬವಣೆಯಂತಾಗಿದೆ. 2022ರಲ್ಲಿ ಜೋಳದಲ್ಲಿ ನುಸಿಗಳು ತುಂಬಿ ಹೋಗಿದ್ದವು. ಅಂತಹ ಜೋಳವನ್ನೇ ಬೀಸಿ ವಿದ್ಯಾರ್ಥಿಗಳಿಗೆ ರೊಟ್ಟಿ ಮಾಡಿ ಹಾಕಲಾಗಿತ್ತು. ಈಗ 2024ರಲ್ಲಿ ಚಪಾತಿಯಲ್ಲಿ ನೊಣಗಳು ಸತ್ತು ಬರುತ್ತಿವೆ. ಅಂತಹ ಚಪಾತಿಗಳನ್ನೇ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.ದಿನಕ್ಕೊಂದು ಅಧ್ವಾನ: ಈ ವಸತಿ ನಿಲಯದಲ್ಲಿ ದಿನಕ್ಕೊಂದು ಸಮಸ್ಯೆಗಳು ಧುತ್ತೆಂದು ಎದ್ದು ಕೂಡುತ್ತಿಲ್ಲ. ಬದಲಾಗಿ ವಸತಿ ನಿಲಯ ನಿರ್ಮಾಣ ಮಾಡುವಾಗ ಸಂಬಂಧಪಟ್ಟವರು ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸಬೇಕಾಗಿತ್ತು. ಆದರೆ ಪಟ್ಟಣದ 2 ಕಿ.ಮೀ ಹೊರವಲಯದಲ್ಲಿ ವಸತಿ ನಿಲಯ ಕಟ್ಟಿಸಿದ್ದು ಒಂದು ಸಮಸ್ಯೆಯಾದರೆ ಈ ವಸತಿ ನಿಲಯಕ್ಕೆ ಮಳೆಗಾಲದಲ್ಲಿ ಹೋಗಲು ರಸ್ತೆ ಸಂಪರ್ಕವಿಲ್ಲದಂತಾಗಿದ್ದು ಇನ್ನೊಂದು ಸಮಸ್ಯೆ. ವಿದ್ಯಾರ್ಥಿಗಳು ಪಟ್ಟಣದಿಂದ 2 ಕಿ.ಮೀ ನಡೆದುಕೊಂಡು ಹೆದ್ದಾರಿಯಿಂದ ಹೋಗಿ 500 ಮೀಟರನಷ್ಟು ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ನಡೆದು ಹೋಗುವಾಗಬೇಕಾದ ಅನಿವಾರ್ಯತೆ ಬಂದಿದೆ. ರಾತ್ರಿ ಸಮಯದಲ್ಲಿ ವಿಷ ಜಂತುಗಳ ಭಯ ಕಾಡುವಂತಾಗಿದೆ. ಈ ಕೆಸರಿನ ರಸ್ತೆಗೆ ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನು ಸಹ ಇಲಾಖೆಯವರು, ಜನಪ್ರತಿನಿಧಿಗಳು ಮಾಡಿಸಿಲ್ಲ.
ದೈತ್ಯಾಕಾರದಲ್ಲಿ ನಿರ್ಮಾಣವಾದ ವಸತಿ ನಿಲಯ ಕಟ್ಟಡವೇ ಕಳಪೆ ಕಾಮಗಾರಿಯಾಗಿದ್ದು ಕಟ್ಟಡ ನಿರ್ಮಿಸಿ ಕೆಲವೇ ತಿಂಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಮೇಲ್ಛಾವಣಿಗೆ ಮಾಡಿರುವ ಪ್ಲಾಸ್ಟರ್ ಸಿಮೆಂಟ್ ಉದುರಿ ಬಿದ್ದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಕಟ್ಟಡದ ಸಮಸ್ಯೆ ಒಂದು ಕಡೆಯಾದರೆ, ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗಾಗಿ ತಂದಿಟ್ಟಿರುವ ಗಣಕಯಂತ್ರಗಳು ಇದುವರೆಗೂ ವಿದ್ಯಾರ್ಥಿಗಳ ಬಳಕೆಗೆ ನೀಡಿಲ್ಲ ಎನ್ನುವ ಆರೋಪವು ಕೇಳಿ ಬಂದಿದೆ.ಗೋಳು ಕೇಳುವವರಿಲ್ಲವೆಂದು ವಿದ್ಯಾರ್ಥಿಗಳ ಅಂಬೋಣ: 2023ರ ಡಿಸೆಂಬರ್ ತಿಂಗಳಲ್ಲಿ ಶಾಸಕ ಎಂ.ವೈ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಗೆ ಈ ವಸತಿ ನಿಲಯದ ವಿದ್ಯಾರ್ಥಿಗಳು ಬಂದು ವಸತಿ ನಿಲಯದಲ್ಲಿ ಶೌಚಾಲಯವಿಲ್ಲ, ಕುಳಿತುಕೊಳ್ಳಲು ಆಸನಗಳಿಲ್ಲ, ಶುದ್ದ ಕುಡಿಯುವ ನೀರಿಲ್ಲ, ಗ್ರಂಥಾಲಯ ವ್ಯವಸ್ಥೆ ಇಲ್ಲ, ಗುಣಮಟ್ಟದ ಊಟ ನೀಡುತ್ತಿಲ್ಲ ಎಂದು ಮನವಿ ಸಲ್ಲಿಸಿ ಅಳಲು ತೋಡಿಕೊಂಡಿದ್ದರು. ವಿದ್ಯಾರ್ಥಿಗಳ ಅಳಲು ಆಲಿಸಿದ ಶಾಸಕರು ಕೂಡಲೇ ಸೋಲಾರ ವ್ಯವಸ್ಥೆ, ಶುದ್ಧ ಕುಡಿವ ನೀರಿನ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಗುಣಮಟ್ಟದ ಊಟ ವಿತರಿಸುವಂತೆ ವಸತಿ ನಿಲಯ ಪಾಲಕರು, ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ ಶಾಸಕರ ತಾಕೀತು ಮತ್ತು ಸೌಲಭ್ಯ ಕಲ್ಪಿಸುವ ಭರವಸೆ ಎರಡು ಈಡೆರಲಿಲ್ಲ.
2024 ಜೂನ್ 28ರಂದು ಶಾಸಕ ಎಂ.ವೈ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯ ವೇಳೆಯೂ ವಿದ್ಯಾರ್ಥಿಗಳು ಬಂದು ವಸತಿ ನಿಲಯಕ್ಕೆ ಹೋಗಲು ರಸ್ತೆ ಸಮಸ್ಯೆ ಇದೆ, ವಸತಿ ನಿಲಯದ ಬಳಿ ಯಾವುದೇ ಜನವಸತಿ ಇಲ್ಲದ್ದರಿಂದ ಬಸ್ಸುಗಳ ನಿಲುಗಡೆಯೂ ಮಾಡುತ್ತಿಲ್ಲ, ವಿಷಜಂತುಗಳ ಕಾಟದಿಂದ ಜೀವಭಯವಾಗುತ್ತಿದೆ. ಅಲ್ಲದೆ ಗುಣಮಟ್ಟದ ಊಟ ನೀಡುತ್ತಿಲ್ಲ, ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಅದೇ ಶಾಸಕರು, ಅದೇ ಅಧಿಕಾರಿಗಳಿದ್ದು ಕೂಡ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸವಾಗಿಲ್ಲ. ಶಾಸಕರು ಮತ್ತು ಅಧಿಕಾರಿಗಳಿಂದ ಮತ್ತದೇ ಸಿದ್ದ ಉತ್ತರವೇ ವಿದ್ಯಾರ್ಥಿಗಳ ನಿರೀಕ್ಷೆಗೆ ತಣ್ಣಿರೆರಚಿದಂತಾಗಿದ್ದು ಮಾತ್ರ ನಮ್ಮಗೋಳು ಕೇಳುವವರಿಲ್ಲ ಎಂದು ವಿದ್ಯಾರ್ಥಿಗಳ ಅಂಬೋಣವಾದಂತಾಗಿದೆ.------
ಹಾಸ್ಟೇಲ್‌ಗೆ ಬರಲು ದಾರಿ ಸಮಸ್ಯೆ ಇದೆ, ರಾತ್ರಿ ವಿಷಜಂತುಗಳ ಕಾಟ ಕಾಡುತ್ತಿದೆ. ಮೂಲ ಸೌಕರ್ಯಗಳ ಸಮಸ್ಯೆ ಇದೆ. ಗುಣಮಟ್ಟದ ಊಟ ನೀಡುತ್ತಿಲ್ಲ. ಎಲ್ಲಾ ಕಡೆ ಡೆಂಘೀ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲೇ ಚಪಾತಿಯಲ್ಲಿ ನೋಣ ಬಂದಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಎರಡು ವರ್ಷದಿಂದ ಶಾಸಕರಿಗೆ ವಸತಿ ನಿಲಯದ ಸಮಸ್ಯೆಗಳ ಕುರಿತು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.- ನೊಂದ ವಸತಿ ನಿಲಯದ ವಿದ್ಯಾರ್ಥಿಗಳು
----169 ವಿದ್ಯಾರ್ಥಿಗಳಿಗೆ ಅಡುಗೆ ಮಾಡುವುದು ಸುಲಭದ ಕೆಲಸವಲ್ಲ, ಬೆಳಗ್ಗೆ ಉಪಹಾರ ಬಡಿಸಿ ಪಾತ್ರೆ ಪಗಡೆ ತೊಳೆದು ಮದ್ಯಾಹ್ನದ ಊಟಕ್ಕೆ ಸಿದ್ದತೆ ಮಾಡಿಕೊಳ್ಳುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣಮವಾಗಿ ಅಡುಗೆ ಸಹಾಯಕರಿಲ್ಲ. ಕೇವಲ 2 ಜನ ಮಹಿಳೆಯರು ಇಷ್ಟು ವಿದ್ಯಾರ್ಥಿಗಳಿಗೆ ಅಡುಗೆ ಮಾಡುವುದು ಕಷ್ಟವಾಗುತ್ತಿದೆ. ಕೆಲವರು ತಮ್ಮ ಗೆಳೆಯರನ್ನು ಕರೆತಂದು ಊಟ ಮಾಡಿಸುತ್ತಾರೆ, ನಾವು ಒಂದು ಲೆಕ್ಕದಲ್ಲಿ ಅಡುಗೆ ಸಿದ್ದ ಮಾಡಿರುತ್ತೇವೆ, ಆದರೆ ದಿಢೀರನೆ ಹೊರಗಿನವರು ಬಂದು ಊಟ ಮಾಡಿದಾಗ ಉಳಿದವರಿಗೆ ಅಡುಗೆ ಕಡಿಮೆಯಾಗುತ್ತಿದೆ.
- ಹೆಸರು ಹೇಳಲಿಚ್ಚಿಸದ ಅಡುಗೆ ಸಹಾಯಕರು----
ವಸತಿ ನಿಲಯದಲ್ಲಿ ಕೆಲವು ಸಮಸ್ಯೆಗಳು ಇವೆ, ಹಂತಹಂತವಾಗಿ ಸರಿಪಡಿಸಿಕೊಳ್ಳುತ್ತಿದ್ದೇವೆ. ಆದರೆ ಕಳಪೆ ಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ಚಪಾತಿಯಲ್ಲಿ ನೋಣ ಬಂದಿರುವುದು ಗಮನಕ್ಕೆ ಬಂದಿದೆ. ನಿರ್ಲಕ್ಷ್ಯ ವಹಿಸಿದ ಅಡುಗೆ ಸಹಾಯಕರನ್ನು ಕೆಲಸದಿಂದ ತೆಗೆದು ಬೇರೆಯವರನ್ನು ನೇಮಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.- ವಿಜಯಕುಮಾರ ಕುದರಿ, ನಿಲಯ ಪಾಲಕ