ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಗ್ರಾಮೀಣ ಪ್ರದೇಶದಲ್ಲಿ ಕೃಷಿ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಕೃಷಿ ನಿರ್ದೇಶಕ ಡಾ.ಜಿ.ಟಿ. ಪುತ್ರ ಹೇಳಿದರು.ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಘಟಕ; ಕೃಷಿ ಇಲಾಖೆ, ಮೈಸೂರು; ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ; ತೋಟಗಾರಿಕೆ ಮಹಾವಿದ್ಯಾಲಯ, ಇಲವಾಲ ಮತ್ತು ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಇವರುಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಏಕದಳ ಮತ್ತು ದ್ವಿದಳ ದಾನ್ಯಗಳ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚುತ್ತಿದ್ದು, ತಲಾವಾರು ಭೂ ಹಿಡುವಳಿ ಕಡಿಮೆಯಾಗಿದೆ, ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಹಾಗೂ ಬೆಳೆ ಸಾಂಧ್ರತೆ ಶೇ. 130ರಷ್ಟು ಇದೆ. ರೈತರು ಕೃಷಿಯಲ್ಲಿ ಯಾಂತ್ರೀಕರಣ ಮತ್ತು ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆಯ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ಅವರು ತಿಳಿಸಿದರು.ವಿಶ್ವ ಕೃಷಿ ಮತ್ತು ಆಹಾರ ಸಂಸ್ಥೆಯ ನಿರ್ದೇಶಕ ಕ್ಯೂಡಾಂಗ್ಯೂರವರ ಸಂದೇಶದ ವೀಡಿಯೊವನ್ನು ಪ್ರಸಾರ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು.ಭೂತಾಯಿಯ ಒಡಲನ್ನು ಹಾಳು ಮಾಡಲಾಗಿದ್ದು, ಮೊದಲು ಮಣ್ಣಿನ ಸಂರಕ್ಷಣೆಗೆ ಆಧ್ಯತೆ ನೀಡಬೇಕೆಂದು ತಿಳಿಸಿದರು. ರಸಗೊಬ್ಬರ, ಕೀಟನಾಶಕ ಮತ್ತು ಕಳೆನಾಶಕಗಳನ್ನು ರೈತರು ವಿವೇಚನಾ ರಹಿತವಾಗಿ ಬಳಸುತ್ತಿರುವುದರ ಪರಿಣಾಮ ಇಂದು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಹದಿಹರೆಯದ ವಯಸ್ಸಿನಲ್ಲೆ ಪ್ರಜೆಗಳು ತುತ್ತಾಗುತ್ತಿದ್ದಾರೆ. ವಿಶ್ವ ಆಹಾರ ದಿನಾಚರಣೆ-2024ರ ಘೋಷವಾಕ್ಯ: ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು ಎಂಬುದನ್ನು ವರ್ಣಿಸುತ್ತಾ ಒಟ್ಟಾರೆ ಆಹಾರದ ಉತ್ಪಾದನೆಗಿಂತ ಉತ್ತಮ ಗುಣಮಟ್ಟದ ಆಹಾರದ ಉತ್ಪಾದನೆಗೆ ಗಮನ ಹರಿಸುವಂತೆ ಮೈಸೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಎಚ್. ರವಿ ತಿಳಿಸಿದರು.ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಗುಣಮಟ್ಟದ ಆಹಾರದ ಉತ್ಪಾದನೆಯನ್ನು ಹೆಚ್ಚಿಸ ಬಹುದು ಎಂದು ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಜ್ಞಾನೇಶ್ ವೈಜ್ಞಾನಿಕ ಮಾಹಿತಿ ಹಂಚಿಕೊಂಡರು.ಸಾವಯವ ಕೃಷಿ, ನೈಸರ್ಗಿಕ ಕೃಷಿ ಮತ್ತು ಶೂನ್ಯ ಬಂಡವಾಳ ಕೃಷಿಯ ವಿಧಾನಗಳನ್ನು ಅನುಸರಿಸುವುದರ ಮೂಲಕ ಉತ್ತಮ ಗುಣಮಟ್ಟದ ಆಹಾರದ ಉತ್ಪಾದನೆಯನ್ನು ಮಾಡಬಹುದು ಎಂದು ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಘಟಕದ ಅಧ್ಯಕ್ಷರಾದ ಡಾ. ಎಂ. ಮಹಂತೇಶಪ್ಪ ತಿಳಿಸಿದರು.
ಮೈಸೂರು ಜಿಲ್ಲೆಯ ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಎಚ್. ಯೋಗೇಶ್, ಪದಾಧಿಕಾರಿಗಳು ಮತ್ತು ಸದಸ್ಯರು, ಉಪ ಕೃಷಿ ನಿರ್ದೇಶಕ ಡಾ.ಬಿ.ಎನ್. ಧನಂಜಯ, ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ, ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ.ಸಿ. ರಾಮಚಂದ್ರ, ಇಲವಾಲ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಂಜುನಾಥ್ ಮತ್ತು ವಿಜ್ಞಾನಿಗಳು, ಹೆಚ್ಚಿನ ಸಂಖ್ಯೆಯ ಕೃಷಿ ಸಖಿ ರೈತ ಮಹಿಳೆಯರು ಇದ್ದರು.ಸಹಾಯಕ ಕೃಷಿ ನಿರ್ದೇಶಕಿ ಎಸ್.ಬಿ. ಮಮತಾ ನಿರೂಪಿಸಿದರು, ಕೆ.ಆರ್. ರವೀಂದ್ರ ಸ್ವಾಗತಿಸಿದರು, ಎಚ್.ಬಿ. ಮಧುಲತಾ ವಂದಿಸಿದರು.