ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನವೊಂದು ಪತ್ತೆಯಾಗಿದೆ.ತಾಲೂಕಿನ ಹೊಳೆ ಮುದ್ಲಾಪುರದ ಹತ್ತಿರ ಹುಲಗಿ ಅಣೆಕಟ್ಟೆಯ ಹತ್ತಿರ ವಿಜಯನಗರ ಕಾಲುವೆ ಕಾಮಗಾರಿ ಕೈಗೊಳ್ಳಉವ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮ ಇದನ್ನು ನೋಡಿದ್ದು, ಇದರ ಬಗ್ಗೆ ರಾಜ್ಯ ಪುರಾತತ್ವ ಸಂಗ್ರಹಾಲಯ ಪರಂಪರೆ ಇಲಾಖೆಗೆ ವಿಜಯನಗರ ಕಾಲುವೆ ಯೋಜನೆಯ ಸಂವಹನ ಮತ್ತು ದಾಖಲಾತಿ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಮಾಹಿತಿ ನೀಡಿದ್ದಾರೆ.
ಕಮಲಾಪುರ (ಹಂಪಿ) ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಪುರಾತತ್ವ ಸಹಾಯಕ ಡಾ. ಆರ್. ಮಂಜನಾಯ್ಕ ಕ್ಷೇತ್ರಕಾರ್ಯ ಕೈಗೊಂಡಾಗ ಅಲ್ಲಿ ಆರು ಸಾಲಿನ ವಿಜಯನಗರ ಅರಸರ ಕಾಲದ ಶಾಸನವು ಕಂಡುಬಂದಿತು.ಶಾಸನವು ತುಂಗಾಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹುಲಿಗೆಯ ಅಣೆಕಟ್ಟೆಯ ಹೊಳೆ ಮುದ್ಲಾಪುರದ ಹತ್ತಿರದ ಅಣೆಕಟ್ಟಿನ ಪಕ್ಕದಲ್ಲಿನ ಹುಟ್ಟು ಬಂಡೆಯಲ್ಲಿದೆ. ಇದು 14 ಆಡಿ ಉದ್ದ ಹಾಗೂ 3 ಆಡಿ ಆಗಲವಾಗಿದ್ದು ಆರು ಸಾಲಿನ ಕನ್ನಡ ಶಾಸನವಾಗಿದೆ. ಈ ಶಾಸನವು ತುಂಗಾಭದ್ರಾ ನೀರಿನಿಂದ ಮುಳುಗಿರುತ್ತಿತ್ತು. ಈ ವರ್ಷ ನೀರು ಕಡಿಮೆ ಇರುವುದರಿಂದ ಶಾಸನವು ಕಂಡು ಬಂದಿದೆ.
ಶಾಸನದ ಸಾರಾಂಶ:ಶಾಸನವು ನೀರಿನಲ್ಲಿ ಮುಳುಗಿದ್ದರಿಂದ ತೃಟಿತವಾಗಿದೆ. ಆದರೆ ಶಾಸನವನ್ನು ಓದಿ ಅರ್ಥೈಯಿಸಲು ಸಾಧ್ಯವಾಗಿದ್ದು, ವಿಜಯನಗರದ ಅರಸರ ಮಹಾಪ್ರಧಾನ ನಾಗಂಣದಂಣನಾಯಕನು ಮಲಿನಾಥ ದೇವರ ವಾಯುವ್ಯಕ್ಕೆ ಕಲಊರ ಎಂಬ ಸ್ಥಳದಲ್ಲಿ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಿಸುತ್ತಾರೆ. ಈ ಕಟ್ಟೆಗೆ ಹುಲಿಗಿಯ ಕಟ್ಟಿ ಎಂಬ ಉಲ್ಲೇಖವಿದೆ. ಇಲ್ಲಿಂದ ಒಂದು ಕಾಲುವೆಯನ್ನು ನಿರ್ಮಿಸಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಗೆ ನೀರನ್ನು ಕಾಲುವೆಯ ಮುಖಾಂತರ ನೀರನ್ನು ಹರಿಸಿರುವುದು ಈ ಶಾಸನದಿಂದ ತಿಳಿದು ಬರುತ್ತದೆ. ಇದರಲ್ಲಿ ಕಾಲುವೆಯ ಉಲ್ಲೇಖವು ಸಹಾ ಇದೆ. ಶಾಸನದ ಕುರಿತು ಇಲಾಖೆಯಿಂದ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.