ಅಂಗನವಾಡಿ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ: ಸದಸ್ಯರ ಆರೋಪ

| Published : Nov 10 2025, 01:45 AM IST

ಸಾರಾಂಶ

ಅಂಬೇಡ್ಕರ್ ನಗರ ಅಂಗನವಾಡಿ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ, ತನಗೆ ಗುತ್ತಿಗೆದಾರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದನೆ । ಪಪಂ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಅಂಬೇಡ್ಕರ್ ನಗರ ಅಂಗನವಾಡಿ ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ, ತನಗೆ ಗುತ್ತಿಗೆದಾರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸದಸ್ಯ ನಾಗರಾಜ ನಾಯ್ಕ ದೂರಿದಾಗ ಹಲವು ಸದಸ್ಯರು ಗುತ್ತಿಗೆದಾರರ ಪರ ನಿಂತಾಗ ಗಲಾಟೆಯೊಂದಿಗೆ ಬುಧವಾರ ಪಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಕಾರಣವಾಯಿತು.

ಗುತ್ತಿಗೆದಾರರ ಪರ ಕೆಲ ಸದಸ್ಯರು ಬೆಂಬಲಕ್ಕೆ ನಿಂತಿರುವುದು ಉಳಿದ ಸದಸ್ಯರನ್ನು ಕೆರಳಿಸಿತು. ಕೊನೆಗೆ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಧ್ಯಪ್ರವೇಶಿಸಿ, ಕಟ್ಟಡಕ್ಕೆ ಎಂ ಸ್ಯಾಂಡ್ ಬಳಸಬಹುದು ಎಂದು ಗದ್ದಲಕ್ಕೆ ತೆರೆ ಎಳೆದರು.

ಸದಸ್ಯ ರಾಧಾಕೃಷ್ಣ ನಾಯ್ಕ ಮಾತನಾಡಿ, ಲಿಫ್ಟ್‌ ವಾರಕ್ಕೆರಡು ಸಲ ಹಾಳಾಗುತ್ತದೆ. ವಾಶರೂಮ್ ಸೇರಿದಂತೆ ಅವ್ಯವಸ್ಥೆ ಆಗಿದೆ. ಗುತ್ತಿಗೆದಾರ ಯಾಕೆ ಮಾಡಿಲ್ಲ. ತಕ್ಷಣ ಸರಿಪಡಿಸಬೇಕೆಂದು ಆಗ್ರಹಪಡಿಸಿದಾಗ, ಮುಖ್ಯಾಧಿಕಾರಿ ಕುಮಾರ ನಾಯ್ಕ ವಾರದೊಳಗೆ ಸರಿಪಡಿಸುವುದಾಗಿ ಭರವಸೆ ನೀಡಿದರು.

ಆಡಿಟ್ ವರದಿಯನ್ನು ಸದಸ್ಯರ ಗಮನಕ್ಕೆ ತರಲಾಗುತ್ತಿಲ್ಲ. ಇದು ಸಂಶಯಕ್ಕೆ ಕಾರಣವಾಗುತ್ತಿದೆ ಎಂದು ಸದಸ್ಯ ರಾಧಾಕೃಷ್ಣ ನಾಯ್ಕ ಆರೋಪಿಸಿದರು. ಅಲ್ಲದೇ, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ಮಾಹಿತಿ ಸದಸ್ಯರಿಗೆ ನೀಡಬೇಕು. ಎಲ್ಲವೂ ಕೂಡ ಸಂಶಯ ಬರುವಂತೆ ಕಾರ್ಯಗಳು ನಡೆಯುತ್ತಿದೆ ಎಂದು ತೀವೃ ಆಕ್ಷೇಪಿಸಿದರು.

ಜಡ್ಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿ ಸರಿಯಾಗಿ ಆಗದೇ ಇರುವ ಬಗ್ಗೆ ಸದಸ್ಯೆ ಪುಷ್ಪಾ ನಾಯ್ಕ ಆಕ್ಷೇಪಿಸಿದರು.

ವಿವಿಧ ಕಾಮಗಾರಿ ಸಂಬಂಧಿಸಿದಂತೆ ಟೆಂಡರ್ ಕರೆಯುವ ಕುರಿತು ಅನುಮೋದನೆ ನೀಡಲಾಯಿತು. ಪೊಲೀಸ್ ಕ್ವಾಟರ್ಸ್‌ ಹಿಂದಿರುವ ಓವರ್ ಹೆಡ್ ಟ್ಯಾಂಕ್ ಶಿಥಿಲವಾಗಿದ್ದು, ಅದನ್ನು ತೆರವುಗೊಳಿಸಲು ಸ್ಥಳೀಯರು ಒತ್ತಾಯಿಸಿದ್ದು, ಮತ್ತೊಮ್ಮೆ ಎಂಜಿನಿಯರ್ ಕರೆಸಿ, ದೂರು ನೀಡಿದವರನ್ನು ಕರೆಸಿ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಸಮುದಾಯ ಸಂಘಟಕಿ ಹೇಮಾವತಿ ಭಟ್ಟ ಚರ್ಚೆಯ ವಿಷಯ ಮಂಡಿಸಿದರು. ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಮಿತ ಅಂಗಡಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಸೈಯದ ಅಲಿ ಸೈಯದ್ ಹಾಗೂ ಸದಸ್ಯರು ಇದ್ದರು.