ಕುಷ್ಟಗಿಯಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಕಾಟ

| Published : Jul 20 2024, 12:46 AM IST

ಕುಷ್ಟಗಿಯಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಕಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ಹಲವೆಡೆ ಸಮೃದ್ಧವಾಗಿ ಬೆಳೆದ ಗೋವಿನಜೋಳ (ಮೆಕ್ಕೆಜೋಳ) ಬೆಳೆಗೆ ಸೈನಿಕ ಹುಳು ಕಾಟ ಹೆಚ್ಚಾಗುತ್ತಿದ್ದು, ರೈತ ಸಮುದಾಯ ಆತಂಕ ಹೆಚ್ಚುತ್ತಿದೆ. ಸೈನಿಕ ಹುಳುವಿನ ಕಾಟದಿಂದ ರೋಗಬಾಧೆ ಹೆಚ್ಚಾಗುತ್ತಿದ್ದು, ಇಳುವರಿಯು ಕುಸಿತದ ಭೀತಿ ಎದುರಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಕಳೆದ ವರ್ಷ ಬರಗಾಲದಿಂದ ತತ್ತರಿಸಿದ ರೈತರಿಗೆ ಈ ಬಾರಿಯ ಮುಂಗಾರು ಮಳೆ ಸ್ವಲ್ಪ ನೆಮ್ಮದಿ ತಂದಿದೆ. ಆದರೆ ಸಮೃದ್ಧವಾಗಿ ಬೆಳೆದ ಗೋವಿನಜೋಳ (ಮೆಕ್ಕೆಜೋಳ) ಬೆಳೆಗೆ ಸೈನಿಕ ಹುಳು ಕಾಟ ಹೆಚ್ಚಾಗುತ್ತಿದ್ದು, ರೈತ ಸಮುದಾಯ ಆತಂಕ ಹೆಚ್ಚುತ್ತಿದೆ.

ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮಸಾಗರ, ಹನುಮನಾಳ, ತಾವರಗೇರಾ ಭಾಗದ ಜಮೀನುಗಳಲ್ಲಿ ರೈತರು ಸುಮಾರು 30430 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಮಳೆಯ ಕೊರತೆ ಇಲ್ಲ. ಆದರೆ ಈ ಸೈನಿಕ ಹುಳುವಿನ ಕಾಟದಿಂದ ರೋಗಬಾಧೆ ಹೆಚ್ಚಾಗುತ್ತಿದ್ದು, ಇಳುವರಿಯು ಕುಸಿತದ ಭೀತಿ ಎದುರಾಗಿದೆ.

ಅನ್ನದಾತರು ಸಾಲ ಮಾಡಿ ಮೆಕ್ಕೆಜೋಳ ಬಿತ್ತಿದ್ದು, ಬೆಳೆ ಕೂಡ ಉತ್ತಮವಾಗಿದೆ. ಆದರೆ ಕಳೆದ ಒಂದು ತಿಂಗಳಿಂದ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದ್ದರಿಂದ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಈಗ ಸಂಕಷ್ಟ ಎದುರಾಗಿದೆ.

ನಾಟಿ ಮಾಡಿದ ಬೆಳೆಗೆ ಕೀಟಬಾಧೆಯ ರೋಗ ಅಂಟಿಕೊಂಡು, ಸಂಪೂರ್ಣ ಪ್ರದೇಶದ ಬೆಳೆಗೆ ವ್ಯಾಪಿಸಿ ಬೆಳೆಯ ಸುಳಿಯ ಒಳಗೆ ಸೈನಿಕ ಹುಳ ದಾಳಿ ಇಟ್ಟಿದೆ. ಎಲೆಯ ಭಾಗವನ್ನು ತಿಂದು ಅಲ್ಲೇ ಲದ್ದಿ ಹಾಕುತ್ತಿದೆ. ಸಾಲಸೂಲ ಮಾಡಿ ಮೆಕ್ಕೆಜೋಳ ಬೆಳೆದ ರೈತರಿಗೆ ಸೈನಿಕ ಹುಳ ದಾಳಿ ಚಿಂತಾಕ್ರಾಂತರಾಗುವಂತೆ ಮಾಡಿದೆ.

ಶಾಶ್ವತ ಪರಿಹಾರ: ಪ್ರತಿ ವರ್ಷ ಅನ್ನದಾತರು ಕೀಟಬಾಧೆ ಎದುರಿಸುವಂತಾಗಿದ್ದು, ಸಮರ್ಪಕವಾಗಿ ಬೆಳೆ ಕೈ ಸೇರುತ್ತಿಲ್ಲ. ಇದರಿಂದ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕುವಂತಾಗಿದೆ. ಹೀಗಾಗಿ ಅಧಿಕಾರಿಗಳು ಕೀಟ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಕೀಟಬಾಧೆಯಿಂದ ರೈತರು ಕಂಗಾಲಾಗಿದ್ದು, ಸಂಬಂಧಿಸಿದ ಇಲಾಖೆಗಳು ನೆರವಿಗೆ ಧಾವಿಸಬೇಕು. ತಾಲೂಕಿನಾದ್ಯಂತ ಕೀಟಬಾಧೆ ಕಾಣಿಸಿಕೊಂಡಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ, ಅನ್ನದಾತರಿಗೆ ಔಷಧೋಪಚಾರದ ಬಗ್ಗೆ ಅಗತ್ಯ ಸಲಹೆ ನೀಡಬೇಕು ಎನ್ನುತ್ತಾರೆ ರೈತರು.ನಾನು ಮೂರು ಎಕರೆಯ ಹೊಲದಲ್ಲಿ ಸುಮಾರು ₹20 ಸಾವಿರ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದು, ಈಗ ಸೈನಿಕ ಹುಳುವಿನ ಕಾಟ ಹೆಚ್ಚಾಗಿದ್ದು, ಇಳುವರಿಯು ಕಡಿಮೆಯಾಗುವ ಸಂಭವ ಇದೆ. ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಕಡೇಕೊಪ್ಪ ಗ್ರಾಮದ ರೈತ ಬಸವರಾಜ ಜಿಗೇರಿ ಹೇಳಿದರು.ಸೈನಿಕ ಹುಳುವಿನ ಬಾಧೆ ಕಂಡು ಬಂದಲ್ಲಿ ಇಮಾಮೆಕ್ಟಿನ್ ಬೆಂಜೋಯೇಟ್ ಶೇ. 5 ಎಸ್ ಜಿ ಕೀಟನಾಶಕವನ್ನು 1 ಗ್ರಾಂ ಪ್ರತಿ ಲೀಟರ್‌ನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಹುಳುವಿನ ಬಾಧೆ ಕಡಿಮೆ ಆಗದಿದ್ದಲ್ಲಿ 15 ದಿನಗಳೊಳಗಾಗಿ ಮತ್ತೊಂದು ಸಿಂಪಡಣೆಯನ್ನು ಬೇರೆ ಕೀಟನಾಶಕ ಬಳಸಿ ಕೈಗೊಳ್ಳಬೇಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಜಮೀರ್ ಅಲಿ ಹೇಳಿದರು.