ಸಾರಾಂಶ
ಭಟ್ಕಳ: ಕಂದಾಯ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸುವಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರಾಜ್ಯ ಮಾಹಿತಿ ಹಕ್ಕು ಹೋರಾಟ ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಹಸೀಲ್ದಾರ್ ನಾಗರಾಜ ನಾಯ್ಕಡ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸುವ ಮೂಲಕ ಎರಡನೇ ದಿನದ ಹೋರಾಟಕ್ಕೆ ಅಂತ್ಯಹಾಡಿದರು.ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ನಾಗರಾಜ ನಾಯ್ಕಡ, ಸಿಬ್ಬಂದಿ ವರ್ಗಾವಣೆ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಅದಕ್ಕೆ ಕಾಲವಕಾಶದ ಅವಶ್ಯಕತೆ ಇದ್ದು, ಪ್ರತಿಭಟನೆ ಕೈಬಿಡುವಂತೆ ಕೋರಿದ್ದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ನಮಗೆ ಸಿಬ್ಬಂದಿ ವರ್ಗಾವಣೆಯ ಬಗ್ಗೆ ಲಿಖಿತ ಆದೇಶ ನೀಡುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದರು. ಶನಿವಾರ ಮಧ್ಯಾಹ್ನ ಪ್ರತಿಭಟನಾ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಿ, ಪ್ರತಿಭಟನಾಕಾರನ್ನು ಅಲ್ಲಿಂದ ತೆರವುಗೊಳಿಸಲು ಯತ್ನಿಸಲಾಯಿತು. ಪೊಲೀಸ್ ಹಾಗೂ ಸ್ಥಳೀಯ ಪುರಸಭೆಯ ಪರವಾನಗಿ ಪಡೆಯದ ಕಾರಣ ನಿಮಗೆ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಹಸೀಲ್ದಾರ್ ನಾಗರಾಜ ನಾಯ್ಕಡ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಟಿಐ ಕಾರ್ಯಕರ್ತರು, ನಾವು ಹಿಂಸಾತ್ಮಕವಾಗಿ ಇಲ್ಲವೇ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿಲ್ಲ. ಬದಲಾಗಿ ಭ್ರಷ್ಟ ಆಡಳಿತದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ನ್ಯಾಯಯುತ ಹೋರಾಟ ಮಾಡುತ್ತಿದ್ದೇವೆ. ಇದನ್ನು ಸರಿಪಡಿಸಬೇಕಾದ ಕಂದಾಯ ಇಲಾಖೆ ಪೊಲೀಸ್ ಬಲ ಪ್ರಯೋಗಿಸಿ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಾಮಾಜಿಕ ನ್ಯಾಯ ಕೇಳಿ ಪ್ರತಿಭಟನೆ ಮಾಡುವ ಹಕ್ಕು ನಮಗಿಲ್ಲವೇ ಎಂದು ಪ್ರಶ್ನಿಸಿದರು. ಸಿಬ್ಬಂದಿ ವರ್ಗಾವಣೆ ಮಾಡುವ ಅಧಿಕಾರ ನಮಗಿಲ್ಲ, ಜಿಲ್ಲಾಡಳಿತ ಮಾಡಬೇಕಾಗಿದ್ದು, ಅದಕ್ಕೆ ಕಾಲವಕಾಶ ಬೇಕು. ಅಲ್ಲಿಯ ತನಕ ಪ್ರತಿಭಟನೆ ಕೈಬೀಡಬೇಕು ಎಂದರು. ಇದನ್ನು ಕಾರ್ಯಕರ್ತರು ಒಪ್ಪದೇ ಇದ್ದಾಗ ಪೊಲೀಸರು ಎಲ್ಲರನ್ನು ಬಂಧಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ತಾನೇ ಪರವಾನಗಿ ನೀಡಿ ಹತ್ತಿಕ್ಕಿದ ಕಂದಾಯ ಇಲಾಖೆ: ಆರ್‌ಟಿಐ ಕಾರ್ಯಕರ್ತರು ತಾಲೂಕಾಡಳಿತಕ್ಕೆ ಮನವಿ ನೀಡಿ, ಪ್ರತಿಭಟನೆಗೆ ತಾಲೂಕಾಡಳಿತ ಕಚೇರಿ ಎದುರು ಅವಕಾಶ ನೀಡುವಂತೆ ಕೋರಿದ್ದರು. ಇದಕ್ಕೆ ಒಪ್ಪದ ತಾಲೂಕಾಡಳಿತ ತಾಲೂಕಾಡಳಿತ ಕಚೇರಿ ಎದುರು ಬದಲಾಗಿ ಹಳೇ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದಾಗಿ ಲಿಖಿತ ಪರವಾನಗಿ ನೀಡಿತ್ತು. ಆದರೆ ಈಗ ಪ್ರತಿಭಟನೆ ನಡೆಸುತ್ತಿರುವ ಮಾರನೇ ದಿನವೇ ಪೊಲೀಸ್ ಬಲ ಪ್ರಯೋಗಿಸಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.