ಸಾರಾಂಶ
ಜಲಜೀವನ್ ಮಿಷನ್ ಯೋಜನೆಗೆ ಬಜೆಟ್‌ನಲ್ಲಿ ಕಡಿಮೆ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರ ಯೋಜನೆಯನ್ನು ಕೊಲ್ಲುತ್ತಿದೆ.
ಬೆಂಗಳೂರು : ಜಲಜೀವನ್ ಮಿಷನ್ ಯೋಜನೆಗೆ ಬಜೆಟ್‌ನಲ್ಲಿ ಕಡಿಮೆ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರ ಯೋಜನೆಯನ್ನು ಕೊಲ್ಲುತ್ತಿದೆ. ಈ ಅನ್ಯಾಯ ಪ್ರಶ್ನಿಸಬೇಕಾಗಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರಂಥ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿ ಹರಡಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಟೀಕಿಸಿರುವ ಅವರು, ಬಜೆಟ್‌ನಲ್ಲಿ ಉದ್ದೇಶಪೂರ್ವಕವಾಗಿ ಕಡಿಮೆ ಅನುದಾನ ನೀಡುವ ಮೂಲಕ ಯೋಜನೆ ಉದ್ದೇಶ ಹಾಳು ಮಾಡಲು ಯತ್ನಿಸಲಾಗಿದೆ. ಯೋಜನೆಗೆ ಈವರೆಗೆ ನಿಗದಿಯಾಗಿದ್ದ ಕೇಂದ್ರದ ಪಾಲು 26,119 ಕೋಟಿಗಳಲ್ಲಿ 11,760 ಕೋಟಿ ಅಂದರೆ ಶೇ.45ರಷ್ಟು 00 ಮಾತ್ರ ಬಿಡುಗಡೆ ಮಾಡಲಾಗಿದೆ. ರಾಜ್ಯದ ಪಾಲು 23,142 ಕೋಟಿಯಲ್ಲಿ 20,442 ಕೋಟಿ ಅಂದರೆ ಶೇ.88 ರಷ್ಟು ಬಿಡುಗಡೆ ಮಾಡಲಾಗಿದೆ. ಇದೀಗ ಬಜೆಟ್‌ನಲ್ಲೂ ಕಡಿಮೆ ಹಣ ನೀಡುವ ಮೂಲಕ ಕರ್ನಾಟಕದ ಹಿತಾಸಕ್ತಿಗೆ ದ್ರೋಹ ಬಗೆದ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.
ಪತ್ರ ಬರೆದರೂ ಪ್ರಯೋಜನ ಇಲ್ಲ:
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪ್ರತಿಯೊಂದು ರುಪಾಯಿಯನ್ನು ರಾಜ್ಯ ಸರ್ಕಾರ ಉದ್ದೇಶಿತ ಯೋಜನೆಗೆ ಯಶಸ್ವಿಯಾಗಿ ಬಳಸಿದೆ. 2024-25ರಲ್ಲಿ ಕೇಂದ್ರವು ಜೆಜೆಎಂ ಯೋಜನೆಗೆ 3,804 ಕೋಟಿ ರು. ಮಾತ್ರ ಹಂಚಿಕೆ ಮಾಡಿದ್ದು, ಇದರಲ್ಲಿ 570 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಈ ಬಗ್ಗೆ ಹಲವು ಬಾರಿ ಪತ್ರ ಬರೆದರೂ ಗಮನ ನೀಡಿಲ್ಲ.
ಇನ್ನು ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯನ್ನು ಕೊಲ್ಲುತ್ತಿದೆ. ಸೋಮಣ್ಣ ಅವರು ಜನರನ್ನು ಹಾದಿ ತಪ್ಪಿಸುವ ಬದಲು 2024-25 ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗೆ ಹಂಚಿಕೆಯಾಗಿದ್ದ ಪೂರ್ಣ ಅನುದಾನವನ್ನು ಯಾಕೆ ನೀಡಿಲ್ಲ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಯನ್ನು ಮುಂದುವರಿಸುತ್ತಿದ್ದರೂ, ಜಲ ಜೀವನ್ ಮಿಷನ್ ಯೋಜನೆಯ ಮುಖಾಂತರ ಪ್ರತಿ ಮನೆಗೆ ಸುರಕ್ಷಿತ ಕುಡಿಯುವ ನೀರನ್ನು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯೋಜನೆಗೆ ನಿಗದಿಯಾಗಿದ್ದ ಕೇಂದ್ರದ ಪಾಲು ₹26,119 ಕೋಟಿ
ಇದರಲ್ಲಿ ₹11,760 ಕೋಟಿ (ಶೇ.45) ಮಾತ್ರ ಬಿಡುಗಡೆ ಮಾಡಲಾಗಿದೆ.
ಯೋಜನೆಗೆ ರಾಜ್ಯದ ಪಾಲು ₹23,142 ಕೋಟಿ
ಇದರಲ್ಲಿ ₹20,442 ಕೋಟಿ (ಶೇ.88) ರಷ್ಟು ಬಿಡುಗಡೆ ಮಾಡಲಾಗಿದೆ.
‘ಅಕ್ರಮ ಫೈನಾನ್ಸ್ ತಕ್ಷಣ ಬಂದ್ ಆಗ್ಬೇಕು’
ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರಿಗೆ ಯಾವುದೇ ಕಿರುಕುಳ ಉಂಟಾಗಬಾರದು ಎಂಬ ಉದ್ದೇಶದಿಂದ ಜಾರಿಯಾಗಿರುವ ಸುಗ್ರೀವಾಜ್ಞೆ ಕಾಯ್ದೆಯ ಮೂಲ ಉದ್ದೇಶ ವಿಫಲವಾಗಬಾರದು. ಕಾಯ್ದೆಯ ಎಲ್ಲ ಅಂಶಗಳನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಪರವಾನಿಗೆ ಪಡೆಯದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಪರವಾನಿಗೆ ಪಡೆದಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್‌ಬಿಐ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದನ್ನು ಖಾತ್ರಿಪಡಿಸಬೇಕು. ಒಂದು ವೇಳೆ ಪರವಾನಗಿ ಅಥವಾ ನೋಂದಣಿ ಆಗಿರದ ಅಕ್ರಮ ಫೈನಾನ್ಸ್ ಕಂಪನಿಗಳು ಇದ್ದರೆ ತಕ್ಷಣ ಬಂದ್ ಮಾಡಬೇಕು ಎಂದು ಹೇಳಿದ್ದಾರೆ.
ಮೈಕ್ರೋಫೈನಾನ್ಸ್ ಕಂಪನಿಗಳ ನಿಯಂತ್ರಣದ ಕುರಿತ ಹೊರಡಿಸಿರುವ ಸುಗ್ರೀವಾಜ್ಞೆ ಅನುಷ್ಠಾನದ ಕುರಿತು ಕಾನೂನು ಸಚಿವ ಎಚ್.ಕೆ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೇರಿ ವಿವಿಧ ಹಿರಿಯ ಅಧಿಕಾರಿಗಳ ಜತೆ ಶನಿವಾರ ಅವರು ಸಭೆ ನಡೆಸಿದರು.
ಬಲವಂತದ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಸಹಾಯವಾಣಿ ಪ್ರಾರಂಭಿಸಲು ಸೂಚಿಸಲಾಗಿದ್ದು, ಬಲವಂತದ ಸಾಲ ವಸೂಲಾತಿ ಮಾಡುವ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಬೇಕು. ಸಾಲ ನೀಡುವವರಿಗೆ ತೊಂದರೆ ಉಂಟು ಮಾಡುವ ಯಾವುದೇ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಆದರೆ ಬಲವಂತದ ವಸೂಲಾತಿ, ಮಾನಹಾನಿ, ಕಿರುಕುಳದ ಮೂಲಕ ಸಾಲ ವಸೂಲಾತಿಯನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಈ ಉದ್ದೇಶ ವಿಫಲವಾಗಬಾರದು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಖಡಕ್ ಸೂಚನೆ: ಯಾವುದೇ ಜಿಲ್ಲೆಗಳಲ್ಲಿ ಸಾಲಗಾರರ ಕಿರುಕುಳ ಮುಂದುವರೆದಿರುವುದು ಗಮನಕ್ಕೆ ಬಂದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಕಾಯ್ದೆ ಜಾರಿಗೊಳಿಸಿದ ಬಳಿಕ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದು, ಕಟ್ಟುನಿಟ್ಟಿನಿಂದ ಕಾಯ್ದೆಯ ಅಂಶಗಳನ್ನು ಜಾರಿಗೊಳಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.ಸಭೆಯಲ್ಲಿ ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್, ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹಾಜರಿದ್ದರು.