ಸಾರಾಂಶ
ಸಹಕಾರ ಸಂಘಗಳಲ್ಲಿ ನೌಕರರ ನೇಮಕಾತಿ, ವರ್ಗಾವಣೆ ಹಾಗೂ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಹಕಾರ ಸಂಘಗಳು ಹೊಂದಿದ್ದ ಅಧಿಕಾರ ಮೊಟಕುಗೊಳಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಅಸಂವಿಧಾನಿಕವೆಂದು ಘೋಷಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು : ಸಹಕಾರ ಸಂಘಗಳಲ್ಲಿ ನೌಕರರ ನೇಮಕಾತಿ, ವರ್ಗಾವಣೆ ಹಾಗೂ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಹಕಾರ ಸಂಘಗಳು ಹೊಂದಿದ್ದ ಅಧಿಕಾರ ಮೊಟಕುಗೊಳಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಅಸಂವಿಧಾನಿಕವೆಂದು ಘೋಷಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಿದ್ದುಪಡಿ ನಿಯಮ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಹಕಾರ ಕೃಷಿ ಸಂಸ್ಥೆಯ ಹಾಲಿ ಅಧ್ಯಕ್ಷ ಕೆ.ವಿ. ಪ್ರಸಾದ್ ಸೇರಿದಂತೆ 50ಕ್ಕೂ ಹೆಚ್ಚು ಸಹಕಾರ ಸಂಘಗಳು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಮಾನಾಥ ಹೆಗಡೆ ಅವರ ಪೀಠ ಈ ಆದೇಶ ನೀಡಿದೆ.
ಇದರಿಂದ ಸಹಕಾರ ಸಂಘಗಳಲ್ಲಿ ನೌಕರರ ನೇಮಕಾತಿ, ವರ್ಗಾವಣೆ ಮತ್ತು ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಅಧಿಕಾರವನ್ನು ತನ್ನ ಸುಪರ್ದಿಗೆ ಪಡೆಯಲು ಸರ್ಕಾರದ ನಡೆಸಿದ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-2023ರ ಸೆಕ್ಷನ್ 128ಎಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯು ಸಂವಿಧಾನದ ಪರಿಚ್ಛೇದ 19 (1)(ಸಿ) ಅಡಿಯಲ್ಲಿ ಎಲ್ಲ ನಾಗರಿಕರಿಗೆ ಕಲ್ಪಿಸಿರುವ ‘ಸಂಘಗಳು ಮತ್ತು ಒಕ್ಕೂಟಗಳು ಅಥವಾ ಸಹಕಾರ ಸಂಘಗಳನ್ನು ರಚಿಸುವ ಹಕ್ಕನ್ನು ಉಲ್ಲಂಘಿಸಿದೆ. ಆದ್ದರಿಂದ ತಿದ್ದುಪಡಿ ನಿಯಮ ಸಂವಿಧಾನಬಾಹಿರವಾಗಿದೆ ಎಂದು ತೀರ್ಪಿನಲ್ಲಿ ನ್ಯಾಯಪೀಠ ತಿಳಿಸಿದೆ.
ವಿಸ್ತೃತ ಆದೇಶವು ಇನ್ನಷ್ಟೇ ಲಭ್ಯವಾಗಬೇಕಿದೆ.
ವಿಚಾರಣೆ ವೇಳೆ ಅರ್ಜಿದಾರರ ಹಿರಿಯ ವಕೀಲ ಎ.ಕೇಶವ ಭಟ್, ಸಂವಿಧಾನದ ಪರಿಚ್ಛೇದ 19 (1)(ಸಿ) ಪ್ರಕಾರ ಸಹಕಾರ ಸಂಘಗಳನ್ನು ರಚಿಸುವುದು ಹಾಗೂ ನಿರ್ವಹಣೆ ಮಾಡಿಕೊಂಡು ಹೋಗುವುದು ನಾಗರಿಕರ ಮೂಲಭೂತ ಹಕ್ಕು ಆಗಿದೆ. ಅದರಂತೆ ರಾಜ್ಯದಲ್ಲಿ ಸ್ಥಳೀಯರು ಸೇರಿಕೊಂಡು ಸಹಕಾರ ಸಂಘಗಳನ್ನು ರಚಿಸಿಕೊಂಡು ಕಾನೂನು ರೀತಿ ನಿರ್ವಹಣೆ ಮಾಡುತ್ತ ಬಂದಿದ್ದಾರೆ. ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತು ಕ್ರಮ ಮತ್ತಿತರ ಆಡಳಿತಾತ್ಮಕ ವಿಚಾರಗಳನ್ನು ಆಯಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ನೋಡಿಕೊಳ್ಳುತ್ತಿದ್ದವು. ಆದರೆ, ರಾಜ್ಯ ಸರ್ಕಾರ 2023ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಸೆಕ್ಷನ್ 128ಎಗೆ ತಿದ್ದುಪಡಿ ತಂದು, ಆ ಎಲ್ಲ ಅಧಿಕಾರಿಗಳನ್ನು ಸಹಕಾರ ಸಂಘಗಳಿಂದ ಕಿತ್ತುಕೊಂಡಿರುವುದು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಬಲವಾಗಿ ವಾದಿಸಿದ್ದರು.
ಅಲ್ಲದೆ, ಕಾನೂನು-ಸುವ್ಯವಸ್ಥೆ, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಬರುವ ಅಪಾಯವಿದ್ದಾಗ, ಸಾರ್ವಜನಿಕ ಸುವ್ಯವಸ್ಥೆ ನಿಯಂತ್ರಣ ಕಳೆದುಕೊಂಡಾಗ ಮೂಲಭೂತ ಹಕ್ಕುಗಳ ಮೇಲೆ ಸೀಮಿತ ನಿರ್ಬಂಧಗಳನ್ನು ಹೇರಬಹುದು. ಆದರೆ, ಈ ಪ್ರಕರಣದಲ್ಲಿ ಅಂತಹ ಸನ್ನಿವೇಶವೇ ಇಲ್ಲ. ಸಹಕಾರ ಸಂಘಗಳ ಅಧಿಕಾರ ಮೊಟಕುಗೊಳಿಸುವ ದುರದ್ದೇಶದಿಂದ ಸರ್ಕಾರ ಈ ತಿದ್ದುಪಡಿ ನಿಯಮ ರೂಪಿಸಿದೆ. ಇದರಿಂದ ಸಹಕಾರ ಸಂಘಗಳ ಸ್ವಾಯತ್ತತೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ತಿದ್ದುಪಡಿ ನಿಯಮವನ್ನು ಸಂವಿಧಾನಬಾಹಿರವೆಂದು ಘೋಷಿಸಬೇಕು ಎಂದು ಕೋರಿದ್ದರು. ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ.