ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರದ ನಂ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವದ ಅಂಗವಾಗಿ ಗುಡ್ಡೆಹೊಸೂರು ಬಳಿ 16.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ವಿರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಪ್ಪ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲೆಯ ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿವೆ. ಸಹಕಾರ ಸಂಘಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಅಧಿಕಾರಿ ವರ್ಗ ಹಸ್ತಕ್ಷೇಪ ಸಲ್ಲದು. ಸ್ಥಳೀಯ ನಾಗರಿಕರು ಸೇರಿ ಜನರಿಂದ ಸ್ಥಾಪನೆಗೊಂಡ ಸಹಕಾರ ಸಂಘ ರೈತರ ಏಳಿಗೆಯ ಉದ್ದೇಶ ಹೊಂದಿದೆ. ರೈತರಿಗೆ ಸಾಲಸೌಲಭ್ಯ ಕೊಡುವುದರ ಜೊತೆಗೆ ಅವರ ಸಮಸ್ಯೆ ಗಳಿಗೆ ಸ್ಪಂದಿಸುವಂತೆ ಆಗಬೇಕು ಎಂದರು.ಶಾಸಕ ಡಾ. ಮಂತರ್ ಗೌಡ ಅವರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ದೇಶಿತ ಶತಮಾನೋತ್ಸವ ಭವನ ಕಟ್ಟಡ ವಿನ್ಯಾಸದ ತ್ರಿಡಿ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 16.5 ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು ರೂಪಿಸಿರುವುದು ಹೆಮ್ಮೆಯ ವಿಚಾರ. ಕುಶಾಲನಗರ ಸಂಘವು ಕೈಗೊಂಡಿರುವ ಯೋಜನೆಗಳನ್ನು ಜಿಲ್ಲೆಯ ಇತರೆ ಸಹಕಾರ ಸಂಘಗಳು ಮಾದರಿಯಾಗಿ ತೆಗೆದುಕೊಂಡು ಬೆಳವಣಿಗೆ ಹೊಂದಬೇಕು ಎಂದರು.
ಭವನ ನಿರ್ಮಾಣವಾದ ನಂತರ ಬಡವರಿಗೆ ಹಾಗೂ ಜನಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಅವಕಾಶ ಮಾಡಿಕೊಡಬೇಕು. ಭವನದಲ್ಲಿ ಉತ್ತಮ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಶತಮಾನೋತ್ಸವ ಸವಿನೆನಪಿಗಾಗಿ ಗುಡ್ಡೆಹೊಸೂರು ಬಳಿ 1.80 ಎಕರೆ ಜಾಗ ಖರೀದಿಸಿದ್ದೇವೆ. ಈ ಜಾಗದಲ್ಲಿ 16.5 ಕೋಟಿ ರು. ವೆಚ್ಚದ ಆಧುನಿಕ ಸೌಲಭ್ಯ ಹೊಂದಿರುವ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಕಟ್ಟಡ ನಿರ್ಮಾಣ ಸಮಿತಿ ಸಲಹೆಗಾರ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೈಗೊಂಡಿರುವ ಈ ಯೋಜನೆ ಜಿಲ್ಲೆಯ ಇತರೆ ಸಂಘಗಳಿಗೆ ಮಾದರಿಯಾಗಿದೆ. ಕುಶಾಲನಗರ ತಾಲೂಕಿನ ಇತಿಹಾಸದಲ್ಲಿ ಸಹಕಾರ ಸಂಘವೊಂದರೆ ಐತಿಹಾಸಿಕ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ಉಷಾ, ಬಿ.ಎಂ.ಪ್ರದೀಪ್, ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರತ್, ಮೈಸೂರು ವಿಭಾಗದ ಸಹಕಾರ ಇಲಾಖೆಯ ಉಪ ನಿಬಂಧಕ ಎಚ್.ಆರ್.ವಿಜಯಕುಮಾರ್, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದ ಕುಮಾರ್, ನಿರ್ದೇಶಕರಾದ ಡಿ.ವಿ.ರಾಜೇಶ್, ಕವಿತಾ, ನೇತ್ರಾವತಿ, ಮಧುಸೂದನ್, ಯತೀಶ್, ಮಧುಕುಮಾರ್, ಎಂ.ಕೆ.ಗಣೇಶ್, ಅಬ್ದುಲ್ ಖಾದರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ. ಲೋಕೇಶ್ ಮತ್ತಿತರರು ಇದ್ದರು.