ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಸಿಲ ತಾಪಕ್ಕೆ ತೆಂಗು ಬೆಳೆ ಸಜೀವ ದಹನವಾಗುತ್ತಿದೆ. ಸುಡು ಬಿಸಿಲಿಗೆ ತೆಂಗಿನಮರಗಳು ಒಣಗಿಹೋಗುತ್ತಿವೆ. ಇಳುವರಿ ತೀವ್ರ ಕುಸಿತಗೊಂಡಿದೆ. ಒಂದೆಡೆ ಮಳೆ ಇಲ್ಲ, ಕೊಳವೆ ಬಾವಿಗಳಲ್ಲಿ ನೀರಿಲ್ಲ, ಹೊಸದಾಗಿ ಕೊಳವೆಬಾವಿ ಕೊರೆಸಿದರೂ ನೀರು ಹೆಚ್ಚು ದಿನ ಉಳಿಯುತ್ತಿಲ್ಲ. ಹಿಂದೆಂದೂ ಕಾಣದಂತಹ ಇಂತಹ ಘನ ಘೋರ ದೃಶ್ಯವನ್ನು ನೋಡುತ್ತಾ ಬೆಳೆಗಾರರು ರಕ್ತ ಕಣ್ಣೀರು ಸುರಿಸುತ್ತಿದ್ದಾರೆ.ಹಲವಾರು ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬಂದಿದ್ದ ತೆಂಗಿನ ಮರಗಳು ನೀರಿಲ್ಲದೆ ಒಣಗುತ್ತಿರುವುದು ಬೆಳೆಗಾರರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಈ ರೀತಿಯ ಬಿಸಿಲ ತಾಪವನ್ನು ತಾವು ಹಿಂದೆಂದೂ ಕಂಡಿರಲಿಲ್ಲ. ರಣಬಿಸಿಲಿಗೆ ತೆಂಗಿನಗರಿಗಳೆಲ್ಲಾ ಒಣಗುತ್ತಿವೆ. ಇಳುವರಿ ತೀವ್ರ ಪ್ರಮಾಣದಲ್ಲಿ ಕುಸಿತಕ್ಕೊಳಗಾಗಿದೆ. ಕೆಲವೆಡೆ ಸುಳಿಯೇ ಒಣಗಿಹೋಗಿ ತೆಂಗಿನಮರಗಳು ಅಸ್ಥಿಪಂಜರಗಳಾಗುತ್ತಿರುವುದು ಬೆಳೆಗಾರರನ್ನು ಬದುಕು ಮೂರಾಬಟ್ಟೆಯಾಗುವಂತೆ ಮಾಡಿದೆ.
ಕಳಚಿಬೀಳುತ್ತಿರುವ ಗರಿಗಳು:ಬಿಸಿಲ ತಾಪಕ್ಕೆ ಹಸಿ ತೆಂಗಿನಗರಿಗಳೇ ಸುಟ್ಟಂತಾಗುತ್ತಿವೆ. ಹಸಿರಿನಿಂದ ಕಂಗಳಿಸಬೇಕಿದ್ದ ತೆಂಗಿನಗರಿಗಳ ಬಣ್ಣ ಹಳದಿರೂಪಕ್ಕೆ ತಿರುಗಿವೆ. ಗರಿಗಳೆಲ್ಲವೂ ಮುದುಡಿಕೊಂಡಿವೆ. ತೇವಾಂಶವಿಲ್ಲದೆ ಹಸಿಮಟ್ಟೆಗರಿಗಳೇ ಮರದಿಂದ ಕಳಚಿಬೀಳುತ್ತಿವೆ. ಇದರೊಂದಿಗೆ ತೆಂಗಿನಬುಂಡೆಗಳು, ಕಾಯಿಗಳು ಉದುರಿಹೋಗುತ್ತಿವೆ. ಎಳನೀರು ಹಂತದ ತೆಂಗಿನಬುಂಡೆಗಳು ಬಳ್ಳಗಾಯಿಗಳಾಗುತ್ತಿವೆ. ಸುಡುಬಿಸಿಲಿಗೆ ಎಳನೀರಿನ ರುಚಿಯೇ ಬದಲಾಗಿಹೋಗಿದೆ. ಎಳನೀರನ್ನು ಕೊಯ್ಯಲಾಗದೆ, ಕಾಯಿಯಾಗುವವರೆಗೆ ಮರದಲ್ಲಿ ಉಳಿಸಿಕೊಳ್ಳುವುದಕ್ಕೂ ಆಗದೇ ಬೆಳೆಗಾರರು ಸಂಕಷ್ಟದ ಕೂಪಕ್ಕೆ ಸಿಲುಕಿದ್ದಾರೆ.
ಒಂದೊಂದು ತೆಂಗಿನ ತೋಟಗಳಲ್ಲಿ ರಾಶಿಗಟ್ಟಲೆ ತೆಂಗಿನಮಟ್ಟೆಗರಿಗಳು ಬಿದ್ದಿವೆ. ಅವುಗಳನ್ನು ತೆರವುಗೊಳಿಸುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಅವುಗಳನ್ನು ಕೊಳ್ಳುವವರಿಲ್ಲದೇ, ರಾಶಿಹಾಕಿಕೊಳ್ಳಲು ಸಾಧ್ಯವಾಗದೆ ತೋಟಗಳಲ್ಲೇ ಒಂದೆಡೆ ರಾಶಿ ಹಾಕಿ ಬೆಂಕಿ ಹಚ್ಚಿ ಸುಡುತ್ತಿದ್ದಾರೆ.ನೀರು ಸಾಲುತ್ತಿಲ್ಲ:
ತೆಂಗಿನಮರಗಳಿಗೆ ಕೊಳವೆ ಬಾವಿಗಳು, ಹನಿ ನೀರಾವರಿ ಮೂಲಕ ಒದಗಿಸುತ್ತಿರುವ ನೀರು ಯಾವುದಕ್ಕೂ ಸಾಲದಂತಾಗಿದೆ. ಬಿಸಿಲ ಶಾಖ ಹೆಚ್ಚಿದಂತೆಲ್ಲಾ ನಿರಂತರವಾಗಿ ಭೂಮಿಯ ಕಾವಿನಲ್ಲೂ ಏರಿಕೆಯಾಗಿದೆ. ಕೆಳಭಾಗದಲ್ಲಿ ಎಷ್ಟೇ ನೀರು ಹರಿಸಿದರೂ ಇಡೀ ಮರವನ್ನು ತಣಿಸುತ್ತಿಲ್ಲ. ತೋಟಗಳನ್ನು ತಣಿಸುವಷ್ಟು ನೀರೂ ಕೊಳವೆಬಾವಿಗಳಿಂದ ಸಿಗುತ್ತಿಲ್ಲ. ಹನಿ ನೀರಾವರಿಯನ್ನು ಅಳವಡಿಸಿಕೊಂಡಿರುವ ತೋಟಗಳಲ್ಲೂ ತೆಂಗಿನಗರಿಗಳು, ತೆಂಗಿನಬುಂಡೆಗಳು ಉದುರುವುದು ತಪ್ಪಿಲ್ಲ. ಇದರಿಂದ ರೈತರಿಗೆ ಏನು ಮಾಡಬೇಕೆಂಬುದು ತೋಚದೇ ಚಿಂತಾಕ್ರಾಂತರಾಗಿದ್ದಾರೆ.ತೆಂಗಿನಮರಕ್ಕೆ ಬೇರುಮಟ್ಟದಲ್ಲಿ ಎಷ್ಟೇ ನೀರು ಕೊಟ್ಟರೂ ಮಳೆಯೂ ಬಿದ್ದಷ್ಟು ತಣಿಯುವುದಿಲ್ಲ. ಮಳೆಯಿಂದ ಭೂಮಿ ಸುತ್ತಮುತ್ತಲ ಪ್ರದೇಶವೆಲ್ಲಾ ತಂಪಾಗುತ್ತದೆ. ತಂಪಾದ ಗಾಳಿಯಿಂದ ಮರಗಳು ಚೈತನ್ಯ ಪಡೆದುಕೊಳ್ಳುತ್ತಿದ್ದವು. ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಹಾಲಿ ತೆಂಗಿನ ಮರಗಳನ್ನು ಕಾಪಾಡುತ್ತಿದ್ದ ತೋಟಗಳ ಕೊಳವೆಬಾವಿಗಳು ಬತ್ತಿಹೋಗಿವೆ. ಹೊಸದಾಗಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಲಕ್ಷಾಂತರ ರು. ಬಂಡವಾಳ ಸುರಿದರೂ ಮರಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಬೆಳೆಗಾರರು ಸಾಲದ ಕೂಪಕ್ಕೆ ಸಿಲುಕುವ ಸ್ಥಿತಿ ಸೃಷ್ಟಿಯಾಗಿದೆ.
ಎಳನೀರೂ ಇಲ್ಲ, ಕಾಯಿಯೂ ಇಲ್ಲ:ಜಿಲ್ಲೆಯ ನೀರಾವರಿ ಆಶ್ರಿತ ಪ್ರದೇಶದ ತೆಂಗುಬೆಳೆಗಾರರು ಎಳನೀರನ್ನು ಕೊಯ್ದು ಮಾರಾಟ ಮಾಡಿದರೆ, ಮಳೆಯಾಶ್ರಿತ ಪ್ರದೇಶದ ಬೆಳೆಗಾರರು ತೆಂಗಿನಕಾಯಿ, ಕೊಬ್ಬರಿಯನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಿಸಿಲ ತಾಪ ತೀವ್ರಗತಿಯಲ್ಲಿ ಏರಿಕೆಯಾಗಿರುವುದರಿಂದ ನೀರಾವರಿ ಪ್ರದೇಶದ ರೈತರಿಗೆ ಎಳನೀರು ಸಿಗುತ್ತಿಲ್ಲ, ಮಳೆಯಾಶ್ರಿತ ಪ್ರದೇಶದ ಬೆಳೆಗಾರರಿಗೆ ತೆಂಗಿನಕಾಯಿಯೂ ಸಿಗುತ್ತಿಲ್ಲ. ಎಳನೀರಿಗೆ ಎಲ್ಲೆಡೆ ತೀವ್ರ ಅಭಾವ ಎದುರಾಗಿದೆ.
ಎಳನೀರು ಕೀಳಲು ಮರ ಹತ್ತುವುದಕ್ಕೂ ರೈತರು ಭಯಪಡುತ್ತಿದ್ದಾರೆ. ಮರದಲ್ಲಿ ತೇವಾಂಶವಿಲ್ಲದ ಕಾರಣ ಗರಿಸಮೇತ ನೆಲಕ್ಕೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳಬೇಕಾಗುವುದೆಂದು ಭಯಭೀತರಾಗಿದ್ದಾರೆ. ಇನ್ನು ಎಳನೀರು ಹಂತದ ಕಾಯಿಗಳಲ್ಲಿನ ತಿರುಳು ದಪ್ಪಗಾಗುತ್ತಿರುವುದರಿಂದ ಗುಣಮಟ್ಟದ ಎಳನೀರು ಸಿಗುತ್ತಿಲ್ಲ. ನಿಗದಿತ ಅವಧಿಗೆ ಬೀಳಬೇಕಾದ ಕಾಯಿ ಎಳನೀರು ಹಂತದಲ್ಲೇ ಕಳಚಿ ಬೀಳುತ್ತಿರುವುದರಿಂದ ಉತ್ತಮ ತೆಂಗಿನಕಾಯಿಯೂ ದೊರಕದಂತಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.ಎಳನೀರನ್ನು ಕೆಲವು ಕಡೆ ತೋಟದಲ್ಲೇ ೨೧ ರು.ನಿಂದ ೨೮ ರು.ವರೆಗೆ ಮಾರಾಟ ಮಾಡುತ್ತಿದ್ದಾರೆ. ಎಳನೀರಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ರೈತರು ಎಳನೀರು ಹೇಗಿದ್ದರೂ ಕೊಯ್ದು ತಂದು ಒಂದು ಎಳನೀರಿಗೆ ೪೫ ರು.ನಿಂದ ೫೦ ರು.ವರೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ತೆಂಗಿನ ಕಾಯಿಯನ್ನು ೨೫ ರು.ನಿಂದ ೩೦ ರು.ಗೆ ರೈತರಿಂದ ಖರೀದಿಸುವ ಮಾರಾಟಗಾರರು ೪೦ ರಿಂದ ೫೦ ರು.ವರೆಗೆ ಮಾರಾಟ ಮಾಡುತ್ತಿದ್ದಾರೆ.
೬೯ ಸಾವಿರ ಹೆಕ್ಟೇರ್‌ನಲ್ಲಿ ತೆಂಗುಬೆಳೆ:ಭತ್ತ, ಕಬ್ಬು ಬೆಳೆಯನ್ನು ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದಿದ್ದ ಜಿಲ್ಲೆಯ ರೈತರು, ಕಳೆದ ಐದಾರು ವರ್ಷಗಳಿಂದ ತೆಂಗು ಬೆಳೆಯ ಕಡೆ ಮುಖ ಮಾಡಿದ್ದರು. ನಾಗಮಂಗಲ, ಕೆ.ಆರ್.ಪೇಟೆ ತಾಲೂಕಿನಲ್ಲಿ ಹೆಚ್ಚು ಕಂಡುಬರುತ್ತಿದ್ದ ತೆಂಗು ಬೆಳೆ ನೀರಾವರಿ ಪ್ರದೇಶಗಳಲ್ಲೂ ತನ್ನ ವಿಸ್ತೀರ್ಣವನ್ನು ಹೆಚ್ಚಿಸಿಕೊಂಡಿತು. ಖರ್ಚು ಕಡಿಮೆ, ನಿರ್ವಹಣೆ ಸುಲಭವೆಂಬ ದೃಷ್ಟಿಯಿಂದ ತೆಂಗು ಬೆಳೆ ಬೆಳೆದಿದ್ದರು. ಫಲ ಬಿಡುವಷ್ಟರ ಮಟ್ಟಿಗೆ ಉತ್ತಮವಾಗಿ ಪೋಷಿಸಿ ಬೆಳೆಸಿದ್ದರು. ವಾತಾವರಣದಲ್ಲಾದ ಬದಲಾವಣೆಯಿಂದ ಕೆಂಡದಂಥ ಬಿಸಿಲು ತೆಂಗು ಬೆಳೆಗೆ ಮಾರಕ ಹೊಡೆತವನ್ನು ನೀಡಿದ್ದು ಬೆಳೆಗಾರರ ಬದುಕನ್ನು ಜರ್ಜರಿತವಾಗುವಂತೆ ಮಾಡಿದೆ.
ಮಳೆ ಬಾರದಿದ್ದರೆ ತೆಂಗು ಬೆಳೆ ಹಾನಿ:ಇನ್ನೊಂದು ವರ್ಷ ಮಳೆಯಾಗದಿದ್ದರೆ ಜಿಲ್ಲೆಯ ಬಹುತೇಕ ತೆಂಗು ಬೆಳೆ ಹಾನಿಗೊಳಗಾಗಲಿದೆ. ತೆಂಗು ಬೆಳೆಗೆ ವಾತಾವರಣದಲ್ಲಿರುವ ತೇವಾಂಶ, ಉಷ್ಣಾಂಶ ಸಮತೋಲನದಲ್ಲಿರುವುದು ಮುಖ್ಯವಾಗುತ್ತದೆ. ಜಿಲ್ಲೆಯೊಳಗೆ ೬೯ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಬಿಸಿಲ ತಾಪದಿಂದ ಬಹುತೇಕ ಕಡೆ ತೆಂಗು ಬೆಳೆಯ ಇಳುವರಿ ಪ್ರಮಾಣ ಕುಸಿದಿದೆ. ಗರಿಗಳು ಉದುರುತ್ತಿರುವುದು, ತೆಂಗಿನ ಬುಂಡೆಗಳು ಕಳಚಿಬೀಳುತ್ತಿರುವುದು ಸರ್ವೇಸಾಮಾನ್ಯವಾಗಿದೆ.
- ರೂಪಶ್ರೀ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ