ಧುಮ್ಮಿಕ್ಕುತ್ತಿರುವ ಜೋಗ: ವೀಕ್ಷಣೆಗೆ ಮುಗಿಬಿದ್ದ ಜನ

| Published : Aug 05 2024, 12:30 AM IST

ಧುಮ್ಮಿಕ್ಕುತ್ತಿರುವ ಜೋಗ: ವೀಕ್ಷಣೆಗೆ ಮುಗಿಬಿದ್ದ ಜನ
Share this Article
  • FB
  • TW
  • Linkdin
  • Email

ಸಾರಾಂಶ

ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಅಂದಾಜು 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ.

ಕನ್ನಡ ಪ್ರಭ ವಾರ್ತೆ ತಾಳಗುಪ್ಪ

ವಿಶ್ವ ಪ್ರಸಿದ್ಧ ಜೋಗ ಜಲಪಾತ ಮತ್ತೆ ಧುಮ್ಮಿಕ್ಕುತ್ತಿದೆ. ಕಳೆದ ವರ್ಷ ಮಳೆಯಿಲ್ಲದೆ ಬರಡಾಗಿ ನಿಂತಿದ್ದ ಜೋಗದ ಗುಂಡಿ ಈ ವರ್ಷ ತನ್ನ ವೈಭವ ಮರಳಿ ಪಡೆದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜೂನ್ ಮತ್ತು ಜುಲೈ ತಿಂಗಳ ಆರಂಭದಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ಭಾರೀ ಮಳೆಯಾಗಿದ್ದು, ಜಲಾಶಯಗಳೆಲ್ಲ ತುಂಬಿ ಹರಿಯುತ್ತಿವೆ. 831 ಅಡಿಗಳ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಅಂದಾಜು 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೋಗ ಕಣ್ತುಂಬಿಕೊಳ್ಳಲು ರಾಜ್ಯವಲ್ಲದೇ ಬೇರೆ ರಾಜ್ಯ ಮತ್ತು ದೇಶಗಳಿಂದಲೂ ಬರುತ್ತಿದ್ದಾರೆ.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಹೆಚ್ಚು ಮಳೆಯಾಗಿದ್ದು, ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು ಈ ಬಾರಿ ಜುಲೈ ಅಂತ್ಯದಲ್ಲೇ ಜಲಪಾತದ ವೈಭವ ಮತ್ತಷ್ಟು ಮರುಕಳಿಸಿದೆ. ಈ ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಜೋಗ ಜಲಪಾತ ಮೈದುಂಬಿಕೊಂಡು ಭೋರ್ಗರೆಯುತ್ತಿದೆ.

ಅದರಂತೆ ಜೋಗ ಈಗ ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿದೆ. ಈ ನಯನ ಮನೋಹರ ದೃಶ್ಯ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಸತತ ಮಳೆಯಿಂದಾಗಿ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿರಸಿ, ಶಿವಮೊಗ್ಗ, ಗದಗ, ಬಾಗಲಕೋಟೆ ರಾಯಚೂರು ಮೊದಲಾದ ಭಾಗಗಳಿಂದ ಪ್ರವಾಸಿಗರು ದಂಡು ಹರಿದು ಬರುತ್ತಿದೆ.

ಮಂಜು ನಡುವೆ ಮರೆಯಾದ ಜಲಪಾತ:

ವಿಶ್ವ ಪ್ರಸಿದ್ಧ ಜೋಗ ಜಲಪಾತ ನೋಡಲು ಶನಿವಾರ ಆಗಮಿಸಿದ್ದ ಪ್ರವಾಸಿಗರಿಗೆ ಮಂಜು, ಮಳೆ ಕಾರಣದಿಂದ ನಿರಾಸೆ ಮೂಡಿಸಿತು. ಜೋಗ ಜಲಪಾತ ಜಿಟಿ ಜಿಟಿ ಮಳೆ ಹಾಗೂ ಮಂಜಿನ ನಡುವೆ ಮರೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ದರ್ಶನ ನೀಡಿ ಪ್ರವಾಸಿಗರಿಗೆ ಪುಳಕ ನೀಡಿತು. ಹಲವರು ಹರ್ಷೋದ್ಘಾರ ವ್ಯಕ್ತಪಡಿಸಿದ್ದು ಕಂಡು ಬಂತು. ಜಲಪಾತದ ಜತೆ ಫೋಟೋ ತೆಗೆಸಿಕೊಳ್ಳಬೇಕೆಂದು ಕಾದಿದ್ದವರು ನಿರಾಸೆಯಿಂದಲೆ ಊರಿನ ಕಡೆ ಪ್ರಯಾಣ ಬೆಳೆಸಬೇಕಾಯಿತು.

ಕಳೆದ ಮೂರು ವಾರಾಂತ್ಯಗಳಿಗೆ ಹೋಲಿಸಿದರೆ ಈ ಬಾರಿ ಶನಿವಾರ ಮತ್ತು ಭಾನುವಾರ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರು ಕಡಿಮೆಯಾಗಿದ್ದರು. ಕಳೆದ 3 ವಾರಗಳಿಂದ ವಾರದಿಂದ ವಾರಕ್ಕೆ ಏರುಗತಿಯಲ್ಲಿ ಸಾಗಿದ್ದ ಪ್ರವಾಸಿಗರ ಸಂಖ್ಯೆ ಇಂದು ದಿಢೀರನೆ ಕುಸಿತ ಕಂಡಿದೆ. ಅಮಾವಾಸ್ಯೆ ಅದರಲ್ಲೂ ಭೀಮನ ಅಮಾವಾಸ್ಯೆ ಇದ್ದ ಪ್ರಯುಕ್ತ ಪ್ರವಾಸಿಗರು ಕಡಿಮೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ,

ಬೆಳಗ್ಗೆಯಿಂದ ಮಂಜು ಮುಸುಕಿದ ವಾತಾವರಣವಿದ್ದು ಜಿಟಿ ಜಿಟಿ ಮಳೆಯು ಸಹ ಬರುತ್ತಿತ್ತು, ಇದರಿಂದ ಪ್ರವಾಸಿಗರಿಗೆ ಜಲಪಾತದ ಸ್ಪಷ್ಟವಾಗಿ ಕಾಣಲಿಲ್ಲ. ಮಧ್ಯಾಹ್ನ ವೇಳೆಗೆ ಮೋಡ ಕರಗಿ ಬಿಸಿಲು ಬಿದ್ದಿದ್ದರಿಂದ ಜಲಪಾತ ಮುದ ನೀಡಿದೆ.

ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಕಡಿಮೆಯಾಗಿ ಭಾನುವಾರ ಕೇವಲ 40 ಎಂಎಂ ಮಳೆ ಸುರಿದಿದೆ. ಲಿಂಗನಮಕ್ಕಿ ಜಲಾಶಯಕ್ಕೆ 36601.00 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ ಇಂದು 1815.60 ಅಡಿ ತಲುಪಿದೆ, ಸುರಕ್ಷತೆ ದೃಷ್ಟಿಯಿಂದ ಅಣೆಕಟ್ಟೆ ಮೂರು ಬಾಗಿಲನ್ನು ತೆರೆದು 6000 ಕ್ಯುಸೆಕ್‌ನ್ನು ನದಿಗೆ ಹೊರಬಿಡಲಾಗುತ್ತಿದೆ.

ಜಲಪಾತ ವೀಕ್ಷಣೆಗೆ ಅಡ್ಡಿ:

ಮೈಸೂರು ಬಂಗಲೆ ಎದುರು ಅಂಗಳದಲ್ಲಿ ನಿಂತು ನೋಡಿದರೆ ಜಲಪಾತ ಬುಡದಿಂದ ತಲೆಯವರೆಗೆ ಕಾಣುತ್ತದೆ. ಈ ಸ್ಥಳ ಹಿಂದಿನಿಂತಲೂ ಜಲಪಾತ ವೀಕ್ಷಣೆಗೆ ಸೂಕ್ತ ಸ್ಥಳವಾಗಿದೆ. ಪ್ರಮುಖರು ಬಂದು ನಿಂತು ಜಲಪಾತ ವೀಕ್ಷಿಸಿದ ಸ್ಥಳಗಳು, ಕರ್ಜನ್ ಸೀಟು,ಲೇಡಿ ವಿಂಬಲ್ಟನ್ ಸೀಟು, ರಾಣಿ ಸೀಟು, ವಾಣಿ ವಿಲಾಸ ಪ್ಲಾಟ್ ಪಾರಂ ಇತ್ಯಾದಿ ಹೆಸರಿನಲ್ಲಿ ಕರೆಯಲಾಗುತ್ತದೆ. ಆದರೆ ಆ ಭಾಗದ ಕಾಮಗಾರಿ ಪೂರ್ಣಗೊಂಡಿದ್ದರೂ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ನೆಪದಲ್ಲಿ ಅಲ್ಲಿಗೆ ಹೋಗಲು ತಡೆಒಡ್ಡಿ, ಮಯೂರ ಹೋಟೆಲ್ ಹಿಂಬಾಗದಿಂದ ಲೋಕೋಪಯೋಗಿ ಇಲಾಖೆಯ ಬಂಗಲೆ ರಸ್ತೆ ಕೆಳಭಾಗದಲ್ಲಿ ಜಲಪಾತ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಗಿಡ ಗಂಟೆಗಳು ಬೆಳೆದಿರುವುದರಿಂದ ಈ ಸ್ಥಳದಿಂದ ಜಲಪಾತದ ಸಂಪೂರ್ಣ ವೀಕ್ಷಣೆ ಸಾಧ್ಯವಾಗುತ್ತಿಲ್ಲ. ಇದರಿಂದ ಮೈಸೂರು ಬಂಗಲೆಯ ಸಮೀಪ ತೆರಳಲು ಪ್ರವಾಸಿಗರು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ , ಘರ್ಷಣೆ ಸಾಮಾನ್ಯವಾಗಿದೆ.

ಭದ್ರತಾ ಸಿಬ್ಬಂದಿ ಅತಿರೇಕರ ವರ್ತನೆಯನ್ನು ಪ್ರವಾಸಿಗರು ಹಾಗೂ ಸ್ಥಳೀಯರು ಖಂಡಿಸಿ ಜಲಪಾತ ವೀಕ್ಷಿಸಲು ಅಡ್ಡವಾಗಿರುವ ಗಿಡ ಗಂಟೆ ತೆರವುಗೊಳಿಸ ಬೇಕೆಂದು ಒತ್ತಾಯಿಸಿದ್ದಾರೆ.