ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡಲು ಕರೆ

| Published : May 08 2025, 12:32 AM IST

ಸಾರಾಂಶ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಮೇ ೫ರಿಂದ ಪ್ರಾರಂಭವಾಗಿದ್ದು, ಮೇ ೧೭ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಗಣತಿದಾರರು ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿರುವರು. ಈ ಸಂದರ್ಭದಲ್ಲಿ ಮನೆ ಯಜಮಾನರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಮುಂಚಿತವಾಗಿ ತೆಗೆದಿಟ್ಟುಕೊಂಡಿದ್ದು, ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಮೇ ೫ರಿಂದ ಪ್ರಾರಂಭವಾಗಿದ್ದು, ಮೇ ೧೭ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಗಣತಿದಾರರು ಮನೆ ಮನೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿರುವರು. ಈ ಸಂದರ್ಭದಲ್ಲಿ ಮನೆ ಯಜಮಾನರು ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಮುಂಚಿತವಾಗಿ ತೆಗೆದಿಟ್ಟುಕೊಂಡಿದ್ದು, ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಕೋರಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಮೀಕ್ಷೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗಣತಿದಾರರು ಬೆಳಗ್ಗೆ ೬.೩೦ರಿಂದ ಸಂಜೆ ೬ ಗಂಟೆಯವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿರುವರು. ಗೌರವಯುತವಾಗಿ ಧೈರ್ಯವಾಗಿ ತಮ್ಮ ಜಾತಿ ಯಾವುದು ಎಂಬ ನಿಖರ ಮಾಹಿತಿಯನ್ನು ಗಣತಿದಾರರಿಗೆ ನೀಡುವಂತೆ ತಿಳಿಸಿದರು.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳಮೀಸಲಾತಿಯನ್ನು ಜಾರಿಮಾಡಲು ಸರ್ಕಾರವು ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳಮೀಸಲಾತಿಯನ್ನು ವರ್ಗೀಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದ ಅವರು, ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಸಮೀಕ್ಷೆಯಿಂದ ತಪ್ಪಿಹೋಗದಂತೆ ನಿಗಾವಹಿಸಲು ಪ್ರತಿ ತಾಲೂಕಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಸಮೀಕ್ಷೆಯು ಸಂಪುರ್ಣ ಮೊಬೈಲ್ ಆ್ಯಪ್‌ನಿಂದ ಕೂಡಿರುತ್ತದೆ. ಹಾಸನ ಜಿಲ್ಲೆಯಲ್ಲಿ ಒಟ್ಟು ೧೯೬೮ ಮತಗಟ್ಟೆಗಳಿದ್ದು, ಪ್ರತಿಯೊಂದು ಮತಗಟ್ಟೆಗೆ ಶಿಕ್ಷಕರನ್ನು ನೇಮಕಾತಿ ಮಾಡಿ ಪ್ರತಿ ಮನೆಗಳನ್ನು ಸಮೀಕ್ಷೆ ಮಾಡಲಾಗುವುದು. ಒಟ್ಟು ೧೯೬೮ ಗಣತಿದಾರರನ್ನು ನೇಮಕ ಮಾಡಲಾಗಿರುತ್ತದೆ. ಯಾವುದಾದರೂ ಮತಗಟ್ಟೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ೧೫೦ಕ್ಕಿಂತ ಹೆಚ್ಚು ಇದ್ದು, ಮತ್ತೊಬ್ಬ ಹೆಚ್ಚುವರಿ ಗಣತಿದಾರರನ್ನು ಸದರಿ ಮತಗಟ್ಟೆಗೆ ನೇಮಕಾತಿ ಮಾಡಲಾಗುವುದು ಎಂದರು.

ಪ್ರತಿ ೧೦ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಂತೆ ಒಟ್ಟು ೨೦೦ ಜನ ಸಿಬ್ಬಂದಿಗಳನ್ನು ಮೇಲ್ವಿಚಾರಕರಾಗಿ ನೇಮಿಸಲಾಗಿದೆ. ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಮೀಕ್ಷೆಯು ಒಟ್ಟು ೩ ಹಂತಗಳಲ್ಲಿ ನಡೆಯುವುದು. ಸಂಜೆ ೬ ಗಂಟೆಯ ನಂತರ ಸಮೀಕ್ಷೆಯ ತಂತ್ರಾಂಶ ಕಾರ್ಯ ನಿರ್ವಹಿಸುವುದಿಲ್ಲ.

ಮೊದಲನೇ ಹಂತದ ಸಮೀಕ್ಷೆಯು ಮೇ ೫ರಿಂದ ಮೇ ೧೭ರವರೆಗೆ ಮನೆ ಮನೆ ಭೇಟಿಯ ಮೂಲಕ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಯಲಾಗುವುದು. ಎರಡನೇ ಹಂತ ಒಂದು ವೇಳೆ, ಸಮೀಕ್ಷಾದಾರರು ಮನೆಗೆ ಬಂದಂತಹ ಸಂದರ್ಭದಲ್ಲಿ ಮನೆಯವರು ಇಲ್ಲದಿದ್ದ ಪಕ್ಷದಲ್ಲಿ ಮೇ ೧೯ರಿಂದ ಮೇ ೨೧ರವರೆಗೆ ಸಮೀಕ್ಷೆ ಬ್ಲಾಕ್‌ಗಳಲ್ಲಿ ಅಥವಾ ಮತಗಟ್ಟೆ ಕೇಂದ್ರಗಳ ಶಿಬಿರದಲ್ಲಿ ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಮೂರನೇ ಹಂತದಲ್ಲಿ ಮನೆ ಮನೆ ಭೇಟಿ ಅವಧಿ ಹಾಗೂ ಶಿಬಿರಗಳಲ್ಲೂ ಸಮೀಕ್ಷೆಯಿಂದ ಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬಗಳು ಮೇ ೧೯ರಿಂದ ೨೩ರವರೆಗೆ ವೆಬ್‌ಸೈಟ್‌ನಲ್ಲಿ ಸ್ವಯಂ ಘೋಷಿತವಾಗಿ ಆಧಾರ್‌ ಸಂಖ್ಯೆಯೊಡನೆ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಉಂಟಾಗುವ ಯಾವುದಾದರೂ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದ್ದು, ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ರವರನ್ನು ಸಂಪರ್ಕಿಸಬಹುದು. ಸಮೀಕ್ಷಾ ಕಂಟ್ರೋಲ್ ರೂಂ ಗಳ ದೂರವಾಣಿ ವಿವರ ಈ ಕೆಳಕಂಡಂತಿದೆ. ಆಲೂರು ತಾಲೂಕು ದೂರವಾಣಿ ಸಂಖ್ಯೆ ೦೮೧೭೦-೨೧೮೪೬೭,೯೪೮೦೮೪೩೧೪೦, ಅರಕಲಗೂಡು ೯೪೮೦೮೪೩೧೪೧, ಅರಸೀಕೆರೆ ೯೪೮೦೮೪೩೧೪೨, ಬೇಲೂರು ೯೪೮೦೮೪೩೧೪೩, ಚನ್ನರಾಯಪಟ್ಟಣ ೯೪೮೦೮೪೩೧೪೪ ಹಾಸನ ೯೪೮೦೮೪೩೧೪೫, ಹೊಳೆನರಸೀಪುರ ೯೪೮೦೮೪೩೧೪೬, ಸಕಲೇಶಪುರ ೯೪೮೦೮೪೩೧೪೭ ತಾಲೂಕು ದೂರವಾಣಿ ಸಂಖ್ಯೆ ಕರೆ ಮಾಡಿ ತೊಂದರೆಗಳ ಬಗೆಹರಿಸಿಕೊಳ್ಳಲು ಹೇಳಿದ್ದಾರೆ.

ಮನೆ ಮನೆಗೆ ಆಗಮಿಸುವ ಸಮೀಕ್ಷಾದಾರರಿಗೆ ಕುಟುಂಬದ ಮುಖ್ಯಸ್ಥ ಅಥವಾ ಜವಾಬ್ದಾರಿಯುತ ವ್ಯಕ್ತಿ ಅವಶ್ಯಕ ದಾಖಲೆಯಾದ ರೇಷನ್ ಕಾರ್ಡ್, ಆಧಾರ್ ಸಂಖ್ಯೆಯನ್ನು ಮುಂಚಿತವಾಗಿ ತೆಗೆದಿಟ್ಟುಕೊಂಡು ಸಮೀಕ್ಷಾದಾರರಿಗೆ ನೀಡುವ ಮೂಲಕ ಸಹಕರಿಸಬೇಕು. ಪರಿಶಿಷ್ಟ ಜಾತಿಯಲ್ಲಿ ಒಟ್ಟು ೧೦೧ ಜಾತಿಗಳಿದ್ದು, ೯೮ ಜಾತಿಗಳು ನೇರವಾಗಿ ಜಾತಿ ಹೆಸರುಗಳ ಮೂಲಕವೇ ದಾಖಲಾಗುತ್ತದೆ. ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂದು ಜಾತಿಯ ಹೆಸರನ್ನು ಹೇಳುವ ಕುಟುಂಬಗಳು ಇವುಗಳ ಮೂಲ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಉದಾ:- ಹೊಲಯ, ಒಲೆಯರ್‌, ಛಲವಾದಿ, ಮಾದಿಗ, ಮಾದರ ಇತ್ಯಾದಿ. ಅಂತರಜಾತಿ ವಿವಾಹವಾದ ಪ್ರಕರಣದಲ್ಲಿ ಹೆಂಡತಿ ಅಥವಾ ಸೊಸೆಗೆ ಬೇರೆ ಜಾತಿ ಇರಬಹುದು. ಈ ಮಾಹಿತಿಯನ್ನು ತಿಳಿದು ನಮೂದಿಸಬೇಕು ಎಂದರು.

ಸಮೀಕ್ಷೆಯಲ್ಲಿ ಮೂಲ ಜಾತಿಯನ್ನು ನಮೂದಿಸುವುದರ ಜೊತೆಗೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಹೇಳುವುದು ಕೂಡ ಕಡ್ಡಾಯವಾಗಿರುತ್ತದೆ. ಉದಾಹರಣೆಗೆ ವೃತ್ತಿ (ಕುಲ ಕಸುಬು), ಶೈಕ್ಷಣಿಕ ವಿದ್ಯಾರ್ಹತೆ, ಜಮೀನಿನ ವಿವರ, ವಾರ್ಷಿಕ ಆದಾಯ, ಜಾನುವಾರುಗಳ ಸಂಖ್ಯೆ, ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಬಗ್ಗೆ ವಿವರ, ಸ್ಥಿರ ಮತ್ತು ಚರಾಸ್ತಿ ವಿವರ, ಮನೆ ಹಾಗೂ ನಿವೇಶನ, ಕುಡಿಯುವ ನೀರಿನ ಮೂಲ, ಶೌಚಾಲಯ, ಅಡುಗೆಗೆ ಬಳಸುವ ಇಂಧನ, ರಾಜಕೀಯ ಸ್ಥಿತಿಗತಿ ಇತ್ಯಾದಿ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದರು.

ಸಮೀಕ್ಷೆದಾರರು ಕೇಳುವ ಈ ಎಲ್ಲಾ ಪ್ರಶ್ನೆಗಳಿಗೆ ಸಾವಕಾಶವಾಗಿ ಉತ್ತರಿಸಬೇಕು, ನಂತರ ವಿವರವನ್ನು ನೀಡಿದವರು ಸ್ವಯಂ ದೃಢೀಕರಣ ಪ್ರಮಾಣಪತ್ರಕ್ಕೆ ಸಹಿಯನ್ನು ಹಾಕಬೇಕು. ಸಮೀಕ್ಷೆಗೆ ಒಳಗಾದ ಪ್ರತಿ ಕುಟುಂಬಕ್ಕೆ ಒಂದು ಅರ್ಜಿ ಸಂಖ್ಯೆ ಜನರೇಟ್ ಆಗಲಿದ್ದು, ಕುಟುಂಬದ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಹೇಳುವ ಮೂಲಕ ಸಮೀಕ್ಷೆ ಪೂರ್ಣಗೊಳ್ಳುವುದು. ಆ ಅರ್ಜಿ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದು ಮಾಡುವ ಮೂಲಕ ತಾವು ಹೇಳಿರುವ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದು.

ಜಿಲ್ಲೆಯ ಎಲ್ಲಾ ಪರಿಶಿಷ್ಟ ಜಾತಿಯ ಕುಟುಂಬಗಳು ಸಮೀಕ್ಷಾದಾರರು ಆಗಮಿಸುವ ಸಂದರ್ಭದಲ್ಲಿ ಮನೆಯಲ್ಲಿದ್ದು, ಸಮೀಕ್ಷಾದಾರರಿಗೆ ಅಗತ್ಯ ಮಾಹಿತಿಯನ್ನು ನೀಡಿ, ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಂಡು ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಘೋಷಿಸಿಕೊಳ್ಳುವ ಜಾತಿಯ ಹೆಸರು ಪರಿಶಿಷ್ಟ ಜಾತಿ ಸಮೀಕ್ಷೆಗೆ ಮಾತ್ರ. ಇದು ಜಾತಿ ಪ್ರಮಾಣಪತ್ರ ಪಡೆಯಲು ದೃಢೀಕರಣವಲ್ಲ. ಸಮೀಕ್ಷಾದಾರರು ಜಾತಿ ಪ್ರಮಾಣಪತ್ರವನ್ನು ನೀಡುವುದಿಲ್ಲ. ಹಾಸನದಲ್ಲಿ ನಡೆಯುವ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯಕ್ಕೆ ಸಮುದಾಯದ ಎಲ್ಲಾ ಬಾಂಧವರು ಸಹಕರಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿ ಕೋರಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ದೂದ್‌ಫಿರ್, ಸಮುದಾಯದ ಮುಖಂಡರಾದ ಶಂಕರ್ ರಾಜ್, ಕಲಿವೀರ್, ಸಂದೇಶ್, ವಿಜಯ ಕುಮಾರ್, ಕೃಷ್ಣದಾಸ್ ಮತ್ತಿತರರು ಉಪಸ್ಥಿತರಿದ್ದರು.