ಸಸ್ಯ ಪ್ರಭೇದಗಳು ನಶಿಸದಂತೆ ಎಚ್ಚರ ಅಗತ್ಯ: ಸಂತೋಷ್ ಮನೋಹರ್‌ ಹೂಗಾರ್‌

| Published : Mar 26 2024, 01:15 AM IST

ಸಸ್ಯ ಪ್ರಭೇದಗಳು ನಶಿಸದಂತೆ ಎಚ್ಚರ ಅಗತ್ಯ: ಸಂತೋಷ್ ಮನೋಹರ್‌ ಹೂಗಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯ ಜೀವಿಗಳ ಆಹಾರದ ಮೂಲಗಳು ಕಾಡುಗಳಾಗಿವೆ. ಕಾಡುಗಳ ನಶಿಸುವಿಕೆಯಿಂದ ವನ್ಯಜೀವಿಗಳು ಆತಂಕದಲ್ಲಿವೆ. ಇದರಿಂದ ಮಾನವ ಸರಪಳಿಯಾಗಿರುವ ಜೀವ ಸಂಕುಲಕ್ಕೆ ಅಪಾಯ ತಲೆದೋರುತ್ತದೆ. ಜಾಗತಿಕ ತಾಪಮಾನ ತಡೆಗೆ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ಅದರ ಸುಸ್ಥಿರತೆ ಬಗ್ಗೆ ಆಶಾಭಾವನೆ ಉಂಟಾಗಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯಜೈವಿಕ ಸರಪಳಿ ಗಟ್ಟಿಯಾಗಬೇಕಾದರೆ ಸಸ್ಯ ಪ್ರಭೇದಗಳು ನಶಿಸದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಮೈಸೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸಂತೋಷ್ ಮನೋಹರ್ ಹೂಗಾರ್ ತಿಳಿಸಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಬನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎನ್‌ಎಸ್ ಘಟಕ, ವನ್ಯಜೀವಿ ವಿಭಾಗದ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಪಕ್ಷಿಧಾಮದಲ್ಲಿ ಪರಿಸರ ನಡಿಗೆಯ ತರಬೇತಿ ಕಾರ‍್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ವನ್ಯ ಜೀವಿಗಳ ಆಹಾರದ ಮೂಲಗಳು ಕಾಡುಗಳಾಗಿವೆ. ಕಾಡುಗಳ ನಶಿಸುವಿಕೆಯಿಂದ ವನ್ಯಜೀವಿಗಳು ಆತಂಕದಲ್ಲಿವೆ. ಇದರಿಂದ ಮಾನವ ಸರಪಳಿಯಾಗಿರುವ ಜೀವ ಸಂಕುಲಕ್ಕೆ ಅಪಾಯ ತಲೆದೋರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಗತಿಕ ತಾಪಮಾನ ತಡೆಗೆ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರೂ ಅದರ ಸುಸ್ಥಿರತೆ ಬಗ್ಗೆ ಆಶಾಭಾವನೆ ಉಂಟಾಗಿಲ್ಲ. ಪ್ರಸ್ತುತ ಯುವಜನರು ಅತ್ಯಂತ ಪರಿಸರದ ಬಗ್ಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಜಲಕ್ಷಾಮ ಎದುರಾಗಿರುವುದಕ್ಕೆ ಮನುಷ್ಯನ ದುರಾಸೆಯೇ ಕಾರಣ ಎಂದು ದೂಷಿಸಿದರು.

ಅಮೆಜಾನ್ ಕಾಡುಗಳನ್ನು ಯಾವ ರೀತಿ ಹಸಿರೀಕರಣ ಮಾಡಲಾಗಿದೆಯೋ ಹಾಗೆಯೇ ಗೆಂಡೆಹೊಸಹಳ್ಳಿ ಪಕ್ಷಿಧಾಮ ಅತ್ಯಂತ ಸುಶ್ರಾವ್ಯವಾಗಿರುತ್ತದೆ. ಹಸಿರು ಹೊದಿಕೆ ಹೆಚ್ಚಿರುತ್ತದೆ. ಈ ಭಾಗದ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮದ ಉಪ ಭಾಗಗಳಾಗಿದ್ದು, ಇವೆರೆಡೂ ವಿಶ್ವಕ್ಕೇ ಮಾದರಿಯಾದ ಪಕ್ಷಿಧಾಮಗಳಾಗಿವೆ. ಇದರ ಉಳಿವಿಗೆ ಸ್ಥಳೀಯ ಜನರು ಮತ್ತು ಪ್ರಜ್ಞಾವಂತರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮೀದೇವಿ ಮಾತನಾಡಿ, ಮನುಷ್ಯನ ಸ್ವಾರ್ಥದಿಂದ ಜಲಮಾಲಿನ್ಯ ಉಂಟಾಗುತ್ತಿದೆ. ಪರಿಣಾಮ ಜಲಚರ ಜೀವಿಗಳಿಗೆ ತೊಂದರೆಯಾಗುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನದಿ, ಹಳ್ಳ, ಕೊಳ್ಳ, ಕಾಲುವೆಗಳಲ್ಲಿ ಸ್ನಾನ ಮಾಡುವ ವೇಳೆ ಸೋಪು, ಶ್ಯಾಂಪೂಗಳಂತಹ ರಾಸಾಯನಿಕಗಳನ್ನು ಬಳಸುತ್ತೇವೆ. ಇದರಿಂದಾಗಿ ಎಷ್ಟೋ ಜಲಚರಜೀವಿಗಳು ತೊಂದರೆ ಅನುಭವಿಸುತ್ತಿವೆ. ಸಾಯುವಂತಹ ಸನ್ನಿವೇಶಗಳೂ ಎದುರಾಗುತ್ತಿವೆ ಎಂಬುದನ್ನು ಎಲ್ಲರೂ ಚಿಂತಿಸಬೇಕು ಎಂದರು.

ಸೋಪು, ಶ್ಯಾಂಪೂ ಇತರೆ ರಾಸಾಯನಿಕಗಳು ಕಣ್ಣು, ಬಾಯಿ, ಮೂಗಿಗೆ ಹೋದರೆ ನಾವೇ ಸುಧಾರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಇಂತಹುದರಲ್ಲಿ ನೀರಿನಲ್ಲೇ ವಾಸ ಮಾಡುವ ಮೀನುಗಳು, ಮೊಸಳೆಗಳು ಸೇರಿದಂತೆ ಎಲ್ಲ ರೀತಿಯ ಜಲಚರ ಜೀವಿಗಳು ತುಂಬಾ ತೊಂದರೆ ಅನುಭವಿಸುತ್ತವೆ ಎಂಬುದನ್ನು ಮನಗಾಣಬೇಕಿದೆ ಎಂದು ಹೇಳಿದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ೨೦ ವರ್ಷಗಳಿಂದ ನಿರಂತರವಾಗಿ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಸರ ನಡಿಗೆ ಮುಖಾಂತರ ಜೀವ ವೈವಿಧ್ಯತೆಯ ಮಹತ್ವವನ್ನು ತಿಳಿಸುತ್ತಾ ಬಂದಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎನ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ವೈ.ಕೆ. ಭಾಗ್ಯ, ಪ್ರಾಧ್ಯಾಪಕಿ ಹೀನಾಕೌಸರ್, ಎನ್‌ಎಸ್‌ಎಸ್‌ನ ೧೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಜನಪದ ಕಲಾವಿದ ಬಸವರಾಜು ಸಂತೆಕಸಲಗೆರೆ ಪರಿಸರ ಸಂರಕ್ಷಣಾ ಗೀತೆಗಳನ್ನು ಸಾಧರಪಡಿಸಿದರು. ಬಳಿಕ ಪರಿಸರ ನಡಿಗೆ ಮೂಲಕ ಜೀವವೈವಿಧ್ಯಗಳ ಪರಿಚಯ, ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಶ್ರಮದಾನ ನಡೆಯಿತು.