ಸಾರಾಂಶ
ಬೆಂಗಳೂರು : ಪಠ್ಯದಲ್ಲಿ ಇಲ್ಲದ ವಿಷಯಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾವುದೇ ಮುನ್ಸೂಚನೆ ನೀಡದೆ ಶನಿವಾರ ಸಂಜೆ ಏಕಾಏಕಿ ಪ್ರಕಟ ಮಾಡಿದೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಏ.18 ಮತ್ತು 19ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಈ ಫಲಿತಾಂಶವನ್ನು http://kea.kar.nic.in ನಲ್ಲಿ ಪ್ರಕಟಿಸಲಾಗಿದೆ. ಒಟ್ಟು 3,49,653 ಅಭ್ಯರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 3,10,314 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ, ಶನಿವಾರ ಬಿಡುಗಡೆಯಾದ ಫಲಿತಾಂಶದ ಆಧಾರದಲ್ಲಿ 2,15,595 ಅಭ್ಯರ್ಥಿಗಳು ಎಂಜಿನಿಯರಿಂಗ್, 2,15,965 ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ), 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ 50 ಪ್ರಶ್ನೆಗಳನ್ನು ಕೈಬಿಟ್ಟ ಪಠ್ಯಕ್ರಮದಿಂದ ಕೇಳಿದ್ದರಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ತನಿಖೆಗಾಗಿ ತಜ್ಞರ ಸಮಿತಿ ರಚನೆ ಮಾಡಿ 50 ಪ್ರಶ್ನೆಗಳನ್ನು ಹೊರಗಿಟ್ಟು ಮೌಲ್ಯಮಾಪನ ಮಾಡಲು ನಿರ್ಧರಿಸಿತು.
ಅದರಂತೆ, ವಿಷಯ ಪರಿಣಿತರ ವರದಿಯನ್ನಾಧರಿಸಿ ಭೌತಶಾಸ್ತ್ರದ 9, ರಸಾಯನಶಾಸ್ತ್ರದ 15, ಗಣಿತ ವಿಷಯದ 15, ಜೀವಶಾಸ್ತ್ರದ 11 ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಲಾಗಿದೆ. ಜತೆಗೆ ಇದರಿಂದ ಉಂಟಾಗಿದ್ದ ಗೊಂದಲಗಳಿಂದಾಗಿ ಭೌತಶಾಸ್ತ್ರ 1 ಹಾಗೂ ಗಣಿತ ವಿಷಯದಲ್ಲಿ 1 ಕೃಪಾಂಕ ನೀಡಲಾಗಿದೆ.
ಪ್ರಥಮ ರ್‍ಯಾಂಕ್ ಪಡೆದವರು
ಕೋರ್ಸ್‌ವಿದ್ಯಾರ್ಥಿ
ಎಂಜಿನಿಯರಿಂಗ್‌ಹರ್ಷ ಕಾರ್ತಿಕೇಯ, ಬೆಂಗಳೂರು
ಪಶು ವೈದ್ಯಕೀಯ ವಿಜ್ಞಾನಕಲ್ಯಾಣ್ ವಿ, ಬೆಂಗಳೂರು
ಬಿ-ಫಾರ್ಮಾಕಲ್ಯಾಣ್ ವಿ, ಬೆಂಗಳೂರು
ಯೋಗಾ ವಿಜ್ಞಾನನಿಹಾರ್ ಎಸ್.ಆರ್, ಮಂಗಳೂರುಸಿಇಟಿಯಲ್ಲಿ ಉತ್ತಮ ರ್‍ಯಾಂಕ್ ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಯಂತೆಯೇ ಟಾಪರ್ ಆಗಿರುವುದು ಖುಷಿ ತಂದಿದೆ. ತಂದೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಅವರ ಪ್ರೋತ್ಸಾಹವು ನನ್ನ ಸಾಧನೆಗೆ ಪ್ರೇರಣೆ. ನಾನು ಜೆಇಇ ಮೇನ್ಸ್‌ನಲ್ಲಿ 182ನೇ ರ್‍ಯಾಂಕ್ ಪಡೆದಿದ್ದು, ಅಡ್ವಾನ್ಸ್ಡ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಫಲಿತಾಂಶದ ಆಧಾರದಲ್ಲಿ ಯಾವ ಐಐಟಿಯನ್ನು ಆಯ್ದುಕೊಳ್ಳಬೇಕೆಂದು ನಿರ್ಧರಿಸುತ್ತೇನೆ.
- ಹರ್ಷ ಕಾರ್ತಿಕೇಯ, ಎಂಜಿನಿಯರಿಂಗ್ 1ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿ
ಸಿಇಟಿ ವಿವಿಧ 4 ವಿಭಾಗಗಳಲ್ಲಿ ಮೊದಲ ರ್‍ಯಾಂಕ್ ಬಂದಿರುವುದು ನಿಜಕ್ಕೂ ಹೆಮ್ಮೆ. ನಾನು ನೀಟ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ದೆಹಲಿ ಏಮ್ಸ್‌ನಲ್ಲಿ ಎಂಬಿಬಿಎಸ್ ಓದಬೇಕೆಂಬ ಗುರಿ ಹೊಂದಿದ್ದೇನೆ. ಪೋಷಕರು, ಕಾಲೇಜಿನ ಶಿಕ್ಷಕರ ಮಾರ್ಗದರ್ಶನ ಹಾಗೂ ಸತತ 2 ವರ್ಷದ ಪ್ರಯತ್ನದಿಂದ ಇದು ಸಾಧ್ಯವಾಗಿದೆ.
- ಕಲ್ಯಾಣ್ ವಿ, ಪಶುವೈದ್ಯಕೀಯ, ಬಿ-ಫಾರ್ಮಾ, ಡಿ-ಫಾರ್ಮಾ ನರ್ಸಿಂಗ್ 1ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿ
ಇನ್ನು ಪರಿಷ್ಕೃತ ಕೀ ಉತ್ತರಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ವರ್ಷ ದ್ವಿತೀಯ ಪಿಯುಸಿಗೆ ಎರಡು ಪರೀಕ್ಷೆಗಳನ್ನು ಮಾಡಿದ್ದು, ಅವುಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದನ್ನೇ ರ್‍ಯಾಂಕ್ ಪಟ್ಟಿಗೆ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಂಜಿನಿಯರಿಂಗ್‌ನಲ್ಲಿ ಹರ್ಷ ಕಾರ್ತಿಕೇಯ ಪ್ರಥಮ ರ್‍ಯಾಂಕ್:
ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಂಪಿಯಾಡ್ ಶಾಲೆಯ ವಿದ್ಯಾರ್ಥಿ ಹರ್ಷ ಕಾರ್ತಿಕೇಯ ವಟುಕುರಿ, ಯೋಗ ವಿಜ್ಞಾನ ಹಾಗೂ ಬಿ.ಎಸ್ಸಿ ಕೃಷಿಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎಸ್.ಆರ್.ನಿಹಾರ್, ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್ಸಿ ನರ್ಸಿಂಗ್ ಹಾಗೂ ಪಶುವಿಜ್ಞಾನ ವಿಷಯಗಳಲ್ಲಿ ಮಾರತ್‌ಹಳ್ಳಿ ಬ್ರಿಡ್ಜ್ ಬಳಿಯ ಶ್ರೀಚೈತನ್ಯ ಟೆಕ್ನೋ ಶಾಲೆಯ ವಿ.ಕಲ್ಯಾಣ್ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.
ತಾತ್ಕಾಲಿಕ ಅರ್ಹತೆ:
ಎಂಜಿನಿಯರಿಂಗ್ ಜತೆಗೆ ವೆಟರ್ನರಿ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ, ಯೋಗ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸುಗಳಿಗೆ ರಾಜ್ಯದ 737 ಕೇಂದ್ರಗಳಲ್ಲಿ ಸಿಇಟಿ ನಡೆಸಿತ್ತು. ಈಗ ಪ್ರಕಟಿಸಿರುವುದು ತಾತ್ಕಾಲಿಕ ಅರ್ಹತೆ ಪಟ್ಟಿಯಾಗಿದ್ದು, ಅಭ್ಯರ್ಥಿಗಳ ಮೂಲ ಪ್ರಮಾಣಪತ್ರಗಳ ಪರಿಶೀಲನೆ ಮುಗಿಯುವವರೆಗೂ ಈ ಅರ್ಹತೆ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ.
ಯುಜಿ ನೀಟ್-2024ರ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ಯುಜಿನೀಟ್-2024ರ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್ ಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು
ನಾಟಾ-2024?:
ನಾಟಾ ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕೆ ರ್‍ಯಾಂಕ್ ನ್ನು ನಂತರ ಪ್ರಕಟಿಸಲಾಗುವುದು. ಅದೇ ರೀತಿ, ಬಿಪಿಟಿ, ಬಿಪಿಒ, ಬಿ.ಎಸ್ಸಿ ಅಲೈಡ್ ಸೈನ್ಸ್ ರ್‍ಯಾಂಕ್ ಪಟ್ಟಿಯನ್ನು ಕೂಡ ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಗಳನ್ನು ತಾಳೆ ನೋಡಿ:
ಅಭ್ಯರ್ಥಿಗಳು ಓಎಂಆರ್ ಉತ್ತರ ಪತ್ರಿಕೆಯಲ್ಲಿ ನಮೂದಿಸಿರುವ ಉತ್ತರಗಳನ್ನು ಮತ್ತು ಸರಿಯಾದ ಉತ್ತರಗಳನ್ನು ಕೂಡ ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಇವುಗಳನ್ನು ತಮಗೆ ಪರೀಕ್ಷಾ ದಿನದಂದೇ ನೀಡಿರುವ ಓಎಂಆರ್ ಉತ್ತರ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡಿಕೊಳ್ಳಬಹುದು. ವಿವಿಧ ಮೀಸಲಾತಿ ಪ್ರವರ್ಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಮತ್ತು ಜಿಲ್ಲಾವಾರು ಅಭ್ಯರ್ಥಿಗಳ ವಿವರಗಳನ್ನು ಕೂಡ ಈಗಾಗಲೇ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.ಇದುವರೆಗೂ ಕೆಲವು ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯಲ್ಲಿ ಜನ್ಮ ದಿನಾಂಕ/ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಿಲ್ಲ. ಇಂಥವರ ಫಲಿತಾಂಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇಂತಹ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್ ನಲ್ಲಿ ಅಗತ್ಯ ವಿವರಗಳನ್ನು ತುಂಬಿದ ತಕ್ಷಣ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆದ್ದರಿಂದ ಈ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ತಿಳಿಸಲಾಗಿದೆ..
ಗ್ರೇಸ್ ಅಂಕ.
ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿದ್ದವು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಷಯ ಪರಿಣಿತರ ವರದಿಯನ್ನಾಧರಿಸಿ ಭೌತಶಾಸ್ತ್ರದ 9, ರಸಾಯನಶಾಸ್ತ್ರದ 15, ಗಣಿತ ವಿಷಯದ 15, ಜೀವಶಾಸ್ತ್ರದ 11 ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಲಾಗಿದೆ. ಇದೇ ಕಾರಣಕ್ಕೆ ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ.
* ಒಟ್ಟು ಅರ್ಜಿ ಸಲ್ಲಿಸಿದವರು - 3,49,653.
* ಪರೀಕ್ಷೆ ಬರೆದವರು - 3,10,314.
* ಎಂಜಿನಿಯರಿಂಗ್‌ಗೆ ಅರ್ಹತೆ ಪಡೆದವರು - 2,74,595.ರ್‍ಯಾಂಕಿಂಗ್ ಅರ್ಹತೆ ಪಡೆದವರ ವಿವರ:
* ಎಂಜಿನಿಯರಿಂಗ್ - 2,74,595.
* ಬಿಎಸ್ಸಿ ಅಗ್ರಿಕಲ್ಚರ್ - 2,15,965.
* ಬಿವಿ ಸೈನ್ಸ್ - 2,19,887.
* ಬಿಎನ್‌ವೈಎಸ್ - 2,19,483.
* ಬಿ. ಫಾರ್ಮಾ - 2,78,819.
* ಡಿ. ಫಾರ್ಮಾ - 2,79,313.
* ಬಿಎಸ್ಸಿ ನರ್ಸಿಂಗ್ - 2,28,058.
ಯುವತಿಯರದ್ದೇ ಮೇಲುಗೈ:
3,10,314 ಪೈಕಿ 1,71,040 ಮಂದಿ ಯುವತಿಯರೇ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ ಎಲ್ಲಾ ವಿಭಾಗಗಳಲ್ಲೂ ಯುವತಿಯರೇ ಹೆಚ್ಚು ಅರ್ಹತೆ ಗಳಿಸಿದ್ದಾರೆ. ಎಂಜಿನಿಯರಿಂಗ್‌ನಲ್ಲಿ 1,39,274 ಮಂದಿ ಯುವಕರು ಅರ್ಹತೆ ಪಡೆದರೆ 1,48,765 ಮಂದಿ ಯುವತಿಯರು, ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 88,931 ಯುವಕರು, 1,27,034 ಯುವತಿಯರು ಅರ್ಹತೆ ಪಡೆದಿದ್ದಾರೆ. ಹೀಗೆ ಎಲ್ಲಾ ವಿಭಾಗಗಳಲ್ಲೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಹರ್ಷ ಕಾರ್ತಿಕೇಯ ವಟುಕುರಿ ಫಸ್ಟ್- ಯೋಗ ವಿಜ್ಞಾನ, ಬಿ.ಎಸ್ಸಿ ಕೃಷಿಯಲ್ಲಿ ಮಂಗಳೂರಿನ ಎಸ್.ಆರ್.ನಿಹಾರ್ ಫಸ್ಟ್ - ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್ಸಿ ನರ್ಸಿಂಗ್, ಪಶುವಿಜ್ಞಾನಗಳಲ್ಲಿ ಬೆಂಗಳೂರಿನ ಶ್ರೀಚೈತನ್ಯ ಟೆಕ್ನೋ ಶಾಲೆಯ ವಿ.ಕಲ್ಯಾಣ್ ಪ್ರಥಮ ರ್‍ಯಾಂಕ್ - ಎಂಜಿನಿಯರಿಂಗ್‌ಗೆ 2,15,595 ಅಭ್ಯರ್ಥಿಗಳು, ವೆಟರ್ನರಿ ಕೋರ್ಸುಗಳಿಗೆ 2,19,887 ಅಭ್ಯರ್ಥಿಗಳು ಅರ್ಹತೆ- ಫಲಿತಾಂಶಕ್ಕಾಗಿ ವೆಬ್‌ಸೈಟ್ http://kea.kar.nic.in ನೋಡಿ