ಕರಾವಳಿಯನ್ನು ಇತರ ಜಿಲ್ಲೆಗಳಿಗೆ ಸಂಪರ್ಕಿಸುವ ಚಾರ್ಮಾಡಿ ದ್ವಿಪಥ ಕಾಮಗಾರಿ ಫೆಬ್ರವರಿಯಲ್ಲಿ ಆರಂಭ ನಿರೀಕ್ಷೆ

| Published : Nov 26 2024, 12:50 AM IST / Updated: Nov 26 2024, 12:22 PM IST

ಕರಾವಳಿಯನ್ನು ಇತರ ಜಿಲ್ಲೆಗಳಿಗೆ ಸಂಪರ್ಕಿಸುವ ಚಾರ್ಮಾಡಿ ದ್ವಿಪಥ ಕಾಮಗಾರಿ ಫೆಬ್ರವರಿಯಲ್ಲಿ ಆರಂಭ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಮಗಾರಿ

 ಮಂಗಳೂರು : ಕರಾವಳಿಯನ್ನು ಇತರ ಜಿಲ್ಲೆಗಳಿಗೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳಲ್ಲೊಂದಾದ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯ ದ್ವಿಪಥ ಕಾಮಗಾರಿ ಫೆಬ್ರವರಿಯಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

ಕಾಮಗಾರಿಗೆ 343 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಕಾಮಗಾರಿ ಸ್ವೀಕಾರ ಪತ್ರ ನೀಡಲಾಗಿದೆ. ಇನ್ನು ಘಾಟ್‌ ರಸ್ತೆಯಲ್ಲಿರುವ ಮರಗಳ ತೆರವು ಪ್ರಕ್ರಿಯೆ, ಕೆಲವೆಡೆ ಭೂಸ್ವಾಧೀನ, ಪರಿಹಾರ ವಿತರಣೆ, ವಿದ್ಯುತ್‌- ನೀರಿನ ಲೈನ್‌ ಸ್ಥಳಾಂತರ ಇನ್ನಿತರ ಪೂರ್ವಭಾವಿ ಕೆಲಸಗಳನ್ನು ಮುಗಿಸಿ ಕಾಮಗಾರಿ ಆರಂಭವಾಗಲು ಇನ್ನೆರಡು ತಿಂಗಳಾದರೂ ಬೇಕು ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು.

11 ಕಿಮೀ ಕಾಮಗಾರಿ:

ಚಾರ್ಮಾಡಿ ಘಾಟಿ ಮಾರ್ಗದ 25 ಕಿ.ಮೀ. ಪೈಕಿ 11 ಕಿ.ಮೀ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಹಾಗೂ ಉಳಿದ ರಸ್ತೆ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದಾಗಿದೆ. ಈಗ ಕಾಮಗಾರಿ ನಡೆಯುವುದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 12ನೇ ತಿರುವಿನವರೆಗೆ ಮಾತ್ರ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ರಸ್ತೆ ಕಾಮಗಾರಿ ಯೋದನೆ ಡಿಪಿಆರ್‌ ಹಂತದಲ್ಲಿದೆ. ಇವೆರಡೂ ಹಂತ ಮುಕ್ತಾಯವಾದರೆ ಮಾತ್ರ ಘಾಟಿ ಸಂಚಾರ ಸಲೀಸಾಗಲಿದೆ.

ಪ್ರಸ್ತುತ ದ.ಕ. ಜಿಲ್ಲಾ ವ್ಯಾಪ್ತಿಯ 11 ಕಿ.ಮೀ. ಘಾಟಿ ರಸ್ತೆ ಕಾಮಗಾರಿಗೆ ಕೇಂದ್ರದಿಂದ 343 ಕೋಟಿ ರು. ಬಿಡುಗಡೆಯಾಗಿದ್ದರೂ, ಟೆಂಡರ್‌ ಆಗಿರೋದು 175 ಕೋಟಿ ರು.ಗೆ ಮಾತ್ರ. ಘಾಟಿ ಮಾರ್ಗದ ಆರಂಭದಲ್ಲಿ 900 ಮೀ. ವ್ಯಾಪ್ತಿಯಲ್ಲಿ ಖಾಸಗಿ ಭೂಮಿ ಇದ್ದು, ಅದಕ್ಕೆ ಪರಿಹಾರ ನೀಡುವುದು ಸೇರಿದಂತೆ ಕಾಮಗಾರಿಯ ಇತರ ಪೂರ್ವಭಾವಿ ಕೆಲಸಗಳಿಗೆ ಉಳಿದ ಹಣವನ್ನು ಬಳಕೆ ಮಾಡಲಾಗುತ್ತದೆ.

ಚಾರ್ಮಾಡಿ ಘಾಟಿಯನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರೊಂದಿಗೆ ವ್ಯಾಪಾರ- ವಹಿವಾಟು ಕೂಡ ವೃದ್ಧಿಸಲಿದ್ದು, ಕರಾವಳಿ ಮತ್ತಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳುತ್ತಾರೆ.ಬಾಕ್ಸ್‌

ಭೂಕುಸಿತ ಮುನ್ನೆಚ್ಚರಿಕಾ ಕಾಮಗಾರಿಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಭೂಕುಸಿತದಿಂದ ವಾಹನ ಸಂಚಾರ ಸ್ಥಗಿತವಾಗುವುದು ಸರ್ವೇ ಸಾಮಾನ್ಯ. ಇದನ್ನು ತಡೆಗಟ್ಟಲು ಪೂರಕ ಕಾಮಗಾರಿಗಳನ್ನು ನಡೆಸಲಾಗುತ್ತದೆ. ರಸ್ತೆಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮೋರಿ, ತೋಡು ನಿರ್ಮಾಣ, ಅಗತ್ಯ ಇರುವ ಕಡೆಗಳಲ್ಲಿ ಸೇತುವೆ ನಿರ್ಮಾಣ, ಗುಡ್ಡದ ಮಣ್ಣು- ಬಂಡೆಕಲ್ಲುಗಳು ಜರಿದು ಬೀಳದಂತೆ ರಿಟೈನಿಂಗ್‌ ವಾಲ್‌ ಇತ್ಯಾದಿ ಮುನ್ನೆಚ್ಚರಿಕೆ ಕಾಮಗಾರಿ ಕೈಗೊಳ್ಳಲಾಗುತ್ತದೆ. ಕಾಮಗಾರಿ ಶುರುವಾದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ತುಸು ತ್ರಾಸದಾಯಕವಾಗುವ ಸಾಧ್ಯತೆಗಳಿವೆ.