ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಲಾಡ್‌ ಕ್ಲಾಸ್‌

| Published : Aug 29 2024, 12:50 AM IST

ಸಾರಾಂಶ

12 ವಲಯ ವ್ಯಾಪ್ತಿಯಲ್ಲಿರುವ ತೆರಿಗೆ ಸಂಗ್ರಹಗಾರರು ಲೀಸ್‌ಗೆ ನೀಡಿದ ಪಾಲಿಕೆ ಆಸ್ತಿಗಳ ಸಮೀಕ್ಷೆ ನಡೆಸಬೇಕು. ಲೀಸ್‌ ಯಾವಾಗ ಮುಕ್ತಾಯವಾಗಿದೆ, ಯಾರಿಗೆ ನೀಡಿದ್ದು, ಸಿಟಿ ಸರ್ವೇ ನಂಬರ್‌ ಸಹಿತ ಮಾಹಿತಿ ಸಂಗ್ರಹಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಚಿವ ಸಂತೋಷ ಲಾಡ್‌ ಒಂದು ತಿಂಗಳ ಗಡುವು ನೀಡಿದ್ದಾರೆ.

ಹುಬ್ಬಳ್ಳಿ:

ಡಾಟಾ ಸರಿಯಿಲ್ಲ.. ಯಾವುದೇ ಮಾಹಿತಿ ಇಲ್ಲದೇ ಸಭೆಗೆ ಬಂದರೆ ಏನ್ಪುಯೋಗ.. ನಾವೇಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಹೀಗೆ ಸಭೆಗೆ ಅರ್ಧಂಮರ್ಧ ಮಾಹಿತಿ ಹಿಡಿದುಕೊಂಡು ಬಂದರೆ ಸಭೆಯಿಂದ ಏನು ಪ್ರಯೋಜನ?

ಇದು ಇಲ್ಲಿನ ಐಟಿ ಪಾರ್ಕ್‌ನ ಕೆಯುಡಿಎಫ್‌ಸಿ ಕಚೇರಿಯಲ್ಲಿ ಬುಧವಾರ ನಡೆದ ಹು–ಧಾ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲಿಕೆಯ ಆಸ್ತಿ ಕುರಿತು ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ತರಾಟೆ ತೆಗೆದುಕೊಂಡ ಪರಿ..

ಪಾಲಿಕೆಗೆ ಸಂಬಂಧಿಸಿದ ಆಸ್ತಿಯಿಂದ ವರ್ಷಕ್ಕೆ ವಲಯವಾರು ಸಂಗ್ರಹವಾಗಬೇಕಾದ ತೆರಿಗೆ ಕುರಿತು ಮಾಹಿತಿ ನೀಡಲು ತಡಬಡಿಸಿದ ಅಧಿಕಾರಿಗಳ ವಿರುದ್ಧ ಸಚಿವರು ಹರಿಹಾಯ್ದರು. 3.38 ಲಕ್ಷ ಆಸ್ತಿಯಿದ್ದರೂ, ವರ್ಷಕ್ಕೆ ಎಷ್ಟು ತೆರಿಗೆ ಸಂಗ್ರಹವಾಗಬೇಕು ಎನ್ನುವ ನಿಖರ ಮಾಹಿತಿಯಿಲ್ಲ. ಲೀಸ್‌ಗೆ ಎಷ್ಟು ಆಸ್ತಿ, ಎಷ್ಟು ಜಾಗ ನೀಡಲಾಗಿದೆ, ಅವು ಎಲ್ಲೆಲ್ಲಿ ಇವೆ ಎಂಬ ಸ್ಪಷ್ಟ ಮಾಹಿತಿ, ದಾಖಲೆಗಳೂ ಇಲ್ಲ. ಯಾರು ಹೇಳುವುದಿಲ್ಲ, ಕೇಳುವುದಿಲ್ಲ ಎನ್ನುವ ಮನಸ್ಥಿತಿ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

12 ವಲಯ ವ್ಯಾಪ್ತಿಯಲ್ಲಿರುವ ತೆರಿಗೆ ಸಂಗ್ರಹಗಾರರು ಲೀಸ್‌ಗೆ ನೀಡಿದ ಪಾಲಿಕೆ ಆಸ್ತಿಗಳ ಸಮೀಕ್ಷೆ ನಡೆಸಬೇಕು. ಲೀಸ್‌ ಯಾವಾಗ ಮುಕ್ತಾಯವಾಗಿದೆ, ಯಾರಿಗೆ ನೀಡಿದ್ದು, ಸಿಟಿ ಸರ್ವೇ ನಂಬರ್‌ ಸಹಿತ ಮಾಹಿತಿ ಸಂಗ್ರಹಿಸಬೇಕು. ಅಗತ್ಯವಿದ್ದರೆ ಸರ್ವೇ ಇಲಾಖೆಯ ಸಹಕಾರ ಪಡೆದು, ಸೆಪ್ಟೆಂಬರ್‌ ಅಂತ್ಯದ ಒಳಗೆ ವರದಿ ಸಿದ್ಧಪಡಿಸಬೇಕು. ವರ್ಷಕ್ಕೆ ಎಷ್ಟು ತೆರಿಗೆ ಸಂಗ್ರಹವಾಗಬೇಕು ಎನ್ನುವ ವಲಯವಾರು ನಿಖರ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ ಲೆಕ್ಕಾಚಾರ ಮಾಡಿದರೆ, 600 ಎಕರೆಯಷ್ಟು ಜಾಗವಿದೆ. ಅವುಗಳನ್ನು ಯಾರದ್ದೋ ಹೆಸರಿಗೆ ಲೀಸ್‌ ಕೊಟ್ಟಿದ್ದು, ಅವರು ಇದ್ದಾರೋ ಇಲ್ಲವೋ ಎನ್ನುವ ದಾಖಲೆಯೂ ನಮ್ಮ ಬಳಿಯಿಲ್ಲ. ಸರ್ಕಾರ ಆಸ್ತಿಯನ್ನು ಉಚಿತವಾಗಿ ನೀಡಲಾಗದು. ಲೀಸ್‌ ನಿಯಮ ಉಲ್ಲಂಘನೆ ಮಾಡಿದ್ದರೆ ನಿರ್ದಾಕ್ಷೀಣ್ಯವಾಗಿ ಕ್ರಮಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಬೇಕು. ಫೋಟೊ, ಗೂಗಲ್ ಮ್ಯಾಪ್ ಮಾಡಿ ಮಾಹಿತಿ ಸಂಗ್ರಹಿಸಬೇಕು. ಅವುಗಳನ್ನು ಹೇಗೆ ವಾಪಸ್‌ ಪಡೆಯಬೇಕು ಎನ್ನುವ ಕುರಿತು ಯೋಜನೆ ಸಿದ್ಧಪಡಿಸಬೇಕು ಎಂದು ಸಚಿವ ಲಾಡ್‌ ಸಲಹೆ ನೀಡಿದರು.

ಉದ್ಯಾನ ನಿರ್ವಹಣೆ:

327 ಎಕರೆ ಜಾಗದಲ್ಲಿ 579 ಉದ್ಯಾನಗಳಿದ್ದು, ನಿವರ್ಹಣೆ ಮಾಡಲಾಗದೆ ಎಷ್ಟೋ ಉದ್ಯಾನಗಳು ಹಾಳಾಗುತ್ತಿರುವ ಮಾಹಿತಿ ಪಡೆದ ಸಚಿವ ಲಾಡ್‌, ಸರ್ಕಾರೇತರ ಸಂಸ್ಥೆಗಳಿಗೆ, ಕಂಪನಿಗಳಿಗೆ ಅದರ ನಿರ್ವಹಣೆ ನೀಡಲು ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಕಾರ್ಪೋರೇಟ್ ಕಂಪನಿಗಳ ಸಿಎಸ್‌ಆರ್ ನಿಧಿಯಲ್ಲಿ ಉದ್ಯಾನ ನಿರ್ವಹಣೆ ಮಾಡಬೇಕು. ಕೆಲವು ಉದ್ಯಾನಗಳನ್ನು ಉದ್ಯಮಿಗಳಿಗೆ, ರೋಟರಿ ಕ್ಲಬ್, ಎನ್‌ಜಿಒ, ಕಂಪನಿಗಳಿಗೆ ಷರತ್ತಿನನ್ವಯ ನಿರ್ವಹಣೆಗೆ ನೀಡಿದರೆ ಪಾಲಿಕೆಗೂ ಹೊರೆ ತಪ್ಪುತ್ತದೆ. ಸೋಲಾರ್ ಪ್ಯಾನಲ್ ಕಾಂಪೌಂಡ್‌ ತಂತ್ರಜ್ಞಾನ ಬಂದಿದ್ದು, ಅದನ್ನು ಅಳವಡಿಸಿಕೊಳ್ಳಬಹುದೇ ಎಂದು ಯೋಜನೆ ರೂಪಿಸಿ ಎಂದರು.

ನೋಟಿಸ್‌ ಅಂಟಿಸಲು ಸೂಚನೆ:

ವಾಣಿಜ್ಯ ಮಳಿಗೆಯ ನೆಲ ಮಹಡಿಯ ಜಾಗ ವಾಹನ ನಿಲುಗಡೆಗೆ ಮೀಸಲಿಡಬೇಕು. ಬಹುತೇಕ ಕಟ್ಟಡಗಳಲ್ಲಿನ ಪಾರ್ಕಿಂಗ್‌ ಜಾಗದಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಯಾವೊಬ್ಬ ಅಧಿಕಾರಿಯೂ ಪರಿಶೀಲನೆ ನಡೆಸುತ್ತಿಲ್ಲ. ಇಸ್ತ್ರಿ ಬಟ್ಟೆ ಹಾಕಿಕೊಂಡು ಎಸಿ ರೂಮ್‌ಲ್ಲಿ ಕೂತು ಹೋಗುತ್ತಾರೆ. ನಾಳೆಯಿಂದಲೇ ಎಷ್ಟು ವಾಣಿಜ್ಯ ಮಳಿಗೆಗಳಿವೆ, ಎಲ್ಲೆಲ್ಲಿ ಪಾರ್ಕಿಂಗ್‌ ಜಾಗ ಒತ್ತುವರಿಯಾಗಿದೆ ಎಂದು ಮಾಹಿತಿ ಸಂಗ್ರಹಿಸಿ, ನೋಟಿಸ್‌ ಅಂಟಿಸಬೇಕು. ಸಂಬಂಧಿಸಿ ಸಂಪೂರ್ಣ ಮಾಹಿತಿ ಸಿದ್ಧಪಡಿಸಬೇಕು ಎಂದು ಲಾಡ್‌ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಮೇಯರ್ ರಾಮಪ್ಪ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ರಾಜಣ್ಣ ಕೊರವಿ, ಸುವರ್ಣಾ ಕಲಕುಂಟ್ಲ, ರಾಜಶೇಖರ ಕಮತಿ, ಹಾಗೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.ಮುಂದಿನ ಮಾಸಾಂತ್ಯಕ್ಕೆ ಮತ್ತೆ ಸಭೆ

ಪಾಲಿಕೆ ಆಸ್ತಿಯಲ್ಲಿ ಎಷ್ಟು ಲೀಸ್‌ ನೀಡಲಾಗಿದೆ. ಯಾರ್‍ಯಾರಿಗೆ ಲೀಸ್‌ ನೀಡಲಾಗಿದೆ. ಅವುಗಳನ್ನು ಯಾವ ಆಧಾರದ ಮೇಲೆ ಎಷ್ಟು ವರ್ಷಕ್ಕೆಂದು ಲೀಸ್‌ ನೀಡಲಾಗಿದೆ ಎಂಬುದರ ಮಾಹಿತಿ ಪಡೆದುಕೊಳ್ಳಬೇಕು. ಅವುಗಳನ್ನು ಮರಳಿ ಪಾಲಿಕೆಗೆ ತೆಗೆದುಕೊಳ್ಳುವ ವ್ಯವಸ್ಥೆಯಾಗಬೇಕು. ಬಿಲ್‌ ಕಲೆಕ್ಟರ್‌ ಅವುಗಳ ಬಗ್ಗೆ ಗಮನ ಹರಿಸಬೇಕು. ಈ ಸಂಬಂಧ ಮುಂದಿನ ತಿಂಗಳು ಮತ್ತೆ ಸಭೆ ನಡೆಸಲಾಗುವುದು. ಅಂದಿನ ಸಭೆಯಲ್ಲಿ ಸಮಗ್ರ ಮಾಹಿತಿಯೊಂದಿಗೆ ಬರಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.